ಭಾನುವಾರ, ಮೇ 22, 2022
22 °C

ಆರ್‌ಬಿಐ:ಬಡ್ಡಿ ದರ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರ್‌ಬಿಐ:ಬಡ್ಡಿ ದರ ಹೆಚ್ಚಳ

ಮುಂಬೈ (ಪಿಟಿಐ): ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಅಲ್ಪಾವಧಿ ಬಡ್ಡಿ ದರಗಳಾದ ರೆಪೊ ಮತ್ತು ರಿವರ್ಸ್ ರೆಪೊ ದರಗಳನ್ನು ಶೇ 0.25ರಷ್ಟು ಹೆಚ್ಚಿಸಿದೆ.   ಕಳೆದ ಡಿಸೆಂಬರ್ 2010ರಿಂದ ಒಟ್ಟಾರೆ ಹಣದುಬ್ಬರ ದರ ಶೇ 9ರ ಮೇಲಿದ್ದು, ಹಣದುಬ್ಬರ ನಿಯಂತ್ರಿಸಲು ಬಡ್ಡಿ ದರ ಏರಿಕೆ ಅನಿವಾರ್ಯ ಎಂದು `ಆರ್‌ಬಿಐ~ ಹೇಳಿದೆ.   ಬಡ್ಡಿ ದರ ಪರಿಷ್ಕರಣೆಯ ಜತೆಗೆ, ಪ್ರಸಕ್ತ ಹಣಕಾಸು ವರ್ಷದ ಅಂತ್ಯಕ್ಕೆ ದೇಶದ ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 7.6 ಮತ್ತು ಹಣದುಬ್ಬರ ದರ ಶೇ 7ಕ್ಕೆ ಇಳಿಕೆ ಕಾಣಲಿದೆ ಎಂದೂ `ಆರ್‌ಬಿಐ~ ಹೇಳಿದೆ. ಜಾಗತಿಕ ಆರ್ಥಿಕ ಅಸ್ಥಿರತೆ, ಯೂರೋಪ್ ಸಾಲದ ಬಿಕ್ಕಟ್ಟು ಸೇರಿದಂತೆ ಹಲವು ಪ್ರತಿಕೂಲ ಸಂಗತಿಗಳು ದೇಶೀಯ ವೃದ್ಧಿ ದರದ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಮೊದಲು ಅಂದಾಜಿಸಲಾಗಿದ್ದ ಶೇ 8ರಷ್ಟು `ಜಿಡಿಪಿ~ ಗುರಿ ತಲುಪಲು ಸಾಧ್ಯವಿಲ್ಲ  ಎಂದು ತನ್ನ ತ್ರೈಮಾಸಿಕ ಹಣಕಾಸು ಪರಾಮರ್ಶೆಯಲ್ಲಿ ಅಭಿಪ್ರಾಯಪಟ್ಟಿದೆ.

 

`ಕೈಗಾರಿಕೆ ಪ್ರಗತಿ  ಗಣನೀಯವಾಗಿ ಕುಸಿದಿರುವುದು ಒಟ್ಟಾರೆ ಆರ್ಥಿಕ ವೃದ್ಧಿಯ ಮೇಲೆ ತೀವ್ರ ಪರಿಣಾಮ ಬೀರಿದೆ. ಡಿಸೆಂಬರ್ ನಂತರ ಆಹಾರ ಪಧಾರ್ಥಗಳ ಬೆಲೆಯಲ್ಲಿ ಅಲ್ಪ ಇಳಿಕೆ ಕಾಣಬಹುದು ಹಾಗೂ ಹಣದುಬ್ಬರ ಹಿತಕರ ಮಟ್ಟಕ್ಕೆ ಮರಳಬಹುದು ಎಂದು ಹೇಳಿದೆ.  ಕಳೆದ ಮಾರ್ಚ್ 2010ರಿಂದ ಇಲ್ಲಿಯವರೆಗೆ `ಆರ್‌ಬಿಐ~ 13 ಬಾರಿ ರೆಪೊ ದರಗಳನ್ನು ಹೆಚ್ಚಿಸಿದೆ.ಸಾಲ ಮತ್ತಷ್ಟು ತುಟ್ಟಿ

ಮುಂಬೈ (ಪಿಟಿಐ):
ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸತತ 13ನೇ ಬಾರಿ ಅಲ್ಪಾವಧಿ ಬಡ್ಡಿ ದರಗಳನ್ನು ಶೇ 0.25ರಷ್ಟು ಹೆಚ್ಚಿಸಿದೆ. ಇದರಿಂದ ರೆಪೊ ಮತ್ತು ರಿವರ್ಸ್ ರೆಪೊ ದರಗಳು ಶೇ 8.5 ಮತ್ತು ಶೇ 7.5ರಷ್ಟಾಗಿದೆ.ಕಳೆದ ಮಾರ್ಚ್ 2010ರಿಂದ ಇಲ್ಲಿಯವರೆಗೆ ಸಾಲದ ಮೇಲಿನ ಮೂಲ ದರ ಶೇ 3.75ರಷ್ಟು ಹೆಚ್ಚಾಗಿದೆ. ಬಡ್ಡಿ ದರ ಪರಿಷ್ಕೃರಣೆಯಿಂದ ಗೃಹ, ವಾಹನ, ಕಾರ್ಪೊರೇಟ್ ಮತ್ತು ವೈಯಕ್ತಿಕ ಸಾಲಗಳು ಇನ್ನಷ್ಟು ತುಟ್ಟಿಯಾಗಲಿದ್ದು, ಸಾಲದ ಮರು ಪಾವತಿ ಕಂತುಗಳು ಕೂಡ ಹೆಚ್ಚಲಿವೆ.ಬಡ್ಡಿ ದರ ನಿಯಂತ್ರಣ ಮುಕ್ತ: ಬಡ್ಡಿ ದರ ಪರಿಷ್ಕರಣೆಯ ಜತೆಗೆ `ಆರ್‌ಬಿಐ~ ತಕ್ಷಣದಿಂದಲೇ ಜಾರಿಗೆ ಬರುವಂತೆ ಉಳಿತಾಯ ಖಾತೆ ಬಡ್ಡಿ ದರವನ್ನೂ ನಿಯಂತ್ರಣ ಮುಕ್ತಗೊಳಿಸಿದೆ. ಇದರಿಂದ ಗ್ರಾಹಕರಿಗೆ ತಮ್ಮ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿ ದರ ಲಭಿಸಲಿದೆ. ಕನಿಷ್ಠ 1 ಲಕ್ಷ ಮೊತ್ತದ ವರೆಗಿನ ಠೇವಣಿಗಳ ಮೇಲೆ ಒಂದೇ ಮಾದರಿ ಬಡ್ಡಿ ದರ ಹಾಗೂ 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಠೇವಣಿಗಳ ಮೇಲೆ ಬ್ಯಾಂಕುಗಳು ಸ್ಪರ್ಧಾತ್ಮಕ ದರದಲ್ಲಿ `ಬಡ್ಡಿ ದರ ನಿಗದಿಪಡಿಸಬಹುದು ಎಂದು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.