ಗುರುವಾರ , ಜೂಲೈ 9, 2020
21 °C

ಆದರ್ಶ ವಿದ್ಯಾಲಯ ಕಟ್ಟಡಕ್ಕೆ ಮೂರು ಕೋಟಿ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆದರ್ಶ ವಿದ್ಯಾಲಯ ಕಟ್ಟಡಕ್ಕೆ ಮೂರು ಕೋಟಿ ಬಿಡುಗಡೆ

ಸಿಂದಗಿ: ಸರ್ಕಾರದ ಮಹತ್ವಾಕಾಂಕ್ಷೆ ಶೈಕ್ಷಣಿಕ ಯೋಜನೆ ಆರ್‌ಎಂಎಸ್‌ಎ ಆದರ್ಶ ವಿದ್ಯಾಲಯದ ಕಟ್ಟಡ ನಿರ್ಮಾಣಕ್ಕಾಗಿ ಈಗಾಗಲೇ ಮೂರು ಕೋಟಿ ರೂಪಾಯಿ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.ಪಟ್ಟಣದ ಗುರುಭವನದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಸರ್ಕಾರದ ಆದರ್ಶ ವಿದ್ಯಾಲಯದ ಪ್ರಥಮ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಾಲಾ ಕಟ್ಟಡಕ್ಕಾಗಿ ಸಿಂದಗಿಯ ಗೋಲಗೇರಿ ರಸ್ತೆಯಲ್ಲಿನ ರೇಷ್ಮೆ ಇಲಾಖೆಯ 3 ಎಕರೆ ಜಮೀನು ಪಡೆದುಕೊಳ್ಳಲಾಗಿದೆ. ಕೂಡಲೇ ಟೆಂಡರ್ ಕರೆದು ಕಟ್ಟಡ ನಿರ್ಮಾಣ ಕಾರ್ಯಾರಂಭ ಗೊಳ್ಳಲಿದೆ. ಆಲಮೇಲದಲ್ಲಿ ಬಾಲಕಿಯರಿಗಾಗಿ ಆಂಗ್ಲ ಮಾಧ್ಯಮ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾರಂಭಿಸಲಾಗಿದೆ. ಖೈನೂರ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಈಗಾಗಲೇ ಆರಂಭಗೊಂಡಿದೆ. ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಬಮ್ಮಹನಳ್ಳಿ, ಮಲಘಾಣ, ರಾಂಪೂರ ಪಿ.ಎ, ಕೊಕಟನೂರ, ಬಂಥನಾಳ, ಆಲಮೇಲಗಳಲ್ಲಿ ಹೊಸ ಸರ್ಕಾರಿ ಪ್ರೌಢಶಾಲೆಗಳನ್ನು ಪ್ರಾರಂಭಿಸಲು ಸರ್ಕಾರ ಮಂಜೂರಾತಿ ನೀಡಿದೆ’ ಎಂದರು.ವಿಧಾನಪರಿಷತ್ ಸದಸ್ಯ ಅರುಣ ಶಹಾಪುರ ಸಮಾರಂಭ ಉದ್ಘಾಟಿಸಿದರು. ‘ಪ್ರಸ್ತುತ ಡೋನೆಶನ್ ಹಾವಳಿಯಲ್ಲಿ ತೀರ ಕಡಿಮೆ ಅಂದರೆ ರೂ. 45 ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಈ ಶಾಲೆಗಳಿಂದ ಬಡಮಕ್ಕಳಿಗೆ ತುಂಬಾ ಅನುಕೂಲವಾಗಿದೆ’ ಎಂದು ಮಾತನಾಡಿದರು.ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿ ರಾಮಕುಮಾರ ಅನೀಲ ಕಡಕೋಳ ಅವರನ್ನು ರಾಜ್ಯ ಮಟ್ಟದ ರಸಪ್ರಶ್ನೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಕ್ಕಾಗಿ ಸನ್ಮಾನಿಸ ಲಾಯಿತು. ವಿದ್ಯಾರ್ಥಿಗಳಿಂದ ಸಿದ್ದಗೊಂಡ ಕೈಬರಹ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿರಾದಾರ, ಸಮನ್ವಯಾಧಿಕಾರಿ ಆರ್.ವಿ.ಹೊಸೂರ, ವಿದ್ಯಾಲಯದ ಪ್ರಭಾರಿ ಮುಖ್ಯೋಪಾದ್ಯಾಯ ಎಸ್.ಕೆ. ಗುಗ್ಗರಿ ವೇದಿಕೆಯಲ್ಲಿದ್ದರು.ಭಾಗ್ಯಶ್ರೀ, ಪವಿತ್ರಾ ಪ್ರಾರ್ಥನೆ ಹಾಡಿದರು. ಮುಖ್ಯಗುರು ಎಲ್.ವಿ.ಲಮಾಣಿ ಸ್ವಾಗತಿಸಿದರು. ಝಡ್.ಎ. ಸಾತಾರೇಕರ ನಿರೂಪಿಸಿದರು. ಎಸ್.ವಿ. ಭಿಂಗೆ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.