ಮಂಗಳವಾರ, ಜನವರಿ 21, 2020
29 °C

ಆಗಿ ಹೋದುದರ ಬಗ್ಗೆ ಚಿಂತಿಸಲ್ಲ: ಕರೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಗಿ ಹೋದುದರ ಬಗ್ಗೆ ಚಿಂತಿಸಲ್ಲ: ಕರೀನಾ

ಅರಸಿ ಬಂದ ಅನೇಕ ಸಿನಿಮಾಗಳನ್ನು ನಟಿ ಕರೀನಾ ಕಪೂರ್‌ ಒಪ್ಪಿಕೊಂಡಿಲ್ಲ. ಆದರೆ ಅಂಥ ಅನೇಕ ಸಿನಿಮಾಗಳು ಬ್ಲಾಕ್‌ಬಸ್ಟರ್‌ ಸಿನಿಮಾಗಳಾಗಿ ಹೆಸರು ಮಾಡಿವೆ. ಹೀಗಿದ್ದರೂ ಕೈತಪ್ಪಿಹೋದ ಸಿನಿಮಾಗಳ ಬಗ್ಗೆ ಕೊರಗುತ್ತಾ ಕೂರುವ ಮನಸ್ಥಿತಿ ಅವರದ್ದಲ್ಲವಂತೆ.ಇಂಥ ಸಿನಿಮಾಗಳಲ್ಲಿ ಸದ್ಯಕ್ಕೆ ಬಿಡುಗಡೆಯಾಗಿ ಹೆಸರುಮಾಡುತ್ತಿರುವ ‘ರಾಮಲೀಲಾ’ ಸಿನಿಮಾ ಕೂಡ ಒಂದು. ‘ನನಗೆ ಗೊತ್ತಿಲ್ಲ, ಒಬ್ಬ ನಟಿಯಾಗಿ ಯಾವ ಪಾತ್ರ ನನಗೆ ಒಪ್ಪುತ್ತದೆ ಎಂದು. ಪ್ರತಿಯೊಬ್ಬರಿಗಾಗಿ ಒಂದು ಕೆಲಸ ಇದ್ದೇ ಇರುತ್ತದೆ. ನನಗೆ ಯಾವುದರಲ್ಲಿ ನಂಬಿಕೆ ಇದೆಯೋ ಅಂಥ ಕೆಲಸವನ್ನು ಮಾತ್ರ ನಾನು ಮಾಡುತ್ತೇನೆ. ಒಂದು ವೇಳೆ ಹತ್ತು ವರ್ಷದ ಹಿಂದೆ ನನಗೆ ನಟಿಯಾಗಬೇಕು ಎಂದೆನಿಸದಿದ್ದರೆ ಆಗಲೇ ಈ ಕ್ಷೇತ್ರವನ್ನು ಬಿಡುತ್ತಿದ್ದೆ. ನಾನಂತೂ ನನಗೆ ಸರಿ ಎನಿಸಿದ್ದನ್ನೇ ಮಾಡುವವಳು’ ಎಂದೆಲ್ಲಾ ಕರೀನಾ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.ನಾನು ನಿರಾಕರಿಸಿದಷ್ಟು ಸಿನಿಮಾವನ್ನು ಇನ್ಯಾವ ನಟಿಯೂ ಬಿಟ್ಟಿರಲಿಕ್ಕಿಲ್ಲ. ಅದೂ ಅಲ್ಲದೆ ನಾನು ನಿರಾಕರಿಸಿದ ಸಿನಿಮಾವನ್ನು ಮಾಡಬೇಕಿತ್ತು ಎಂದು ಅನೇಕರು ಸಲಹೆ ನೀಡಿದ್ದೂ ಇದೆ. ಆದರೆ ಒಮ್ಮೊಮ್ಮೆ ನಾನು ಹುಚ್ಚಿ ಥರ ಆಡುತ್ತೇನೆ ಎನಿಸುತ್ತದೆ.ನನಗೆ ಆ ಸಿನಿಮಾದಲ್ಲಿ ನಟಿಸುವುದು ಬೇಡ ಎಂದೆನಿಸಿದರೆ ಮತ್ತೆ ಅಭಿನಯಿಸುವ ಮನಸ್ಸಾಗುವುದೇ ಇಲ್ಲ. ಮನೆಯಲ್ಲಿ ಕುಳಿತು ಮಜಾ ಮಾಡುತ್ತಿರುತ್ತೇನೆ ಇಲ್ಲವೇ ಪಾರ್ಟಿ, ಪ್ರವಾಸದಲ್ಲಿ ಸಮಯ ಕಳೆಯುತ್ತೇನೆ’ ಎಂದೆಲ್ಲಾ ಕರೀನಾ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ.ಅಂದಹಾಗೆ, ಈ ಮೊದಲು ಕರೀನಾ ನಿರಾಕರಿಸಿದ ಸಿನಿಮಾಗಳ ಪಟ್ಟಿಯಲ್ಲಿ ಜನಪ್ರಿಯಗೊಂಡ ‘ಫ್ಯಾಷನ್‌’, ‘ಚೆನ್ನೈ ಎಕ್ಸ್‌ಪ್ರೆಸ್‌’, ‘ಪೇಜ್‌ 3’, ‘ಕಲ್‌ ಹೋ ನ ಹೋ’ ಮುಂತಾದವು ಸೇರಿವೆ.‘ರಾಮಲೀಲಾ ಸಿನಿಮಾಕ್ಕೂ ನಾನು ಒಲ್ಲೆ ಎಂದಿದ್ದೆ. ನನಗೆ ಇಷ್ಟವಾಗದ ಚಿತ್ರಕಥೆ ಬೇರೆ ನಟಿಯರಿಗೆ ಇಷ್ಟವಾಗಬಹುದು. ಇದರಿಂದ ನನಗೆ ಆಶ್ಚರ್ಯವೇನೂ ಎನಿಸಿಲ್ಲ. ನನ್ನನ್ನು ಸರಿಯಾಗಿ ಅರ್ಥಮಾಡಿಕೊಂಡವರಿಗೆ ಗೊತ್ತು, ಬದುಕಿನಲ್ಲಿ ನಾನು ಯಾವತ್ತೂ ಬೇಸರ ಮಾಡಿಕೊಳ್ಳುತ್ತಾ ಕುಳಿತಿಲ್ಲ. ನಡೆದುಹೋದುದರ ಬಗ್ಗೆ ಚಿಂತಿಸುತ್ತಾ ಇರುವುದೂ ಇಲ್ಲ ಎಂದು’ ಎಂದಿದ್ದಾರೆ.ಅವರು ಸಿನಿಮಾಗಳನ್ನು ಆಯ್ದುಕೊಳ್ಳುವಾಗ ಪಾತ್ರಕ್ಕೆ ಮೊದಲ ಆದ್ಯತೆ ನೀಡುತ್ತಾರಂತೆ. ಕೆಲವರು ಸ್ಕ್ರಿಪ್ಟ್‌ ಓದಿ ಸಿನಿಮಾವನ್ನು ಒಪ್ಪಿಕೊಂಡರೆ ಕರೀನಾ ಮಾತ್ರ ಕತೆಯನ್ನು ಕೇಳುತ್ತಾರಂತೆ. ಓದಲು ಪ್ರಾರಂಭಿಸಿದರೆ ನಿದ್ದೆಯ ಜೋಂಪು ಅವರನ್ನಾವರಿಸುತ್ತದಂತೆ. ಸ್ಕ್ರಿಪ್ಟ್‌ ಓದುತ್ತಿದ್ದಂತೆ ಅದು ಅವರಿಗೆ ಆಸಕ್ತಿ ಹಾಗೂ ಖುಷಿಯನ್ನು ಜಿನುಗಿಸಬೇಕಂತೆ. ಹೀಗಾದಲ್ಲಿ ಮಾತ್ರ ಸಿನಿಮಾಕ್ಕೆ ಅವರು ಥಟ್ಟನೆ ಒಪ್ಪಿಕೊಳ್ಳುತ್ತಾರಂತೆ.ಇದೀಗ ಹೃತಿಕ್‌ ರೊಷನ್‌ ಜೋಡಿಯಾಗಿ ‘ಶುದ್ಧಿ’ ಸಿನಿಮಾದಲ್ಲಿ ಕರೀನಾ ಅಭಿನಯಿಸಲಿದ್ದಾರೆ. ಅದರಲ್ಲಿ ಸೈಫ್‌ ಅಲಿ ಖಾನ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪ್ರತಿಕ್ರಿಯಿಸಿ (+)