ಸೋಮವಾರ, ಮೇ 10, 2021
25 °C

ಇಂಗ್ಲೆಂಡ್ ಮಾಧ್ಯಮಗಳ ನಮನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಪಟೌಡಿ ಅದ್ಭುತ ಆಟವನ್ನು ಸ್ಮರಿಸಿರುವ ಇಂಗ್ಲೆಂಡ್ ಮಾಧ್ಯಮಗಳು ನುಡಿ ನಮನ ಸಲ್ಲಿಸಿವೆ. ಭಾರತ ತಂಡವನ್ನು ಮುನ್ನಡೆಸಿದ ನಾಯಕರಲ್ಲಿ ಅತ್ಯಂತ ಸ್ನೇಹಯುತ ಗುಣವನ್ನು ಹೊಂದಿದವರು `ಟೈಗರ್~ ಎಂದು ಕೂಡ ಬಣ್ಣಿಸಲಾಗಿದೆ.ತಮ್ಮ ಕಾಲದ ಪ್ರಭಾವಿ ಬ್ಯಾಟ್ಸ್‌ಮನ್ ಎನಿಸಿದ್ದ ಮನ್ಸೂರ್ ಅಲಿ ಖಾನ್ ಅಪಘಾತದಲ್ಲಿ ಒಂದು ಕಣ್ಣು ಕಳೆದುಕೊಂಡಿದ್ದರೂ ಬ್ಯಾಟಿಂಗ್ ಮಾಡುತ್ತಿದ್ದ ರೀತಿಯು ಬೆರಗು ಮೂಡಿಸುವಂಥದ್ದು. ಪ್ರಭಾವಿ ವೇಗಿಗಳಿದ್ದ ಕಾಲದಲ್ಲಿ ಎರಡೂ ಕಣ್ಣು ಸ್ಪಷ್ಟವಾಗಿ ಕಾಣಿಸುತ್ತಿದ್ದವರೇ ಆಡುವುದು ಕಷ್ಟವಾಗಿತ್ತು. ಅಂಥದರಲ್ಲಿ ಬಲಗಣ್ಣು ಕಾಣಿಸದಿದ್ದರೂ ಚೆಂಡನ್ನು ನಿರ್ದಯವಾಗಿ ದಂಡಿಸಿದ್ದ ಕ್ಷಣಗಳು ಇನ್ನೂ ನೆನಪಿನ ಪುಟಗಳಲ್ಲಿ ಗಟ್ಟಿಯಾಗಿವೆ ಎಂದು ಕೆಲವು ಹಿರಿಯ ಕ್ರಿಕೆಟ್ ವರದಿಗಾರರು ಬರೆದಿದ್ದಾರೆ.`ವಿಧಿ ಒಬ್ಬ ವಿಶಿಷ್ಟ ವ್ಯಕ್ತಿತ್ವದ ಕ್ರಿಕೆಟಿಗನನ್ನು ಕಿತ್ತುಕೊಂಡಿದೆ. ಪಟೌಡಿ ಒಬ್ಬ ಕ್ರಿಕೆಟಿಗ ಮಾತ್ರವಲ್ಲ ಅವರು ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ನಾಯಕ ಕೂಡ ಎನಿಸಿದ್ದರು. ಒಂದೇ ಕಣ್ಣಿನಿಂದ ಚೆಂಡನ್ನು ನೋಡಿ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದ್ದ ಮಾಜಿ ಆಟಗಾರ ಈಗ ಕಣ್ಮರೆ~ ಎಂದು ಇಲ್ಲಿನ ಪ್ರಮುಖ ಪತ್ರಿಕೆಯಾದ ಡೇಲಿ ಟೆಲಿಗ್ರಾಫ್ ಪ್ರಕಟಿಸಿದೆ.`ಅಂಕಿ-ಅಂಶಗಳಿಂದ ಮಾತ್ರ ಸಾಮರ್ಥ್ಯ ನೋಡಬಾರದು. ನಾಯಕರಾಗಿ ಅವರು ತಮ್ಮ ಆಟಗಾರರಲ್ಲಿ ವಿಶ್ವಾಸ ತುಂಬಿದ್ದು ಮೆಚ್ಚುಗೆಗೆ ಅರ್ಹ. ಟೆಸ್ಟ್‌ನಲ್ಲಿ ಭಾರತವನ್ನು ಯಶಸ್ಸಿನ ಹಾದಿಯಲ್ಲಿ ನಡೆಸಿದ್ದನ್ನು ಕೂಡ ಮರೆಯಲಾಗದು~ ಎಂದು ದಿ ಟೈಮ್ಸ ವರದಿ ಮಾಡಿದೆ.`ಸ್ಪಿನ್ ಬೌಲರ್‌ಗಳನ್ನು ಟೆಸ್ಟ್‌ನಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದು ಪಟೌಡಿ ಮಾತ್ರ. ಅವರು ಸ್ಪಿನ್ ದಾಳಿಯ ಬಗ್ಗೆ ಹೊಂದಿದ್ದ ವಿಶ್ವಾಸ ಅಪಾರ. ಮೂವರು ಪರಿಣತ ಸ್ಪಿನ್ನರ್‌ಗಳಿಗೆ ಆಡುವ ಹನ್ನೊಂದರ ಪಟ್ಟಿಯಲ್ಲಿ ಸ್ಥಾನ ನೀಡಿದ್ದ ಪಂದ್ಯಗಳೇ ಈ ಅಭಿಪ್ರಾಯಕ್ಕೆ ಸಾಕ್ಷಿ~ ಎಂದು ಕೂಡ ವಿವರಿಸಲಾಗಿದೆ.ಐಒಎ ಸಂತಾಪ (ನವದೆಹಲಿ ವರದಿ): `ಮಾದರಿಯಾಗುವಂಥ ಕ್ರೀಡಾಪಟು ಹಾಗೂ ಮಾನವೀಯ ಗುಣದ ವ್ಯಕ್ತಿಯನ್ನು ಕಳೆದುಕೊಂಡಿದ್ದೇವೆ~ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಪ್ರಧಾನ ಕಾರ್ಯದರ್ಶಿ ರಣಧೀರ್ ಸಿಂಗ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ. `ಪಟೌಡಿ ನಮ್ಮಿಂದ ದೂರವಾಗಿದ್ದರೂ ನಮ್ಮೆಲ್ಲರ ಮನಗಳಲ್ಲಿ ಸದಾ ನೆಲೆಸಿರುತ್ತಾರೆ~ ಎಂದು ಹೇಳಿದ್ದಾರೆ.ಹಾಕಿ ಕ್ರೀಡೆಗೆ ಪ್ರೋತ್ಸಾಹ ನೀಡಿದ್ದ ಪಟೌಡಿ (ಭೋಪಾಲ್ ವರದಿ): ತಾವು ಕ್ರಿಕೆಟ್ ಆಟಗಾರರಾಗಿದ್ದರೂ ಮನ್ಸೂರ್ ಅಲಿ ಖಾನ್ ಪಟೌಡಿ ಅವರು ಹಾಕಿ ಕ್ರೀಡೆಗೆ ಅಪಾರ ಪ್ರೋತ್ಸಾಹ ನೀಡಿದ್ದರು!ಹೌದು; ಇದು ನಿಜ. ಭೋಪಾಲ್ ಜಿಲ್ಲೆಯೊಂದಿಗೆ ನಿಕಟ ನಂಟು ಹೊಂದಿದ್ದ ಅವರು ಇಲ್ಲಿ ಹಾಕಿ ಹಾಗೂ ಕ್ರಿಕೆಟ್ ಆಟಕ್ಕೆ ಅಗತ್ಯವಿದ್ದ ನೆರವನ್ನು ಕಲ್ಪಿಸಲು ಸಾಕಷ್ಟು ಶ್ರಮಿಸಿದ್ದರೆಂದು ಇಲ್ಲಿನ ಕ್ರೀಡಾ ಪ್ರಿಯರು ಸ್ಮರಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.