ಗುರುವಾರ , ಜನವರಿ 23, 2020
28 °C

ಆನೆ ತುಳಿತ; ನೆಲಕಚ್ಚಿದ ಬತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ:  ಗಡಿ ಭಾಗದಲ್ಲಿ ಕಳೆದ 22 ದಿನಗಳಿಂದ ರೈತರ ಬೆಳೆಗಳಿಗೆ ಲಗ್ಗೆ ಇಟ್ಟಿರುವ ಆನೆ ಹಿಂಡು ಗುರುವಾರ ಕೊಳಮೂರು ಕಾಡಿನಲ್ಲಿ ಸಂಚರಿಸಿವೆ. ಬತ್ತಲಹಳ್ಳಿ ಸಮೀಪ ಇದ್ದ ಆನೆ ಹಿಂಡು ಮಂಗಳವಾರ ಎರಡು ಗುಂಪುಗಳಾ­ಗಿವೆ.  ಒಂದು ಗುಂಪು ಸಮೀಪದ ಪೊಲೇನಹಳ್ಳಿ ಹೊಲ ಗದ್ದೆಗಳಿಗೆ ಲಗ್ಗೆಯಿಟ್ಟಿವೆ.  ಗ್ರಾಮದ ನಾರಾಯಣಪ್ಪ ಎಂಬುವರ ಬತ್ತ, ಟೊಮೆಟೊ, ಗಂಟ್ಲಪ್ಪ ಅವರ ಬತ್ತ, ಎಲೆ ತೋಟ ತುಳಿದಿವೆ. ವೀರಪ್ಪ ಅವರ ಟೊಮೆಟೊ ನಾರುಗಳನ್ನು, ಎಬ್ಬಿರಪ್ಪ ಅವರ ಕೋಸು ತೋಟದ ಸ್ವಲ್ಪ ಭಾಗ, ಅಲ್ಲಲ್ಲಿ ನಾಟಿ ಮಾಡಿದ್ದ ಕೆಲ ಬಾಳೆ ಗಿಡಗಳನ್ನು ತುಳಿದಿವೆ ಎಂದು ಗ್ರಾಮಸ್ಥ ರಮೇಶ್‌ ತಿಳಿಸಿದರು.ಅಲ್ಲಿಂದ ಕದಿರಿನೆತ್ತಂ ಮೂಲಕ ಐದಾರು ಕಿಲೋ ಮೀಟರ್‌ ಸಂಚರಿಸಿ ಬುಧವಾರ ರಾತ್ರಿ ಕೊಳಮೂರು ತಲುಪಿವೆ. ಹಾದಿಯಲ್ಲಿ ಸಿಕ್ಕ ಕದಿರಿನೆತ್ತ ಗ್ರಾಮದ ಎಲ್ಲಪ್ಪ ಎಂಬುವರ ಎಲೆ ತೋಟ, ಮುನಿವೆಂಕಟಪ್ಪ ಅವರ ಜೋಳ, ತೊಗರಿ ತಿಂದಿವೆ. ಕೊಳ­ಮೂರು ಗ್ರಾಮದ ವೆಂಕೋಬರಾವ್‌ ಅವರ ಟೊಮೆಟೊ ತೋಟ ತುಳಿದು ನಾಶ ಮಾಡಿವೆ ಎಂದು ಕದಿರಿನೆತ್ತ ಗ್ರಾಮದ ಪಂಚಾಯಿತಿ ಮಾಜಿ ಸದಸ್ಯ ಕೌಲೋಜಿರಾವ್‌ ‘ಪ್ರಜಾವಾಣಿ’ಗೆ ತಿಳಿಸಿದರು.ಕಳೆದ ಏಳೆಂಟು ವರ್ಷಗಳಿಂದ ಮಳೆ ಇಲ್ಲದೆ ಅಲ್ಪಸ್ವಲ್ಪ ಬೆಳೆ ಬೆಳೆಯ­ಲಾಗಿತ್ತು. ಈ ಬಾರಿ ಬಿದ್ದ ಮಳೆಗೆ ಉತ್ತಮ ಬೆಳೆಯಾಗಿತ್ತು. ಕಟಾವಿಗೆ ಬಂದಿದ್ದ ಬೆಳೆಗಳನ್ನು ಆನೆಗಳು ತುಳಿದು ನಾಶ ಮಾಡಿವೆ.ಇದರಿಂದ ಅಪಾರ ನಷ್ಟ ಆಗಿದ್ದು, ಇದ್ದ ಆದಾಯದ ಮೂಲ ಕಳೆದುಕೊಂಡು ದಿಕ್ಕುತೋಚ­ದಾಗಿದೆ ಎಂದು ನಾರಾಯಣಪ್ಪ ಅಲವತ್ತುಕೊಂಡರು. ಆನೆ ಹಿಮ್ಮೆಟ್ಟಿ­ಸುವ ಕಾರ್ಯಾಚರಣೆ ಮುಂದುವರೆ­ದಿದೆ ಎಂದು ಬಂಗಾರಪೇಟೆ ವಲಯ ಅರಣ್ಯ ಅಧಿಕಾರಿ ಚಂದ್ರಶೇಖರ ರೆಡ್ಡಿ ತಿಳಿಸಿದರು.

ಪ್ರತಿಕ್ರಿಯಿಸಿ (+)