ಮಂಗಳವಾರ, ಮೇ 24, 2022
24 °C

ಆನೆ ನಡೆದದ್ದೇ ದಾರಿ...

-ಡಿ.ಕೆ. ರಮೇಶ್ . Updated:

ಅಕ್ಷರ ಗಾತ್ರ : | |

ಚಂದನವನದಲ್ಲಿ `ಮುಟ್ಟಿದ್ದೆಲ್ಲ ಚಿನ್ನ' ಎನ್ನುವ ಜಾದೂಗಾರನೊಬ್ಬ ರೂಪುಗೊಳ್ಳುತ್ತಿದ್ದಾನೆಯೇ? ಹಾಗೆಂದು ಗಾಂಧಿನಗರ ಪುಳಕಗೊಳ್ಳುತ್ತಿದೆ. ಅಂಥ `ಥ್ರಿಲ್' ನೀಡಿರುವುದು ನಟ ದರ್ಶನ್. `ಗಲ್ಲಾಪೆಟ್ಟಿಗೆ ಗಂಡು', `ಬಾಕ್ಸಾಫೀಸ್ ಸುಲ್ತಾನ' ಎಂದೇ ಅಭಿಮಾನಿಗಳಿಂದ ಕರೆಸಿಕೊಳ್ಳುವ ದರ್ಶನ್ ಈಗ ಕನ್ನಡದ ಬಹು ಬೇಡಿಕೆಯ ಹೀರೊ.

ಐದು ಕೋಟಿ ರೂಪಾಯಿಗೂ ಮೀರಿ ಸಂಭಾವನೆ ಪಡೆಯುತ್ತಿರುವ ನಟ ಎಂಬ ಹೆಗ್ಗಳಿಕೆಯೂ ಅವರದ್ದೇ. ಇನ್ನೊಂದೆಡೆ ದರ್ಶನ್ ಚಿತ್ರಗಳ ಗಳಿಕೆ ಲೆಕ್ಕಾಚಾರವೂ ಏರುಮುಖವಾಗಿದೆ. `ಸಾರಥಿ' 25 ಕೋಟಿ ರೂಪಾಯಿ ಗಳಿಸಿತ್ತು. `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ'ನ ಗಳಿಕೆ ಮೂವತ್ತು ಕೋಟಿ ರೂಪಾಯಿ. `ಬುಲ್ ಬುಲ್' ಕೂಡ ಗಳಿಕೆಯ ಆ ಹಾದಿಯಲ್ಲೇ ಇದೆ. ನಿರ್ಮಾಣ ಹಂತದಲ್ಲಿರುವ `ಬೃಂದಾವನ' 40 ಕೋಟಿ ರೂಪಾಯಿ ಗಳಿಸಬಹುದೆಂಬ ನಿರೀಕ್ಷೆ ಇದೆ. ಹಣದ ಆಟದಲ್ಲಿ `ಚಿಂಗಾರಿ' ಸ್ವಲ್ಪ ಹಿಂದುಳಿದಿದ್ದರೂ ಅವರ ಅಭಿಮಾನಿಗಳಿಗೆ ನಿರಾಸೆ ತಂದಿರಲಿಲ್ಲ.ಮತ್ತೊಂದೆಡೆ ಐದು ಕೋಟಿ ರೂಪಾಯಿಗೆ ಕಡಿಮೆ ಇಲ್ಲದಂತೆ ದರ್ಶನ್ ಸಿನಿಮಾಗಳ ಟೀವಿ ಹಕ್ಕು ಬಿಕರಿಯಾಗುತ್ತಿದೆ. ಅವರ ಹೊಸ ಚಿತ್ರವೊಂದು ಟೀವಿ ಹಕ್ಕಿಗೆ ಏಳು ಕೋಟಿ ರೂಪಾಯಿಯಷ್ಟು ಭಾರಿ ಮೊತ್ತ ಪಡೆಯುವ ಸನ್ನಾಹದಲ್ಲಿದೆ. ಸಿನಿಮಾವೊಂದಕ್ಕೆ ದರ್ಶನ್ ಒಪ್ಪಿದರೆಂದರೆ ಗಾಂಧಿನಗರದಲ್ಲಿ ಹಣದ ಸಹಾಯ ಮಾಡುವವರ ಹೊಳೆಯೇ ಹರಿಯುತ್ತದೆ.

ಇದು ಅವರ ಮನೆ ಮುಂದೆ ನಿರ್ಮಾಪಕರು ಸಾಲುಗಟ್ಟುವಂತೆ ಮಾಡಿದೆ. `ದರ್ಶನ್' ಎಂಬ ಹೆಸರೇ ಯಶಸ್ಸಿನ ಗುಟ್ಟು ಎಂಬುದು ಸಿನಿಮಾ ಪಂಡಿತರ ವಾದ. ಒಂದು ಹಿಟ್ ಸಿನಿಮಾ ನೀಡಿ ಹಲವು ವರ್ಷ ಅದೇ ಸಿನಿಮಾ ಹೆಸರಿನಲ್ಲಿ ಬದುಕುವವರ ನಡುವೆ `ಚಾಲೆಂಜಿಂಗ್ ಸ್ಟಾರ್' ಸಿನಿಮಾ ಪ್ರಿಯರಿಗೆ ಹೊಸ ರೀತಿಯಲ್ಲಿ ಕಾಣುತ್ತಿದ್ದಾರೆ. ಆದರೆ ದರ್ಶನ್ ಮಾತ್ರ ಈ ಯಾವುದನ್ನೂ ಹೆಚ್ಚು ಹಚ್ಚಿಕೊಂಡಿಲ್ಲ. `ನಾನು ಎಂದೂ ನಂಬರ್‌ಗಳ ಲೆಕ್ಕ ಇಟ್ಟವನಲ್ಲ. ಒಬ್ಬೊಬ್ಬ ನಟರಿಗೆ ಒಂದೊಂದು ವೇದಿಕೆ ಇರುತ್ತದೆ. ಅದರಲ್ಲಿ ಅವರು ಯಾವತ್ತೂ ನಂಬರ್ ಒನ್...'- ವಿನಯಭರಿತ ನಿರ್ಲಿಪ್ತತೆಗೆ ಶರಣಾದಂತಿತ್ತು ಅವರ ಮಾತು. ಇನ್ನು ನಂಬರ್ ಒನ್ ಪಟ್ಟವನ್ನು ಜತನದಿಂದ ಕಾಪಾಡಿಕೊಳ್ಳುವ ಬಗ್ಗೆಯೂ ಮೌನ. ಪಟ್ಟದ ಬಗ್ಗೆಯೇ ವ್ಯಾಮೋಹ ಇಲ್ಲದಿರುವಾಗ ಇನ್ನು ಅದನ್ನು ಉಳಿಸಿಕೊಳ್ಳುವ ಮಾತೇಕೆ ಎಂಬುದನ್ನು ಸಾರುವಂತಿತ್ತು ಆ ನಿಶ್ಶಬ್ದ.`ಮೊದಲ ರ‌್ಯಾಂಕ್'ನ ಜವಾಬ್ದಾರಿಗಳು ಎಂಥವು ಎಂಬ ಪ್ರಶ್ನೆಗೆ ಮಾತ್ರ ಕಿವಿ ನಿಮಿರಿಸುವ ಸನ್ನಿವೇಶ. `ಹಣ ಹೂಡಿದ ನಿರ್ಮಾಪಕರಿಗೆ ಒಳ್ಳೆಯದಾಗಬೇಕು, ಕ್ಲಾಸ್ ಇರಲಿ ಮಾಸ್ ಇರಲಿ ಒಳ್ಳೆಯ ಚಿತ್ರಗಳನ್ನು ನೀಡಬೇಕು' ಎಂಬ ಹೊಣೆಯೊಂದಿಗೆ ಅವರ ಹೆಜ್ಜೆಗಳಿವೆ. ತಮಿಳು, ತೆಲುಗು, ಹಿಂದಿ, ಇಂಗ್ಲಿಷ್ ಹೀಗೆ ಅನ್ಯಭಾಷೆ ನಟರೊಂದಿಗೆ ಸ್ಪರ್ಧಿಸಿ ಗೆಲ್ಲುತ್ತಿರುವ ನಟರೇ ನಿಜವಾದ ನಟರು ಎಂದು ದರ್ಶನ್ ಹಿಂದೊಮ್ಮೆ ಹೇಳಿದ್ದರು. ಆ ಮಾತನ್ನು ಸಮರ್ಥಿಸುವಂತೆ `ಬುಲ್‌ಬುಲ್' ಯಶಸ್ಸಿನ ಪ್ರಸ್ತಾಪವಾಯಿತು. ರೀಮೇಕ್ ಸ್ವಮೇಕ್ ಎಂಬ ಭೇದ ಮುಖ್ಯವಲ್ಲ. ಯಶಸ್ಸು ಮುಖ್ಯ ಎಂಬುದು ಅವರ ಸದ್ಯದ ನಿಲುವು.

ಸಾಕಷ್ಟು ಮಾರ್ಪಾಡುಗಳೊಂದಿಗೆ ತೆಲುಗಿನ `ಡಾರ್ಲಿಂಗ್' ಕನ್ನಡದ `ಬುಲ್‌ಬುಲ್' ಆಯಿತು. ಆ ಬದಲಾವಣೆಗಳೇ ಚಿತ್ರವನ್ನು ಗೆಲ್ಲಿಸಿದ್ದಂತೆ. ಈಗಲೂ ಮೊದಲು `ಡಾರ್ಲಿಂಗ್' ನೋಡಿ ನಂತರ `ಬುಲ್‌ಬುಲ್' ನೋಡಿ ಎಂಬುದೇ ಅವರ ಸಲಹೆ. ಸಿನಿಮಾ ಎಂಬುದು ಕಲೆ ಮಾತ್ರವಲ್ಲದೆ ವ್ಯವಹಾರವೂ ಆಗಿರುವಾಗ ರೀಮೇಕ್‌ನಂಥ ಅಂಶಗಳೂ ಅವರಿಗೆ ಮುಖ್ಯವಾಗಿ ಕಾಣುತ್ತಿದೆ.ಗೆದ್ದ ಈ ಹೊತ್ತಿನಲ್ಲಿ ಸೋಲುಂಡ ತಮ್ಮ ಚಿತ್ರಗಳನ್ನು ಅವರು ಮರೆತಿಲ್ಲ. `ಅವು ಕೂಡ ನನ್ನ ಅಚ್ಚುಮೆಚ್ಚಿನ ಚಿತ್ರಗಳೇ. ಒಳ್ಳೆಯ ಅಂಶಗಳಿದ್ದರೂ ಚಿತ್ರ ಒಮ್ಮಮ್ಮೆ ಯಶಸ್ವಿಯಾಗುವುದಿಲ್ಲ' ಎನ್ನುತ್ತ ಅಂಥ ಹೊತ್ತಿನಲ್ಲಿ ತಮ್ಮ ಜೊತೆಗಿದ್ದವರನ್ನು ನೆನೆಯುತ್ತಾರೆ.ದರ್ಶನ್ ಸಿನಿಮಾಗೆ ಮುಗಿಬೀಳುವವರ ನಿರ್ಮಾಪಕರು ಒಂದೆಡೆ ಇದ್ದರೆ ಅವರ ಚಿತ್ರಗಳು ಹಣ ತಂದುಕೊಡುವುದಿಲ್ಲ ಎಂದು ಮೂಗುಮುರಿಯುವ ನಿರ್ಮಾಪಕರೂ ಇಲ್ಲದಿಲ್ಲ. ಇಂಥ ಆಕ್ಷೇಪಗಳ ಬಗ್ಗೆ ದರ್ಶನ್ ತಲೆಕೆಡಿಸಿಕೊಂಡಿಲ್ಲ. ಅದರಿಂದಾಗಿಯೇ ದರ್ಶನ್ ವಿತರಣೆಗೂ ಕೈ ಹಾಕಿದ್ದಾರೆ ಎಂಬ ಮಾತಿದೆ. ಅವರು ಮಾತ್ರ ಇದನ್ನು ಅಲ್ಲಗಳೆಯುತ್ತಾರೆ. ಸಿನಿಮಾ ಮಾರುಕಟ್ಟೆ ಹೀಗಿದೆ ನೋಡಿ ಎಂದು ತಿಳಿಸುವ ಅಗತ್ಯವಿತ್ತು. ಆದ್ದರಿಂದ ಹೊಸ ಸಾಹಸಕ್ಕೆ ಮುಂದಾದರಂತೆ.`ಕ್ರಾಂತಿವೀರ ಸಂಗೊಳ್ಳಿರಾಯಣ್ಣ' ಇನ್ನಷ್ಟು ಚಂದಗೊಳ್ಳಬಹುದಿತ್ತು ಎಂದು ಚಿತ್ರ ಬಿಡುಗಡೆಯಾದ ಹೊತ್ತಿನಲ್ಲಿ ಸಿನಿ ಚಿಂತಕರು ಆಡಿಕೊಂಡ ಮಾತು. ಆದರೆ ಅವರಿಗೆ ಹಾಗೇನೂ ಅನ್ನಿಸಿಲ್ಲ. ಕಾರಣ ಅದೊಂದು ಐತಿಹಾಸಿಕ ಸಿನಿಮಾ. ನಡೆದಿರುವ ಕತೆಯನ್ನು ವಾಸ್ತವಕ್ಕೆ ಹತ್ತಿರವಾಗಿ ತಂದುಕೊಡಬೇಕಿತ್ತು. ಆ ಕೆಲಸ ಆಗಿದೆ ಎನ್ನುವ ಅವರು ನಿರ್ಮಾಪಕ ಆನಂದ ಅಪ್ಪುಗೋಳರೇ ಚಿತ್ರದ ನಿಜವಾದ ನಾಯಕ ಎಂದು ಬೆನ್ನುತಟ್ಟುತ್ತಾರೆ.ಗೆಲುವಿನ ಅಲೆ ಅವರನ್ನು ರಾಜಕಾರಣದತ್ತ ಕೊಂಡೊಯ್ಯುತ್ತದೆಯೇ? `ಇಲ್ಲವೇ ಇಲ್ಲ' ಎನ್ನುವಷ್ಟು ಖಚಿತ ಅವರ ನುಡಿ. ಮುಂದಿನ ದಿನಗಳಲ್ಲೂ ರಾಜಕೀಯದತ್ತ ಮುಖ ಮಾಡುವ ಸೂಚನೆಗಳು ಇಲ್ಲ. ಚುನಾವಣಾ ಪ್ರಚಾರಕ್ಕೆ ಹೋದ ಮಾತ್ರಕ್ಕೆ ರಾಜಕೀಯಕ್ಕೆ ಬರಬೇಕು ಎಂದೇನೂ ಇಲ್ಲ. ರಾಜಕೀಯ ಬಯಸುವ ಸಿನಿಮಾ ಗೆಳೆಯರ ಬೆಂಬಲಕ್ಕೆ ನಿಂತಿದ್ದೆ ಎನ್ನುವ ಅವರ ಸದ್ಯದ ಮಂತ್ರ `ಸಿನಿಮಾ ಬರೀ ಸಿನಿಮಾ'.`ನಮ್ಮ ಪ್ರೀತಿಯ ರಾಮು'ವಿನಂಥ ವಿಭಿನ್ನ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ ದರ್ಶನ್. ಅಂಥ ಪಾತ್ರಗಳು ಅವಾಗಿಯೇ ಬರುವುದಿಲ್ಲ. ಹುಡುಕಿಕೊಂಡು ಹೋಗಬೇಕು ಎನ್ನುತ್ತ ಅವುಗಳನ್ನು ನಿಭಾಯಿಸಲು ತಾಳ್ಮೆಯೂ ಅಗತ್ಯ ಎಂಬುದನ್ನು ಒತ್ತಿ ಹೇಳುತ್ತಾರೆ. ರಾಜಕಾರಣದಂತೆಯೇ ಕಿರುತೆರೆಯನ್ನೂ ದರ್ಶನ್ ದೂರ ಇಟ್ಟಿದ್ದಾರೆ.

ರಿಯಾಲಿಟಿ ಶೋಗಳಲ್ಲಿ ಕನ್ನಡದ ತಾರೆಯರು ಮಿಂಚುತ್ತಿರುವ ಹೊತ್ತಲ್ಲಿ ಅವರದು ಭಿನ್ನ ಹಾದಿ. ನನಗೆ ಚೆನ್ನಾಗಿ ಮಾತನಾಡಲು ಬರಲ್ಲ. ಅಲ್ಲದೆ ಮಾಡಬೇಕಾದ ಸಿನಿಮಾಗಳ ಸಂಖ್ಯೆಯೇ ಹೆಚ್ಚಿರುವಾಗ ಕಿರುತೆರೆಗೆ ಸಮಯ ಮೀಸಲಿಡಲು ಆಗುತ್ತಿಲ್ಲ ಎನ್ನುತ್ತಾರವರು. `ಅಂಬರೀಷ' ಹಾಗೂ ತೂಗುದೀಪ ಪ್ರೊಡಕ್ಷನ್ಸ್ ಹೊರ ತರುತ್ತಿರುವ `ಒಂದೂರಲ್ಲಿ ಒಬ್ಬ ರಾಜ' ದರ್ಶನ್‌ರ ಮುಂದಿನ ಭಾರೀ ಕನಸುಗಳು.

-ಡಿ.ಕೆ. ರಮೇಶ್ .

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.