ಗುರುವಾರ , ಜೂಲೈ 2, 2020
22 °C

ಆ ಕ್ಷಣಗಳು ಮತ್ತೆ ನೆನಪಾದಾಗ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆ ಕ್ಷಣಗಳು ಮತ್ತೆ ನೆನಪಾದಾಗ...

`ಬಹುಶಃ ಅದು 1983ರಲ್ಲಿ ಅನ್ನಿಸುತ್ತೆ. ಅಂದು ರಾತ್ರಿ 12 ಗಂಟೆ ಕಳೆದಿತ್ತು...

ಹಗಲಿಡೀ ಅಭ್ಯಾಸ ಮಾಡಿ ದಣಿದಿದ್ದ ನಾವು ಗಾಢ ನಿದ್ರೆಯಲ್ಲಿದ್ದವು. ಆಗ ಭದ್ರತಾ ಸಿಬ್ಬಂದಿಯೊಬ್ಬ ಓಡುತ್ತಾ ಬಂದು, `ಸರ್ ಆ ಚೋಟು ಈಗಲೂ ಅಭ್ಯಾಸ ಮಾಡುತ್ತಿದ್ದಾನೆ~ ಎಂದ. `ನೀನು ಹೋಗಿ ಫೀಲ್ಡಿಂಗ್ ಮಾಡು~ ಎಂದು ನಾನು ಆ ಭದ್ರತಾ ಸಿಬ್ಬಂದಿಗೆ ಹೇಳಿ ಕಳುಹಿಸಿದ್ದೆ! ಆ ಮಧ್ಯೆ ರಾತ್ರಿಯಲ್ಲಿ ಅಭ್ಯಾಸ ಮಾಡುತ್ತಿದ್ದ ಹುಡುಗ ಸಚಿನ್~.ಈ ವಿಷಯವನ್ನು ನೆನಪಿಸಿದ್ದು ಕೋಚಿಂಗ್‌ನಲ್ಲಿ 40 ವರ್ಷಗಳ ಅನುಭವ ಹೊಂದಿರುವ ವಾಸು ಪರಾಂಜಪೆ.`20 ವರ್ಷಗಳ ಹಿಂದಿನ ಮಾತು. ಸೆಹ್ವಾಗ್ ಅವರ ತಂದೆ ನನ್ನ ಬಳಿ ಬಂದು 11 ರೂಪಾಯಿ ಹಾಗೂ ಸಿಹಿ ತುಂಬಿದ್ದ ಒಂದು ಪೆಟ್ಟಿಗೆ ನೀಡಿ ಸೆಹ್ವಾಗ್ ಅವರನ್ನು ನನ್ನ ಜವಾಬ್ದಾರಿಗೆ ಒಪ್ಪಿಸಿದರು. ಆದರೆ ನಾನು ಸೆಹ್ವಾಗ್‌ಗೆ ಯಾವತ್ತೂ ಈ ರೀತಿ ಆಡಬೇಕು ಎಂದು ಹೇಳಿಕೊಡಲಿಲ್ಲ. ಬದಲಾಗಿ ಆತ ಆಡುತ್ತಿದ್ದ ರೀತಿಯನ್ನು ಬೆಂಬಲಿಸುತ್ತಾ ಹೋದೆ. ಸಿಕ್ಸರ್ ಎತ್ತಿದರೆ ಮತ್ತೊಂದು ಸಿಕ್ಸರ್ ಎತ್ತುವಂತೆ ಪ್ರೋತ್ಸಾಯಿಸುತ್ತಿದ್ದೆ~.ಸೆಹ್ವಾಗ್‌ಗೆ ಕ್ರಿಕೆಟ್ ಹೇಳಿಕೊಟ್ಟ ಕೋಚ್ ಎ.ಎನ್.ಶರ್ಮ ಅವರ ಫ್ಲಾಷ್‌ಬ್ಯಾಕ್ ಇದು.

“1958-59ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು, ಚಂದು ಬೋರ್ಡೆ ಅವರು ಪ್ರವಾಸದ ಒಂದು ಪಂದ್ಯದಲ್ಲಿ ಆಡುವಾಗ ಕೊಂಚ ವೈನ್ ಸೇವಿಸಿದ್ದರಂತೆ. ಆ ಪಂದ್ಯದಲ್ಲಿ ಬ್ಯಾಟ್ಸ್‌ಮನ್ ಬಾರಿಸಿದ ಚೆಂಡು ಒಂದು ದಿಕ್ಕಿಗೆ ಹೋದರೆ ಬೋರ್ಡೆ ಮತ್ತೊಂದು ದಿಕ್ಕಿನತ್ತ ಓಡಿದ್ದರಂತೆ!”ಆ ಘಟನೆ ನೆನಪಿಸಿಕೊಂಡು ಸಭಾಂಗಣದಲ್ಲಿ ನಗುವಿನ ಅಲೆ ಎಬ್ಬಿಸಿದ್ದು ಸ್ವತಃ ಬೋರ್ಡೆ. ಇಂತಹ ಹಲವು ಪ್ರಸಂಗಗಳು ಅಲೆ ಅಲೆಯಾಗಿ ತೇಲಿ ಬಂದಿದ್ದು ಪುಣೆ ಯೂಥ್ ಸರ್ವೀಸ್ (ಪಿವೈಎಸ್) ಹಿಂದೂ ಜಿಮ್‌ಖಾನಾದ ಅಂಗಳದಲ್ಲಿ.

ಐತಿಹಾಸಿಕ ನಗರಿ ಪುಣೆಯಲ್ಲಿ ನಡೆದ ಭಾರತ ಕ್ರೀಡಾ ಪತ್ರಕರ್ತರ ಒಕ್ಕೂಟದ 35ನೇ ಸಮ್ಮೇಳನದಲ್ಲಿ ನೆನಪುಗಳ ಮೆರವಣಿಗೆ ಇದು.ದೇಶದ ವಿವಿಧ ಭಾಗಗಳಿಂದ ಸುಮಾರು 150 ಕ್ರೀಡಾ ಪತ್ರಕರ್ತರು ಆಗಮಿಸಿದ್ದರು. ಅದರಲ್ಲಿ ವಿವಿಧ ಪತ್ರಿಕೆಗಳ ಸಂಪಾದಕರು, ಹಿರಿಯ ಪತ್ರಕರ್ತರು ಇದ್ದರು. ಬೆಂಗಳೂರು ಕ್ರೀಡಾ ಬರಹಗಾರರ ಸಂಘದಿಂದ ಏಳು ಮಂದಿ ತೆರಳಿದ್ದೆವು. ಈ ರೀತಿಯ ಸಮ್ಮಿಲನ ಭಾರತದ ಪತ್ರಿಕೋದ್ಯಮದಲ್ಲಿ ಕ್ರೀಡಾ ಪತ್ರಕರ್ತರನ್ನು ಹೊರತುಪಡಿಸಿ ಬೇರೆ ಯಾವುದೇ ವಿಭಾಗದಲ್ಲಿ ನಡೆದಿರಲಿಕ್ಕಿಲ್ಲ. ಹಾಗಾಗಿಯೇ ಜೂನ್ ಒಂದರಿಂದ ಐದರವರೆಗೆ ನಡೆದ 35ನೇ ಸಮ್ಮೇಳನ ವಿಶೇಷವಾದದ್ದು.ಕ್ರೀಡೆಗೆ ಸಂಬಂಧಿಸಿದ ವಿಚಾರ ಸಂಕಿರಣಗಳು ಜರುಗಿದವು. ದೇಶದ ಪ್ರಮುಖ ಕ್ರೀಡಾಪಟುಗಳು, ಕೋಚ್‌ಗಳು, ಅನುಭವಿ ಆಡಳಿತದಾರರೊಂದಿಗೆ ಚರ್ಚೆ, ಸಮಾಲೋಚನೆಗಳು ನಡೆದವು.ಸದಾ ಕ್ರೀಡಾ ವರದಿಯಲ್ಲಿ ಮುಳುಗಿರುವ ಪತ್ರಕರ್ತರು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಮಜಾ ನೀಡಿದರು. ಕ್ರಿಕೆಟ್, ಟಿಟಿ, ಫುಟ್‌ಬಾಲ್, ಗಾಲ್ಫ್, ಬ್ಯಾಸ್ಕೆಟ್‌ಬಾಲ್‌ನಲ್ಲಿ ತಮ್ಮ ಚಾಕಚಕ್ಯತೆ ತೋರಿದರು. ಗೆದ್ದವರಿಗೆ ಬಹುಮಾನಗಳೂ ಇದ್ದವು.ಫಾರ್ಮುಲಾ ಒನ್ ರೇಸ್ ವರದಿ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿ, ಭಾರತದಲ್ಲಿನ ಕೋಚಿಂಗ್ ಸ್ಥಿತಿ, 2012ರ ಒಲಿಂಪಿಕ್ಸ್‌ಗೆ ಯಾವ ರೀತಿ ಸಿದ್ಧತೆ ನಡೆದಿದೆ? ಗ್ರೇಟರ್ ನೊಯಿಡಾದಲ್ಲಿ ಸಿದ್ಧವಾಗಿರುವ ಎಫ್-ಒನ್ ಟ್ರ್ಯಾಕ್ ಹೇಗಿದೆ? ಭಾರತದಲ್ಲಿರುವ ಕ್ರೀಡಾ ಸೌಲಭ್ಯಗಳು ಹಾಗೂ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ, ಸಮಾಲೋಚನೆಗಳು ನಡೆದವು.2012ರ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಶೂಟರ್ ಗಗನ್ ನಾರಂಗ್ ಕೆಲ ಕಹಿ ನೆನಪುಗಳನ್ನು ಬಿಚ್ಚಿಟ್ಟರು. `2008ರ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಯಶಸ್ಸು ಲಭಿಸಿರಬಹುದು. ಆದರೆ ಭಾರತ ಕ್ರೀಡಾ ರಂಗದಲ್ಲಿ ಹೆಚ್ಚೇನೂ ಬದಲಾವಣೆ ಆಗಿಲ್ಲ. ಶೂಟಿಂಗ್ ಸಂಬಂಧಿಸಿದ ಸಾಮಗ್ರಿ ತರಲು ನಾನು ಜರ್ಮನಿಗೆ ತೆರಳಬೇಕಿತ್ತು. ಆದರೆ ವೀಸಾವೇ ಸಿಗಲಿಲ್ಲ. ಸರ್ಕಾರದ ನೆರವು ಕೋರಿದೆ. ಆ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ~ ಎಂದು ಭಾರತದ ಕ್ರೀಡಾ ಪರಿಸ್ಥಿತಿಯನ್ನು ತೆರೆದಿಟ್ಟರು.ರೋಯಿಂಗ್ ಚಾಂಪಿಯನ್ ಭಜರಂಗ ಲಾಲ್ ಠಕ್ಕರ್, ಫಾರ್ಮುಲಾ-2 ರೇಸ್‌ನ ಯುವ ಪ್ರತಿಭೆ ಅರ್ಮಾನ್ ಇಬ್ರಾಹಿಂ, ಪಶ್ಚಿಮ ಬಂಗಾಳ ರಣಜಿ ಕೋಚ್ ಡಬ್ಲ್ಯು.ವಿ.ರಾಮನ್, ಬಿಸಿಸಿಐ ಮುಖ್ಯ ಆಡಳಿತ ಅಧಿಕಾರಿ ಪ್ರೊ.ರತ್ನಾಕರ್ ಶೆಟ್ಟಿ, ಮಾಜಿ ಬ್ಯಾಡ್ಮಿಂಟನ್ ಆಟಗಾರ ನಂದು ನಾಟೇಕರ್ ಸೇರಿದಂತೆ ಪ್ರಮುಖರು ತಮ್ಮ ಅನುಭವದ ಬುತ್ತಿಯನ್ನು ಬಿಚ್ಚಿಟ್ಟರು.ಹಾಗಾಗಿಯೇ ಆ ಐದು ದಿನಗಳ ನೆನಪುಗಳೇ ಒಂಥರಾ ವಿಶೇಷ... 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.