ಸೋಮವಾರ, ಮೇ 25, 2020
27 °C

ಆಳುವ ಪಕ್ಷದತ್ತ ಸಹಜ ಒಲವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ವ್ಯಕ್ತವಾದ ಜನಾದೇಶ ಆಡಳಿತಾರೂಢ ಪಕ್ಷಕ್ಕೆ ಹಿನ್ನಡೆಯಲ್ಲವಾದರೂ ನಿರೀಕ್ಷಿತ ಬೆಂಬಲ ವ್ಯಕ್ತವಾಗಿಲ್ಲ.  ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಪಕ್ಷದತ್ತ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಒಲಿಯುವುದು ಈ ಮೊದಲಿನ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ ಕಂಡು ಬಂದಿದ್ದ ವಿದ್ಯಮಾನ. ಆದರೆ ಹಲವು ಆರೋಪಗಳನ್ನು ಬೆನ್ನಲ್ಲಿ ಇಟ್ಟುಕೊಂಡು ಮತದಾರರ ಮುಂದೆ ಹೋದರೂ ಬಿಜೆಪಿಗೆ ಸಮಾಧಾನಕರ ಎನ್ನುವಂಥ ಬೆಂಬಲವೇ ಸಿಕ್ಕಿದೆ. ಬಿಜೆಪಿಗೆ ದೊಡ್ಡ ಜನಾದೇಶ ಕೊಡದ ರಾಜ್ಯದ ಮತದಾರರದು ಪ್ರಬುದ್ಧವಾದ ನಿಲುವು. 30 ಜಿಲ್ಲಾ ಪಂಚಾಯತ್‌ಗಳಲ್ಲಿ ಕೇವಲ 12ರಲ್ಲಷ್ಟೆ ಬಿಜೆಪಿ ಬಹುಮತ ಗಳಿಸಿ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ಇದು ಹೀನಾಯ ಸೋಲು. ಅದು ಹೊಸ ನಾಯಕತ್ವದಲ್ಲಿ ಚುನಾವಣೆಗೆ ಹೋಗಿದ್ದರೂ ಮತದಾರನ ಮನ ಗೆಲ್ಲಲು ಆಗಿಲ್ಲ. ಸೀಮಿತ ವಲಯದಲ್ಲಿ ಮಾತ್ರ ತನ್ನ ಪ್ರಾಬಲ್ಯ ಮೆರೆಯುವ ಉದ್ದೇಶ ಹೊಂದಿದ್ದ ಜೆಡಿಎಸ್ ತನ್ನ ಗುರಿ  ಈಡೇರಿಸಿಕೊಂಡಿದೆ. ಹಾಗೆ ನೋಡಿದರೆ ಕಾಂಗ್ರೆಸ್‌ಗೆ ಜೆಡಿಎಸ್‌ನ ಬಲವರ್ಧನೆ ತಲೆನೋವು ತರುವಂಥ  ವಿಚಾರ. ಇನ್ನು 10 ಜಿಲ್ಲಾ ಪಂಚಾಯತ್‌ಗಳಲ್ಲಿ ಯಾವ ಒಂದು ಪಕ್ಷವೂ ಇನ್ನೊಂದರ ಬೆಂಬಲವಿಲ್ಲದೆ ಅಧಿಕಾರ ಹಿಡಿಯದ ಅತಂತ್ರ ಸ್ಥಿತಿ ಏರ್ಪಟ್ಟಿದೆ. ಇವುಗಳಲ್ಲಿ ಬೆಂಗಳೂರು ನಗರ ಮತ್ತು ಗಣಿಧಣಿಗಳ  ಕೋಟೆ ಎನಿಸಿದ ಬಳ್ಳಾರಿಯಲ್ಲಿ ಬಿಜೆಪಿ ಎದುರು ಕಾಂಗ್ರೆಸ್ ಮತ್ತು ಜೆಡಿಎಸ್ ಸಮಬಲವನ್ನು ಗಳಿಸಿಕೊಂಡಿವೆ.  

ರಾಜ್ಯದ ಒಟ್ಟು 176 ತಾಲ್ಲೂಕು ಪಂಚಾಯತ್‌ಗಳಲ್ಲಿ ಕೂಡ ಬಿಜೆಪಿ ಸಾಧನೆ 68ರಲ್ಲಿ ಬಹುಮತ ಪಡೆಯುವಷ್ಟಕ್ಕೆ ಸೀಮಿತವಾಗಿದೆ. 31 ತಾಲ್ಲೂಕು ಪಂಚಾಯತ್‌ಗಳಲ್ಲಿ ಕಾಂಗ್ರೆಸ್ ಮತ್ತು 29 ತಾಲ್ಲೂಕು ಪಂಚಾಯತ್‌ಗಳಲ್ಲಿ ಜೆಡಿಎಸ್ ಬಹುಮತ ಪಡೆದು ಗ್ರಾಮೀಣ ಭಾಗಗಳಲ್ಲಿ ತಮಗೆ ತಕ್ಕಮಟ್ಟಿನ ಬೆಂಬಲ ಇರುವುದನ್ನು ತೋರಿಸಿವೆ. ರಾಜ್ಯದ 108 ತಾಲ್ಲೂಕು ಪಂಚಾಯತ್‌ಗಳಲ್ಲಿ ತಮ್ಮ ವಿರುದ್ಧ ಜನಾದೇಶವಿರುವುದನ್ನು ಬಿಜೆಪಿ ನಾಯಕತ್ವ ಮರೆಯಬಾರದು. ಬಹುಮತ ಸಿಗದ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್‌ಗಳಲ್ಲಿ ಅಧಿಕಾರ ಹಿಡಿಯುವುದಕ್ಕಾಗಿ ಯಾರೂ ಕುಟಿಲ ರಾಜಕೀಯ ತಂತ್ರ ಮಾಡಬಾರದು. ಮಾಡಿದರೆ ಅದು ಜನಾದೇಶವನ್ನು ಧಿಕ್ಕರಿಸಿದಂತಾಗುವುದು. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳು ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಮಹತ್ವದ ಪಾತ್ರ ವಹಿಸುವ ಸ್ಥಳೀಯ ಸಂಸ್ಥೆಗಳು. ಇಲ್ಲಿ ರಾಜಕೀಯ ತತ್ವ ಸಿದ್ಧಾಂತದ ಅನುಷ್ಠಾನದ ಚಿಂತನೆಗೆ ಹೆಚ್ಚು ಅವಕಾಶ ಇಲ್ಲ. ಆದರೆ ಸ್ಥಳೀಯರು ಅಧಿಕಾರದಲ್ಲಿ ಪಾಲ್ಗೊಂಡು ಸಮುದಾಯದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದಕ್ಕಾಗಿ ಈ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ರೂಪಿಸಲಾಗಿದೆ. ಈ ಸಂಸ್ಥೆಗಳಿಗೆ ಕೇಂದ್ರ ಮತ್ತು ರಾಜ್ಯದಿಂದ ಬರುತ್ತಿರುವ ಅನುದಾನ ಸಮರ್ಪಕವಾಗಿ ಬಳಕೆಯಾಗುವಂತೆ ನೋಡಿಕೊಳ್ಳುವುದು ಈಗ ಆಯ್ಕೆಯಾದ ಪ್ರತಿನಿಧಿಗಳ ಕರ್ತವ್ಯ. ಅಧಿಕಾರ ಗಳಿಕೆಯ ಉದ್ದೇಶವೇ ಹಣ ಮತ್ತು ಆಸ್ತಿ ಮಾಡುವುದಕ್ಕೆ ಎಂಬ ಚಾಳಿಯನ್ನು ನೂತನ ಜನಪ್ರತಿನಿಧಿಗಳು ಹಿಡಿಯದಿರಲಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.