ಮಂಗಳವಾರ, ಮೇ 24, 2022
30 °C

ಆರ್ಥಿಕ ಬಿಕ್ಕಟ್ಟು ನಿರ್ವಹಣೆ: ಕೇಂದ್ರೀಯ ಬ್ಯಾಂಕ್ ಹೊಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನ್ಯೂಯಾರ್ಕ್ (ಪಿಟಿಐ): ಜಾಗತಿಕ ಆರ್ಥಿಕ ಚೇತರಿಕೆಯ ಆರಂಭಿಕ ಹಂತದಲ್ಲಿ ಮತ್ತೆ ಹಿಂಜರಿಕೆಯತ್ತ ಸಾಗುವ ಸಾಧ್ಯತೆಗಳು ಕಂಡು ಬರುತ್ತಿದ್ದು, ಕೇಂದ್ರೀಯ ಬ್ಯಾಂಕ್‌ಗಳು ಈ ಆರ್ಥಿಕ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬೇಕಾಗಿದೆ ಎಂದು ಭಾರತೀಯ  ರಿಸರ್ವ್ ಬ್ಯಾಂಕ್ ಗವರ್ನರ್ ಡಿ. ಸುಬ್ಬರಾವ್ ಅಭಿಪ್ರಾಯಪಟ್ಟಿದ್ದಾರೆ.ಹಣಕಾಸು ಉತ್ತೇಜನಾ ಕ್ರಮಗಳ ಮೂಲಕ ಆರ್ಥಿಕ ಹಿಂಜರಿಕೆ ಹಿಮ್ಮೆಟ್ಟಿಸುವ ಹೊಣೆಗಾರಿಕೆಯು ಕೇಂದ್ರೀಯ ಬ್ಯಾಂಕ್‌ಗಳ ಮೇಲೆಯೇ ಹೆಚ್ಚಾಗಿ ಇದೆ ಎಂದು ಹೇಳಿದ್ದಾರೆ. ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಸ್ಟರ್ನ್ ಸ್ಕೂಲ್ ಆಫ್ ಬಿಸಿನೆಸ್‌ನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.ಆರ್ಥಿಕ ಹಿಂಜರಿಕೆಗೆ ಗುರಿಯಾಗಿದ್ದ ಅರ್ಥವ್ಯವಸ್ಥೆಯು ಚೇತರಿಕೆಯ ಹಾದಿಯಲ್ಲಿ ಸಾಗಿರುವ ಹಂತದಲ್ಲಿ ಮತ್ತೆ  ಹಿಂಜರಿಕೆಗೆ ಮರಳುವ ಸಾಧ್ಯತೆಗಳಿಗೆ `ಡಬಲ್ ಡಿಪ್~ ಎನ್ನುತ್ತಾರೆ.ಅಮೆರಿಕದ ಆರ್ಥಿಕತೆಯು ಇಂತಹ ಬಿಕ್ಕಟ್ಟಿಗೆ ಮರಳಲಿದೆ ಎಂದು  ಕಳೆದ ಕೆಲ ತಿಂಗಳಿನಿಂದ ಆತಂಕ ಕಂಡು ಬರುತ್ತಿದೆ. ಅಲ್ಪಾವಧಿಯ ಹಣಕಾಸು ಉತ್ತೇಜನಾ ಕ್ರಮಗಳು ಮತ್ತು ದೀರ್ಘಾವಧಿಯ ವರಮಾನ ವೃದ್ಧಿಗೆ ಸಂಬಂಧಿಸಿದ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಸಿರಿವಂತ ದೇಶಗಳು ಬಿಕ್ಕಟ್ಟು ಎದುರಿಸುತ್ತಿವೆ.ಹೀಗಾಗಿ ಕೇಂದ್ರೀಯ ಬ್ಯಾಂಕ್‌ಗಳು ಕೂಡ ಈ ಪರಿಸ್ಥಿತಿ ಎದುರಿಸುವ ಬಗ್ಗೆ ಗೊಂದಲದಲ್ಲಿ ಮುಳುಗಿವೆ. ಹಣಕಾಸು ಕ್ರಮಗಳು ಅರ್ಥ ವ್ಯವಸ್ಥೆ ಮೇಲೆ ಹೆಚ್ಚುವರಿ ಹೊರೆ ಹೇರಿದರೆ, ಇನ್ನೂ ಕೆಲ ಪ್ರಕರಣಗಳಲ್ಲಿ ಹಿಂಜರಿಕೆ ವಿರುದ್ಧ ಅದೊಂದೇ ಏಕೈಕ ಪರಿಹಾರವಾಗಿದೆ ಎಂದೂ ಸುಬ್ಬರಾವ್ ವಿಶ್ಲೇಷಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.