ಭಾನುವಾರ, ಏಪ್ರಿಲ್ 18, 2021
29 °C

ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿ ಕಳಪೆ- ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುನಿರಾಬಾದ್: ಹುಲಿಗಿಯ ಹೊರವಲಯದಲ್ಲಿ 97ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡದ ಕಾಮಗಾರಿ ಕೆಲಸ ಕಳಪೆ ಮಟ್ಟದ್ದಾಗಿದ್ದು ಅದನ್ನು ತಕ್ಷಣ ನಿಲ್ಲಿಸಬೇಕು ಮತ್ತು ಗುತ್ತಿಗೆದಾರನಿಗೆ ನೀಡಿದ ಟೆಂಡರ್‌ಅನ್ನು ರದ್ದುಪಡಿಸಿ ಪುನಹ ಟೆಂಡರ್ ಕರೆಯಬೇಕು ಎಂದು ಜನಶಕ್ತಿ ಹೋರಾಟ ಸಮಿತಿಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.ಭಾನುವಾರ ಕಾಮಗಾರಿ ಸ್ಥಳಕ್ಕೆ ತೆರಳಿದ ಜನಶಕ್ತಿ ಹೋರಾಟ ಸಮಿತಿಯ ಪಂಪಾಪತಿ ರಾಟಿ, ಜಂಬಣ್ಣ ವಟವಟಿ ಮತ್ತು ಸಾರ್ವಜನಿಕರು ಸರಿಯಾದ ಗುಣಮಟ್ಟದ ಕೆಲಸ ಮಾಡದ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಪ್ರದೇಶ ಅರ್ಧಭಾಗ ನೀರು ಬಸಿದು ಜೌಗು ಪ್ರದೇಶವಾಗಿದ್ದು ಇನ್ನರ್ಧ ಭಾಗ ಬಂಡೆಗಲ್ಲನ್ನು ಹೊಂದಿದೆ.ಸರಿಯಾದ ಬುನಾದಿ(ಗ್ರೌಟಿಂಗ್) ಹಾಕದೇ ನೆಲಮಟ್ಟದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ ಅಲ್ಲದೇ ಒಳಭಾಗದಲ್ಲಿ ನಾಲ್ಕು ಇಂಚು ಕಾಂಕ್ರೀಟ್ ಹಾಕಲಾಗಿದೆ ಎಂದು ಸುಳ್ಳು ಹೇಳಿದ ಗುತ್ತಿಗೆದಾರನಿಗೆ ಕೇವಲ ಮಣ್ಣಿನ ಮೇಲೆ ಸಿಮೆಂಟ್ ಮತ್ತು ಜಲ್ಲಿ ಕಲ್ಲು ಹಾಕಲಾದ ಭಾಗವನ್ನು ಪದಾಧಿಕಾರಿಗಳು ಕೈಯಿಂದ ಕಿತ್ತಿ ತೋರಿಸಿದರು.ಸಮರ್ಪಕವಾಗಿ ಬುನಾದಿ ಹಾಕದೇ ನೆಲಮಟ್ಟದಲ್ಲಿ ಕಟ್ಟಡ ನಿರ್ಮಿಸುತ್ತಿದ್ದು ಇಟ್ಟಂಗಿ ಗೋಡೆಯ ಪಕ್ಕ ಮಳೆ ನೀರು ನಿಂತು ಗೋಡೆ ನೆನೆದು ಕುಸಿದು ಬೀಳುವ ಸಂಭವವಿದೆ. ಇದರಿಂದ ಆಸ್ಪತ್ರೆಯಲ್ಲಿನ ರೋಗಿಗಳು ಮತ್ತು ವೈದ್ಯರು ಹಾಗೂ ಸಿಬ್ಬಂದಿಯ ಪ್ರಾಣಕ್ಕೆ ಸಂಚಕಾರ ತರಲಿದೆ ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಮುಂಚೆ ಸುಮಾರು ಇಪ್ಪತ್ತು ದಿನಗಳ ಹಿಂದೆ ಎಕ್ಸಿಕ್ಯೂಟಿವ್ ಎಂಜಿನಿಯರ್ ವೀರಣ್ಣ ಮತ್ತು ಮುಖ್ಯ ಎಂಜಿನಿಯರ್ ಗಣೇಶ್ ಅವರಿಗೆ (ಎಸ್ಟಿಮೇಟ್ ಕಾಪಿ) ವರ್ಕ್ ಆರ್ಡರ್‌ನಲ್ಲಿ ಇರುವ ಪ್ರಕಾರ ಸಮರ್ಪಕ ಕಾಮಗಾರಿ ಮಾಡಿಸುವಂತೆ ಮನವಿಮಾಡಲಾಗಿತ್ತು ಅದರಂತೆ ಕೆಲಸವನ್ನೂ ನಿಲ್ಲಿಸಲಾಗಿತ್ತು.ಆದರೆ ಇಂದು ಮತ್ತೆ ಕೆಲಸವನ್ನು ಪ್ರಾರಂಭಿಸಿದ್ದು ಕಳಪೆ ಕಾಮಗಾರಿಯನ್ನು ಮುಂದುವರಿಸಲಾಗುತ್ತಿತ್ತು. ಸ್ಥಳಕ್ಕೆ ಬರಲು ಸೈಟ್‌ಎಂಜಿನಿಯರ್ ನಿರಾಕರಿಸಿದ್ದು ಮತ್ತು ಗುತ್ತಿಗೆದಾರನ ತಮ್ಮನೆಂದು ಹೇಳಿಕೊಂಡ ವ್ಯಕ್ತಿ `ಎಂಜಿನಿಯರ್ ಆದೇಶ~ ದಂತೆ ತಾವು ಕೆಲಸ ಮಾಡುತ್ತಿರುವುದಾಗಿ ಹೇಳಿದ್ದು ಪದಾಧಿಕಾರಿಗಳನ್ನು ಕೆರಳಿಸಿತು.ಹದಿನೈದು ವರ್ಷಗಳ ಸತತ ಹೋರಾಟದ ಫಲವಾಗಿ ನಮ್ಮ ಗ್ರಾಮಕ್ಕೆ ಆಸ್ಪತ್ರೆ ದಕ್ಕಿದೆ. ಕಳಪೆ ಕಾಮಗಾರಿ ಮಾಡಿ ಅಮಾಯಕರ ಜೀವ ಬಲಿತೆಗೆದುಕೊಳ್ಳಬೇಡಿ. ಹುಲಿಗೆಮ್ಮದೇವಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬರುತ್ತಿದ್ದು ಕ್ಷೇತ್ರಕ್ಕೆ ಕೆಟ್ಟ ಹೆಸರು ತರಬೇಡಿ ಎಂದು ಪದಾಧಿಕಾರಿಗಳು ಅವಲತ್ತುಕೊಂಡರು.ಗುಣಮಟ್ಟದ ಕೆಲಸ ಮಾಡಬೇಕು, ಕಾಮಗಾರಿಯ ಬಗ್ಗೆ ಅಂದಾಜುವೆಚ್ಚ ಮತ್ತು ಅವಧಿ, ಗುತ್ತಿಗೆದಾರನ ಹೆಸರು ಮುಂತಾದ ವಿವರಗಳನ್ನು ಒಳಗೊಂಡ ಸಾರ್ವಜನಿಕ ಮಾಹಿತಿ ಫಲಕ ಹಾಕಬೇಕು ಎಂದೂ ಪಂಪಾಪತಿ ಆಗ್ರಹಿಸಿದ್ದಾರೆ.ಪದಾಧಿಕಾರಿಗಳಾದ ಸೋಮನಾಥ ಕಲಾಲ್, ಮಂಜುನಾಥ ಮೇಟಿ, ಅಶೋಕ ಕಲಾಲ್, ವೆಂಕಟೇಶ ವಾಸೆ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಮಣ್ಣ ನಾಯಕ್, ಹುಲುಗಪ್ಪ ಬಾಳೆಕಾಯಿ ಇತರರು ಉಪಸ್ಥಿತರಿದ್ದರು.        

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.