ಭಾನುವಾರ, ಜನವರಿ 19, 2020
23 °C

ಆಡು ನುಡಿ ಮೂಲಕ ಕನ್ನ ಡ ಕಲಿಸಿ: ಪ್ರಸನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಡು ನುಡಿ ಮೂಲಕ ಕನ್ನ ಡ ಕಲಿಸಿ: ಪ್ರಸನ್ನ

ಬೆಂಗಳೂರು: ‘ಆಡು ನುಡಿಯ ಮೂಲಕ ಮಕ್ಕಳಿಗೆ ಕನ್ನಡ ಕಲಿಸುವ ಕೆಲಸ ಆಗಬೇಕಿದೆ’ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಅಭಿಪ್ರಾಯಪಟ್ಟರು.

ರಂಗಕರ್ಮಿ ಎ.ಎಸ್‌.ಮೂರ್ತಿ ಅವರ ನೆನಪಿನಲ್ಲಿ ವಿವಿಧ ಸಂಸ್ಥೆಗಳ ಆಶ್ರಯದಲ್ಲಿ ಹನುಮಂತನಗರದ ರಾಮಾಂಜನೇಯ ಗುಡ್ಡದಲ್ಲಿ ಭಾನುವಾರ ನಡೆದ ಕಲೋತ್ಸವದಲ್ಲಿ ಅವರು ಮಾತನಾಡಿದರು.‘ಹೆಚ್ಚು ಸಂಸ್ಕೃತ ಪದಗಳನ್ನು ಒಳಗೊಂಡಿರುವ ಕನ್ನಡದಿಂದ ಮಕ್ಕಳನ್ನು ಸೆಳೆಯಲು ಸಾಧ್ಯವಿಲ್ಲ. ಆರಂಭಿಕ ಹಂತದಲ್ಲೇ ರನ್ನ, ಪಂಪನ ಕಾವ್ಯಗಳನ್ನು ಓದಿಸಿದರೆ ಮಕ್ಕಳಿಗೆ ಕಲಿಕೆ ಕಷ್ಟವಾಗುತ್ತದೆ. ಅವರು ಆತಂಕಕ್ಕೊಳಗಾಗುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಆಡು ನುಡಿಯಲ್ಲೇ ಕನ್ನಡ ಕಲಿಸಬೇಕು’ ಎಂದು ಅವರು ಕಿವಿಮಾತು ಹೇಳಿದರು.‘ಕಲೆಗೂ ಸಂಸ್ಕೃತಿಗೂ ಇರುವ ಸಂಬಂಧದ ಕುರಿತು ಮಕ್ಕಳಿಗೆ ತಿಳಿಸುವ ಕೆಲಸವನ್ನು ಪೋಷಕರು ಮಾಡಬೇಕು’ ಎಂದು ಅವರು ಸಲಹೆ ನೀಡಿದರು.

‘ಮೂರ್ತಿ ಅವರು ಯುವಕರನ್ನು ಒಡನಾಡಿಗಳ­ನ್ನಾಗಿ ಮಾಡಿಕೊಂಡು ಮಕ್ಕಳಿಗಾಗಿ ನಾಟಕ ಆಡಿದರು. ಕಲಾಶಾಲೆಯನ್ನು ಆರಂಭಿಸಿದರು. ರಂಗ­­ಭೂಮಿ­ಯಲ್ಲಿ ಹೊಸ ಹೊಸ ಪ್ರಯೋಗ  ಮಾಡಿದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ‘ರಂಗಭೂಮಿ ಈಗ ಅವನತಿಯ ಅಂಚಿನಲ್ಲಿ ಇದೆ. ಇಂತಹ ಸಂದರ್ಭದಲ್ಲಿ ಬೀದಿನಾಟಕ ಸೇರಿದಂತೆ ವಿವಿಧ ನಾಟಕ ಪ್ರಕಾರಗಳನ್ನು ಪ್ರದರ್ಶಿಸುವ ಜವಾಬ್ದಾರಿ ಯುವಜನರ ಮೇಲಿದೆ’ ಎಂದರು.‘ಬೀದಿನಾಟಕದ ಬಗ್ಗೆ ಮೂರ್ತಿ ಅವರ ಪ್ರೀತಿ ಅಮೋಘವಾದುದು. ಕನ್ನಡದಲ್ಲಿ ಬೀದಿನಾಟಕಕ್ಕೆ ಚಾಲನೆ ನೀಡಿದವರು ಅವರು. ಅವರು ಉತ್ತಮ ಮಾತುಗಾರ. ಅವರ ಪ್ರಯೋಗಶೀಲತೆ ಶ್ಲಾಘ ನೀಯ’ ಎಂದರು.ಮೇಯರ್‌ ಬಿ.ಎಸ್‌.ಸತ್ಯನಾರಾಯಣ, ‘ಹಿರಿಯ ಕಲಾವಿದರ ಸಲಹೆ ಸೂಚನೆಗಳನ್ನು ಪಡೆದು ಪುರಭವನದ ನವೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು’ ಎಂದರು.ಮತ್ತಿತರರು ಇದ್ದರು. ಇದೇ ಸಂದರ್ಭ ಮಕ್ಕಳ ಚಿತ್ರಕಲಾ ಸ್ಪರ್ಧೆ, ಮಕ್ಕಳಿಗೆ ಹಾಡಿನ ಶಿಬಿರ, ಬೀದಿನಾಟಕ, ಚಿತ್ರಕಲಾ ಪ್ರದರ್ಶನ, ಕರಕುಶಲ ವಸ್ತುಪ್ರದರ್ಶನ, ಹಿರಿಯರಿಗೆ ಹಾಡಿನ ಶಿಬಿರಗಳನ್ನು ಆಯೋಜಿಸಲಾಗಿತ್ತು.

ಪ್ರತಿಕ್ರಿಯಿಸಿ (+)