ಸೋಮವಾರ, ಮೇ 17, 2021
25 °C

ಆನ್‌ಲೈನ್‌ನಲ್ಲಿ ಮನೆಪಾಠದ ಜನಪ್ರಿಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಟರ್‌ನೆಟ್ ಬಳಕೆಯ ಜನಪ್ರಿಯತೆ ಮತ್ತು ಮನೆಯಲ್ಲಿ ಕುಳಿತುಕೊಂಡು ಯಾವುದೇ ಧಾವಂತ ಇಲ್ಲದೇ ಆರಾಮವಾಗಿ ಆನ್‌ಲೈನ್  ಮೂಲಕವೇ ಮನೆಪಾಠಗಳ (e-tutorial)  ಪ್ರಯೋಜನ ಪಡೆದುಕೊಳ್ಳುವುದು ದೇಶದ ಪ್ರಮುಖ ನಗರಗಳಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುತ್ತಿದೆ.2015ರಷ್ಟೊತ್ತಿಗೆ ಈ ಮನೆಪಾಠದ  ವಹಿವಾಟಿನ ಮೊತ್ತ ರೂ 3,500 ಕೋಟಿಗಳಿಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ.ಈ ಆನ್‌ಲೈನ್ ಮನೆಪಾಠದ ಮಾರುಕಟ್ಟೆಯು  ವಾರ್ಷಿಕ ಶೇ 40ರಷ್ಟು  ವೃದ್ಧಿ ಕಾಣುತ್ತಿದೆ. ಸದ್ಯಕ್ಕೆ ಇದರ ಮಾರುಕಟ್ಟೆ ಮೌಲ್ಯ ರೂ1,200 ಕೋಟಿಗಳಷ್ಟಿದೆ. ಆನ್‌ಲೈನ್ ಮನೆ ಪಾಠಕ್ಕೆ ವಿದ್ಯಾರ್ಥಿಗಳನ್ನು ನೋಂದಾಯಿಸಿಕೊಳ್ಳುವ ಶಾಲಾ - ಕಾಲೇಜ್‌ಗಳ ಸಂಖ್ಯೆಯು ಗಣನೀಯವಾಗಿ ಹೆಚ್ಚುತ್ತಿದೆ.ವಿದ್ಯಾರ್ಥಿಗಳಿಗೆ ಸರಿ ಹೊಂದುವ ಸಮಯಕ್ಕೆ, ಅವರಿಗೆ ಪ್ರಾಯೋಗಿಕ ಒಳನೋಟ ನೀಡುತ್ತ ವೈಯಕ್ತಿಕ ಗಮನ ನೀಡಲು ಈ `ಇ-ಮನೆಪಾಠ~ದಲ್ಲಿ ಸಾಧ್ಯವಾಗಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.ಇಂತಹ ಮನೆಪಾಠಕ್ಕೆ  ಹೆಚ್ಚಿನ ವೆಚ್ಚ ತಗುಲಲಾರದು.ಆದರೆ ಕಂಪ್ಯೂಟರ್, ಇಂಟರ್‌ನೆಟ್ ಸೇರಿದಂತೆ ಕೆಲ ಮೂಲ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗುತ್ತದೆ. ವಿದ್ಯಾರ್ಥಿ ಮತ್ತು ಕಲಿಕಾರ್ಥಿ ಮಧ್ಯೆ ನೇರ ಸಂವಾದಕ್ಕೆ ಇ-ಮೇಲ್, ವಿಡಿಯೊ ಸಂವಾದ ಮತ್ತಿತರ ಅನುಕೂಲತೆಗಳೂ ಇರಬೇಕಾಗುತ್ತದೆ.`ಇ-ಕಲಿಕೆ~ ಸೌಲಭ್ಯವನ್ನು ಹಲವಾರು ಅಂತರಜಾಲ ತಾಣಗಳು ಒದಗಿಸುತ್ತಿವೆ. ವಿದ್ಯಾರ್ಥಿಗಳು ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸಬಹುದು.ಬೆಂಗಳೂರು, ಚೆನ್ನೈ, ಮುಂಬೈ ಮತ್ತು  ದೆಹಲಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಪಾಲಕರು ಇಂತಹ ಸೌಲಭ್ಯ ಬಳಸಲು ಅಗತ್ಯ ಸಹಕಾರ ನೀಡಲು ಮುಂದೆ ಬಂದಿದ್ದಾರೆ.

 

ಕೆಲವರು ಸಾಂಪ್ರದಾಯಿಕ ಮನೆಪಾಠಕ್ಕೆ ಆದ್ಯತೆ ನೀಡಿದ್ದರೂ, ಆನ್‌ಲೈನ್ ಪಾಠವು ಕೂಡ ಕಲಿಕೆಗೆ ಉತ್ತಮ ಮಾಧ್ಯಮವಾಗಿದೆ ಎಂದು ಭಾವಿಸಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಯ ವಿಶಿಷ್ಟವಾದ ಕಲಿಕಾ ಅಗತ್ಯಗಳನ್ನು `ಇ-ಮನೆಪಾಠ~ ಪೂರೈಸಲಿದೆ.ಈ ಸೌಲಭ್ಯವು ಸದ್ಯಕ್ಕೆ  ಮಹಾನಗರಗಳಿಗೆ ಮಾತ್ರ ಸೀಮಿತಗೊಂಡಿದ್ದು, ಭವಿಷ್ಯದಲ್ಲಿ ಇನ್ನಷ್ಟು  ನಗರಗಳಿಗೆ ವಿಸ್ತರಣೆಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.       

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.