ಶನಿವಾರ, ಮೇ 8, 2021
27 °C

ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಬೆಂಗಳೂರು: `ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ~ದಡಿ (ಎನ್‌ಆರ್‌ಎಚ್‌ಎಂ) ರಾಜ್ಯದಾದ್ಯಂತ ಕಾರ್ಯನಿರ್ವಹಿಸುತ್ತಿರುವ `ಆಶಾ~ ಕಾರ್ಯಕರ್ತೆಯರಿಗೆ ಈಗ ಇರುವ ಪ್ರೋತ್ಸಾಹ ಧನದ ಜೊತೆಗೆ ರೂ 3 ಸಾವಿರ ರೂಪಾಯಿ ವೇತನವನ್ನು ನಿಗದಿಪಡಿಸಬೇಕು ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಒಕ್ಕೂಟದ ನೇತೃತ್ವದಲ್ಲಿ ಕಾರ್ಯಕರ್ತೆಯರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.ಸಿಟಿ ರೈಲ್ವೆ ನಿಲ್ದಾಣದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು ಸ್ವಾತಂತ್ರ್ಯ ಉದ್ಯಾನದ ಬಳಿ ಇರುವ ಕಾಳಿದಾಸ ಮಾರ್ಗದಲ್ಲಿ ಸಭೆ ನಡೆಸಿದರು. ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ `ಆಶಾ~ಗಳಿಗೆ ಈ ಮುಂಚೆ ನೀಡಲಾಗುತ್ತಿದ್ದ ಹೆರಿಗೆ ಪ್ರಕರಣವೊಂದಕ್ಕೆ ರೂ 650ರ ಬದಲು ಆ ಮೊತ್ತವನ್ನು ರೂ 200ಕ್ಕೆ ಇಳಿಕೆ ಮಾಡಿದೆ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ದಾಗ ಈ ಕಾರ್ಯಕರ್ತೆಯರಿಗೂ ಉಳಿದುಕೊಳ್ಳಲು ಸೂಕ್ತ ವಸತಿ ವ್ಯವಸ್ಥೆ ಮಾಡಬೇಕು. ಮೊಬೈಲ್ ಫೋನ್‌ಗಳನ್ನು ಒದಗಿಸಬೇಕು. ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂದು ಎಐಟಿಯುಸಿ ಕಾರ್ಮಿಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎಚ್.ವಿ.ಅನಂತಸುಬ್ಬರಾವ್, ಆಶಾ ಕಾರ್ಯಕರ್ತೆಯರ ಒಕ್ಕೂಟದ ಅಧ್ಯಕ್ಷ ರಾಜ್ಯ ಎಚ್.ಕೆ.ರಾಮಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಎನ್.ಶಿವಣ್ಣ ಒತ್ತಾಯಿಸಿದರು. ನಂತರ ಈ ಕುರಿತು ಮನವಿ ಸಲ್ಲಿಸಲು ನಿಯೋಗವೊಂದು ವಿಧಾನಸೌಧದ ಮುಖ್ಯಮಂತ್ರಿ ಕಚೇರಿಗೆ ತೆರಳಿತು.ಆದರೆ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಇರಲಿಲ್ಲ. ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಚರ್ಚಿಸಲು ಇದೇ 21ಕ್ಕೆ ಮುಖ್ಯಮಂತ್ರಿ ಅವರು ಸಭೆ ಕರೆಯಲು ನಿರ್ಧರಿಸಿದ್ದಾರೆ ಎಂದು ಅವರ ವಿಶೇಷಾಧಿಕಾರಿಗಳು ನಿಯೋಗಕ್ಕೆ ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.