ಗುರುವಾರ , ಜನವರಿ 23, 2020
26 °C
ನಿರ್ಮಿತಿ ಕೇಂದ್ರದ ಅಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

ಆರೋಪಗಳ ಜಾಡು ಹಿಡಿದು ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಸರ್ಕಾರದ ನೋಡಲ್ ಸಂಸ್ಥೆಯಾದ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಕೆ.ಜಿ.ಮೂಡಲಗಿರಿಯಪ್ಪ ಅವರ ಮನೆಗಳ ಮೇಲೆ ಶುಕ್ರವಾರ ಮುಂಜಾನೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.ಲೋಕಾಯುಕ್ತ ಎಸ್‌ಪಿ ಶ್ರೀಧರ್ ನೇತೃತ್ವದಲ್ಲಿ ಏಕಕಾಲದಲ್ಲಿ ಹಿರಿಯೂರಿನ ತೋಟ ಹಾಗೂ ಪಟ್ಟಣದಲ್ಲಿನ ಮನೆ ಹಾಗೂ ಚಿತ್ರದುರ್ಗದ ಐಯುಡಿಪಿ ಬಡಾವಣೆ ಮತ್ತು ಮೆದೇಹಳ್ಳಿ ರಸ್ತೆಯಲ್ಲಿರುವ ನಿರ್ಮಿತಿ ಕೇಂದ್ರದ ಆಡಳಿತ ಕಚೇರಿಯ ಮೇಲೆ ದಾಳಿ ನಡೆಸಲಾಗಿದೆ.ಸರ್ಕಾರದ ನೋಡಲ್ ಸಂಸ್ಥೆಯಾದ ನಿರ್ಮಿತಿ ಕೇಂದ್ರಕ್ಕೆ ಬಹುತೇಕ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಲಾಗಿತ್ತು. ಈ ಕಾಮಗಾರಿಗಳಲ್ಲಿ ಬಹುತೇಕವು ಕಳಪೆಯಾಗಿವೆ ಎಂದು ಜಿಲ್ಲಾ ಪಂಚಾಯ್ತಿಗಳಲ್ಲಿ, ತಾಲೂಕು ಪಂಚಾಯ್ತಿಗಳ ಸಾಮಾನ್ಯ ಸಭೆ,

ಕೆಡಿಪಿ ಸಭೆಗಳಲ್ಲಿ ಗಂಭೀರ ಚರ್ಚೆ ಆಗುತ್ತಿತ್ತು. ಪ್ರತಿ ಬಾರಿಯೂ ನಿರ್ಮಿತಿ ಕೇಂದ್ರದ ಕಳಪೆ ಕಾಮಗಾರಿಗಳ ಕುರಿತು ಚರ್ಚೆಯಾಗದೇ ಸಭೆ ಪೂರ್ಣಗೊಳ್ಳುತ್ತಿರಲಿಲ್ಲ. ಹಾಗೆಯೇ ಜನಪ್ರತಿನಿಧಿಗಳೂ ಕೂಡ  ನಿರ್ಮಿತಿ ಕೇಂದ್ರಕ್ಕೆ ನಿರ್ವಹಿಸಿರುವ ಎಲ್ಲ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಬೇಕು. ಮುಂದಿನ ದಿನಗಳಲ್ಲಿ ಯಾವುದೇ ಕಾರಣಕ್ಕೂ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿ ನೀಡಬಾರದು ಎಂದು ಜನಪ್ರತಿನಿಧಿಗಳು ಜಿಲ್ಲಾಡಳಿತದ ಮೇಲೆ ಒತ್ತಡ ಹೇರುತ್ತಿದ್ದರು.ಒಂದು ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಆಂಜನೇಯ ಅವರು ‘ಕುಡಿಯುವ ನೀರಿನ ಟ್ಯಾಂಕ್‌ ನಿರ್ಮಾಣದಲ್ಲಿ ಕಳಪೆ ಕಾಮಗಾರಿಯಾಗಿರುವ ಕುರಿತು ಎಚ್ಚರಿಕೆ ನೀಡಿದ್ದರು. ಮುಂದಿನ ದಿನಗಳಲ್ಲಿ ಕಾಮಗಾರಿ ಕಳಪೆಯಾದರೆ, ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ನೋಟಿಸ್, ದಂಡದಂತಹ ಎಚ್ಚರಿಕೆಗಳ ನಡುವೆಯೇ ಪುನಃ ಪುನಃ ಜಿಲ್ಲಾ ಪಂಚಾಯ್ತಿ ಸಭೆಗಳಲ್ಲಿ ನಿರ್ಮಿತಿ ಕೇಂದ್ರದ ಕಳಪೆ ಕಾಮಗಾರಿಗಳ ಕುರಿತು ಚರ್ಚೆ ಮುಂದುವರಿದಿತ್ತು.ಜನಪ್ರತಿನಿಧಿಗಳ ಒತ್ತಾಯ ಒಳಗೊಂಡಂತೆ ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಮೇಲಿದ್ದ ಕೆಲವು ಆರೋಪಗಳ ಮೇಲೆ ಕಾಯುಕ್ತರು ಅಧಿಕಾರಿಯ ಚಲನ ವಲನದ ಮೇಲೆ ನಿಗಾ ವಹಿಸಿದ್ದರು.ಸೇರ್ಪಡೆ: ೨೦೦೦ನೇ ಸಾಲಿನಲ್ಲಿ ಹಿರಿಯೂರು ತಾಲ್ಲೂಕಿನ ಮೇಟಿಕುರ್ಕೆಯಲ್ಲಿ ನಿರ್ಮಿತಿ ಕೇಂದ್ರದ ಸೈಟ್ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ ಕೆಲವು ದಿನಗಳಲ್ಲೇ ನಿರ್ಮಿತಿ ಕೇಂದ್ರದ ಆಡಳಿತವನ್ನು ವಹಿಸಿಕೊಂಡರು. ಇದಾದ ಐದಾರು ವರ್ಷಗಳ ಸೇವೆಯಲ್ಲೇ ಚಿತ್ರದುರ್ಗ ನಿರ್ಮಿತಿ ಕೇಂದ್ರದ ಜಿಲ್ಲಾ ಯೋಜನಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.

ಪ್ರತಿಕ್ರಿಯಿಸಿ (+)