ಶುಕ್ರವಾರ, ಮೇ 14, 2021
21 °C

ಆನೆ ದಾರಿಯಲಿ ಅಡಿಗಡಿಗೂ ಅಡ್ಡಗಾಲು

ಪ್ರವೀಣ್ ಭಾರ್ಗವ್ / (ಲೇಖಕರು ವೈಲ್ಡ್ ಲೈಫ್ ಫಸ್ಟ್‌ನ ಟ್ರಸ್ಟಿ) Updated:

ಅಕ್ಷರ ಗಾತ್ರ : | |

ಆನೆ ದಾರಿಯಲಿ ಅಡಿಗಡಿಗೂ ಅಡ್ಡಗಾಲು

ನಗರದ ಹೊರವಲಯದಲ್ಲಿ ಆನೆಗಳು ಕಾಣಿಸಿಕೊಂಡಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಆದರೆ, ಈ ಕಾರಣಕ್ಕೆ ಆನೆಗಳನ್ನು ಶತ್ರುಗಳ ಹಾಗೆ ನೋಡುವುದು ಸರಿಯಲ್ಲ. ವಿವಿಧ ಕಾರಣದಿಂದ ಅರಣ್ಯ ಪ್ರದೇಶ  ಕರಗುತ್ತಿದ್ದು ಆನೆಗಳ ಸಂಚಾರಕ್ಕೆ ತೊಂದರೆಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಅರಣ್ಯ ನಾಶವು ಮಾನವ ಮತ್ತು ಪ್ರಾಣಿ ಸಂಘರ್ಷ ಹೆಚ್ಚಾಗಲು ಕಾರಣವಾಗಿದೆ.ಅರಣ್ಯ ನಾಶ, ಅರಣ್ಯ ಪ್ರದೇಶಗಳಲ್ಲಿ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರುವುದು, ಕಾಡಿಗೆ ಬೆಂಕಿ ಹಾಕುವುದು, ಕಾಡಿಗೆ ಜಾನುವಾರುಗಳನ್ನು ಮೇಯಲು ಬಿಡುವುದು, ವಾಣಿಜ್ಯ ಉದ್ದೇಶಕ್ಕಾಗಿ ಅರಣ್ಯ ಉತ್ಪನ್ನಗಳನ್ನು ಹೆಚ್ಚಾಗಿ ಸಂಗ್ರಹಿಸುತ್ತಿರುವುದು ಕಾಡು ದಿನದಿಂದ ಬರಿದಾಗುತ್ತಿರುವುದಕ್ಕೆ ಕಾರಣ. ಆನೆ ಕಾರಿಡಾರ್‌ನಲ್ಲಿ (ಆನೆಗಳು ಸಂಚರಿಸುವ ಪ್ರದೇಶ) ಅರಣ್ಯ ಒತ್ತುವರಿ, ವ್ಯವಸಾಯ ಭೂಮಿ ಅಭಿವೃದ್ಧಿ ಹೆಚ್ಚಿದ್ದರಿಂದ ಆನೆಗಳ ಸಹಜ ಸಂಚಾರಕ್ಕೆ ಅಡ್ಡಿಯಾಗಿದೆ.ಆನೆಗಳು ಅರಣ್ಯ ಪ್ರದೇಶದಿಂದ ಹೊರ ಬಂದಾಗ ಸ್ಥಳೀಯರು ಅವುಗಳನ್ನು ಗಾಬರಿಗೊಳಿಸಿ ಸಮಸ್ಯೆಯನ್ನು ಜಟಿಲಗೊಳಿಸುತ್ತಾರೆ. ಆನೆಗಳನ್ನು ಕಾಡಿಗಟ್ಟುವ ಸಂದರ್ಭದಲ್ಲಿ ಸ್ಥಳೀಯರು ಹೊಣೆ ಅರಿತು ವರ್ತಿಸಬೇಕು. ಆನೆ ಕಾರಿಡಾರ್‌ನ ಅಕ್ಕಪಕ್ಕದ ಗ್ರಾಮಗಳ ಜನರು ಈ ಬಗ್ಗೆ ಜಾಗೃತರಾಗಬೇಕು. ಆನೆಗಳು ಅರಣ್ಯ ಪ್ರದೇಶದಿಂದ ಹೊರಬಂದಾಗ ಅವುಗಳ ಸ್ವಭಾವ ಕೆರಳದಂತೆ ನಾವು ಸಂಯಮದಿಂದ ವರ್ತಿಸಬೇಕು. ಇಲ್ಲವಾದರೆ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿದಂತೆ ಆಗುತ್ತದೆ.ಮಾನವ ಮತ್ತು ಆನೆ ಸಂಘರ್ಷ ತಗ್ಗಸಲು ಕೆಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಬೇಕಾದ್ದು ಭವಿಷ್ಯ ದೃಷ್ಟಿಯಿಂದ ಅವಶ್ಯಕವಾಗಿದೆ.* ವೈಜ್ಞಾನಿಕವಾಗಿ ಆನೆ ಕಾರಿಡಾರ್‌ಗಳನ್ನು ಗುರುತಿಸಿ ಆ ಪ್ರದೇಶಗಳನ್ನು ಮಾನವ ಚಟುವಟಿಕೆಗಳಿಂದ ಮುಕ್ತಗೊಳಿಸಬೇಕು. ಇದರಿಂದ ಭವಿಷ್ಯದಲ್ಲಿ ಉಂಟಾಗುವ ಸಂಘರ್ಷವನ್ನು ತಗ್ಗಿಸಬಹುದು. ಇದಕ್ಕಾಗಿ ಆನೆ ಕಾರಿಡಾರ್ ಪ್ರದೇಶದಲ್ಲಿ ಇರುವ ಗ್ರಾಮಗಳು  ರೆಸಾರ್ಟ್‌ಗಳನ್ನು ಸ್ಥಳಾಂತರಿಸಬೇಕು. ಆನೆ ಕಾರಿಡಾರ್ ಪ್ರದೇಶದ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಬೇಕು.*  ಆನೆಗಳ ದಾಳಿಯನ್ನು ತಡೆಯಲು ತಜ್ಞರ ಸಲಹೆಯಂತೆ ಆನೆಗಳು ದಾಟದಂಥ ಕಾಲುವೆ, ಸೋಲಾರ್ ವಿದ್ಯುತ್‌ನ ಬೇಲಿಗಳನ್ನು ವೈಜ್ಞಾನಿಕವಾಗಿ ಅಳವಡಿಸಬೇಕು.*  ಆನೆಗಳು ಜನ ವಸತಿ ಪ್ರದೇಶದ ಕಡೆಗೆ ನುಗ್ಗಿ ಬರುವ ಸಂದರ್ಭಗಳಲ್ಲಿ ಸ್ಥಳೀಯರು ಗಲಭೆ ಮಾಡದಂತೆ ತಡೆಯಬೇಕು. ಇದಕ್ಕಾಗಿ ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ವ್ಯವಸ್ಥಿತವಾಗಿ ಕಾರ್ಯಾಚರಣೆಯ ರೂಪುರೇಷೆ ಸಿದ್ಧಪಡಿಸಿ ಆನೆಗಳನ್ನು ಕಾಡಿಗಟ್ಟಬೇಕು. ಇದರಿಂದ ಅನವಶ್ಯವಾಗಿ ಆನೆಗಳಿಂದ ತುಳಿತಕ್ಕೊಳಗಾಗಿ ಮನುಷ್ಯರು ಸಾಯುವುದನ್ನು ತಪ್ಪಿಸಬಹುದು.* ಆನೆಗಳು ಪದೇಪದೇ ದಾಳಿ ಮಾಡುವ ಪ್ರದೇಶಗಳಲ್ಲಿ ಸ್ಥಳೀಯರನ್ನು ಒಗ್ಗೂಡಿಸಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಆನೆಗಳು ಗ್ರಾಮಗಳತ್ತ ನುಗ್ಗಿ ಬಂದ ಸಂದರ್ಭಗಳಲ್ಲಿ ಬಂದೂಕಿನಿಂದ ಗುಂಡು ಹಾರಿಸುವುದು, ಕಲ್ಲು ಎಸೆಯುವುದು, ಪಟಾಕಿ ಹೊಡೆಯುವುದು ಹಾಗೂ ಹೆಚ್ಚು ಜನರು ಗುಂಪುಗೂಡುವುದು ಸರಿಯಲ್ಲ. ಇದರಿಂದ ಆನೆಗಳ ಹಿಂಡು ಗಾಬರಿಗೊಂಡು ಇನ್ನಷ್ಟು ಹಾನಿಯಾಗುವ ಸಂಭವಿರುತ್ತದೆ. ಹೀಗಾಗಿ ಸ್ಥಳೀಯರು ಇಂತಹ ಮರುದಾಳಿಗೆ ಮುಂದಾಗುವುದನ್ನು ತಡೆಯಲು ಅರಿವು ಮೂಡಿಬೇಕಾದ್ದು ಅಗತ್ಯ.*  ಆನೆಗಳು ಕಾಡಿನಿಂದ ಹೊರಬಂದ ಸಂದರ್ಭಗಳಲ್ಲಿ `ಆನೆಗಳ ಪುಂಡಾಟ, ದಾಂದಲೆ, ಅಟ್ಟಹಾಸ' ಎಂಬ ಪದಗಳನ್ನು ಬಳಸಬಾರದು. ಇದರಿಂದ ಜನರಲ್ಲಿ ಆನೆಗಳ ಬಗ್ಗೆ ವೈರತ್ವ ಹುಟ್ಟುತ್ತದೆ. ಅಲ್ಲದೇ ಇಂತಹ ಸಂದರ್ಭದಲ್ಲಿ ಸ್ಥಳೀಯರು ಹೇಗೆ ವರ್ತಿಸಬೇಕು ಎಂಬ ಬಗ್ಗೆ ಮಾಧ್ಯಮಗಳು ಜನರಿಗೆ ತಿಳಿವಳಿಕೆ ನೀಡಬೇಕು.ಸಾವಿರಾರು ವರ್ಷಗಳಿಂದ ಆನೆಗಳು ಭೂಮಿಯ ಮೇಲಿವೆ. ಮಾನವನ ಅತಿಯಾದ ಅಭಿವೃದ್ಧಿಯ ಕಾರಣದಿಂದ ಆನೆಗಳ ಜೀವನಕ್ಕೂ ತೊಂದರೆಯಾಗಬಾರದು. ಹೀಗಾಗಿ ಅವುಗಳನ್ನು ಶತ್ರುಗಳಂತೆ ನೋಡುವುದನ್ನು ಬಿಟ್ಟು ಅವುಗಳ ಬದುಕಿನ ಬಗ್ಗೆಯೂ ಕಾಳಜಿ ವಹಿಸಬೇಕು

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.