ಶುಕ್ರವಾರ, ಮೇ 7, 2021
19 °C

ಆತಂಕ ನಿವಾರಣೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಮಿಳುನಾಡಿನ ಕಂದನ್‌ಕೊಳಂ ಅಣು ವಿದ್ಯುತ್ ಘಟಕದ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಅಲ್ಲಿನ ಸ್ಥಳೀಯರು ನಡೆಸುತ್ತಿದ್ದ ಧರಣಿಯನ್ನು ಹಿಂತೆಗೆದುಕೊಂಡಿದ್ದಾರೆ.ಈ ಘಟಕದಿಂದ ಸಮುದ್ರ ಮೀನುಗಾರಿಕೆ ತೊಂದರೆಯಾಗುತ್ತದೆ ಎಂಬ ಆತಂಕ ವ್ಯಕ್ತವಾಗಿದೆ. ಸ್ಥಳೀಯರ ಹಿತಾಸಕ್ತಿ ಕಾಪಾಡಲು ಅಣು ವಿದ್ಯುತ್ ಘಟಕ ನಿರ್ಮಾಣ ನಿಲ್ಲಿಸಬೇಕು ಎಂಬ ಬೇಡಿಕೆಯನ್ನು ಯಾರೂ ಒಪ್ಪುವುದಿಲ್ಲ.

ಸದ್ಯದ್ಲ್ಲಲಿ ನಡೆಯಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ಪ್ರತಿಭಟನೆ ನಡೆಯಿತ್ತೆಂಬುದನ್ನು ತಳ್ಳಿಹಾಕಲಾಗದು. ಈ ಅಣು ವಿದ್ಯುತ್ ಘಟಕದ ಮೊದಲ ಹಂತದ ಕಾಮಗಾರಿಗಳು ಮುಕ್ತಾಯದಲ್ಲಿವೆ.ಹದಿಮೂರು ಸಾವಿರ ಕೋಟಿ ರೂಪಾಯಿಗಳ ಅಂದಾಜು ವೆಚ್ಚದ ಈ ಯೋಜನೆ 1988ರ ನವೆಂಬರ್‌ನಲ್ಲಿ ಅಂದಿನ ಪ್ರಧಾನಿ ರಾಜೀವ್‌ಗಾಂಧಿ ಮತ್ತು ರಷ್ಯಾ ಅಧ್ಯಕ್ಷ ಗೊರ್ಬಚೆವ್ ಅವರ ನಡುವೆ ಆದ ಅಂತರರಾಷ್ಟ್ರೀಯ ಒಪ್ಪಂದದ ಫಲ.

 

ಆನಂತರ ರಷ್ಯಾದಲ್ಲಿ ಆದ ರಾಜಕೀಯ ಬೆಳವಣಿಗೆಗಳಿಂದಾಗಿ ಘಟಕದ ಕಾರ್ಯ ವಿಳಂಬವಾಯಿತು. 2001ರಲ್ಲಿ ಕಾಮಗಾರಿ ಆರಂಭವಾಯಿತು. ಹತ್ತು ವರ್ಷಗಳ ನಂತರ ಈ ಅಣು ಘಟಕ ಸುರಕ್ಷಿತವಲ್ಲ ಎಂಬ ಕೂಗೆದ್ದಿದೆ. |ಅದಕ್ಕೆ ನಾರ್ವೆ ಮೂಲದ ಸರ್ಕಾರೇತರ ಸಂಸ್ಥೆಯೊಂದು ಈ ಘಟಕದ ತಾಂತ್ರಿಕ ಗುಣಮಟ್ಟ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಸಂದೇಹ ವ್ಯಕ್ತಪಡಿಸಿರುವುದೇ ಕಾರಣ ಎನ್ನಲಾಗಿದೆ. ಈ ಘಟಕದ ಬಗ್ಗೆ ಸ್ಥಳೀಯರು ಮೊದಲಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಜನರ ಆತಂಕಗಳನ್ನು ನಿವಾರಣೆ ಮಾಡುವವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಮುಖ್ಯಮಂತ್ರಿ ಜಯಲಲಿತಾ ಇತ್ತೀಚೆಗೆ ಪ್ರಧಾನಿಯವರಿಗೆ ಪತ್ರ ಬರೆದಿದ್ದರು. ಪತ್ರಕ್ಕೆ ಪ್ರಧಾನಿ ಸ್ಪಂದಿಸಿದ್ದಾರೆ.ಸುರಕ್ಷತಾ ಕ್ರಮಗಳ ಬಗ್ಗೆ ಸ್ಥಳೀಯರಲ್ಲಿ ಇರುವ ಅನುಮಾನಗಳನ್ನು ನಿವಾರಣೆ ಮಾಡುವುದಾಗಿ ಅವರು ಹೇಳಿದ್ದಾರೆ. ಸ್ಥಳೀಯರು ಈ ಬೆಳವಣಿಗೆಯನ್ನು ಗಮನಿಸಬೇಕು.ರಷ್ಯಾದ ಚೆರ್ನೋಬಿಲ್ ಮತ್ತು ಜಪಾನಿನ ಪುಕುಶಿಮಾ ದುರ್ಘಟನೆಗಳ ನಂತರ ಜಗತ್ತಿನಾದ್ಯಂತ ಅಣು ವಿದ್ಯುತ್ ಘಟಕಗಳು ಸುರಕ್ಷಿತವಲ್ಲ ಎಂಬ ಭಾವನೆ ಬೇರೂರಿದೆ. ಅದು ಸಹಜ.ಈ ಕಾರಣಕ್ಕಾಗಿ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿದ ನಂತರ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸುವುದು ತರವಲ್ಲ. ಈ ಅಣು ಘಟಕ ಸುರಕ್ಷಿತವಾಗಿದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ಸರ್ಕಾರದ ಕರ್ತವ್ಯ. ಲೋಪಗಳಿದ್ದರೆ ಅದನ್ನು ಸರಿಪಡಿಸಬೇಕು.

 

ಧರಣಿ ನಿರತರ ಜತೆ ಸಂಧಾನ ನಡೆಸುವ ಜವಾಬ್ದಾರಿಯನ್ನು ಪ್ರಧಾನಿ ಕಚೇರಿಯ ರಾಜ್ಯ ಸಚಿವ ವಿ. ನಾರಾಯಣಸ್ವಾಮಿ ಅವರಿಗೆ ವಹಿಸಲಾಗಿದೆ. ಅಣು ವಿದ್ಯುತ್ ಸ್ಥಾವರದ ತಂತ್ರಜ್ಞಾನದ ಬಗ್ಗೆ ಕೇಳಿ ಬರುತ್ತಿರುವ ಸಂದೇಹಗಳನ್ನು ನಿವಾರಣೆ ಮಾಡುವುದು ಅಣು ವಿಜ್ಞಾನಿಗಳ ಕೆಲಸ.

 

ಸರ್ಕಾರ ಈ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕೆ ಮುಂದಾಗಬೇಕು. ದೇಶದಲ್ಲಿ ವಿದ್ಯುತ್ ಕೊರತೆ ಇದೆ. ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯೂ ವಿದ್ಯುತ್ತಿನ ಲಭ್ಯತೆಯನ್ನೇ ಅವಲಂಬಿಸಿದೆ. ಹೀಗಾಗಿ ಅಣು ವಿದ್ಯುತ್ ಘಟಕಗಳು ಅನಿವಾರ್ಯ.ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ತಮಿಳುನಾಡು ರಾಜ್ಯ ಈ ಅಣು ಘಟಕದ ಫಲಾನುಭವಿಯಾಗಿರುವುದರಿಂದ ಮುಖ್ಯಮಂತ್ರಿ ಜಯಲಲತಾ ಸ್ಥಳೀಯರ ಭಯ, ಆತಂಕಗಳ ನಿವಾರಣೆಗೆ ಕೇಂದ್ರದ ಜೊತೆ ಕೈಜೋಡಿಸಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.