ಗುರುವಾರ , ಏಪ್ರಿಲ್ 15, 2021
31 °C

ಆ ಬಗ್ಗೆ ಯೋಚಿಸಿದರೆ ನಮಗೆ ರಾತ್ರಿ ನಿದ್ದೆ ಬರುವುದಿಲ್ಲ: ಗ್ರೇಮ್ ಸ್ಮಿತ್......

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಢಾಕಾ: ದಕ್ಷಿಣ ಆಫ್ರಿಕಾ ತಂಡದ ನಾಯಕ ಗ್ರೇಮ್ ಸ್ಮಿತ್ ಈ ವಿಶ್ವಕಪ್ ಟೂರ್ನಿಯ ಬಳಿಕ ಏಕದಿನ ಕ್ರಿಕೆಟ್‌ಗೆ ಗುಡ್‌ಬೈ ಹೇಳಲಿದ್ದಾರೆ. ಅಷ್ಟರೊಳಗೆ ‘ರೇನ್‌ಬೋ’ ರಾಷ್ಟ್ರದ ಕ್ರಿಕೆಟ್ ಅಭಿಮಾನಿಗಳಿಗೆ ಟ್ರೋಫಿ ಗೆದ್ದುಕೊಡಬೇಕು ಎಂಬುದು ಅವರ ಕನಸು.

 

ಅದಕ್ಕಿರುವುದು ಕೇವಲ ಒಂದು ಅವಕಾಶ ಮಾತ್ರ. ಈ ಹಿಂದಿನ ವಿಶ್ವಕಪ್ ಟೂರ್ನಿಗಳ ಲೀಗ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ನಾಕ್‌ಔಟ್ ಹಂತದಲ್ಲಿ ಎಡವಿದ ವಿಚಾರ ಸ್ಮಿತ್‌ಗೆ ಚೆನ್ನಾಗಿ ಗೊತ್ತಿದೆ.ಹಾಗಾಗಿ ಕ್ವಾರ್ಟರ್ ಫೈನಲ್ ಪಂದ್ಯಲ್ಲಿ ಎದುರಾಳಿ ನ್ಯೂಜಿಲೆಂಡ್ ತಂಡವನ್ನು ಅವರು ಲಘುವಾಗಿ ಪರಿಗಣಿಸಿಲ್ಲ. ಆದರೆ ಚೊಚ್ಚಲ ಟ್ರೋಫಿ ಗೆಲ್ಲುವ ಅಚಲ ವಿಶ್ವಾಸ ಅವರದ್ದು. ಅದಕ್ಕಾಗಿ ಅವರು ವೇಗಕ್ಕಿಂತ ಸ್ಪಿನ್ನರ್‌ಗಳ ಮೇಲೆ ಹೆಚ್ಚು ಭರವಸೆ ಇಟ್ಟಿದ್ದಾರೆ. ಈ ತಂಡದ ಸ್ಪಿನ್ನರ್‌ಗಳು ಈ ಟೂರ್ನಿಯಲ್ಲಿ ಇದುವರೆಗೆ ಒಟ್ಟು 30 ವಿಕೆಟ್ ಕಬಳಿಸಿದ್ದಾರೆ.* ವೇಗಕ್ಕಿಂತ ಸ್ಪಿನ್ ದಾಳಿಗೆ ಹೆಚ್ಚು ಒತ್ತು ನೀಡುತ್ತಿರುವಂತಿದೆ. ಕಾರಣ?

ಈಗ ಸ್ಪಿನ್ ಕೂಡ ನಮ್ಮ ಬಲ. ಇದರಲ್ಲಿ ನಾವು ಯಶಸ್ವಿಯಾಗಿದ್ದೇವೆ. ಉಪಖಂಡದ ಪಿಚ್‌ಗಳು ಅದಕ್ಕೆ ನೆರವಾಗುತ್ತಿವೆ. ವೇಗ ಹಾಗೂ ಸ್ಪಿನ್‌ನಲ್ಲಿ ಈಗ ನಮಗೆ ಸಾಕಷ್ಟು ಆಯ್ಕೆಗಳಿವೆ. ಇಲ್ಲಿನ ಪಿಚ್‌ಗಳಲ್ಲಿ ಆಡಲು ಸ್ಪಿನ್ನರ್‌ಗಳು ತುಂಬಾ ಉತ್ಸುಕರಾಗಿದ್ದಾರೆ. ಅದಕ್ಕೆ ಕಾರಣ ಅವರಿಗೆ ದಕ್ಷಿಣ ಆಫ್ರಿಕಾದ ಪಿಚ್‌ಗಳಲ್ಲಿ ಹೆಚ್ಚು ಅವಕಾಶ ಸಿಗುವುದಿಲ್ಲ.* ಸ್ಪಿನ್ನರ್ ರಾಬಿನ್ ಪೀಟರ್ಸನ್ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ. ಈ ಬಗ್ಗೆ?

ರಾಬಿನ್ ನಮ್ಮ ತಂಡದಲ್ಲಿ ತುಂಬಾ ದಿನಗಳಿಂದ ಇದ್ದಾರೆ. ಆದರೆ ಕಳೆದ ಆರೇಳು ಪಂದ್ಯಗಳಿಂದ ಜನರು ಅವರನ್ನು ಅಚ್ಚರಿಯಿಂದ ನೋಡುತ್ತಿದ್ದಾರೆ. ಅವರ ಮೇಲೆ ಭರವಸೆ ಇಡಲು ಶುರು ಮಾಡಿದ್ದಾರೆ. ಅದು ಪೀಟರ್ಸನ್ ಅವರಲ್ಲಿ ವಿಶ್ವಾಸ ತುಂಬಿದೆ.

 

* ನಿಮ್ಮ ದೇಶದ ಡೊನಾಲ್ಡ್ ಈಗ ಕಿವೀಸ್ ಪಡೆಯ ಬೌಲಿಂಗ್ ಕೋಚ್. ನಿಮ್ಮ ಕೆಲ ಗುಟ್ಟು ಆ ತಂಡಕ್ಕೆ ಗೊತ್ತಾಗಬಹುದೇ?

ಖಂಡಿತ ನ್ಯೂಜಿಲೆಂಡ್‌ಗೆ ಡೊನಾಲ್ಡ್ ಅವರಿಂದ ತುಂಬಾ ಒಳ್ಳೆಯದಾಗುತ್ತಿದೆ. ಅವರ ಬಳಿ ತುಂಬಾ ಯೋಜನೆಗಳಿವೆ. ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಲಿ ಎಂದು ಡೊನಾಲ್ಡ್‌ಗೆ ನಾನು ಹಾರೈಸುತ್ತೇನೆ. ಆದರೆ ಈ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಅವರಿದ್ದಾಗಿನ ನಮ್ಮ ತಂಡವೇ ಬೇರೆ, ಈಗಿನ ನಮ್ಮ ತಂಡವೇ ಬೇರೆ. ಹಾಗಾಗಿ ಹೆಚ್ಚು ಚಿಂತೆ ಮಾಡಲು ಹೋಗಿಲ್ಲ. ಆ ಬಗ್ಗೆ ತುಂಬಾ ಯೋಚನೆ ಮಾಡಲು ಹೋದರೆ ಖಂಡಿತ ನಮಗೆ ರಾತ್ರಿ ನಿದ್ದೆ ಬರುವುದಿಲ್ಲ.* ಈ ಪಂದ್ಯಕ್ಕೆ ಸ್ಪಿನ್ನರ್‌ಗಳನ್ನು ಯಾವ ರೀತಿ ಬಳಸಿಕೊಳ್ಳಬೇಕು ಎಂದು ಯೋಜನೆ ರೂಪಿಸಿದ್ದೀರಿ?

ನಮ್ಮ ಮೂರು ಮಂದಿ ಸ್ಪಿನ್ನರ್‌ಗಳು ವಿಭಿನ್ನವಾಗಿ ಬೌಲ್ ಮಾಡುತ್ತಿದ್ದಾರೆ. ಪ್ರತಿಯೊಬ್ಬರೂ ವಿಭಿನ್ನ ಯೋಜನೆ ಹೊಂದಿದ್ದಾರೆ. ಹಾಗಾಗಿ ಹೆಚ್ಚು ಯೋಜನೆ ರೂಪಿಸಬೇಕಾದ ಅಗತ್ಯವಿಲ್ಲ. ಮತ್ತೊಮ್ಮೆ ಅವರು ಉತ್ತಮ ಪ್ರದರ್ಶನ ತೋರುತ್ತಾರೆ ಎಂಬ ವಿಶ್ವಾಸ ನಮಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.