ಭಾನುವಾರ, ಜೂನ್ 20, 2021
28 °C

ಆರ್‌ಟಿಐ ಕಾರ್ಯಕರ್ತ ಅಬ್ರಹಾಂ ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಆರ್‌ಟಿಐ ಕಾರ್ಯಕರ್ತ ಅಬ್ರಹಾಂ ಟಿ. ಜೋಸೆಫ್‌ ಅವರು ಹಾಸನ ಲೋಕಸಭಾ ಕ್ಷೇತ್ರದಿಂದ ಬುಧವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಮಧ್ಯಾಹ್ನ 2.30ರ ಸುಮಾರಿಗೆ ಚುನಾವಣಾ­ಧಿಕಾರಿ ವಿ. ಅನ್ಬುಕುಮಾರ್‌ ಅವರಿಗೆ ನಾಮಪತ್ರ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ‘ಅಶೋಕ್ ಖೇಣಿ ಅವರು ಹಾಸನ ಹಾಗೂ ಬೀದರ್‌ ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ಕೆಲ ತಿಂಗಳ ಹಿಂದೆ ಹೇಳಿಕೆ ನೀಡಿದ್ದರು. ಅವರನ್ನು ಎದುರಿಸಬೇಕೆಂಬ ಉದ್ದೇಶ­ದಿಂದ ನಾನು ಕಣಕ್ಕೆ ಇಳಿದಿದ್ದೇನೆ’ ಎಂದರು.‘ಖೇಣಿ ದೇಶದ ಪ್ರಜೆಯೇ ಅಲ್ಲ ಎಂದು ನಾನು ಹಿಂದಿನಿಂದ ವಾದಿಸುತ್ತಾ ಬಂದಿದ್ದೇನೆ. ಹಣದ ಬಲದಿಂದ ವಿಧಾನಸಭಾ ಚುನಾವಣೆಯಲ್ಲಿ ಅವರು ನಾಮಪತ್ರ ಅಂಗೀಕಾರವಾಗುವಂತೆ ಮಾಡಿದ್ದರು. ಅವರಿಗೆ ನಿಜವಾದ ಸಾಮರ್ಥ್ಯವಿದ್ದರೆ ಇಲ್ಲಿಂದ ನಾಮಪತ್ರ ಅಂಗೀಕಾರವಾಗುವಂತೆ ಮಾಡಲಿ. ಅವರು ಹಾಸನದಿಂದ ನಾಮಪತ್ರ ಸಲ್ಲಿಸಿದರೆ ನಾನು ಅವರ ಪೌರತ್ವದ ಬಗ್ಗೆ ಪ್ರಶ್ನೆ ಮಾಡುತ್ತೇನೆ. ಖೇಣಿ ಅಮೆರಿಕದ ಪೌರತ್ವ ಸ್ವೀಕರಿಸಿರುವ ಬಗ್ಗೆ ಹೇಳಿಕೆ ನೀಡಲು ಹಿಂಜರಿಯುತ್ತಿದ್ದಾರೆ’ ಎಂದು ದೂರಿದರು.ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಅವರ ವಿರುದ್ಧ ಅಭ್ಯರ್ಥಿಯನ್ನು ಹಾಕಬಾರದು ಎಂಬ ಜಾಫರ್‌ ಷರೀಫ್‌ ಹೇಳಿಕೆಯನ್ನು ನಾನೂ ಬೆಂಬಲಿಸುತ್ತೇನೆ. ಆಂಧ್ರದ ಜನರು ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್‌ ವಿರುದ್ಧ ಅಭ್ಯರ್ಥಿ ಹಾಕಿರಲಿಲ್ಲ. ‘ಗೌಡ’ ಎಂಬ ಒಂದು ಸಮುದಾಯ ಇದೆ ಎಂಬುದನ್ನು ದೇಶಕ್ಕೆ ತಿಳಿಸಿದ ವ್ಯಕ್ತಿ ದೇವೇಗೌಡ ಅವರು.ಖೇಣಿ ಇಲ್ಲಿಗೆ ಬರುತ್ತಾರೆ ಎಂಬ ಒಂದೇ ಕಾರಣಕ್ಕೆ ನಾನು ನಾಮಪತ್ರ ಸಲ್ಲಿಸಿದ್ದೇನೆ. ಮುಂದಿನ ವಾರ ಬೀದರ್‌ ಕ್ಷೇತ್ರದಲ್ಲೂ ನಾಮಪತ್ರ ಸಲ್ಲಿಸುತ್ತೇನೆ’ ಎಂದು ಅಬ್ರಹಾಂ ತಿಳಿಸಿದರು. ಮತ್ತೊಂದೆಡೆ ಡಾ.ಭಾನುಪ್ರಕಾಶ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.