ಮಂಗಳವಾರ, ಜನವರಿ 28, 2020
29 °C

ಇಂತಹ ‘ಗ್ರಾಮ ಸ್ಪಂದನ’ ಬೇಕಿಲ್ಲ

ನವೀನ್ ಶೆಟ್ಟಿ,ಕಲ್ಲಡ್ಕ,ಬಂಟ್ವಾಳ ತಾಲ್ಲೂಕು Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ  ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲು ಗ್ರಾಮದಲ್ಲಿ ಮೊದಲ ಬಾರಿಗೆ ‘ಗ್ರಾಮ ಸ್ಪಂದನ’ ಸರ್ಕಾರಿ ಕಾರ್ಯಕ್ರಮವನ್ನು ಡಿ.೯ ರಂದು ಆಯೋಜಿಸಲಾಗಿತ್ತು.  ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು  ಸಚಿವರ ಗಮನಕ್ಕೆ ತರುವ ಕಾತರದಿಂದ ಇದ್ದರು.ವಿಶೇಷವಾಗಿ ವೃದ್ಧಾಪ್ಯ, ವಿಧವಾ, ಸಂಧ್ಯಾ ಸುರಕ್ಷಾ, ವಿಕಲಾಂಗ ಪಿಂಚಣಿ ದೊರೆಯದ ಬಗ್ಗೆ ಹಲವು ಅಸಹಾಯಕರು ಹಾಗೂ ಹಾಸನ-ಬಿ.ಸಿ. ರಸ್ತೆ ಚತುಷ್ಪಥದಿಂದ ಮನೆ ಹಾಗೂ ಜೀವನಕ್ಕೆ ಆಧಾರವಾಗಿದ್ದ ಅಂಗಡಿ ಮುಂಗಟ್ಟುಗಳನ್ನು ಕಳೆದುಕೊಂಡು ಸಂತ್ರಸ್ತರಾಗುವವರು ಸಚಿವರಿಗೆ ಮನವಿ ಸಲ್ಲಿಸಲು ಕಾಯುತ್ತಿದ್ದರು.ಮೊದಲೇ ಸಮಯ ಮೀರಿ ಬಂದ ಸಚಿವರು ತಮ್ಮ ಹಿಂಬಾಲಕರೊಂದಿಗೆ ಒಂದಿಷ್ಟು ಹೊತ್ತು ಕುಶಲೋಪರಿ ನಡೆಸಿ ೧೫ ನಿಮಿಷದಷ್ಟು ಕಾಲ ತಮ್ಮ ಸಾಧನೆಯ ಬಗ್ಗೆ ಪುಂಖಾನು-ಪುಂಖವಾಗಿ ಭಾಷಣ ಬಿತ್ತರಿಸಿದರು. ಅನಂತರ ‘ನನಗೆ ಮಡಿಕೇರಿಗೆ ಹೋಗಲು ಇರುವುದರಿಂದ ಬೇಗನೇ ಮನವಿ ಸಲ್ಲಿಸಿ’ ಎಂದರು.ಇದರಿಂದ ಒಮ್ಮೆಲೇ ಇದ್ದ ಬಿದ್ದವರೆಲ್ಲಾ ಸಚಿವರಿಗೆ ಮನವಿ ಸಲ್ಲಿಸಲು ಪ್ರಯತ್ನಿಸಿದ್ದರಿಂದ ನೂಕುನುಗ್ಗಲು ಸಂಭವಿಸಿತು. ಆಗ ವೃದ್ಧರು ಹಾಗೂ ವಿಕಲಾಂಗರ ಸ್ಥಿತಿ  ಶೋಚನೀಯವಾಗಿತ್ತು. ಕೇವಲ ಅರ್ಧ ಗಂಟೆಯೊಳಗೆ ‘ಗ್ರಾಮಸ್ಪಂದನ’ ಎಂಬ ಹರಕೆ ತೀರಿಸಿ ಸಚಿವರು ಅಲ್ಲಿಂದ ಕಾಲ್ಕಿತ್ತರು. ರಾಜ್ಯದ ಮುಖ್ಯಮಂತ್ರಿ ರಾಜಧಾನಿಯಲ್ಲಿ ಜನಸಂಪರ್ಕ ಸಭೆ ನಡೆಸಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿದರೆ, ನೆರೆಯ ರಾಜ್ಯದ ಮುಖ್ಯಮಂತ್ರಿ ಕಾಸರಗೋಡಿನಲ್ಲಿ ಎರಡು ವಾರಗಳ ಹಿಂದೆ ಒಂದು ದಿನ ಪೂರ್ತಿ ಜನರೊಂದಿಗೆ ಬೆರೆತು ಸಮಸ್ಯೆ ಆಲಿಸಿ ಪರಿಹಾರಕ್ಕೆ ಪ್ರಯತ್ನಿಸಿದರು.ಆದರೆ ಇಲ್ಲಿ ತಮಗೆ ನೇರ ಮತ ನೀಡಿದ ಕ್ಷೇತ್ರದ ಮತದಾರರೊಂದಿಗೆ ಒಂದೆರಡು ಗಂಟೆ ಕಾಲ ಬೆರೆತು ಸಮಸ್ಯೆ ಆಲಿಸಲು ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಾಧ್ಯವಾಗದೇ ಇರುವುದು ದುರದೃಷ್ಟಕರ. ಅವರ ಈ ರೀತಿಯ ಕಾರ್ಯವೈಖರಿಯನ್ನು ನೋಡಿದ ಯುವ ಜನತೆ ಖಂಡಿತ ಆಮ್‌ ಆದ್ಮಿಯಂತಹ ಪಕ್ಷಕ್ಕೆ ಹರಸುತ್ತಾರೆ. ಇಂತಹ ವ್ಯಕ್ತಿಗಳನ್ನು ಮತ್ತೊಮ್ಮೆ ಚುನಾಯಿಸುವ ದುಸ್ಸಾಹಸಕ್ಕೆ ಹೋಗುವುದಿಲ್ಲ.

ಪ್ರತಿಕ್ರಿಯಿಸಿ (+)