ಗುರುವಾರ , ಆಗಸ್ಟ್ 6, 2020
27 °C

ಆಫ್ಘಾನಿಸ್ತಾನ : ಸಂಸತ್ ಸದಸ್ಯ ಸೇರಿ 23 ಜನರ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಫ್ಘಾನಿಸ್ತಾನ : ಸಂಸತ್ ಸದಸ್ಯ ಸೇರಿ 23 ಜನರ ಸಾವು

ಕಾಬೂಲ್ (ಐಎಎನ್‌ಎಸ್): ಆಫ್ಘಾನಿಸ್ತಾನದ ಸಮನ್ಗಾನ್ ಪ್ರಾಂತ್ಯದ ಕಲ್ಯಾಣ ಮಂಟಪವೊಂದರಲ್ಲಿ ಶನಿವಾರ ಬೆಳಿಗ್ಗೆ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸಂಸತ್ ಸದಸ್ಯರೊಬ್ಬರು ಸೇರಿದಂತೆ ಕನಿಷ್ಠ 23 ಜನರು ಸತ್ತಿದ್ದು, 60 ಜನರಿಗೆ ಗಾಯಗಳಾಗಿವೆ.ಐಬಕ್ ನಗರದ ಕ್ವಾಸ್ರಿ-ಎ-ಅಲ್ಮಸಾಸ್ ಕಲ್ಯಾಣ ಮಂಟಪದಲ್ಲಿ ಈ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಸಂಸದ ಅಹಮದ್ ಖಾನ್ ಸಮನ್ಗಾನಿ ಸತ್ತಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಸಮನ್ಗಾನಿ ಅವರು ಪ್ರಮುಖ ಕಮಾಂಡರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಈ ಕಲ್ಯಾಣ ಮಂಟಪದಲ್ಲಿ ಸಮನ್ಗಾನಿ ಅವರ ಮಗಳ ಮದುವೆ ನಡೆಯುತ್ತಿತ್ತು. ಸ್ವಯಂ ಸಮನ್ಗಾನಿ ಅವರೇ ಅತಿಥಿಗಳನ್ನು ಸ್ವಾಗತಿಸುತ್ತಿದ್ದರು. ಆಗ ದುರ್ಘಟನೆ ನಡೆದಿದೆ.ಈ ಬಾಂಬ್ ದಾಳಿಯಲ್ಲಿ ಸಮನ್ಗಾನ್ ಪ್ರಾಂತ್ಯದ ಗುಪ್ತಚರ ವಿಭಾಗದ ಕೆಲವು ಮುಖ್ಯಸ್ಥರು ಮತ್ತು ಅಧಿಕಾರಿಗಳು ಸತ್ತಿದ್ದಾರೆ. ದಾಳಿಯ ಹೊಣೆಯ ಬಗ್ಗೆ ಇದುವರೆಗೆ ಯಾವ ಸಂಘಟನೆ ಯೂ ಹೇಳಿಕೆ ನೀಡಿಲ್ಲ. ಬಾಂಬ್ ದಾಳಿಯಿಂದ ಕಟ್ಟಡಕ್ಕೆ ಭಾರಿ ಹಾನಿಯಾಗಿದ್ದು, ಅಕ್ಕಪಕ್ಕದ ಕಟ್ಟಡಗಳ ಕಿಟಕಿಗಳ ಗಾಜುಗಳು ಪುಡಿಯಾಗಿವೆ.ಆಫ್ಘಾನಿಸ್ತಾನದಲ್ಲಿನ ನ್ಯಾಟೊ ಪಡೆಯನ್ನು ಗುರಿಯಾಗಿಟ್ಟುಕೊಂಡು ತಾಲಿಬಾನ್ ಉಗ್ರಗಾಮಿಗಳು ಕಳೆದ ಮೇ 3ರಿಂದ ಅನೇಕ ದಾಳಿಗಳನ್ನು ನಡೆಸಿದ್ದಾರೆ. ಈ ದಾಳಿಯೂ ತಾಲಿಬಾನ್ ಉಗ್ರಗಾಮಿಗಳಿಂದಲೇ ನಡೆದಿರಬಹುದು ಎನ್ನಲಾಗಿದೆ. ಸಂಸದರು, ಉನ್ನತ ಮಟ್ಟದ ಶಾಂತಿ ಮಂಡಲಿಯ ಸದಸ್ಯರು ಮತ್ತು ಸರ್ಕಾರ ಬೆಂಬಲಿಸುವ ಜನರ ಮೇಲೆ ದಾಳಿ ನಡೆಸಲಾಗುವುದು ಎಂದು ಉಗ್ರರು ಬೆದರಿಕೆ ಹಾಕಿದ್ದಾರೆ. ಬಾಂಬ್ ದಾಳಿಯನ್ನು ಆಫ್ಘನ್ ಅಧ್ಯಕ್ಷ ಹಮಿದ್ ಕರ್ಜೈ ಖಂಡಿಸಿದ್ದಾರೆ.

ಮಹಿಳಾ ಅಧಿಕಾರಿ ಬಲಿ

ಕಾಬೂಲ್ (ಐಎಎನ್‌ಎಸ್): ಕಾರಿಗೆ  ಅಳವಡಿಸಿದ್ದ ಬಾಂಬ್ ಸ್ಫೋಟಗೊಂಡಿದ್ದರಿಂದ ಆಫ್ಘಾನಿಸ್ತಾನದ ಮಹಿಳಾ ಅಧಿಕಾರಿ ಮತ್ತು ಅವರ ಪತಿ ಸತ್ತಿದ್ದು ಇತರ 11 ಮಂದಿಗೆ ಗಾಯಗಳಾಗಿವೆ.ಪೂರ್ವ ಪ್ರಾಂತ್ಯದ ಮಹಿಳಾ ವ್ಯವಹಾರಗಳ ಇಲಾಖೆಯ ಮುಖ್ಯಸ್ಥರಾಗಿದ್ದ ಅನೀಫಾ ಸಫಿ  ಮತ್ತು ಅವರ ಪತಿ ಬಾಂಬ್ ಸ್ಫೋಟಕ್ಕೆ ಬಲಿಯಾದವರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಅವೆರಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.