ಶನಿವಾರ, ಜನವರಿ 28, 2023
18 °C

ಆಡಾಡತ ಆಯುಷ್ಯ | ‘ಸಂಸ್ಕಾರ’ ಚಿತ್ರೀಕರಣದ ಮುಗಿಸಿ ಹೊರಟ ದಿನದ ನೆನಪು

ಗಿರೀಶ ಕಾರ್ನಾಡ Updated:

ಅಕ್ಷರ ಗಾತ್ರ : | |

ಆಡಾಡತ ಆಯುಷ್ಯ - -ಗಿರೀಶ ಕಾರ್ನಾಡರ ಆತ್ಮಕಥೆ ಭಾಗ-16

ಅಗ್ರಹಾರದ ಹತ್ತು-ಹನ್ನೊಂದು ಮನೆಗಳಲ್ಲಿ ಒಂದು ಮನೆಯವರು ಮಾತ್ರ ನಮ್ಮಿಂದ ದೂರ ಉಳಿದಿದ್ದರು. ಅವರಿಗೂ ಉಳಿದ ಮನೆಗಳಿಗೂ ಮಾತಾಗುತ್ತಿರಲಿಲ್ಲ. ಅಗ್ರಹಾರದಲ್ಲೇ ಒಂದು ನೀರಿನ ಪಂಪ್‌ನ ವ್ಯವಸ್ಥೆಯಿದ್ದರೂ ಈ ಒಂದು ಮನೆಯ ಹೆಂಗಸರು ನೂರು ಪಾವಟಣಿಗೆಗಳನ್ನು ಇಳಿದು ಕಣಿವೆಯಲ್ಲಿ ಹರಿಯುತ್ತಿದ್ದ ನದಿಗೆ ಹೋಗಿ ನೀರು ಎತ್ತಿಕೊಂಡು ಬರಬೇಕಾಗುತ್ತಿತ್ತು.

ನಾವು ಅಗ್ರಹಾರದಲ್ಲಿ ಮೂರುವಾರ ಇದ್ದರೂ ಅಲ್ಲಿಯವರು ನಮ್ಮನ್ನು ಪ್ರೀತಿಯಿಂದಲೇ ನಡೆಸಿಕೊಂಡರು. ಇದಕ್ಕೆ ನಮ್ಮ ನಟವರ್ಗ ಸುಶಿಕ್ಷಿತವಾಗಿರುವದೊಂದು ಮುಖ್ಯ ಕಾರಣವಾಗಿತ್ತು. ಅಲ್ಲದೆ ಸ್ನೇಹಾ ಮನಸ್ಸು ಮಾಡಿದಾಗ ಸ್ನೇಹ ಸುಧೆಯನ್ನೇ ಸುರಿಸಬಲ್ಲವಳಾಗಿದ್ದಳು. ಆದರೆ ಎಲ್ಲರಿಗೂ ಟಾಮ್ ಸಮೀಪದವನಾದ. ಆ ಅಗ್ರಹಾರದ ಮಡಿ ವೃದ್ಧೆಯೊಬ್ಬಳು ಆತನನ್ನು ಅಡಿಗೆ ಮನೆಯೊಳಗೂ ಕರೆದೊಯ್ದು ಚಹ ಕೊಡುತ್ತಿದ್ದಳು. ಆಕೆಯ ಮಗ, ‘ನನ್ನ ತಾಯಿಗೆ ನಿಮ್ಮ ಟಾಮ್ ಎಂದರೆ ಪ್ರೀತಿ’ ಎಂದು ತಲೆದೂಗುತ್ತಿದ್ದ. ನಾವು ಚಿತ್ರೀಕರಣ ಮುಗಿಸಿದ ದಿವಸ ಇಡಿಯ ಅಗ್ರಹಾರ ನಮ್ಮ ವಾಹನಗಳವರೆಗೆ ಬಂದು ನಮ್ಮನ್ನು ಬೀಳ್ಕೊಂಡಿತು. ಸ್ನೇಹಾಳ ಮುಖ ಅಶ್ರುಗಳಿಂದ ತೊಯ್ದಿತ್ತು.

ಊರು ಬಿಟ್ಟು ಹೊರಡುವ ಮೊದಲು ನಾವು ಶೃಂಗೇರಿಯ ಸ್ವಾಮಿಗಳನ್ನು ಭೆಟ್ಟಿಯಾಗಿ ಅಪ್ಪಣೆ ಪಡೆಯುವದೆಂದು ನಿರ್ಧರಿಸಿದೆವು. ಆ ಪ್ರಕಾರ ನಾನು, ಪಟ್ಟಾಭಿ, ಗೋಪಿ, ವಾಸುದೇವ್ ಮಠಕ್ಕೆ ಹೋಗಿ ಉಳಿದ ಭಕ್ತರ ಸಾಲಿನಲ್ಲಿ ನಿಂತು ದರ್ಶನಕ್ಕಾಗಿ ಕಾದೆವು. ಸ್ವಾಮಿಗಳು ಬರುವ ಮೊದಲು ಒಬ್ಬ ಪರಿಚಾರಕರು ಬಂದು ‘ಯಾರು, ಏನು?’ ಎಂದು ನಮ್ಮನ್ನೆಲ್ಲ ವಿಚಾರಿಸಿ, ನಾವು ಚಿತ್ರಪಟದವರು ಎಂದೊಡನೆ ನಮ್ಮನ್ನು ‘ಅಡ್ಡ ಪಂಕ್ತಿ’ಯಾಗಿ ನಿಲ್ಲಿಸಿದರು. ಗೋಪಿಗೆ-ನನಗೆ ಆ ಸ್ಥಳಾಂತರ ತಕ್ಷಣ ಅರ್ಥವಾಯಿತು.

ಸ್ವಾಮಿಗಳು ಬಂದರು. ಭಕ್ತರನ್ನು ಮಾತಾಡಿಸಿದರು. ಪಟ್ಟಾಭಿ ತಟ್ಟೆಯಲ್ಲಿ ಕಾಯಿ, ಹಣ್ಣು, ಹಂಪಲು ಹಿಡಿದುಕೊಂಡು ನಿಂತಲ್ಲಿಗೆ ಬಂದರು. ಪಟ್ಟಾಭಿ, ‘ನಾವು ಚಿತ್ರಪಟದವರು. ಚಿತ್ರೀಕರಣ ಮುಗಿಸಿ ಬಂದಿದ್ದೇವೆ’, ಎಂದು ಹೇಳುತ್ತಿರುವಾಗಲೇ, ಸ್ವಾಮಿಗಳ ಮುಖ ಸಿಡಿಮಿಡಿಯಾಯಿತು. ನಾವೇನೋ ಕೇಡು ಬಗೆದಿರುವಂತೆ ನಮ್ಮತ್ತ ಕ್ರುದ್ಧರಾಗಿ ಕೆಕ್ಕಳಿಸಿ ನೋಡಿ ಹೊರಳಿ ಮಾತನಾಡದೆ ಹೊರಟು ಹೋದರು. ಅವರ ಹಿಂದೆ ಅವರ ಪರಿಚಾರಕವರ್ಗವೂ ಮಾಯವಾಯಿತು.

ಪಟ್ಟಾಭಿಗೆ, ಪಾಪ, ಏನು ಮಾಡಬೇಕು ಎಂದು ಗೊತ್ತಾಗಲಿಲ್ಲ. ನಾನು ಅವನಿಗೆ ಹೇಳಿದೆ: ‘ಕಾಣಿಕೆಯನ್ನು ಇಲ್ಲೇ ನೆಲದ ಮೇಲೆ ಇಡು. ತೆಗೊಳ್ಳೋದು ಬಿಡೋದು ಅವರಿಗೆ ಬಿಟ್ಟದ್ದು’ ಎಂದೆ. ಹಾಗೇ ಇಟ್ಟು, ನಾವು ಮಠದಿಂದ ಹೊರಬಿದ್ದೆವು.

ಗೋಪಿ, ‘ಅಬ್ಬಾ! ಸಂನ್ಯಾಸಿಗೆ ಎಂಥ ಕೋಪ!’ ಎಂದು ಅಚ್ಚರಿಪಟ್ಟ. ನಾನು ‘ನಾನು ಸಾಧ್ಯವಾದಷ್ಟು ಈ ಕಾವಿಧಾರಿಗಳ ಕಡೆಗೆ ಹಾಯುವದೇ ಇಲ್ಲ’ ಎಂದೆ.

ನಾವು ಚಿತ್ರೀಕರಣ ಮುಗಿಸಿಕೊಂಡು ಬಂದದ್ದೇ ಬೆಂಗಳೂರಲ್ಲಿ ದೊಡ್ಡ ಸೋಜಿಗದ ವಿಷಯವಾಗಿತ್ತು. ‘ಅಮೆಚ್ಯೂರ್ಸು ದಿನ್ನಾ ಕುಡೀತಾರಂತೆ, ಜಗಳಾಡತಾರಂತೆ’ ಎಂದು ಗಾಂಧಿನಗರದವರೆಲ್ಲ ಆಡಿಕೊಳ್ಳುತ್ತಿದ್ದರೆಂದು ಗೊತ್ತಾಯಿತು.

ಸಂಗೀತ ನಿರ್ದೇಶನಕ್ಕೆ ಅನಂತಮೂರ್ತಿ ರಾಜೀವ್ ತಾರಾನಾಥರ ಹೆಸರನ್ನು ಸೂಚಿಸಿದ್ದರು. ಅವರು ಕೆಲವು ಸುಂದರ ರಚನೆಗಳನ್ನು ಕೊಟ್ಟರು.

ಸಂಗೀತ-ಧ್ವನಿ ಮಿಶ್ರಣವಾಗಿ ಚಿತ್ರದ ಮೊದಲನೆಯ ಪ್ರತಿ ಸಿದ್ಧವಾಯಿತು. ಅದರ ಪ್ರದರ್ಶನವಾಯಿತು. ಚಿತ್ರ ಮುಗಿದ ಗಳಿಗೆಗೆ ನನ್ನ ಪಕ್ಕದಲ್ಲೇ ಕುಳಿತಿದ್ದ ಸುರೇಂದ್ರನಾಥ ‘ಶ್ರೀಮದ್ವೆಂಕಟರಮಣ ಗೋವಿಂದಾ ಗೋವಿಂದಾ’ ಎಂದು ಜೋರಾಗಿ ಘೋಷಿಸಿದ. ನಾನು ಅವನೊಡನೆ ದನಿಗೂಡಿಸಲಿಲ್ಲವಾದರೂ ನನ್ನ ಪ್ರತಿಕ್ರಿಯೆ ಅವನಿಗಿಂತ ತೀರ ಬೇರೆಯಾಗಿರಲಿಲ್ಲ. ಪತ್ರಕರ್ತ ರಾಘವೇಂದ್ರರಾವ್ ಮೊರೆಯಿಟ್ಟರು.  ‘Rushes’ಗೂ ಪೂರ್ಣಗೊಳಿಸಿದ ಚಿತ್ರಕ್ಕೂ ಭೇದ ಎಲ್ಲಿದೆ? ಅಲ್ಲಲ್ಲಿ ರಾಜೀವ ಸಂಗೀತ ಇದೆ. ನಿಜ, ಆದರೆ ಧ್ವನಿಯೇ ಇಲ್ಲ. ಎತ್ತಿನ ಬಂಡಿ ಓಡುವಾಗ ಗಾಲಿಗಳ ಸದ್ದಿಲ್ಲ, ಜನರು ನಡೆದಾಡುವಾಗ ಹೆಜ್ಜೆಯ ಸದ್ದಿಲ್ಲ, ಹಕ್ಕಿಗಳಿಲ್ಲ, ಚಿತ್ರಪಟದಲ್ಲಿ ನಿಃಶಬ್ದವಾಗಿ ಓಡುವ ವಿಭಾಗಗಳೇ ಇಷ್ಟು ಏಕೆ?’

ಪಟ್ಟಾಭಿಗೆ ಕೇಳಿದಾಗ ‘ದುಡ್ಡಿಲ್ಲ’ ಎಂದ. ಆದರೆ ನಾನು ಸ್ವತಃ ಚಿತ್ರಗಳನ್ನು ನಿರ್ದೇಶಿಸಲಾರಂಭಿಸಿದಾಗ ಧ್ವನಿಸಂಯೋಜನೆಗೆ ಹೆಚ್ಚು ಹಣ ಬೇಕಾಗುವದಿಲ್ಲ ಎಂದು ಕಂಡುಕೊಂಡೆ. ‘ಒಂದಾನೊಂದು ಕಾಲದಲ್ಲಿ’ ಚಿತ್ರವಾಗುವವರೆಗೆ ನಾನು, ನನ್ನ ಸಹನಿರ್ದೇಶಕರೇ ಕೂಡಿ ಹಿನ್ನೆಲೆ ಧ್ವನಿ ಜೋಡಿಸಿದ್ದೇವೆ.

ಮುಖ್ಯ ತೊಂದರೆ ಎಂದರೆ ಇದಕ್ಕೆಲ್ಲ ಬೇಕಾಗುವ ಚೈತನ್ಯ ಪಟ್ಟಾಭಿಯಲ್ಲಿ ಇರಲಿಲ್ಲ. ಮೂಲತಃ ಐಷ್-ಆರಾಮದ ಸರಂಜಾಮೀ ಹಿನ್ನೆಲೆಯಲ್ಲಿ ಬೆಳೆದು ಬಂದವ. ಹೆಚ್ಚು ಕಷ್ಟಪಡುವುದೆಂದರೆ ಬರ್ಷಣ. ನಮಗೆ ಆಗಲೇ ಅವನ ಈ ಸ್ವಭಾವದ ಸಾಕಷ್ಟು ಅನುಭವವಾಗಿತ್ತು.

ನಾವೆಲ್ಲ ‘ಸಂಸ್ಕಾರ’ ಚಿತ್ರ ಯಾರೂ ನೋಡುವ ಯೋಗ್ಯತೆಯದಲ್ಲ ಎಂದು ನಿರ್ಧರಿಸಿ ವಿಷಣ್ಣರಾದೆವು. ಇದು ‘ಪಾಥೇರ್ ಪಾಂಚಾಲಿ’ಯಷ್ಟೆ ಮಹತ್ವದ ಚಿತ್ರವಾಗಬಹುದಾಗಿತ್ತು. ಅದು ಈ ರೀತಿ ಕುಸಿದಿದ್ದರಿಂದ ನಾನಂತೂ ಹತಾಶನಾದೆ.

ಸುದೈವದಿಂದ ಅದೇ ಹೊತ್ತಿಗೆ ರಾಮಾನುಜನ್ ಮದ್ರಾಸಿಗೆ ಬಂದರು. ಅವರ ಸಲುವಾಗಿ ಒಂದು ವಿಶೇಷ ಪ್ರದರ್ಶನ ಏರ್ಪಡಿಸಲಾಯಿತು. ಚಿತ್ರ ಮುಗಿದಾಗ ನನಗೆ ರಾಮಾನುಜನ್ನರನ್ನು ಎದುರಿಸುವ ಧೈರ್ಯವಿರಲಿಲ್ಲ. ಆದರೆ ಚಿತ್ರ ನೋಡಿ ರಾಮಾನುಜನ್ ಉತ್ತೇಜಿತರಾಗಿದ್ದರು.

‘ತುಂಬ ಚೆನ್ನಾಗಿದೆ, ಕಾದಂಬರಿಯ ಸೂಕ್ಷ್ಮತೆ ಸಾಕಷ್ಟು ಮಟ್ಟದಲ್ಲಿ ಬಂದಿದೆ’ ಎಂದು ಹೊಗಳಿದರು. ನನಗೆ ಪರಮಾಶ್ಚರ್ಯ! ಅಷ್ಟೇ ಖುಷಿ. ಪಟ್ಟಾಭಿ-ಸ್ನೇಹಾ ಅವರ ಮುಖ ಅರಳಿತು. ನಾವು ಮೊದಲನೆಯ ದಿನದ Rushes ಕಂಡಾಗಿನಿಂದ ಅದನ್ನೇ ನೋಡಿ ನೋಡಿ ರುಚಿಗೆಟ್ಟು ಹೋಗಿದ್ದೆವು. ಮೊದಲನೆಯ ಸಲ ನೋಡುವವರಿಗೆ- ಅದರಲ್ಲೂ ರಾಮಾನುಜನ್‌ರಂಥ ಸಂವೇದನಾಶೀಲ ವ್ಯಕ್ತಿಗೆ- ಚಿತ್ರಪಟ ಆಹ್ಲಾದಕರವಾಗಿದ್ದುದರಿಂದ ನಮಗೆಲ್ಲ ಧೈರ್ಯ ಬಂತು.

ಚಿತ್ರೀಕರಣ ಮುಗಿಸಿ ಮದ್ರಾಸಿಗೆ ಮರಳಿದ ಕೆಲ ತಿಂಗಳಲ್ಲೆ ನಾನು ಆರು ವಾರಕ್ಕಾಗಿ ನನ್ನ ಆಫೀಸಿನ ವತಿಯಿಂದ ಲಂಡನ್ನಿಗೆ ಹೋದೆ. ಅಲ್ಲಿಯ ವಾಸ್ತವ್ಯ ಮುಗಿದು ಮರಳಿ ಮುಂಬೈ ಸೇರಿದಾಗ ಕಿವಿಗೆ ಬಿದ್ದ ಮೊಟ್ಟ ಮೊದಲನೆಯ ಸುದ್ದಿ ಎಂದರೆ ಸೆನ್ಸಾರಿಗರು ‘ಸಂಸ್ಕಾರ’ದ ಮೇಲೆ ಪ್ರತಿಬಂಧ ಹಾಕಿದ್ದರು!

ನಾನು ಕೂಡಲೆ ಸೆನ್ಸಾರ್ ಬೋರ್ಡಿನ ಚೇರಮನ್‌ಗೆ ಫೋನ್ ಮಾಡಿ ಪ್ರಶ್ನಿಸಿದೆ. ‘ಚಿತ್ರಪಟ ಬ್ರಾಹ್ಮಣ ವಿರೋಧಿಯಾಗಿದೆ ಎಂದು ಬೋರ್ಡು ಅಭಿಪ್ರಾಯಪಟ್ಟಿದೆ’ ಎಂದು ಅವರು ಉತ್ತರವಿತ್ತರು.

ನಾನು ‘ಕಾದಂಬರಿ ಬರೆದವರು ಬ್ರಾಹ್ಮಣರು. ಪ್ರಕಟಿಸಿದವರು ಬ್ರಾಹ್ಮಣರು, ನಾನು ಬ್ರಾಹ್ಮಣ. ಕಲಾ ನಿರ್ದೇಶಕ- ಸಹ ನಿರ್ದೇಶಕರೂ ಬ್ರಾಹ್ಮಣರು. ಭಾಗವಹಿಸಿದವರಲ್ಲಿ ಹೆಚ್ಚು ಜನ ಬ್ರಾಹ್ಮಣರು, ಅಂದಾಗ ಚಿತ್ರ ಬ್ರಾಹ್ಮಣ ವಿರೋಧಿಯಾಗುವದು ಹೇಗೆ ಸಾಧ್ಯ?’ ಎಂದು ಕೇಳಿದೆ.

‘ಅದು ನಮಗೆ ಗೊತ್ತಿರಲಿಲ್ಲ’ ಎಂದರು.

‘ಹಾಗಾದರೆ ಸೆನ್ಸಾರ್ ಸರ್ಟಿಫಿಕೇಟು ಸಿಗುವ ಮೊದಲು ಚಿತ್ರನಿರ್ಮಾಣದಲ್ಲಿ ಭಾಗವಹಿಸಿದವರ ಜಾತಿಗಳೆಲ್ಲ ಗೊತ್ತಾಗಬೇಕೇನು?’ ಎಂದು ಕೇಳಿದೆ.

ಅವರು ನಕ್ಕರು, ನಾನು ಅಲ್ಲಿಗೆ ಸುಮ್ಮನಾಗಲಿಲ್ಲ.

‘ಈಗ ನಾನು ಈ ಅಂಶವನ್ನು ವಿವರಿಸಿ ಹೇಳಿದ್ದೇನೆ ಅಂದಮೇಲೆ ಗೊತ್ತಾಯಿತಲ್ಲ. ಈಗಲಾದರೂ ನಿಷೇಧ ಹಿಂತೆಗೆದುಕೊಳ್ಳಿರಿ’ ಎಂದೆ.

‘ಈಗ ಇಡಿಯ ಫೈಲು ದಿಲ್ಲಿಯಲ್ಲಿ ಮಿನಿಸ್ಟ್ರಿಗೆ ಅಪೀಲು ಆಗಿ ಹೋಗಿದೆ. ಅವರೇ ನಿರ್ಧರಿಸಲಿ’, ಎಂದು ಉತ್ತರ ಬಂತು.
ಸೆನ್ಸಾರ್ ಆಫೀಸಿನ ಮದ್ರಾಸ್ ಶಾಖೆಯವರು ಚಿತ್ರ ನೋಡಿ, ದಿಗ್ಭ್ರಾಂತರಾಗಿ, ಅದನ್ನು ಮುಂಬೈ ಆಫೀಸಿಗೆ ಸಾಗಿಸಿದ್ದರಂತೆ. ಅಲ್ಲಿಯವರು ಚಿತ್ರವನ್ನೇ ನಿಷೇಧಿಸಿಬಿಟ್ಟಿದ್ದರಂತೆ. ಸೆನ್ಸಾರ್ ಆಫೀಸಿನಿಂದ ನಿಷೇಧಾಜ್ಞೆ ಬಂದಾಗ ಪಟ್ಟಾಭಿ-ಸುರೇಂದ್ರನಾಥ್ ಈ ಸುದ್ದಿಯನ್ನು ಗುಟ್ಟಾಗಿಡಲು ಯತ್ನಿಸಿದರಂತೆ. ಇದರಿಂದ ಇಂಡಸ್ಟ್ರಿಯಲ್ಲಿ ಚಿತ್ರದ ಹೆಸರು ಕೆಡುತ್ತದೆ ಎಂಬ ಭಯ. ಆದರೆ ಮತ್ತೆ ರಾಘವೇಂದ್ರರಾವ್- ‘ಸಂಸ್ಕಾರ’ದ ಬಗ್ಗೆ ಮೊಟ್ಟಮೊದಲಿಗೆ ‘ಕನ್ನಡಪ್ರಭ’ದಲ್ಲಿ ಲೇಖನ ಬರೆದ ವ್ಯಕ್ತಿ-ಆ ಸುದ್ದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದಾಗ ಕನ್ನಡ ಚಿತ್ರರಂಗದಲ್ಲಿ ಎಲ್ಲರಿಗೂ ದಿಗಿಲು. ಆ ಕಾಲದಲ್ಲಿ ಸೆನ್ಸಾರರ ನಿಷೇಧ ಅತಿ ವಿರಳವಾಗಿದ್ದರಿಂದ ನಾಡಿನಾದ್ಯಂತ ಚರ್ಚೆಯಾಯಿತು.

ಆದರೆ ಈ ಪ್ರಚಾರ ಚಿತ್ರಕ್ಕೆ ಕೆಟ್ಟ ಹೆಸರು ತರುತ್ತದೆ ಎಂದು ಸುರೇಂದ್ರನಾಥ್ ನನ್ನ ಹತ್ತಿರ ಹಣೆ ಹಣೆ ಜಜ್ಜಿಕೊಂಡ. ‘I am Finished’ ಎಂದು ದುರಂತ ನಾಯಕನ ದನಿಯಲ್ಲಿ ಒರಲಿದ. ‘ದುರಂತ ನಾಯಕ’ ಎಂಬ ಅಭಿದಾನಕ್ಕೆ ಸುರೇಂದ್ರನಾಥ್ ಅರ್ಹನಾಗಿದ್ದ, ಏಕೆಂದರೆ ಯೋಜನೆ ಆರಂಭವಾದಾಗಿನಿಂದ ಅವನಿಗೆ ಚಿತ್ರವೇ ಅರ್ಥವಾಗಿರಲಿಲ್ಲ.

ಪಟ್ಟಾಭಿಯ ಮೇಲಿನ ಮೈತ್ರಿಯಿಂದ ಈ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರೂ, ಸ್ನೇಹಾಳಿಂದ ಅವನಿಗೆ ದೊರೆತದ್ದು ಅವನ ಒರಟು ವರ್ತನೆಯ ಬಗ್ಗೆ ತಾತ್ಸಾರ ಮಾತ್ರ. ನನ್ನಂಥ ಇತರರಿಗೂ ಅವನು ಕೊಂಚ ವಿದೂಷಕನಾಗಿಯೇ ಕಂಡಿದ್ದರೂ, ನಾವದನ್ನು ತೋರಗೊಟ್ಟಿರಲಿಲ್ಲ

‘ಆಡಾಡತ ಆಯುಷ್ಯ’ ಗ್ರಂಥವನ್ನು ಮನೋಹರ ಗ್ರಂಥಮಾಲಾ, ಧಾರವಾಡ ಪ್ರಕಟಿಸಿದೆ.

(‘ಪ್ರಜಾವಾಣಿ’ ಮುಕ್ತಛಂದ ಪುರವಣಿಯಲ್ಲಿ ಜನವರಿ 23, 2011ರಂದು ಈ ಬರಹ ಮೊದಲ ಬಾರಿಗೆ ಪ್ರಕಟವಾಗಿತ್ತು).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.