ಆಹಾರ ಸಂಸ್ಕರಣ ಘಟಕಕ್ಕೆ 10 ಕೋಟಿ: ನಿರಾಣಿ

7

ಆಹಾರ ಸಂಸ್ಕರಣ ಘಟಕಕ್ಕೆ 10 ಕೋಟಿ: ನಿರಾಣಿ

Published:
Updated:

ವಿಜಾಪುರ: ಜಿಲ್ಲೆಯಲ್ಲಿ ಆಹಾರ ಸಂಸ್ಕರಣ ಘಟಕ ಸ್ಥಾಪಿಸಲು ಮುಂದೆ ಬರುವವರಿಗೆ 10 ಕೋಟಿ ರೂಪಾಯಿ ಸಹಾಯಧನ ನೀಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಹೇಳಿದರು.ತಾಲ್ಲೂಕಿನ ಜಾಲಗೇರಿಯಲ್ಲಿ ಭಾನುವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಹಣ್ಣು ಮತ್ತು ತರಕಾರಿ ಸಂಸ್ಕರಣ, ಮಾರಾಟ ಸಹಕಾರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.ಸುಧಾ ಮೂರ್ತಿ, ವಿದ್ಯಾ ಮರಕುಂಬಿ, ಕಿರಣ್ ಮುಂಜುಮದಾರ ಅವರನ್ನು ಆದರ್ಶ ವಾಗಿಟ್ಟುಕೊಂಡು ಮಹಿಳಾ ಉದ್ಯಮಿಗಳು ಪ್ರಗತಿ ಹೊಂದಬೇಕು ಎಂದು ಸಲಹೆ ನೀಡಿದರು.`ಅವಳಿ ಜಿಲ್ಲೆಗಳ ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಕೆರೆಗೆ ನೀರು ತುಂಬಿಸುವ ಯೋಜನೆ ಶೀಘ್ರವೇ ಅನುಷ್ಠಾನಗೊಳ್ಳಲಿದೆ. ಈ ಹಂತದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಈ ಯೋಜನೆಯನ್ನು ತಾವೇ ಮಾಡಿದ್ದಾಗಿ ಹೇಳಿಕೊಳ್ಳುತ್ತಿದ್ದಾರೆ. ಹಿಂದೆ ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಅವರಿಗೆ ನೀರಾವರಿ ನೆನಪಾಗಲಿಲ್ಲ. ಈಗ ಪ್ರಚಾರಕ್ಕಾಗಿ ಹೋರಾಟದ ಬಗ್ಗೆ ಮಾತನಾಡುತ್ತಿದ್ದಾರೆ~ ಎಂದು ಟೀಕಿಸಿದರು.ಸಂಘ ಉದ್ಘಾಟಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವ ಸಿ.ಸಿ. ಪಾಟೀಲ, ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಬೇಕು. ಕಿತ್ತೂರು ರಾಣಿ ಚನ್ನಮ್ಮಳ ಹಾಗೆ ದೃಢ ಸಂಕಲ್ಪ ಹಾಗೂ ಸ್ವಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.ಆರ್ಥಿಕ ಸದೃಢತೆಯಿಂದ ಮಾತ್ರ ಸ್ವಾವಲಂಬಿ ಮತ್ತು ನೆಮ್ಮದಿಯ ಬದುಕು ಸಾಧ್ಯ. ಕಚ್ಚಾ ವಸ್ತು ಆಧರಿತ ಉದ್ಯಮ ಸ್ಥಾಪನೆಗೆ ಮಹಿಳೆಯರು ಮುಂದೆ ಬರಬೇಕು ಎಂದು ಸಲಹೆ ನೀಡಿದರು.ಸಚಿವ ಮುರುಗೇಶ ನಿರಾಣಿ ವಿರುದ್ಧ ಆಲಂ ಪಾಷಾ ಮಾಡುತ್ತಿರುವ ಆರೋಪ ನಿರಾಧಾರ. ಮಾಧ್ಯಮಗಳ ವರದಿಯಲ್ಲಿಯೂ ಸತ್ಯಾಂಶ ಇಲ್ಲ. ಇದನ್ನು ಸಾರ್ವಜನಿಕರು ನಂಬಬಾರದು. ಪಂಚಮಸಾಲಿ ಸಮಾಜ ನಿರಾಣಿ ಅವರ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದರು.ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ, ಶಾಸಕ ವಿಠ್ಠಲ ಕಟಧೋಂಡ, ಸಂಗಮೇಶ ಬಬಲೇಶ್ವರ ಮಾತನಾಡಿದರು. ಗೀತಾಂಜಲಿ, ಶಿವಾನಂದ ಕಲ್ಲೂರ, ಎ.ಎನ್. ಪಾಟೀಲ, ವಸಂತ ಪ್ರೇಮ ಇತರರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry