ಸೋಮವಾರ, ಜೂನ್ 21, 2021
21 °C

ಇಂದು ಕೇಂದ್ರ ಬಜೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಲೋಕಸಭೆಯಲ್ಲಿ ಶುಕ್ರವಾರ ಮಂಡನೆಯಾಗಲಿರುವ ಸಾಮಾನ್ಯ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ಕನಿಷ್ಠ ಎರಡು ಲಕ್ಷ ರೂಪಾಯಿಗೆ ಹೆಚ್ಚಿಸುವ ನಿರೀಕ್ಷೆ ಇದೆ.

ಹೀಗಾಗಿ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಮಂಡಿಸಲಿರುವ ಈ ಬಜೆಟ್‌ನಿಂದ ಸ್ವಲ್ಪ ಮಟ್ಟಿಗೆ ತಮ್ಮ ಹೊರೆ ಕಡಿಮೆಯಾಗಬಹುದೆಂಬುದು ತೆರಿಗೆದಾರರ ನಿರೀಕ್ಷೆಯಾಗಿದೆ.

ಸಂಸತ್ತಿನ ಸ್ಥಾಯಿ ಸಮಿತಿಯು ಆದಾಯ ತೆರಿಗೆ ವಿನಾಯಿತಿಯನ್ನು ಮೂರು ಲಕ್ಷ ರೂಪಾಯಿಗೆ ಹೆಚ್ಚಿಸುವಂತೆ ಸಲಹೆ ಮಾಡಿದ್ದರೂ, ಹಣ ಸಂಪನ್ಮೂಲದ ಕೊರತೆ ನಿಯಂತ್ರಿಸುವ ಉದ್ದೇಶ ಹೊಂದಿರುವ ಪ್ರಣವ್ ಮುಖರ್ಜಿ ಅದಕ್ಕೆ ಒಪ್ಪಿಕೊಳ್ಳುವ ಸಾಧ್ಯತೆ ಕಡಿಮೆ. ಅಂತಿಮವಾಗಿ ಅವರು ಈ ಮಿತಿಯನ್ನು 2 ಲಕ್ಷ ರೂಪಾಯಿಗೆ ಸೀಮಿತಗೊಳಿಸಬಹುದು ಎನ್ನಲಾಗಿದೆ.

ಶೇ 10ರಷ್ಟು ತೆರಿಗೆ, ಶೇ 20ರಷ್ಟು ತೆರಿಗೆ ಹಾಗೂ ಶೇ 30ರಷ್ಟು ತೆರಿಗೆ ಪಾವತಿಗೆ ನಿಗದಿ ಮಾಡಿರುವ ಮಿತಿಯಲ್ಲೂ ಸಚಿವರು ಅಲ್ಪಮಟ್ಟಿನ ಸಡಿಲಿಕೆ ತೋರುವ ಸಾಧ್ಯತೆ ಇದೆ. ನೇರ ತೆರಿಗೆ ಸಂಹಿತೆ ಮಸೂದೆಯಲ್ಲೂ ಈ ಕುರಿತು ಪ್ರಸ್ತಾಪಿಸಲಾಗಿತ್ತು.

ಒಂದೆಡೆ ಹಣದುಬ್ಬರದ ಒತ್ತಡ, ಮತ್ತೊಂದೆಡೆ ಹೆಚ್ಚುತ್ತಿರುವ ಆರ್ಥಿಕ ಕೊರತೆ, ಇವುಗಳ ಜತೆಗೆ ತೈಲ ಬೆಲೆ ಏರಿಕೆ ಹೊಡೆತ ನೀಡುತ್ತಿರುವ ಸಂದರ್ಭದಲ್ಲೇ ಈ ಬಜೆಟ್‌ನೊಂದಿಗೆ 12ನೇ ಪಂಚವಾರ್ಷಿಕ ಯೋಜನೆಗೆ (2012-17) ಕೂಡ ಚಾಲನೆ ದೊರೆಯಲಿದೆ.

ಆದಾಯ ತೆರಿಗೆ ಮಸೂದೆ-1961ಕ್ಕೆ ಬದಲಾಗಿ ನೇರ ತೆರಿಗೆ ಸಂಹಿತೆ ಮಸೂದೆಯು 2013-14ರಿಂದ ಜಾರಿಯಾಗಲಿದ್ದು, ಈ ಕುರಿತು ಬಜೆಟ್ ಭಾಷಣದಲ್ಲಿ ಅಧಿಕೃತವಾಗಿ ಘೋಷಣೆ ಹೊರಬೀಳಲಿದೆ ಎಂದೂ ಮೂಲಗಳು ತಿಳಿಸಿವೆ.

ಈ ಬಜೆಟ್ ಕೂಡ ಜನಪ್ರಿಯತೆಯ ಜಾಡಿನಲ್ಲೇ ಸಾಗುವ ಲಕ್ಷಣಗಳಿದ್ದರೂ ತೆರಿಗೆ ವಂಚನೆ ತಡೆಯಲು ಹಾಗೂ ಕಪ್ಪುಹಣ ಸೃಷ್ಟಿಗೆ ಕಡಿವಾಣ ಹಾಕಲು ಕಠಿಣ ಕ್ರಮಗಳು ಪ್ರಕಟವಾಗುವ ಮಾತುಗಳು ಕೇಳಿಬಂದಿವೆ.

ಬಹು ಬ್ರಾಂಡ್ ಚಿಲ್ಲರೆ ಮಾರಾಟ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹಾಗೂ ವಿಮಾ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆಗೆ ಸಂಬಂಧಿಸಿದಂತೆ ಇನ್ನಷ್ಟು ಸುಧಾರಣೆಗಳನ್ನು ತರಬೇಕೆಂದು ಸರ್ಕಾರದ ನೇತೃತ್ವ ವಹಿಸಿರುವ ಕಾಂಗ್ರೆಸ್ ಈ ಮುನ್ನ ತವಕಿಸಿತ್ತು. ಆದರೆ ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗಳಲ್ಲಿ  ಹಿನ್ನಡೆಯಾಗಿರುವುದರಿಂದ ಕಾಂಗ್ರೆಸ್ ಈ ವಿಷಯಗಳಲ್ಲಿ ನಿಧಾನದ ಹೆಜ್ಜೆ ಇಡಲು ನಿರ್ಧರಿಸಿದೆ ಎಂಬುದು ತಜ್ಞರ ವಿಶ್ಲೇಷಣೆ.

ಸಂಪನ್ಮೂಲ ಕ್ರೋಡೀಕರಿಸಲು ಐಷಾರಾಮಿ ವಸ್ತುಗಳ ಮೇಲೆ ಸರ್ಕಾರ ಕಣ್ಣು ಹಾಕಿರುವುದರಿಂದ ಕಾರುಗಳ ಖರೀದಿ ಮೇಲಿನ ತೆರಿಗೆ ಹೆಚ್ಚಾಗಬಹುದು. ಹೀಗಾಗಿ ಕಾರು ಕೊಳ್ಳುವ ಆಸೆಯುಳ್ಳವರಿಗೆ ಈ ಬಜೆಟ್ ತಣ್ಣೀರೆರಚಬಹುದು.

ಕಳೆದ ಎರಡು ವರ್ಷಗಳಲ್ಲಿ ಶೇ 8.4ರಷ್ಟಿದ್ದ ಆರ್ಥಿಕ ಬೆಳವಣಿಗೆ ಪ್ರಸಕ್ತ ವರ್ಷ ಶೇ 6.9ರಷ್ಟಕ್ಕೆ ಇಳಿಯುವ ಅಂದಾಜಿದೆ. ಈ ಬೆಳವಣಿಗೆ ಮತ್ತಷ್ಟು ಕುಸಿಯದಂತೆ ಕ್ರಮ ಕೈಗೊಳ್ಳುವುದು ಸಚಿವ ಪ್ರಣವ್‌ಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿಬಹುದು.

ಸರ್ಕಾರವು ಪ್ರಸ್ತುತ ವರ್ಷ ಆರ್ಥಿಕ ಕೊರತೆಯನ್ನು ಶೇ 4.6ರಷ್ಟು ಇಳಿಸುವ ಗುರಿ ಹಾಕಿಕೊಂಡಿತ್ತು. ಆದರೆ ಸಬ್ಸಿಡಿ ಮೊತ್ತದಲ್ಲಿ ಆಗಿರುವ ಹೆಚ್ಚಳ ಹಾಗೂ ಷೇರು ವಿಕ್ರಯದಿಂದ ಕಡಿಮೆ ಮೊತ್ತ ಸಂಗ್ರಹವಾದ ಹಿನ್ನೆಲೆಯಲ್ಲಿ ಈ ಗುರಿ ಸಾಧನೆಯಾಗುವ ಸಾಧ್ಯತೆ ಕ್ಷೀಣವಾಗಿದೆ.

ಸರ್ಕಾರ ಪ್ರಸಕ್ತ ಸಾಲಿನಲ್ಲಿ ಷೇರುಗಳ ವಿಕ್ರಯದಿಂದ 40,000 ಕೋಟಿ ರೂಪಾಯಿ ಸಂಗ್ರಹಿಸುವ ಗುರಿ ಹೊಂದಿತ್ತು. ಆದರೆ ಈವರೆಗೆ ಕೇವಲ 14,000 ಕೋಟಿ ರೂಪಾಯಿ ಸಂಗ್ರಹವಾಗಿರುವುದು ಸರ್ಕಾರದ ಚಿಂತೆಯನ್ನು ಹೆಚ್ಚಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.