ಗುರುವಾರ , ಆಗಸ್ಟ್ 13, 2020
25 °C

ಆಗುಂಬೆಯಲ್ಲಿ ಮಳೆ ಕುಂಠಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಗುಂಬೆಯಲ್ಲಿ ಮಳೆ ಕುಂಠಿತ

ತೀರ್ಥಹಳ್ಳಿ: ಮಳೆಯ ತವರು ಆಗುಂಬೆಯಲ್ಲಿ ಸುರಿಯುವ ಮಳೆಯ ಪ್ರಮಾಣ ಈಚಿನ ವರ್ಷಗಳಲ್ಲಿ ಗಣನೀಯವಾಗಿ ಕಡಿಮೆಯಾಗುತ್ತಿದೆ. ದಕ್ಷಿಣ ಭಾರತದ ಚಿರಾಪುಂಜಿ ಎಂಬ ಖ್ಯಾತಿಯ ಆಗುಂಬೆಗೆ ಕಳಂಕ ಅಂಟಿದ್ದು, ಪಶ್ಚಿಮ  ಘಟ್ಟದ ಪರಂಪರೆಗೆ ಮಂಕು ಕವಿದಂತಾಗಿದೆ.ಈ ಆತಂಕಕಾರಿ ಬೆಳವಣಿಗೆ ದಾಖಲೆಗಳಿಂದ ಸ್ಪಷ್ಟವಾಗುತ್ತಿದೆ. ನಡು ಹಗಲಲ್ಲೂ ಆಗುಂಬೆಯ ದಟ್ಟ ಕಾಡಿನ ನಡುವೆ ಮಳೆಯ ಸಿಂಚನವಾಗುತ್ತಿತ್ತು. ಬೃಹತ್ ಗಾತ್ರದ ಗಗನಚುಂಬಿ ಮರಗಳು, ತೇವಾಂಶವನ್ನು ಹಿಡಿದಿಡುವ ವಿಶಿಷ್ಟ ರೀತಿಯ ಪಾಚಿಗಳು, ಬಿಸಿಲನ್ನು ನೆಲಕ್ಕೆ ಸೋಂಕಿಸಿಕೊಳ್ಳದ ದಟ್ಟ ಅಡವಿ, ಸೂಕ್ಷ್ಮ ಜೀವಿಯ ತಾಣ, ಜಗತ್ತಿನ ಅತೀ ಮುಖ್ಯ 18 ಸೂಕ್ಷ್ಮ ವಲಯಗಳಲ್ಲಿ ಒಂದು ಎಂಬ ಹೆಗ್ಗಳಿಕೆ ಆಗುಂಬೆಗಿದೆ. ಇಲ್ಲಿನ ಪ್ರಕೃತಿ ಸೌಂದರ್ಯ ನೋಡುಗರ ಕಣ್ಮನ ಸೆಳೆಯುತ್ತದೆ.ಆಗುಂಬೆಯಲ್ಲಿ 1962ರಲ್ಲಿ 11,350 ಮಿಲಿ ಮೀಟರ್ ಹಾಗೂ 1978ರಲ್ಲಿ 10,471 ಮಿ.ಮೀ. ಮಳೆಯಾಗಿದ್ದು, ನಂತರದ ವರ್ಷಗಳಲ್ಲಿ ಮಳೆಯ ಪ್ರಮಾಣದಲ್ಲಿ ಬಹಳಷ್ಟು ಏರು ಪೇರಾಗುತ್ತಿರುವುದು ಮಳೆ ಮಾಪನದ ದಾಖಲೆಯಿಂದ ತಿಳಿದು ಬಂದಿದೆ.  ಆಗುಂಬೆ ಘಟ್ಟ ಸಾಲನ್ನು ಹೊಂದಿರುವ ಹೊಸನಗರ ತಾಲ್ಲೂಕಿನ ನಗರ ವಲಯದ ಹುಲಿಕಲ್‌ನಲ್ಲಿ 1991, 1992, 1993, 1995, 1998, 1999, 2000, 2001, 2002, 2008 ಮತ್ತು 2010ರಲ್ಲಿ  ಆಗುಂಬೆಗಿಂತ ಹೆಚ್ಚಿನ ಮಳೆಯಾಗಿದೆ. ಇದೇ ರೀತಿ 1994, 1996, 1997, 2003, 2004 ರಿಂದ 2007ರ ವರೆಗೆ  ಮತ್ತು 2009ರಲ್ಲಿ ಹುಲಿಕಲ್‌ಗಿಂತ  ಆಗುಂಬೆಯಲ್ಲಿ ಮಳೆ ಹೆಚ್ಚಾಗಿರುವುದು ಕಂಡುಬರುತ್ತದೆ.ರಾಜ್ಯದ ಕತ್ತಲೆ  ನೀಗಲು ಪಶ್ಚಿಮ ಘಟ್ಟ ಸೆರಗಿನ ಹೊಸನಗರದ ಮಧ್ಯ ಭಾಗದಲ್ಲಿ ಆಗುಂಬೆ ಅರಣ್ಯ ಪ್ರದೇಶದಲ್ಲಿ ಜನಿಸಿದ  ವರಾಹಿ ನದಿಗೆ ಯಡೂರಿನ ಬಳಿ ಮಾಣಿ ಎಂಬಲ್ಲಿ 1978ರಲ್ಲಿ ಆಣೆಕಟ್ಟು ನಿರ್ಮಾಣ ಮಾಡಿದ್ದಕ್ಕೆ ತೀರ್ಥಹಳ್ಳಿ ತಾಲ್ಲೂಕಿನ 7,080 ಎಕರೆ 03 ಗುಂಟೆ ಅರಣ್ಯ ಪ್ರದೇಶ, ರೈತರ ಅಡಿಕೆ ತೋಟಗಳನ್ನು ಒಳಗೊಂಡ 10,727 ಎಕರೆ 13 ಗುಂಟೆ ಹಿಡುವಳಿ ಜಮೀನು  ಹಾಗೂ ದಟ್ಟವಾದ ಮರಗಿಡಗಳಿಂದ ಕೂಡಿರುವ 4,584 ಎಕರೆ ಪ್ರದೇಶ ಬಲಿ ನೀಡಿದ್ದರ ಫಲ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಆಗುಂಬೆ ವಲಯ ಅರಣ್ಯ ಇಲಾಖೆ ಪ್ರಾಥಮಿಕ ಪರಿಶೀಲನೆಯಲ್ಲಿ ಅಂದಾಜಿಸಿದೆ.ವರಾಹಿ ಹಿನ್ನೀರಿನ 22,392 ಎಕರೆ ಪ್ರದೇಶದ ಸಲುವಾಗಿ ಅರಣ್ಯ ಪ್ರದೇಶದಲ್ಲಿನ ಗಿಡ ಮರಗಳನ್ನು ಕಡಿತಲೆ ಮಾಡಲಾಗಿದ್ದು, ಸರ್ಕಾರಿ ಭೂಮಿ ಹಾಗೂ ರೈತರ ಅಡಿಕೆ ತೋಟಗಳು ನೀರಿನಲ್ಲಿ ಮುಳುಗಿರುವುದರಿಂದ ಆಗ್ನೇಯ  ಭಾಗದಿಂದ ಬರುವ ಮೋಡಗಳು (ಮಾರುತ) ನಿರಾತಂಕವಾಗಿ ಆಗುಂಬೆ ಭಾಗದಲ್ಲಿ ನಿಲುಗಡೆಯಾಗಲು ವರಾಹಿ ಹಿನ್ನೀರಿನ ಬಯಲು ಆತಂಕಕಾರಿಯಾಗಿ ಕಂಡುಬರುತ್ತಿದೆ  ಎಂಬ ವರದಿಯನ್ನು ಆಗುಂಬೆ ವಲಯ ಅರಣ್ಯಾಧಿಕಾರಿ ಸುರೇಶ್ ಅವರು ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ನೀಡಿದ್ದಾರೆ.ಅರಣ್ಯದ ಮೇಲಿನ ಜನರ ಒತ್ತಡ, ತಾಪಮಾನ ಏರಿಕೆ, ಮುಂತಾದ ಅಂಶಗಳು ಆಗುಂಬೆ ಭಾಗದಲ್ಲಿ ಮಳೆಯ ಪ್ರಮಾಣದಲ್ಲಿ ಏರುಪೇರಾಗಲು ಕಾರಣವಾಗಿದೆ. ಆದರೆ, ಆಗುಂಬೆ, ಬಾಳೇಹಳ್ಳಿ, ಮೇಗರವಳ್ಳಿ ಹಾಗೂ ತೀರ್ಥಹಳ್ಳಿ ತಾಲ್ಲೂಕಿನ ಮತ್ತು ಹೊಸನಗರ ತಾಲ್ಲೂಕಿನ ಪ್ರದೇಶದಲ್ಲಿ ಅರಣ್ಯ ಒತ್ತುವರಿ, ಅಕ್ರಮ ಮರ ಕಡಿತಲೆ ಸಾಕಷ್ಟು ನಿಯಂತ್ರಣದಲ್ಲಿರುವುದರಿಂದ ವರಾಹಿ ಹಿನ್ನೀರಿಗಾಗಿ ಕೈ ಬಿಟ್ಟು ಹೋಗಿರುವ ದಟ್ಟ ಅರಣ್ಯ ಪ್ರದೇಶಕ್ಕೆ ಹೋಲಿಸಿದರೆ ಅರಣ್ಯ ಒತ್ತುವರಿ, ಅಕ್ರಮ ಮರ ಕಡಿತಲೆ ಮಳೆಯ ಮೇಲಿನ ಪ್ರಮಾಣಕ್ಕೆ ಚಿಕ್ಕ ಕಾರಣವಾಗಿ ಕಂಡು ಬರುತ್ತದೆ ಎಂದೂ ವರದಿ ನೀಡಲಾಗಿದೆ.1962ರಲ್ಲಿ ಆಗುಂಬೆಯಲ್ಲಿ 1,135 ಸೆಂ.ಮೀ. ಮಳೆಯಾಗಿದ್ದು, ನಂತರದ ವರ್ಷಗಳಲ್ಲಿ ಈ ಪ್ರಮಾಣದ ಮಳೆಯಾಗಿಲ್ಲ. ಕೆಲವು ವರ್ಷ ತೀರಾ ಕಡಿಮೆ ಮಳೆಯಾಗಿದೆ. 1976ರಲ್ಲಿ ಕೇವಲ 633 ಸೆ.ಮೀ. ಹಾಗೂ 1987ರಲ್ಲಿ 524 ಸೆ.ಮೀ.,2008ರಲ್ಲಿ 639 ಸೆಂ.ಮೀ., 2010ರಲ್ಲಿ 739 ಸೆಂ.ಮೀ. ಹಾಗೂ 2011ರಲ್ಲಿ 783 ಸೆಂಟಿ ಮೀಟರ್ ಮಳೆಯಾಗಿದೆ.`ಪಶ್ಚಿಮ ಘಟ್ಟಗಳು ನದಿ ಉಗಮದ ತಾಣಗಳು. ನದಿ ಉಗಮಕ್ಕೆ ಪೆಟ್ಟುಕೊಡುವ ಯಾವ ಯೋಜನೆಯಾದರೂ ಅದು ಅಪಾಯಕಾರಿ. ವಾತಾವರಣದ ಏರು ಪೇರಿನಿಂದಾಗಿ ಮಳೆ ಮೋಡಗಳನ್ನು ತಡೆಯುವ ಸಾಮರ್ಥ್ಯವನ್ನು ಆಗುಂಬೆ ಕಡಿಮೆ ಮಾಡಿಕೊಂಡಿದೆ. ಪಶ್ಚಿಮ ಘಟ್ಟದಲ್ಲಿ ದಟ್ಟ ಅರಣ್ಯ ಉಳಿಯಬೇಕು' ಎಂದು ಪರಿಸರಾಸಕ್ತ ಕಲ್ಲಾಳ ಶ್ರೀಧರ್ ಹೇಳುತ್ತಾರೆ.

ಶಿವಾನಂದ ಕರ್ಕಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.