ಶುಕ್ರವಾರ, ಮೇ 7, 2021
19 °C

ಆರೋಗ್ಯದ ಸಿರಿಗೆ `ಸಿರಿಧಾನ್ಯ ಉಂಡೆ'

ಪ್ರಜಾವಾಣಿ ವಾರ್ತೆ/ಗಣೇಶ ಅಮೀನಗಡ Updated:

ಅಕ್ಷರ ಗಾತ್ರ : | |

ಮೈಸೂರು: ಬೆಳಿಗ್ಗೆ ಹೊತ್ತು ಶಾಲೆಗೆ ಹೊರಟ ಮಕ್ಕಳಿಗೆ ಪುಟ್ಟ ವಿರಾಮದಲ್ಲಿ ಸಣ್ಣ ಡಬ್ಬಿಯೊಳಗೆ ನಿತ್ಯ ಏನು ತಿಂಡಿ ಕಟ್ಟಬಹುದು ಎನ್ನುವುದು ಅಮ್ಮಂದಿರ ಅನುದಿನದ ಚಿಂತೆ. ಹಾಗೆಯೇ, ಸಂಜೆ ಹೊತ್ತು ಮಕ್ಕಳು ಇಲ್ಲವೆ ದೊಡ್ಡವರು ಕುರುಕಲು ತಿಂಡಿ ಇಲ್ಲವೆ ಚಾಟ್ಸ್‌ಗೆ ಮೊರೆ ಹೋಗುವವರೇ ಹೆಚ್ಚು. ನಾಲಿಗೆ ರುಚಿ ಹೆಚ್ಚಿಸುವ ಅಂಥ ತಿಂಡಿಗಳು ಪೌಷ್ಟಿಕವೂ ಅಲ್ಲ, ದುಡ್ಡೂ ದುಬಾರಿ. ಹೀಗಾಗಿ, ಮನೆಯಲ್ಲಿಯೇ ದಿಢೀರ್ ಮಾಡುವ, ಪೌಷ್ಟಿಕವಾದ, ದುಬಾರಿಯಲ್ಲದ ತಿಂಡಿಗಳನ್ನು ಮಾಡಲು ಸಾಧ್ಯವೇ? ಸಾಧ್ಯವಿದೆ ಎಂದು ತೋರಿಸಿಕೊಡುತ್ತಿದ್ದಾರೆ ಇಲ್ಲಿಯ ಕುವೆಂಪುನಗರದ ಬಸ್ ಡಿಪೊ ಬಳಿಯ `ಎನ್' ಬ್ಲಾಕಿನ 105ರ ಮನೆಯಲ್ಲಿಯ ಸುಮಾ.ಅವರು ನವಧಾನ್ಯ ಅಥವಾ ಸಿರಿಧಾನ್ಯಗಳ ಉಂಡೆಗಳನ್ನು ಸಿದ್ಧಗೊಳಿಸುತ್ತಾರೆ. ನವಣೆ ಉಂಡೆ, ಜೋಳದ ಅರಳಿನ ಉಂಡೆ, ತುಪ್ಪದ ಉಂಡೆಗಳನ್ನು ತಯಾರಿಸುತ್ತಾರೆ. ಕಳೆದ ಎರಡು ವರ್ಷಗಳಿಂದ ಅವರು ಸಿರಿಧಾನ್ಯಗಳ ಉಂಡೆಗಳನ್ನು ಸಿದ್ಧಗೊಳಿಸಿ ಸಾವಯವ ಮಳಿಗೆಗಳಿಗೆ ಮಾರಲು ಕೊಡುತ್ತಿದ್ದಾರೆ. ಜತೆಗೆ, ಬೆಂಗಳೂರು, ಹೈದರಾಬಾದ್‌ನಲ್ಲಿ ನಡೆದ ಸಾವಯವ ಮೇಳಗಳಲ್ಲಿ ಪಾಲ್ಗೊಂಡು ಸಿರಿಧಾನ್ಯಗಳ ಉಂಡೆಗಳನ್ನು ಪರಿಚಯಿಸಿದ್ದಾರೆ. ನವಣೆಯನ್ನು ಪುಡಿಯಾಗಿ ಮಾಡಿಕೊಂಡು ಅದಕ್ಕೆ ಕಡ್ಲೆಬೀಜದ ಪುಡಿ, ಕೊಬ್ಬರಿ, ಏಲಕ್ಕಿ ಪುಡಿಯನ್ನು ಬೆಲ್ಲದ ಪಾಕದ ಜತೆಗೆ ಬೆರೆಸಿ ಉಂಡೆಗಳನ್ನು ಕಟ್ಟುತ್ತಾರೆ. ಹೀಗೆ ಸಿರಿಧಾನ್ಯಗಳ ಉಂಡೆ ಮಾಡುವವರಲ್ಲಿ ಮೈಸೂರಲ್ಲಿ ಸದ್ಯಕ್ಕೆ ಸುಮಾ ಅವರೊಬ್ಬರೇ.

ಉಂಡೆಗಳ ಜತೆಗೆ ನವಣೆ ರೊಟ್ಟಿ, ನವಣೆ ಚಕ್ಕುಲಿ, ಜೋಳದ ಅರಳಿನ ಚಿಕ್ಕಿ, ಸಿರಿಧಾನ್ಯದ ಮಾಲ್ಟ್, ಹಾಲಾಬಾಯಿ ಅಥವಾ ಹಾಲುಂಡಿಗೆ ಎಂಬ ಸಿಹಿತಿಂಡಿ ಕೂಡಾ ಅವರು ತಯಾರಿಸುತ್ತಾರೆ. ಅಲ್ಲದೇ, ನವಣೆಯ ದೋಸೆ, ಇಡ್ಲಿ ಕೂಡಾ ಮಾಡಬಲ್ಲರು. `ಅರಕದ ಮೊಸರನ್ನ, ಸಿಹಿ ಹಾಗೂ ಖಾರದ ಪೊಂಗಲ್, ಬಿಸಿ ಬೇಳೆಬಾತ್, ಚಿತ್ರಾನ್ನ ಮಾಡುವೆ. ನಮ್ಮ ತಾಯಿ ನಾಗರತ್ನಾ ಅವರಿಗೆ ಮಧುಮೇಹ ಇರುವುದರಿಂದ ಸೋದರ ದಿನೇಶ್ ಸಲಹೆ ಮೇರೆಗೆ ಸಿರಿಧಾನ್ಯಗಳ ಅಡುಗೆಯನ್ನೇ ಮಾಡುತ್ತೇವೆ. ಸಿರಿಧಾನ್ಯಗಳ ಉಂಡೆಗಳನ್ನೇ ಅವರು ನಿತ್ಯ ಸೇವಿಸುತ್ತಾರೆ. ಹೀಗಾಗಿ, ಮಧುಮೇಹಿಗಳಿಗೆ, ರಕ್ತದೊತ್ತಡ ಇರುವವರ ಆರೋಗ್ಯದ ಸಿರಿಗೆ ಸಿರಿಧಾನ್ಯ ಉಂಡೆಗಳು ನೆರವಾಗುತ್ತವೆ' ಎನ್ನುತ್ತಾರೆ ಸುಮಾ.`ಸೋದರ ದಿನೇಶ್ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಕದಿರೆಯಲ್ಲಿ `ಅರ್ಥ್-360 ಕೋ ವೆಂಚರ್' ಎಂಬ ಸಂಘಟನೆ ಮೂಲಕ ಸಿರಿಧಾನ್ಯಗಳ ಸಂಗಾತಿಯಾಗಿದ್ದಾನೆ. ಸಿರಿಧಾನ್ಯಗಳ ಬೀಜಗಳನ್ನು ಸಂಗ್ರಹಿಸುವುದು, ಅವುಗಳನ್ನು ರೈತರಿಗೆ ಕೊಟ್ಟು ಬೆಳೆಸುವುದು, ಬೆಳೆದ ಬೆಳೆಯನ್ನು ಕೊಂಡು ಮಾರುವುದು ಅವನ ಕಾಯಕ. ಸಿರಿಧಾನ್ಯಗಳನ್ನು ನಮಗೆ ಅವನೇ ಕಳಿಸುತ್ತಾನೆ. ಆರೋಗ್ಯಕರ, ಬೇಗ ಜೀರ್ಣವಾಗದ, ರುಚಿಯಾದ ಉಂಡೆಗಳನ್ನು ವಿದೇಶಿಗರೂ ಮೆಚ್ಚಿದ್ದಾರೆ. ನಿರಂತರ ಬಳಸುವುದರಿಂದ ಹೆಚ್ಚಿದ್ದವರ ತೂಕ ಕೂಡಾ ಕಡಿಮೆಯಾಗುತ್ತದೆ' ಎಂದು ಅವರು ವಿವರಿಸುತ್ತಾರೆ.`ಹೊರಗಡೆ ತಿನ್ನುವ ತಿಂಡಿಗಳಲ್ಲಿ ಸಿಹಿ ಹಾಗೂ ಕಾರ್ಬೊರೆಟ್ ಹೆಚ್ಚಿರುತ್ತವೆ. ದೇಹಕ್ಕೆ ಬೇಕಾಗುವ ಪೌಷ್ಟಿಕತೆ ಬೇಕರಿ ತಿಂಡಿಗಳಲ್ಲಿ ಸಿಗುವುದಿಲ್ಲ. ಬಾಯಿ ರುಚಿಗೆ ಮಾತ್ರ ಅವು. ಆದರೆ, ದೇಹಕ್ಕೆ ಅಗತ್ಯವಾದುದನ್ನು ನೀಡುವುದಿಲ್ಲ. ಮುಖ್ಯವಾಗಿ ನವಣೆಯಿಂದ ಅನ್ನ ಮಾಡಿ ಎಂದರೆ ಮುಂದೆ ಬರುವವರು ಅಪರೂಪ. ಆದರೆ, ಉಂಡೆಗಳ ಮೂಲಕ ಮಕ್ಕಳನ್ನು ಸೆಳೆಯಬಹುದು. ದೊಡ್ಡವರಿಗೂ ಇಷ್ಟವಾಗುತ್ತವೆ. ಕಡಿಮೆ ಖರ್ಚಲ್ಲಿ ಹೆಚ್ಚು ಲಾಭ ತರುವ ಉಂಡೆಗಳಿವು' ಎಂದು ಹೆಮ್ಮೆಯಿಂದ ಸುಮಾ ಹೇಳುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.