ಭಾನುವಾರ, ಮೇ 16, 2021
28 °C

`ಆಹಾರ, ಧಾನ್ಯ ಹಾಳು ಮಾಡದಿರಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: `ಆಹಾರ ಮತ್ತು ಆಹಾರ ಧಾನ್ಯಗಳ ಪೋಲು ಹೆಚ್ಚುತ್ತಿದೆ. ತಿನ್ನುವ ಪದಾರ್ಥ ಹಾಳು ಮಾಡಿದರೆ ಪ್ರಾಕೃತಿಕ ಸಂಪನ್ಮೂಲವನ್ನೇ ಹಾಳು ಮಾಡಿದಂತೆ' ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ.ನಿಂಗೇಗೌಡ ಹೇಳಿದರು.  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ, ಪರಿಸರ ಇಲಾಖೆ ಹಾಗೂ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಜಾಪುರ ವಿಭಾಗದ ಸಹಯೋಗದಲ್ಲಿ ಬುಧವಾರ ಇಲ್ಲಿಯ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.`ವಿಜಾಪುರ ಧೂಳಿನ ನಗರ ಎಂಬ ಅಪಖ್ಯಾತಿ ಪಡೆದಿದೆ. ನಗರಸಭೆಯವರು ಹಸರೀಕರಣಕ್ಕೆ ಆದ್ಯತೆ ನೀಡಬೇಕು. ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತ ಹಸಿರು ಗಿಡಗಳಿಂದ ಸುತ್ತುವರೆದ ಪರಿಸರ ನಿರ್ಮಿಸಿಕೊಂಡರೆ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳಬಹುದು' ಎಂದರು.ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಶಿವಯೋಗಿ ಕಳಸದ, `ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಿದ್ದು,  ಅಭಿವೃದ್ಧಿ ಹೆಸರಿನಲ್ಲಿ ಗಿಡಮರಗಳನ್ನು ನಾಶ ಮಾಡುತ್ತಿದ್ದೇವೆ. ಪರಿಸರ ರಕ್ಷಣೆಗೆ ಎಲ್ಲರೂ ಪಣತೊಡಬೇಕು. ರೈತರು ತಮ್ಮ ಹೊಲಗಳ ಬದುಗಳಲ್ಲಿ ಗಿಡಗಳನ್ನು ನೆಟ್ಟು ಪೋಷಿಸಲು ಜಾಗೃತಿ ಮೂಡಿಸಲಾಗುತ್ತಿದೆ' ಎಂದು ಹೇಳಿದರು.

ಉಪನ್ಯಾಸ ನೀಡಿದ ಅನುರಾಧಾ ಟಂಕಸಾಲಿ, `ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡುವ ಸಂಸ್ಕೃತಿ ಹೆಚ್ಚಾಗುತ್ತಿದೆ. ಇದರ ಪರಿಣಾಮ ಪ್ರಾಣಿ ಮತ್ತು ಸಸ್ಯ ಸಂಕುಲ, ಔಷಧಿಯ ಗಿಡಗಳು ನಾಶವಾಗುವುದರೊಂದಿಗೆ ಅಂತರ್‌ಜಲದ ಮಟ್ಟವೂ ಗಣನೀಯವಾಗಿ ಕುಸಿಯುತ್ತಿದೆ' ಎಂದು ಆತಂಕ ವ್ಯಕ್ತಪಡಿಸಿದರು.ಅರಣ್ಯ ಸಂಪತ್ತು, ರಾಷ್ಟ್ರೀಯ ಸಂಪತ್ತು ಎಂಬ ಮನೋಭಾವ ಬೆಳೆಸಿಕೊಳ್ಳಬೇಕಾಗಿದೆ. ಗಿಡ ಮರಗಳಿಂದ ಪ್ರಕೃತಿ ಮತ್ತು ಮಾನವನ ಆರೋಗ್ಯದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯ ಎಂದರು. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಆರ್.ಬಿ. ಧರ್ಮಗೌಡರ, ಅನಿಲ ಕಟ್ಟಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಎಲ್ ಜಿನರಾಳಕರ,  ಕೆ.ಸಿ. ಸದಾನಂದಸ್ವಾಮಿ, ವೆಂಕಟೇಶ, ಜಿ.ಪಂ. ಅಧ್ಯಕ್ಷೆ ಕಾವ್ಯಾ ದೇಸಾಯಿ, ಎಸ್ಪಿ ಅಜಯ್ ಹಿಲೋರಿ, ಜಿ.ಪಂ. ಸಿಇಒ ಗುತ್ತಿ ಜಂಬುನಾಥ್, ಅರಣ್ಯಾಧಿಕಾರಿಗಳಾದ ಸಿ.ವಿ. ರುದ್ರಮುನಿಗೌಡ, ಎ.ಎಚ್. ಚಂದ್ರಪ್ರಭ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಣಾಧಿಕಾರಿ ಪಿ.ವಿ. ಬಸವರಾಜು, ವಕೀಲರ ಸಂಘದ ಅಧ್ಯಕ್ಷ ಎ.ಬಿ. ಪಾಟೀಲ ಮುಖ್ಯ ಅತಿಥಿಯಾಗಿದ್ದರು.ನೆಹರೂ ಯುವ ಕೇಂದ್ರ: ನೆಹರೂ ಯುವ ಕೇಂದ್ರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್. ಘಟಕ, ರಾಷ್ಟ್ರೀಯ ಹಸಿರು ಪಡೆ ಹಾಗೂ ಲಯನ್ಸ ಕ್ಲಬ್ ಸಹಯೋಗದಲ್ಲಿ  ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜನಲ್ಲಿ ವಿಶ್ವ ಪರಿಸರ ದಿನ ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಯಾಗಿದ್ದ ಲಯನ್ಸ್ ಕ್ಲಬ್ ಮಾಜಿ ಗವರ್ನರ್ ಡಾ.ಪ್ರೇಮಾನಂದ ಅಂಬಲಿ, ವಿಶ್ವದ ಪರಿಸರದ ಮೇಲೆ ಸಾಕಷ್ಟು ವ್ಯತಿರಿಕ್ತ ಪರಿಣಾಮಗಳು ಕಂಡು ಬರುತ್ತಿದ್ದು, ಇದಕ್ಕೆ ನಾವೆಲ್ಲರೂ ಹೊಣೆಯಾಗಿದ್ದೇವೆ ಎಂದರು.ಎನ್‌ಎಸ್‌ಎಸ್ ಜಿಲ್ಲಾ ನೋಡಲ್ ಅಧಿಕಾರಿ ಎಚ್.ಎಂ.ಸಜ್ಜಾದೆ, ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಜಿ.ಎಸ್. ಪೂಜಾರಿ, ನೆಹರೂ ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಡಿ.ದಯಾನಂದ, ಆರ್.ಎಂ. ಪಾಟೀಲ, ಪಿ.ಬಿ. ಪಾಟೀಲ, ಅನುಜಾ ಮಾತನಾಡಿದರು. ಉಪನ್ಯಾಸಕ ಎಂ.ಎಂ.ಪಾಟೀಲ ಉಪನ್ಯಾಸ ನೀಡಿದರು. ಕೆ.ಜಿ. ಕೋಟ್ಯಾಳ ಸ್ವಾಗತಿಸಿದರು. ಬಿ.ಬಿ. ಗಂಗಳ್ಳಿ ವಂದಿಸಿದರು. ಜಿ.ಬಿ. ಕಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.