ಬುಧವಾರ, ಮೇ 12, 2021
18 °C

ಆಲಮೇಲ: ಕೆರೆ ತುಂಬ ನೀರಿದೆ, ನಿರ್ವಹಣೆ ಅಷ್ಟಕಷ್ಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮೇಲ: ಎಲ್ಲಡೆ ನೀರಿನ ಹಾಹಾಕಾರ ಉಂಟಾಗಿದ್ದರೆ ಆಲಮೇಲದಲ್ಲಿ ನೀರಿಗೆ ಬರವಿಲ್ಲ! ಆದರೂ ನಿರ್ವಹಣೆಯ ಕೊರತೆಯಿಂದ ಇಲ್ಲಿಯ ವಾರ್ಡ್ ನಂ.6ರ ನಾಗರಿಕರ ದಾಹ ತಣಿಯುತ್ತಿಲ್ಲ.`ನಮ್ಮ ವಾರ್ಡ್‌ಗೆ ನಳದ ನೀರು ಬರುತ್ತಿಲ್ಲ. ಇಡೀ ಗ್ರಾಮದಲ್ಲಿ ನೀರಿನ ಕೊರತೆ ಇಲ್ಲದಿದ್ದರೂ ನಮಗೆ ಸಮರ್ಪಕವಾಗಿ ನೀರು ಪೂರೈಸಲು ಪಂಚಾಯಿತಿಯವರು, ಚುನಾಯಿತ ಪ್ರತಿನಿಧಿಗಳು ಯತ್ನಿಸುತ್ತಿಲ್ಲ~ ಎಂದು ಈ ಬಡಾವಣೆಯ ಮಾನಂದಾ ಗೊಬ್ಬೂರು, ಜಗದೇವಿ ಸೊನ್ನದ, ಅಂಬವ್ವ ಮತ್ತಿತರರು ದೂರಿದರು.ಆಲಮೇಲದಲ್ಲಿ 11 ವಾರ್ಡ್‌ಗಳಿವೆ. ಬಸವ ನಗರ, ಶಾಂತಿ ನಗರ, ಗಣೇಶ ನಗರ, ವಿನಾಯಕ ನಗರ, ಯುಕೆಪಿಯ ಎರಡು ವಸಾಹತು ಸೇರಿದಂತೆ ಆಲಮೇಲದ ಜನಸಂಖ್ಯೆ 24,400.ಈ ಊರು ಭೀಮಾ ನದಿಯ ತಟದಲ್ಲಿದೆ. ಅಂತರ್ಜಲ ಹೆಚ್ಚಾದ ಪರಿಣಾಮ ಬಾವಿ, ಕೊಳವೆ ಬಾವಿಗಳಿಂದ ನೀರು ಎಲ್ಲರಿಗೂ ಸಿಗುತ್ತಿದೆ. ಇಲ್ಲಿ 74 ಕೊಳವೆ ಬಾವಿಗಳಿವೆ. ಹಳೆಯ ಕಾಲದ ವಿಶಾಲವಾದ ಬಾವಿಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ತೆರೆದ ಬಾವಿಗಳಿವೆ. ಅಲ್ಲದೇ ಕೆಲವು ಮನೆಗಳಲ್ಲಿ ಪೂರ್ವಿಕರು ನಿರ್ಮಿಸಿದ ಬಾವಿಗಳಿವೆ. ಈ ಎಲ್ಲದರಲ್ಲೂ ನೀರು ಇರುವುದರಿಂದ ಅಷ್ಟೊಂದು ಸಮಸ್ಯೆ ಇಲ್ಲ.ಗ್ರಾಮ ಪಂಚಾಯಿತಿಯವರು ಗುಂದಗಿ ರಸ್ತೆಯಲ್ಲಿ ಹಳ್ಳದ ಪಕ್ಕದಲ್ಲಿ  ಕೊಳವೆ ಬಾವಿ ಕೊರೆಸಿದ್ದು, ಅಲ್ಲಿಂದ ಪೈಪ್‌ಲೈನ್ ಮೂಲಕ ನೀರನ್ನು ಪಟ್ಟಣದಲ್ಲಿ ನಿರ್ಮಿಸಿರುವ ಎರಡು ಬ್ರಹತ್ ಗಾತ್ರದ ನೀರು ಸಂಗ್ರಹಗಾರದಲ್ಲಿ (3.50 ಲಕ್ಷ ಲೀಟರ್ ಹಾಗೂ 2.50 ಲಕ್ಷ ಲೀಟರ್) ಒಟ್ಟು 6 ಲಕ್ಷ ಲೀಟರ್ ನೀರನ್ನು ಸಂಗ್ರಹಿಸಲಾಗುತ್ತಿದೆ.

ಅಲ್ಲದೆ `ಬಾರಾ ಗಿರಕಿ~ ಬಾವಿಯಿಂದಲೂ ಬಳಕೆಗಾಗಿ ನೀರನ್ನು ಪೂರೈಸಲಾಗುತ್ತಿದೆ.`ವಾರ್ಡ್ ನಂ.6ರಲ್ಲಿ ನೀರಿನ ಸಮಸ್ಯೆಯನ್ನು ವಾರದಲ್ಲಿ ಪರಿಹರಿಸಲಾಗುವುದು~ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಲ್. ಬಜಂತ್ರಿ  ಹೇಳುತ್ತಾರೆ.`ಪಟ್ಟಣದಲ್ಲಿ ನೀರಿನ ಮೂಲಕ್ಕೆ ಕೊರತೆ ಇಲ್ಲ. ಆದರೆ, ಅದನ್ನು ಹೇಗೆ ಬಳಸಬೇಕು ಮತ್ತು ಯಾವ ಬಡಾವಣೆಗೆ ಎಷ್ಟು ನೀರು ಕೊಡಬೇಕು ಎಂಬ ಬಗ್ಗೆ ನಿಖರತೆ ಇಲ್ಲ. ಕೊಳವೆ ಬಾವಿಯಿಂದ ಸಂಗ್ರಹಾರಕ್ಕೆ ಪೂರ್ಣ ಪ್ರಮಾಣದಲ್ಲಿ ನೀರು ಬರುತ್ತಿಲ್ಲ. ಹೆಚ್ಚುವರಿ ಸಾಮರ್ಥ್ಯದ ಮೋಟಾರ್‌ಗಳನ್ನು  ಅಳವಡಿಸಿ ನೀರು ಸಂಗ್ರಹಿಸಿದರೆ ಪಟ್ಟಣದ ಯಾವ ಪ್ರದೇಶಕ್ಕೂ ನೀರಿನ ಕೊರತೆಯಾಗದು~ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಯೂಬ್ ದೇವರಮನಿ.`ನಮ್ಮಲ್ಲಿ ಉತ್ತಮ ನೀರಿದೆ. ಎಲ್ಲಿಯೂ ನೀರಿನ ಸಮಸ್ಯೆ ಇಲ್ಲ ಎಂದು ಗ್ರಾಮ ಪಂಚಾಯಿತಿಯವರು ಹೇಳುತ್ತಿದ್ದರೂ, ಕೆಲವು ಪ್ರದೇಶಗಳಿಗೆ ನೀರು ಸರಿಯಾಗಿ ತಲುಪುತ್ತಿಲ್ಲ~ ಎಂಬುದು ಕೆಲವರ ದೂರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.