ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ದೋಣಿಯೊಂದು ಕಡಲಿನ ಅಬ್ಬರ ಮತ್ತು ಹೂಳು ತುಂಬಿದ ಅಳಿವೆ ಬಾಗಿಲಲ್ಲಿ ಒಳಬರುವುದಕ್ಕೆ ಸಾಧ್ಯವಾಗದೆ ಅಲೆಗಳ ಅಬ್ಬರಕ್ಕೆ ಸಿಲುಕಿ ಗುರುವಾರ ನಸುಕಿನಲ್ಲಿ ಮುಳುಗಿದ್ದು, ದೋಣಿಯಲ್ಲಿದ್ದ ಏಳು ಮಂದಿಯ ಪೈಕಿ ಆರು ಮಂದಿ ನಾಪತ್ತೆಯಾಗಿದ್ದಾರೆ. ಒಬ್ಬರು ಮಾತ್ರ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆರು ಗಂಟೆ ಕಾಲ ಮೀನಿನ ಡ್ರಂ ಹಿಡಿದು ನೀರಲ್ಲಿ ತೇಲುತ್ತಿದ್ದ ತಿರುವನಂತಪುರದ ವಿನ್ಸೆಂಟ್ (56) ಅವರನ್ನು ಎಸ್.ಎಂ.ಫಿಷರೀಸ್ ಮೀನುಗಾರಿಕಾ ದೋಣಿಯವರು ರಕ್ಷಿಸಿದರು. ಆದರೆ ಆರು ಮಂದಿಯ ಸುಳಿವು ಗುರುವಾರ ಸಂಜೆಯವರೆಗೂ ಪತ್ತೆಯಾಗಿರಲಿಲ್ಲ. ನಾಪತ್ತೆಯಾದವರನ್ನು ದೋಣಿಯ ಚಾಲಕ ಶ್ರೀಕಾಂತ್, ಇತರ ಮೀನುಗಾರರಾದ ವಿಶಾಖ, ರಮಣನ್, ನಾರಾಯಣ, ಶಿವಕುಮಾರ್, ರಹಿಮಾನ್ ಎಂದು ಗುರುತಿಸಲಾಗಿದೆ.

ಶ್ರೀಕಾಂತ್ ಅವರು ಹೊಸಪೇಟೆಯವರು. ವಿನ್ಸೆಂಟ್ ಹೊರತುಪಡಿಸಿ ಉಳಿದವರೆಲ್ಲ ಕರ್ನಾಟಕದವರು.
ಈಗಾಗಲೇ ಹೂಳಿನಿಂದಾಗಿ ಹಲವು ಮೀನುಗಾರರನ್ನು ಬಲಿ ತೆಗೆದುಕೊಂಡಿರುವ ಅಳಿವೆ ಬಾಗಿಲು ಮತ್ತೊಮ್ಮೆ ಅಪಾಯಕಾರಿಯಾಗಿ ಪರಿಣಮಿಸಿದೆ. ಎರಡು ದಿನ ಹಿಂದೆಯಷ್ಟೇ ಇದೇ ಸ್ಥಳದಲ್ಲಿ ದೊಡ್ಡ ಅಲೆಯೊಂದು ಪರ್ಸಿನ್ ದೋಣಿಯನ್ನು ತತ್ತರಗೊಳ್ಳುವಂತೆ ಮಾಡಿತ್ತು. ಘಟನೆಯಲ್ಲಿ ಐವರು ಗಾಯಗೊಂಡಿದ್ದರು.

ನಜೀರ್ ಅಹ್ಮದ್ ಎಂಬವರಿಗೆ ಸೇರಿದ `ಓಷನ್ ಫಿಷರೀಸ್-11~ ಹೆಸರಿನ ಈ ಯಾಂತ್ರೀಕೃತ ದೋಣಿ ಸೆ.7 ರಂದು ಹಳೆ ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಏಳು ದಿನ ಮೀನುಗಾರಿಕೆ ನಡೆಸಿದ್ದ ದೋಣಿಯಲ್ಲಿದ್ದವರು ಬುಧವಾರ ಮಧ್ಯಾಹ್ನವೇ ಅಳಿವೆ ಬಾಗಿಲಿನತ್ತ ಬಂದಿದ್ದರು. ಆದರೆ ಕಡಲಿನ ಅಬ್ಬರ, ಭಾರಿ ಅಲೆಗಳ ಹೊಡೆತದಿಂದಾಗಿ ಅವರಿಗೆ ಅಳಿವೆ ಬಾಗಿಲಿನ ಒಳಗೆ ಬರುವುದು ಸಾಧ್ಯವಾಗಲಿಲ್ಲ.

ಬಳಿಕ ದೋಣಿ ನವ ಮಂಗಳೂರು ಬಂದರಿನತ್ತ (ಎನ್ಎಂಪಿಟಿ) ಹೋಯಿತು. ದೋಣಿಗೆ ಒದಗಿದ ಪರಿಸ್ಥಿತಿಯನ್ನು ಚಾಲಕ ಎನ್ಎಂಪಿಟಿ ಸಿಬ್ಬಂದಿಗೆ ತಿಳಿಸಿದ್ದರು. ಆದರೆ ಸಿಐಎಸ್ಎಫ್ನವರು ಅವರನ್ನು ಒಳಗೆ ಪ್ರವೇಶಿಸಲು ಬಿಡಲಿಲ್ಲ. ಸಂಜೆಯವರೆಗೂ ಅಲ್ಲೇ ಇದ್ದ ದೋಣಿ ಬೇರೆ ದಾರಿ ಕಾಣದೆ ತಣ್ಣೀರುಬಾವಿಯ ಖಾಸಗಿ ಷಿಪ್ಯಾರ್ಡ್ ಬಳಿ ಸಹ ಸಹಾಯಕ್ಕಾಗಿ ಕೋರಿತ್ತು.

ಅವರು ಸಹ ಈ ಕೋರಿಕೆಯನ್ನು ತಿರಸ್ಕರಿಸಿದ್ದರು. ಕೊನೆಗೆ ಕಡಲಿನ ಅಬ್ಬರ ಕಡಿಮೆಯಾಗುವುದಕ್ಕಾಗಿ ಕಾಯುವ ಸಲುವಾಗಿ 12 ನಾಟಿಕಲ್ ಮೈಲು ದೂರದಲ್ಲಿ ಲಂಗರು ಹಾಕಿದ್ದರು.ಆದರೆ ಮಧ್ಯರಾತ್ರಿ 1.45ರ ಸುಮಾರಿಗೆ ಅಲೆಗಳ ಹೊಡೆತಕ್ಕೆ ಸಿಕ್ಕಿದ ದೋಣಿ ದೊಡ್ಡ ಶಬ್ದದೊಂದಿಗೆ ಇಬ್ಭಾಗವಾಯಿತು. ಒಳ ಬರುತ್ತಿದ್ದ ನೀರನ್ನು ತಡೆಗಟ್ಟಲು ನಡೆಸಿದ ಪ್ರಯತ್ನ ವಿಫಲವಾದ ಬಳಿಕ ಮೀನುಗಾರರು ಬೆಳಿಗ್ಗೆ 4.45ರ ಹೊತ್ತಿಗೆ ದಿಕ್ಕಾಪಾಲಾದರು.
ಕಾರ್ಗತ್ತಲು, ಮೇಲಾಗಿ ನೀರಿನ ಸೆಳೆತದಿಂದ ಎಲ್ಲರೂ ನೀರಲ್ಲಿ ಕೊಚ್ಚಿಕೊಂಡು ಹೋದರು. ಈ ಪೈಕಿ ವಿನ್ಸೆಂಟ್ ಮೀನಿನ ಡ್ರಂ ಹಿಡಿದುಕೊಂಡು ನೀರಲ್ಲಿ ತೇಲುವಂತೆ ನೋಡಿಕೊಂಡರು. ವಿಷಯ ತಿಳಿದ ತಕ್ಷಣ ಕಡಲಿನ ಅಬ್ಬರ, ಬಿರುಸಿನ ಮಳೆಯ ನಡುವೆಯೂ ಹಲವು ಮೀನುಗಾರಿಕಾ ದೋಣಿಗಳು ರಕ್ಷಣಾ ಕಾರ್ಯಾಚರಣೆಗೆ ಇಳಿದವು.

ಬೆಳಿಗ್ಗೆ 10.45ರ ಸುಮಾರಿಗೆ ಎಸ್.ಎಂ.ಫಿಷರೀಸ್ ಮೀನುಗಾರಿಕಾ ದೋಣಿಯ ಚಾಲಕ ಕಾಳಿದಾಸ ಎಂಬವರು ನೀರಲ್ಲಿ ತೇಲುತ್ತಿದ್ದ ವಿನ್ಸೆಂಟ್ ಅವರನ್ನು ಗಮನಿಸಿದರು. ತಕ್ಷಣ ಬಳಿಗೆ ತೆರಳಿ ರಕ್ಷಿಸಲಾಯಿತು.ಸಂಜೆ 3 ಗಂಟೆಯವರೆಗೂ ಹಲವು ದೋಣಿಗಳು ಉಳಿದವರಿಗಾಗಿ ಹುಡುಕಾಟ ನಡೆಸಿದವು.

ಆದರೆ ಕಡಲಿನ ಅಬ್ಬರ, ಭಾರಿ ಮಳೆಯ ಕಾರಣ ರಕ್ಷಣಾ ಕಾರ್ಯಾಚರಣೆಗೆ ತೆರಳಿದ ದೋಣಿಗಳೇ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದ್ದುದರಿಂದ ಅವುಗಳು ದಡಕ್ಕೆ ಮರಳಿದವು. ಸಂಜೆ 6ರ ಸುಮಾರಿಗೆ ದೋಣಿಯ ಮಾಲೀಕ ನಜೀರ್ ಅವರ ಸಹೋದರ ಹುಸೇನ್ ಅವರು ಪಣಂಬೂರು ಠಾಣೆಗೆ ದೂರು ನೀಡಿದರು.

ಎನ್ಎಂಪಿಟಿ, ಕರಾವಳಿ ರಕ್ಷಣಾ ಪಡೆ ವರ್ತನೆಗೆ ಆಕ್ಷೇಪ: ಎನ್ಎಂಪಿಟಿ ಅವರು ದಯೆ ತೋರಿಸದೆ ಇದ್ದುದು ಮತ್ತು ಕರಾವಳಿ ರಕ್ಷಣಾ ಪಡೆಯವರು ಸಕಾಲಕ್ಕೆ ಸಹಾಯಕ್ಕೆ ಧಾವಿಸದೆ ಇದ್ದುದೇ ಈ ದುರಂತಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಎನ್ಎಂಪಿಟಿಯಿಂದ ಮತ್ತು ಸಿಐಎಸ್ಎಫ್ನಿಂದ ತಮ್ಮ ಬೇಡಿಕೆ ತಿರಸ್ಕಾರಗೊಂಡ ಬಳಿಕ ಕರಾವಳಿ ರಕ್ಷಣಾ ಪಡೆಯವರಿಗೆ ದೋಣಿಯ ಚಾಲಕ ಶ್ರೀಕಾಂತ್ ಫೋನ್ ಮಾಡಿ ವಿಷಯ ತಿಳಿಸಿದ್ದರು. ಆದರೆ ಅವರೂ ಸ್ಪಂದಿಸಲೇ ಇಲ್ಲ, ಒಂದು ವೇಳೆ ಸ್ಪಂದಿಸುತ್ತಿದ್ದರೆ ಈ ಅನಾಹುತ ಸಂಭವಿಸುತ್ತಲೇ ಇರಲಿಲ್ಲ ಎಂದು ತಿಳಿಸಲಾಗಿದೆ.

ನಾಪತ್ತೆಯಾದವರು ಬದುಕಿ ಉಳಿದಿರುವ ಸಾಧ್ಯತೆ ಕಡಿಮೆ ಇದೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಹಳೆ ಬಂದರು ಪ್ರದೇಶದಲ್ಲಿ ಶೋಕದ ವಾತಾವರಣ ಮೂಡಿತ್ತು. ಪವಾಡ ನಡೆದು ಎಲ್ಲರೂ ಬದುಕಿ ಬರಲಿ ಎಂಬ ಹಾರೈಕೆ ವ್ಯಾಪಕವಾಗಿತ್ತು.

ಸ್ಥಳೀಯ ಮೀನುಗಾರರಾದ ಉಮೇಶ್ ಕರ್ಕೇರ, ಮೋಹನ್ ಬೆಂಗ್ರೆ, ಇಬ್ರಾಹಿಂ, ಡಿಸಿಪಿ ಮುತ್ತುರಾಯ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ. ಕಾವೇರಿಯಪ್ಪ, ತಹಸೀಲ್ದಾರ್ ರವಿಚಂದ್ರ ನಾಯಕ್, ಮೀನುಗಾರಿಕಾ ಉಪನಿರ್ದೇಶಕ ಸುರೇಶ್ಕುಮಾರ್, ಕಮಾಂಡೆಂಟ್ ರಾಜೇಂದ್ರ ಸಿಂಗ್ ಸಫಲ್, ಸರ್ಕಲ್ ಇನ್ಸ್ಪೆಕ್ಟರ್ ವೆಲೆಂಟಿನ್ ಡಿಸೋಜಾ ಅವರು ಕೋಸ್ಟ್ಗಾರ್ಡ್ ಕಚೇರಿಯಲ್ಲಿ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿ ಕ್ರಮ ಹಾಗೂ ಸಮನ್ವಯ ಸಾಧಿಸುವ ಕುರಿತು ಸಭೆ ನಡೆಸಿದರು. ಆದರೆ ಭಾರಿ ಮಳೆ, ಕಡಲಿನ ಅಬ್ಬರದಿಂದಾಗಿ ಕಾರ್ಯಾಚರಣೆಗೆ ಹಿನ್ನಡೆ ಉಂಟಾಯಿತು.

`ಇಂತಹ ನಿರ್ದಯಿಗಳೂ ಇದ್ದಾರೆಯೇ...?~

ಎಂ.ಜಿ.ಬಾಲಕೃಷ್ಣ
ಮಂಗಳೂರು: `ನನಗೆ ಕನ್ನಡ ಬರುತ್ತಿರಲಿಲ್ಲ. ಆದರೆ ದೋಣಿಯ ಚಾಲಕ ಶ್ರೀಕಾಂತ ಮತ್ತು ಇತರರು ಕನ್ನಡದಲ್ಲಿ ಅವರೊಂದಿಗೆ ಮಾತನಾಡುತ್ತಿದ್ದರು. ನಾವು ಭಯೋತ್ಪಾದಕರಲ್ಲ, ಮೀನುಗಾರರು, ಇಲ್ಲೇ ಕರಾವಳಿಯವರು ಎಂದೆಲ್ಲ ಹೇಳುತ್ತಿದ್ದರು. ಆದರೆ ಎನ್ಎಂಪಿಟಿಯವರು, ಸಿಐಎಸ್ಎಫ್ನವರು ನಮ್ಮ ಮಾತು ಕೇಳಲೇ ಇಲ್ಲ.

ಇಂತಹ ನಿರ್ದಯಿಗಳು ಸಹ ಲೋಕದಲ್ಲಿ ಇದ್ದಾರೆಯೇ ಎಂದು ನಾನು ಮನಸ್ಸಲ್ಲೇ ಅಂದುಕೊಂಡೆ. ಕಡಲು ಅಬ್ಬರಿಸುತ್ತಿದೆ, ಏನೋ ಅನಾಹುತ ನಮಗಾಗಿ ಕಾದಿದೆ ಎಂದು ನಾನು ಭಾವಿಸಿದ್ದೆ. ಛೆ, ಸಾಯಲು ನಾನು ಭಯಪಡುವವನಲ್ಲ, ಆದರೆ ನನ್ನ ಜತೆಗೆ ಇದ್ದ ಆರು ಮಂದಿ ಸಹ ಕಾಣುತ್ತಿಲ್ಲ ಎಂದಾಗ ನನಗೆ ಈ ವ್ಯವಸ್ಥೆಯ ಮೇಲೆಯೇ ಸಿಕ್ಕಾಪಟ್ಟೆ ಸಿಟ್ಟು ಬರುತ್ತದೆ....~

ಸುಮಾರು ಆರು ಗಂಟೆ ಕಾಲ ಮೀನಿನ ಡ್ರಂ ಹಿಡಿದುಕೊಂಡೇ ಮಂಗಳೂರು ಕಡಲಲ್ಲಿ ತೀರದಲ್ಲಿ ತೇಲುತ್ತ ಜೀವ ಉಳಿಸಿಕೊಂಡ ತಿರುವನಂತಪುರದ ವಿನ್ಸೆಂಟ್ ವೆನ್ಲಾಕ್ ಆಸ್ಪತ್ರೆಯ ಹಾಸಿಗೆಯಿಂದ `ಪ್ರಜಾವಾಣಿ~ಗೆ ತಿಳಿಸಿದ ಅನುಭವ ಇದು.

`ಎನ್ಎಂಪಿಟಿಯವರು ಹೇಗೆ ವರ್ತಿಸಿದರೋ, ಶಿಪ್ಯಾರ್ಡ್ನವರೂ ಅದೇ ರೀತಿ ವರ್ತಿಸಿದರು. ನಮ್ಮನ್ನು ಯಾರೂ ಒಳಗೆ ಸೇರಿಸಿಕೊಳ್ಳುತ್ತಿಲ್ಲ ಎಂದು ಖಚಿತವಾದಾಗ ನಮಗೆ ಬೇರೆ ದಾರಿಯೇ ಇರಲಿಲ್ಲ. ಸ್ವಲ್ಪ ಸಮುದ್ರದ ಮಧ್ಯ ತೆರಳಿ ಲಂಗರು ಹಾಕಿ ಕಡಲಿನ ಅಬ್ಬರ ಕಡಿಮೆಯಾಗುವವರೆಗೆ ಕಾಯುವ ವಿಚಾರ ಮಾಡಿದೆವು.

ಅಬ್ಬರ ಕಡಿಮೆಯಾಗದೇ ಅಳಿವೆ ಬಾಗಿಲಿನಲ್ಲಿ ಒಳಗೆ ಬರುವುದು ಸಾಧ್ಯವಿಲ್ಲ ಎಂಬುದು ನಮಗೆ ಗೊತ್ತಿತ್ತು. ಸಾಹಸ ಮಾಡಿ ಬಂದರೂ ಅಪಾಯ ಎದುರಾಗುತ್ತಿತ್ತು. ಏಕೆಂದರೆ ಅಲ್ಲಿ ಹೂಳು ತುಂಬಿಕೊಂಡಿದೆ, ಮರಳಿನ ದಿಬ್ಬ ದೋಣಿಗೆ ತಾಗುತ್ತದೆ. ಸಮುದ್ರದಲ್ಲಿ ಲಂಗರು ಹಾಕಿದ ಬಳಿಕ ಇಬ್ಬರು ಕ್ಯಾಬಿನ್ ಒಳಗೆ ಹೋಗಿ ಮಲಗಿಕೊಂಡರು. ಎಂಜಿನ್ ರನ್ನಿಂಗ್ನಲ್ಲೇ ಇತ್ತು~

`ಮಧ್ಯರಾತ್ರಿ 1.45ರ ಹೊತ್ತಿಗೆ ದೊಡ್ಡ ಶಬ್ದ ಕೇಳಿಸಿತು. ಎರಡೇ ನಿಮಿಷದಲ್ಲಿ ನೀರು ಒಳಗೆ ಬರಲು ಆರಂಭವಾಯಿತು. ಕ್ಯಾಬಿನ್ ಒಳಗೆ ಇದ್ದವರೂ ಹೊರಗೆ ಓಡಿ ಬಂದರು. ನಾವೆಲ್ಲ ಸೇರಿ ನೀರು ಹೊರ ಹಾಕುವ ಪ್ರಯತ್ನ ಮಾಡಿದೆವು. ಸುಮಾರು ಎರಡು ಗಂಟೆ ಹೀಗೆ ಮಾಡುತ್ತಲೇ ಇದ್ದೆವು.

ಅಷ್ಟೊತ್ತಿಗೆ ಚಾಲಕ ಶ್ರೀಕಾಂತ್ ನಾವು ಅಪಾಯದಲ್ಲಿ ಇರುವುದನ್ನು ಕೋಸ್ಟ್ಗಾರ್ಡ್ನವರಿಗೆ ತಿಳಿಸುತ್ತಲೇ ಇದ್ದ. ಅವನಿಗೆ ಗೊತ್ತಿದ್ದ ಇತರ ಅಧಿಕಾರಿಗಳನ್ನು, ಮೀನುಗಾರ ಮುಖಂಡರನ್ನೆಲ್ಲ ಸಂಪರ್ಕಿಸಿ ಅಪಾಯದಲ್ಲಿ ಸಿಲುಕಿದ್ದನ್ನು ಹೇಳುತ್ತಿದ್ದ. ಆದರೆ ಕೋಸ್ಟ್ಗಾರ್ಡ್ನವರು ನಮ್ಮ ಕೋರಿಕೆಗೆ ಸ್ಪಂದಿಸುತ್ತಿಲ್ಲ ಎಂದು ಹೇಳುತ್ತಿದ್ದ~

`ಬೆಳಿಗ್ಗೆ 4.30ರ ಹೊತ್ತಿಗೆ ಎಂಜಿನ್ ಸ್ಥಗಿತಗೊಂಡಿತು. ಆಗಲೇ ದೋಣಿ ಒಡೆದು ಹೋಗಿತ್ತು. ನಾವೆಲ್ಲ ಇನ್ನು ಬದುಕಿ ಉಳಿಯುವುದು ಸಾಧ್ಯವೇ ಇಲ್ಲ ಎಂದು ಭಾವಿಸಿದೆವು. ನನ್ನ ಹೆಗಲ ಪಟ್ಟಿಯನ್ನು ಯಾರೋ ಹಿಡಿದ ಅನುಭವ ಆಯಿತು. ಆದರೆ ಮತ್ತೆ ಕೆಲವೇ ಕ್ಷಣದಲ್ಲಿ ನಾವೆಲ್ಲ ದಿಕ್ಕಾಪಾಲಾಗಿದ್ದೆವು.

ಮೀನಿನ ಡ್ರಂ ಒಂದನ್ನು ನಾನು ಆಸರೆಯಾಗಿ ಹಿಡಿದುಕೊಂಡೆ. ಉಳಿದವರು ಎಲ್ಲಿಗೆ ಹೋದರೋ ಗೊತ್ತಾಗಲಿಲ್ಲ. ಬಂದದ್ದು ಬರಲಿ ಎಂದು ಧೈರ್ಯವಾಗಿ ನಾನು ತೇಲುತ್ತಲೇ ಇದ್ದೆ. ಕೊನೆಗೂ ನನ್ನ ಜೀವ ಉಳಿಯಿತು. ಉಳಿದವರು ಈಗ ಎಲ್ಲಿದ್ದಾರೋ, ಅವರಿಗಾಗಿ ನನ್ನ ಹೃದಯ ಮರುಗುತ್ತಿದೆ.~

`ನಾನು ಕಡಲಿಗೆ ಹೆದರುವವನೇ ಅಲ್ಲ. ಆದರೆ ಇಂತಹ ಭಯಾನಕ ಅನುಭವ ನನಗಾಗಿರುವುದು ಇದೇ ಮೊದಲು. ಕೋವಳಂ, ಕೊಚ್ಚಿ ಸಹಿತ ಕೇರಳದ ಹಲವು ಕಡೆ ಹಲವು ದೋಣಿಗಳಲ್ಲಿ ನಾನು ಕೆಲಸ ಮಾಡಿದವ.
ನನ್ನ ಬಾಲ್ಯದ ದಿನದಿಂದಲೂ ಮೀನುಗಾರಿಕೆಯೇ ನನ್ನ ಕಸುಬು. ಹೀಗಾಗಿ ನಾನು ಕಡಲಿಗೆ ಇಳಿದು 40 ವರ್ಷ ಹೆಚ್ಚಾಗಿದೆ. ಆದರೆ ಇಂತಹ ಭಯ ನನ್ನನ್ನು ಎಂದೂ ಕಾಡಿಲ್ಲ.

ಭಯಕ್ಕಿಂತಲೂ ನನ್ನ ಮನಸ್ಸಿಗೆ ಆಘಾತವಾಗಿರುವುದು ಅಧಿಕಾರಿಗಳ ಮನೋಭಾವದಿಂದ. ಜೀವನ್ಮರಣ ನಡುವೆ ಹೋರಾಡುತ್ತಿದ್ದ ನಮ್ಮನ್ನು ಇವರು ಭಯೋತ್ಪಾದಕರಿಗಿಂತಲೂ ಕಡೆಯಾಗಿ ನೋಡಿದರಲ್ಲ, ಈ ಆಘಾತ ನನ್ನ ಮನಸ್ಸಿನಿಂದ ಮಾಸುವುದು ಸಾಧ್ಯವೇ ಇಲ್ಲ~.

`ನನಗೆ ಇಬ್ಬರು ಪುತ್ರಿಯರು, ಒಬ್ಬ ಪುತ್ರ. ಪುತ್ರಿಯರಿಗೆ ಮದುವೆಯಾಗಿದೆ. ಪುತ್ರ ಲಂಡನ್ನಲ್ಲಿ ಕೆಲಸಕ್ಕಿದ್ದಾನೆ. ಹೆಂಡತಿ ಮನೆಯಲ್ಲಿದ್ದಾಳೆ. ಅವರಿಗೆಲ್ಲ ವಿಷಯ ತಿಳಿದಿದೆ. ಅವರು ನನಗೆ ಧೈರ್ಯ ಹೇಳಿದ್ದಾರೆ. ಆದರೆ ನನ್ನೊಂದಿಗೆ ಇದ್ದ ಮಂದಿಯಲ್ಲಿ ಕೆಲವರಿಗೆ ಮದುವೆಯಾಗಿದೆ, ಮಕ್ಕಳಿದ್ದಾರೆ, ಅವರ ಕುಟುಂಬದ ಗತಿ ನೆನೆಸಿಕೊಂಡಾಗ ಕಣ್ಣೀರು ಬರುತ್ತದೆ....~

ವಿನ್ಸೆಂಟ್ ಶುದ್ಧ ಮಲಯಾಳದಲ್ಲಿ ಮಾತನಾಡುತ್ತಿದ್ದರು. ನಡು ನಡುವೆ ಇಂಗ್ಲಿಷ್ನಲ್ಲೂ ಮಾತನಾಡುತ್ತಿದ್ದರು. ಆದರೆ ಅವರು ಕಡಲಿನಲ್ಲಿ ಆಗಿರುವ ದುರಂತಕ್ಕಿಂತಲೂ, ದಡದಲ್ಲಿದ್ದ ಅಧಿಕಾರಿಗಳ ವರ್ತನೆಯಿಂದ ದೊಡ್ಡ ಪ್ರಮಾಣದಲ್ಲಿ ಘಾಸಿಗೊಂಡಿದ್ದು ಸ್ಪಷ್ಟವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.