ಆ್ಯಪ್ ಆಧಾರಿತ ಟ್ಯಾಕ್ಸಿ ದರ ನಿರ್ಬಂಧ

ನವದೆಹಲಿ (ಪಿಟಿಐ): ಓಲಾ, ಉಬರ್ ಮುಂತಾದ ಆ್ಯಪ್ ಆಧರಿತ ಟ್ಯಾಕ್ಸಿ ಸೇವೆ ಒದಗಿಸುವ ಸಂಸ್ಥೆಗಳು ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಹೆಚ್ಚಿನ ದರ ವಿಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ.
ಇದೇ 22ರ ನಂತರ ಸರ್ಕಾರ ನಿಗದಿಪಡಿಸಿದ ದರದಲ್ಲೇ ಪ್ರಯಾಣಿಕರಿಂದ ಶುಲ್ಕ ಪಡೆಯಬೇಕು ಎಂದು ಹೈಕೋರ್ಟ್ ಆದೇಶಿಸಿದೆ.
ದೆಹಲಿ ಸರ್ಕಾರ ನಿಗದಿಪಡಿಸಿರುವ ದರವನ್ನು ಪ್ರಯಾಣಿಕರಿಂದ ಪಡೆಯಲು ಈಗಿರುವ ಸಾಫ್ಟ್ವೇರ್ನಲ್ಲಿ ಕೆಲವು ಬದಲಾವಣೆ ಮಾಡಬೇಕಾಗಿದೆ. ಹಾಗಾಗಿ 10 ದಿನಗಳ ಕಾಲಾವಕಾಶ ನೀಡಬೇಕು ಎಂದು ಉಬರ್ ಸಂಸ್ಥೆ ಮನವಿ ಮಾಡಿದ್ದರಿಂದ ನ್ಯಾಯಮೂರ್ತಿ ಮನಮೋಹನ್ ಅವರ ನ್ಯಾಯಪೀಠವು ಕೋರಿಕೆಯನ್ನು ಮನ್ನಿಸಿತು.
ಸರ್ಕಾರ ನಿಗದಿಪಡಿಸಿದ ದರದಲ್ಲಿಯೇ ಪ್ರಯಾಣಿಕರಿಂದ ಶುಲ್ಕ ಪಡೆಯಲು ಆರಂಭಿಸಲಾಗಿದೆ ಎಂದು ಓಲಾ ಕಂಪೆನಿಯ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಕಡಿಮೆ ದರದ ರೇಡಿಯೊ ಟ್ಯಾಕ್ಸಿಗೆ ಪ್ರತಿ ಕಿ. ಮೀ.ಗೆ ` 12.50, ಹವಾ ನಿಯಂತ್ರಣ ವ್ಯವಸ್ಥೆ ಇಲ್ಲದ ಟ್ಯಾಕ್ಸಿಗೆ ಪ್ರತಿ ಕಿ. ಮೀ.ಗೆ ` 14.00, ಹವಾ ನಿಯಂತ್ರಣ ವ್ಯವಸ್ಥೆಯ ಟ್ಯಾಕ್ಸಿಗೆ ಪ್ರತಿ ಕಿ. ಮೀ.ಗೆ ` 16.00 ಎಂದು ದೆಹಲಿ ಸರ್ಕಾರ ದರ ನಿಗದಿ ಮಾಡಿದೆ.
ಸಾರ್ವಜನಿಕ ಸಾರಿಗೆ ಮೇಲಿನ ಒತ್ತಡವನ್ನು ಟ್ಯಾಕ್ಸಿ ಸಂಸ್ಥೆಗಳು ಕಡಿಮೆ ಮಾಡುತ್ತಿರುವುದರಿಂದ ಇವುಗಳ ನಿಯಂತ್ರಣಕ್ಕೆ ಏಕರೂಪ ನಿಯಮ ರೂಪಿಸಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಹೊಸ ನಿಯಮ ರಚನೆಗೆ ಸಲಹೆ ನೀಡಲು ವಿಶೇಷ ಸಮಿತಿಯನ್ನು ರಚಿಸಬೇಕು ಎಂದು ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ಸಮಿತಿಯಲ್ಲಿ ಮಾಹಿತಿ ತಂತ್ರಜ್ಞಾನ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ದೆಹಲಿ ಟ್ರಾಫಿಕ್ ಪೊಲೀಸ್ ವಿಭಾಗದ ಅಧಿಕಾರಿಗಳು ಇರಬೇಕು. ಈ ಸಮಿತಿಯು ನೀತಿ ಆಯೋಗದ ಸಾರಿಗೆ ತಜ್ಞರ ಸಲಹೆ ಪಡೆಯಬೇಕು ಎಂದು ನ್ಯಾಯಪೀಠ ತಿಳಿಸಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.