ಗುರುವಾರ , ಏಪ್ರಿಲ್ 22, 2021
27 °C

ಆದರ್ಶದ ಮಾದರಿ ಅಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರಿಯರಾದ ಕೋ. ಚೆನ್ನಬಸಪ್ಪನವರು ವಿಶ್ವಕನ್ನಡ ಸಮ್ಮೇಳನವನ್ನು ನಾರಾಯಣಮೂರ್ತಿಯವರು ಉದ್ಘಾಟಿಸುವುದನ್ನು ಸಮರ್ಥಿಸುತ್ತ ‘ಬರಗೂರು ಮತ್ತು ಗುಂಪಿನವರು’ ವಿರೋಧಿಸುತ್ತಿದ್ದಾರೆಂದು ಉಲ್ಲೇಖಿಸಿದ್ದಾರೆ. ಇಲ್ಲಿ ನನ್ನ ಗುಂಪು ಎನ್ನುವುದು ಯಾವುದೂ ಇಲ್ಲ.ಇನ್ನು ನಾರಾಯಣಮೂರ್ತಿಯವರಿಂದ ಉದ್ಘಾಟನೆ ಆಗುವುದು ಸರಿಯಲ್ಲ ಎಂಬ ವಾದವನ್ನು ಕೋ. ಚೆನ್ನಬಸಪ್ಪನವರು ಮತ್ತು ಪದ್ಮರಾಜ ದಂಡಾವತಿಯವರು ಸರಳೀಕರಿಸಿದ್ದಾರೆ (ನಾಲ್ಕನೇ ಆಯಾಮ ಮಾ.3). ಈ ವಿಶ್ವಕನ್ನಡ ಸಮ್ಮೇಳನವು ಕರ್ನಾಟಕ ಏಕೀಕರಣದ ಸುವರ್ಣ ಸಂದರ್ಭವನ್ನು ಸಂಭ್ರಮಿಸುವುದಕ್ಕಾಗಿ ನಡೆಯುತ್ತಿದೆ. ಅದೂ ಬೆಳಗಾವಿಯಲ್ಲಿ ನಡೆಯುತ್ತಿದೆ.ಕರ್ನಾಟಕದ ಅಖಂಡತೆಗೆ ವಿರುದ್ಧ ನಿಲುವು ತಳೆದು; ಬೆಂಗಳೂರು ಕೇಂದ್ರಾಡಳಿತ ಪ್ರದೇಶವಾಗಬೇಕು ಎಂದವರು, ಯಾವತ್ತು ಕನ್ನಡ-ಕನ್ನಡತನದ ಪರವಾಗಿಲ್ಲದವರು, ರಾಷ್ಟ್ರವನ್ನು ವ್ಯಾಪಿಸಿಕೊಳ್ಳುತ್ತಿರುವ ಆರ್ಥಿಕ ಮೂಲಭೂತವಾದವನ್ನು ಪ್ರತಿನಿಧಿಸುವವರು, ಸಂವಿಧಾನಾತ್ಮಕ ಸಾಮಾಜಿಕ ನಿಲುವುಗಳನ್ನು ಒಪ್ಪದವರು, ರಾಷ್ಟ್ರಗೀತೆಯ ಬಗ್ಗೆ ಹಗುರವಾಗಿ ನಡೆದುಕೊಂಡವರು ಹೀಗೆ ಅನೇಕ ಕಾರಣಗಳ ಕೇಂದ್ರವಾದವರು ಉದ್ಘಾಟನೆ ಮಾಡುವುದು ಸರಿಯಾದ ‘ಆದರ್ಶದ ಮಾದರಿ’ ಆಗುವುದಿಲ್ಲ ಎನ್ನುವುದು ನನ್ನ ಅಭಿಪ್ರಾಯ.ನಾರಾಯಣಮೂರ್ತಿಯವರ ಬಗ್ಗೆ ಇಲ್ಲಿ ವೈಯಕ್ತಿಕ ವಿರೋಧವೂ ಇಲ್ಲ; ಅವರ ಉದ್ಯಮ ಕ್ಷೇತ್ರದ ಸಾಧನೆಯನ್ನು ಅಲ್ಲಗಳೆಯುತ್ತಲೂ ಇಲ್ಲ; ಅವರಿಗೆ ಅಗೌರವ ತೋರಿಸುವ ಪ್ರಶ್ನೆಯೂ ಇಲ್ಲ. ಹೀಗಾಗಿ ಇದು ವೈಯಕ್ತಿಕ ನೆಲೆಯ ವಾದ-ವಿವಾದ ಅಲ್ಲ. ನನ್ನದು ಪ್ರಜಾಸತ್ತಾತ್ಮಕ ತಾತ್ವಿಕ ಪ್ರತಿರೋಧ; ಕೂದಲೆಳೆ ಸೀಳುವ ವಕೀಲಿ ವಾದವಲ್ಲ.ನಿಜ; ಒಮ್ಮೆ ಆಹ್ವಾನಿಸಿ ಆನಂತರ ಬರಬೇಡಿ ಎಂದು ಸರ್ಕಾರವಾಗಲಿ, ಆಹ್ವಾನಿಸಿದವರಾಗಲಿ ಹೇಳುವುದು ಸಜ್ಜನಿಕೆಯಾಗುವುದಿಲ್ಲ ಎಂಬ ಅಂಶವನ್ನು ನಾನೂ ಒಪ್ಪುತ್ತೇನೆ. ಆದರೆ ಅವರ ಆಯ್ಕೆಯ ವಿವೇಕವನ್ನು ಒಪ್ಪುವುದಿಲ್ಲ. ಅಲ್ಲದೆ, ವಿಶ್ವಕನ್ನಡ ಸಮ್ಮೇಳನವು ಒಬ್ಬ ವ್ಯಕ್ತಿಯದಲ್ಲ; ಒಂದು ಸರ್ಕಾರದ್ದಲ್ಲ; ಸಮಸ್ತ ಕನ್ನಡಿಗರದು. ಬೆಳಗಾವಿಯಂತಹ ಸೂಕ್ಷ್ಮ ಸ್ಥಳದಲ್ಲಿ ನಡೆಯುವ ಈ ಸಮ್ಮೇಳನ ಯಶಸ್ವಿಯಾಗಬೇಕೆಂಬುದೇ ನನ್ನಂಥವರ ಅಪೇಕ್ಷೆಯಾಗಿದೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.