ಗುರುವಾರ , ಮೇ 26, 2022
31 °C

ಇಂಗ್ಲಿಷ್ ಅನಿವಾರ್ಯ ಎನ್ನುವುದು ವಾಸ್ತವ ಅಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಿನಾಂಕ 16 ಜೂನ್ ಶನಿವಾರದಂದು ಅಂತರಾಳ ಪುಟದಲ್ಲಿ ಪ್ರಕಟವಾಗಿದ್ದ ಡಾ. ನಟರಾಜ್ ಹುಳಿಯಾರ್ ಅವರ  `ಇಂಗ್ಲಿಷ್ ಮಾಧ್ಯಮ ಏಕೆ? ಹೇಗೆ?~  ಲೇಖನಕ್ಕೆ ನನ್ನ ಪ್ರತಿಕ್ರಿಯೆ ಹೀಗಿದೆ: `ಇಂಗ್ಲಿಷ್ ಎಂ.ಎ. ವಿದ್ಯಾರ್ಥಿಗಳಿಗೂ ತಪ್ಪಿಲ್ಲದೆ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ; ಆದಕಾರಣ ಕಲಿಕೆಯ ಮೊದಲ ಹಂತದಿಂದಲೇ ಇಂಗ್ಲಿಷ್ ಕಲಿಸಿದರೆ ಒಳ್ಳೆಯದಿತ್ತು~ ಎಂದು ಲೇಖಕರು ಅಭಿಪ್ರಾಯ ಪಡುತ್ತಾರೆ.  ಕನ್ನಡ ಮಾಧ್ಯಮದಲ್ಲೇ ಓದಿಕೊಂಡು ಬಂದು ಅನಂತರ ಇಂಗ್ಲಿಷ್ ಭಾಷೆಯನ್ನು ಚೆನ್ನಾಗಿ ಕಲಿತು ಯಶಸ್ವಿಯಾದ ಅನೇಕರು ನಮ್ಮ ಮುಂದೆ ಇದ್ದಾರಲ್ಲ.  ನನ್ನ ವೈಯಕ್ತಿಕ ಉದಾಹರಣೆಯನ್ನೆ ತೆಗೆದುಕೊಂಡರೆ ನನ್ನ ಪ್ರಾಥಮಿಕ ಶಿಕ್ಷಣವನ್ನು  ಕನ್ನಡ ಮಾಧ್ಯಮದಲ್ಲೇ ಪೂರೈಸಿ ಹೈದರಾಬಾದ್‌ನಲ್ಲಿ ಪ್ರೌಢಶಿಕ್ಷಣ ಪಡೆಯಬೇಕಾದ ಪ್ರಸಂಗ ಒದಗಿ ಬಂತು. ಆಗ ಸಹ ಹೈದರಾಬಾದ್‌ನಲ್ಲಿದ್ದ ನೃಪತುಂಗ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲೇ ಪ್ರೌಢಶಾಲೆ ವ್ಯಾಸಂಗವನ್ನು ಪೂರೈಸಿದೆ. ಅನಂತರ ವಿಜ್ಞಾನದ ವಿದ್ಯಾರ್ಥಿಯಾದ್ದರಿಂದ ಕಾಲೇಜು ಶಿಕ್ಷಣವನ್ನು ಬೆಂಗಳೂರಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಮುಂದುವರೆಸಬೇಕಾಯ್ತು. ಇಂಗ್ಲಿಷ್ ಮೀಡಿಯಂಗಳಿಂದ ಬಂದಿದ್ದ ನನ್ನ ಸಹಪಾಠಿಗಳು ನನಗಿಂತ ಚೆನ್ನಾಗಿ ಇಂಗ್ಲಿಷ್ ಮಾತನಾಡುತ್ತಾರೆ, ನನಗಿಂತ ಚೆನ್ನಾಗಿ ಗ್ರಹಿಸುತ್ತಾರೆ ಎಂಬ ನನ್ನ ನಂಬಿಕೆ ತರಗತಿಯಲ್ಲಿ ಪಾಠ ಶುರುವಾದ ಕೆಲವೇ ತಿಂಗಳುಗಳಲ್ಲಿ ಹುಸಿಯಾಯಿತು.ಅವರು ಕೆಟ್ಟ ಇಂಗ್ಲಿಷ್ ಮಾತನಾಡುತ್ತಿದ್ದುದಷ್ಟೆ ಅಲ್ಲ ಅವರ ಗ್ರಹಿಕೆಯೂ ದೋಷಪೂರ್ಣವಾಗಿತ್ತು.  ಅವರ ಗ್ರಹಿಕಾ ಕ್ರಮದಲ್ಲಿ ಒಂದು ಅಸಹಜತೆ ಮತ್ತು ನ್ಯೂನತೆ ಎದ್ದು ಕಾಣುತ್ತಿತ್ತು.  ಇದೊಂದು ವಿಶೇಷ ಉದಾಹರಣೆ ಎಂದು ಭಾವಿಸಿದರೂ ನಮ್ಮದಲ್ಲದ ಇಂಗ್ಲಿಷ್ ಸಂಪೂರ್ಣ ಸಂವಹನ ಸಾಧ್ಯವಾದ ಭಾಷೆಯೆಂದು ಅನಿಸುವುದಿಲ್ಲ. ಒಂದು ನಿರ್ದಿಷ್ಟ ಸಾಂಸ್ಕೃತಿಕ ಸಂಬಂಧಗಳ ನಡುವೆ ಹುಟ್ಟುವ ಭಾಷೆ ಆ ಸಂಸ್ಕೃತಿ ಪರಿಸರದಲ್ಲಿ ವಸ್ತು ಸಂಬಂಧವಾಗಿ, ವ್ಯಕ್ತಿ ಸಂಬಂಧವಾಗಿ ಹುಟ್ಟುವ ಭಾವನೆಗಳಿಗೆ ತತ್ಸಮಾನವಾದ ಪದಪುಂಜಗಳನ್ನು ಹೊಂದಿರುತ್ತವೆ.  ಒಂದು ಗಾಢ ಗ್ರಾಮೀಣ ಅನುಭವವನ್ನು ಇಂಗ್ಲಿಷ್ ಭಾಷೆಯಲ್ಲಿ ಪರಿಣಾಮಕಾರಿಯಾಗಿ ಎಲ್ಲರಿಗೂ ಹೇಳಲು ಸಾಧ್ಯವೆ? ಶಿಕ್ಷಣ ಗಾಢ ಅನುಭವದಿಂದ ದೂರ ಸರಿದಷ್ಟು ಭಾಷೆಯ ಪಾತ್ರ ಗೌಣವಾಗುತ್ತ ಹೋಗುತ್ತದೆ. ಇಂಗ್ಲಿಷ್ ಭಾಷೆ ಹುಟ್ಟಿದ್ದು, ಬೆಳೆದದ್ದು ಮರಗಟ್ಟುವ ಚಳಿ ಪ್ರದೇಶದಲ್ಲಿ.  ಈ ವಾತಾವರಣದಲ್ಲಿ ಎದುರಾಗುವ ಸವಾಲುಗಳಿಗನುಗುಣವಾಗಿ ಈ ಭಾಷೆ ಹುಟ್ಟಿದೆ.  ಈ ಪರಕೀಯ ವಾತಾವರಣದ ಜೀವನ ಕ್ರಮಕ್ಕೂ ಮತ್ತು ನಮ್ಮ ಜೀವನ ಕ್ರಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಎಲ್ಲ ರೀತಿಯಲ್ಲೂ ಪರಕೀಯವಾದ ಇಂತಹ ಪರಭಾಷೆಯನ್ನು ಕಲಿಕೆಯ ಮೊದಲ ಹಂತದಿಂದಲೇ ಗ್ರಹಿಕೆಯ ಅಭಿವ್ಯಕ್ತಿಯ ಸಾಧನವಾಗಿ ಬಳಸಿದರೆ ಉಂಟಾಗುವ ಗ್ರಹಿಕೆ ಅಸಹಜವಾಗಿರುತ್ತದೆ.  ಇಂತಹ ಗ್ರಹಿಕೆ ಅಪರಿಪೂರ್ಣವಾಗಿದ್ದು ವ್ಯಕ್ತಿತ್ವದ ಸೃಜನಶೀಲ ಸೆಲೆಯಾಗುವುದು ಅನುಮಾನ.ಹಾಗಾಗಿ ಸಂಶೋಧನೆಗಳು ಏನು ಹೇಳುತ್ತವೆ ಎಂದರೆ  ಮೊದಲ ಹಂತದ ಕಲಿಕೆ ನಿರಂತರವಾಗಿ ಕೆಲವು ವರ್ಷಗಳಾದರೂ ಮಾತೃಭಾಷೆಯಲ್ಲಿರಬೇಕು.  ಹೀಗೆ ಮಾತೃಭಾಷೆಯಲ್ಲಿ ಕಲಿತ ಮಕ್ಕಳು ಮುಂದೆ ಶೈಕ್ಷಣಿಕ ಯಶಸ್ಸನ್ನು ಸಾಧಿಸುತ್ತಾರೆ.   `ಯುನೈಟೆಡ್ ನೇಷನ್ಸ್ ಪರ್ಮನೆಂಟ್ ಫೋರಮ್ ಆನ್ ಇಂಡಿಜಿನಸ್ ಇಶ್ಯೂಸ್~  ಪ್ರಕಟಿಸಿರುವ ತಜ್ಞರ ಲೇಖನಗಳಲ್ಲಿ ಈ ಅಂಶವನ್ನು ಸ್ಪಷ್ಟಪಡಿಸಲಾಗಿದೆ.  ಅನೇಕ ಭಾಷೆಗಳನ್ನು ಕಲಿಯುವ ಮಕ್ಕಳ ಸಾಮರ್ಥ್ಯ  `ಲಿಂಗ್ವಿಸ್ಟಿಕ್ ಪ್ಲಾಸ್ಟಿಸಿಟಿ~ ಯನ್ನು  ಇಂಗ್ಲಿಷ್ ಭಾಷಾ ಕಲಿಕೆಗೆ ಏಕೆ ಅನ್ವಯಿಸಬಾರದು ಎನ್ನುತ್ತಾರೆ ಲೇಖಕರು. ಒಂದು ಭಾಷೆಯ ಕಲಿಕೆಗೆ ವಾತಾವರಣದಲ್ಲಿ ಆ ಭಾಷೆ ಜೀವಂತವಾಗಿರುವುದು ಅಗತ್ಯ.  ಆದರೆ ಇಂಗ್ಲಿಷ್ ಭಾಷೆಯ ವಾತಾವರಣವೇ ಇಲ್ಲದಿರುವಾಗ ಆ ಭಾಷೆಯನ್ನು ಕಲಿಯುವುದು ಹೇಗೆ?  ಬೆರಳೆಣಿಕೆಯ ದೊಡ್ಡ ಪಟ್ಟಣಗಳಲ್ಲಿ ಮಾತ್ರ ಇಂಗ್ಲಿಷ್ ಭಾಷಾ ವಾತಾವರಣವಿದೆ.  ನಮ್ಮ ಇಡೀ ಶೈಕ್ಷಣಿಕ ವ್ಯವಸ್ಥೆ ಪ್ರತಿಷ್ಠಿತ ವರ್ಗದ ಈ ಕೆಲವೇ ಮಂದಿಯನ್ನು ಮೇಲೆತ್ತಲು ಮೀಸಲಾಗಿರಬೇಕೆ? ಲೇಖಕರು ಹೇಳುವ ಮತ್ತೊಂದು ಮಾತು  ಕರ್ನಾಟಕದ ಅರ್ಧಕ್ಕಿಂತ ಹೆಚ್ಚು ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದಾರೆ  ಎಂಬುದು ಒಂದು ತಪ್ಪು ಮಾಹಿತಿ.  ನಿಜ ಹೇಳಬೇಕೆಂದರೆ ಕರ್ನಾಟಕದ ಶೇಕಡ 60ರಷ್ಟು ಮಕ್ಕಳು 10ನೇ ತರಗತಿಗೆ ಬರುವ ಮೊದಲೇ ಶಾಲೆಯನ್ನು ಬಿಟ್ಟಿರುತ್ತಾರೆ.ಈ ಬಹುಸಂಖ್ಯಾತ ಮಕ್ಕಳಿಗೆ ಇಂಗ್ಲಿಷ್ ಭಾಷೆಯಿಂದ ಏನು ಪ್ರಯೋಜನ?  ಹದಗೆಟ್ಟಿರುವ ನಮ್ಮ ಶಾಲೆಗಳ ಸ್ಥಿತಿಗತಿಗಳಿಂದಾಗಿ ಈ ಮಕ್ಕಳಿಗೆ ಕನ್ನಡವನ್ನೂ ಸರಿಯಾಗಿ ಓದಲು ಬರೆಯಲು ಬರುವುದಿಲ್ಲ.  ಸಿ.ಇ.ಟಿ. ಪರೀಕ್ಷೆಯಲ್ಲಿ ರ‌್ಯಾಂಕ್ ಗಳಿಸಿದ ಶೇಕಡ 90 ಭಾಗ ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದಿಂದ ಬಂದವರು ಎಂದು ಲೇಖಕರು ಹೇಳುತ್ತಾರೆ. ಪ್ರಶ್ನೆ ಏನೆಂದರೆ ಒಂದು ವೇಳೆ ಈ ಮಕ್ಕಳು ಉತ್ತಮ ಗುಣಮಟ್ಟದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ್ದರೆ ಹೀಗೆ ರ‌್ಯಾಂಕ್ ಗಳಿಸುತ್ತಿರಲಿಲ್ಲವೆ? ಗಳಿಸಲಾಗುವುದಿಲ್ಲ ಎಂದು ಹೇಳುವುದಾದರೆ ಅದಕ್ಕೆ ಆಧಾರವೇನು?  ಸಾಮಾನ್ಯವಾದ ನಂಬಿಕೆಯಂತೆ ಈ ಮಕ್ಕಳೂ ಇಂಗ್ಲಿಷ್ ಮಾಧ್ಯಮವನ್ನು ಆರಿಸಿಕೊಂಡರು ಅಷ್ಟೆ.ಇವರ ಸಾಮರ್ಥ್ಯ ಕನ್ನಡ ಮಾಧ್ಯಮದಲ್ಲಿ ಕಲಿತಿದ್ದರೆ ಕಡಿಮೆಯಾಗುತ್ತಿರಲಿಲ್ಲ ಅಥವಾ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತಾಕ್ಷಣ ಹೆಚ್ಚಾಗುವುದೂ ಇಲ್ಲ.  ಈಗ ಮತ್ತೊಂದು ಅಂಶವನ್ನು ಗಮನಿಸೋಣ.  ಹೀಗೆ ಸಿ.ಇ.ಟಿ. ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ನಮ್ಮ ಕರ್ನಾಟಕದ ಮಕ್ಕಳ ಸಂಖ್ಯೆಯಲ್ಲಿ ಎಷ್ಟು ಭಾಗ? ಅಂಕಿ ಅಂಶಗಳ ಪ್ರಕಾರ ಪ್ರಾಥಮಿಕ ಹಂತದಲ್ಲಿ ದಾಖಲಾದ ಸಾವಿರ ವಿದ್ಯಾರ್ಥಿಗಳಲ್ಲಿ 10ನೇ ತರಗತಿ ಪಾಸಾಗುವವರು ಕೇವಲ 300.  ಇವರಲ್ಲಿ ಪಿ.ಯು.ಸಿ. ಮೆಟ್ಟಿಲು ಹತ್ತುವವರು ಕೇವಲ 15, ಮತ್ತು ವಿಜ್ಞಾನ ಆಯ್ಕೆ ಮಾಡಿಕೊಂಡು ಸಿ.ಇ.ಟಿ. ಬರೆಯುವವರು ಕೇವಲ ಮೂರು ಮಂದಿ ಮಾತ್ರ. ಸಾವಿರ ವಿದ್ಯಾರ್ಥಿಗಳಲ್ಲಿ ಈ ಮೂರು ಮಕ್ಕಳಿಗೆ ಇಂಗ್ಲಿಷ್ ಭಾಷೆಯ ನಿಜವಾದ ಅವಶ್ಯಕತೆ ಇದೆ.  ಈ ಮೂರು ಮಕ್ಕಳ ಅವಶ್ಯಕತೆಯನ್ನು ಸಾವಿರ ಮಕ್ಕಳ ಮೇಲೆ ಬಲವಂತವಾಗಿ ಹೇರುವುದಾದರೂ ಏಕೆ?  ಕನ್ನಡ ಸಾಹಿತಿಗಳ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುತ್ತಿದ್ದಾರೆ ಎಂಬುದು ಸತ್ಯವಿರಬಹುದು ಆದರೆ ಅದು ಇಂಗ್ಲಿಷ್ ಮಾಧ್ಯಮಕ್ಕೆ ಸಮರ್ಥನೆ ಯಾಗುವುದಿಲ್ಲ.ಲೇಖಕರು ಹೇಳುವಂತೆ ಉರ್ದು ಮಾಧ್ಯಮದಲ್ಲಿ ಓದುತ್ತಿರುವ ಮುಸ್ಲಿಂ ಮಕ್ಕಳಿಗೆ ನಮ್ಮ ಅಸಮರ್ಪಕ ಶಾಲಾ ವ್ಯವಸ್ಥೆಯಿಂದಾಗಿ ಬಹಳ ಅನ್ಯಾಯವಾಗಿದೆ.  ಆದರೆ ಇದರ ಪರಿಹಾರಕ್ಕೆ ಕೂಡ ಇಂಗ್ಲಿಷ್ ಅನ್ನು ಎಳೆದು ತರಬೇಕಾಗಿಲ್ಲ. ಹೆಚ್ಚು ಉರ್ದು ಮಾಧ್ಯಮ ಶಾಲೆಗಳ ಅಗತ್ಯವಿದೆ. ಇಂಗ್ಲಿಷ್ ಶಿಕ್ಷಣ ಮುಖ್ಯವಾಹಿನಿಯಲ್ಲಿ ಹೇಗೆ ಅಸಮಾನತೆಗೆ ಕಾರಣವಾಗಿದೆಯೋ ಹಾಗೆ ಮುಸ್ಲಿಂ ಸಮುದಾಯವನ್ನು ಮತ್ತಷ್ಟು ಒಡೆದು ಹೋಳು ಮಾಡುವುದರಲ್ಲಿ ಅನುಮಾನವಿಲ್ಲ. ಮಾತೃಭಾಷಾ ಶಿಕ್ಷಣದಲ್ಲೆೀ ನಾವು ಸಾಧ್ಯವಿರುವ ಎಲ್ಲಾ ಪರಿಹಾರಗಳನ್ನೂ ಹುಡುಕಬೇಕು.  ಸಾರಾಸಗಟಾಗಿ ಇಂಗ್ಲಿಷ್ ಬೇಡವೆಂದು ಯಾರೂ ಹೇಳುತ್ತಿಲ್ಲ.  ಇಂಗ್ಲಿಷ್ ಒಂದು ಭಾಷೆಯಾಗಿ ನಮಗೆ ಬೇಕು, ಆದರೆ ಮಾಧ್ಯಮವಾಗಿ ಅಲ್ಲ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.