ಸೋಮವಾರ, ಮೇ 25, 2020
27 °C

ಇಂದು ಜೆಡಿಎಸ್ ಅಧಿವೇಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೆಡಿಎಸ್‌ನ ನೂತನ ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಯಲ್ಲಿ 16 ರಾಜ್ಯಗಳು ಹಾಲಿ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಹೆಸರನ್ನು ಸೂಚಿಸಿದ್ದು, ಬೇರೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ ಎಂದು ಪಕ್ಷದ ಮಹಾ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ ತಿಳಿಸಿದರು.

ಬುಧವಾರ ನಗರದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗುರುವಾರ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಮತ್ತು ಕಾರ್ಯಕಾರಿ ಸಮಿತಿಯ 74 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ’ ಎಂದರು.

ಗುರುವಾರ ಮಧ್ಯಾಹ್ನ ನಗರದ ಅರಮನೆ ಮೈದಾನದಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಮಹಾಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಮೂರು ನಿರ್ಣಯಗಳನ್ನು ಪಕ್ಷ ಸ್ವೀಕರಿಸಲಿದೆ. ರಾಜಕೀಯ, ಸಾಮಾಜಿಕ-ಆರ್ಥಿಕ ಮತ್ತು ಕರ್ನಾಟಕದ ಸದ್ಯದ ರಾಜಕೀಯ ಸ್ಥಿತಿ ಕುರಿತು ನಿರ್ಣಯಗಳನ್ನು ಅಂಗೀಕರಿಸಲಾಗುವುದು ಎಂದು ಹೇಳಿದರು.

‘ರಾಜ್ಯದ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಜೆಡಿಎಸ್ ಆರಂಭಿಸಿರುವ ಹೋರಾಟ ಮುಂದುವರಿಯಲಿದೆ. ಈ ಹೋರಾಟಕ್ಕೆ ತಾರ್ಕಿಕ ಅಂತ್ಯ ದೊರೆಯಬೇಕು ಎಂಬುದು ನಮ್ಮ ಆಶಯ. ಈ ಬಗ್ಗೆಯೂ ಪಕ್ಷದ ಮಹಾಧಿವೇಶನದಲ್ಲಿ ಚರ್ಚೆ ನಡೆಯಲಿದೆ’ ಎಂದರು.

ಪಕ್ಷದ ಆಂತರಿಕ ಸಂವಿಧಾನಕ್ಕೆ ಕೆಲವು ತಿದ್ದುಪಡಿಗಳನ್ನು ತರಲು ನಿರ್ಧರಿಸಿದ್ದು, ಈ ಪ್ರಸ್ತಾವಕ್ಕೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಒಪ್ಪಿಗೆ ಪಡೆಯಲಾಗುವುದು. ಸ್ಥಳೀಯ ಸಂಸ್ಥೆಗಳಲ್ಲಿ ವಿಪ್ ಜಾರಿ, ಪಕ್ಷದ ಪ್ರಾಥಮಿಕ ಸದಸ್ಯತ್ವ ಶುಲ್ಕವನ್ನು ಎರಡು ರೂಪಾಯಿಯಿಂದ ರೂ 5ಕ್ಕೆ ಹೆಚ್ಚಿಸುವ ಸಂಬಂಧ ಪಕ್ಷದ ಸಂವಿಧಾನಕ್ಕೆ ತಿದ್ದುಪಡಿ ತರಲಾಗುವುದು ಎಂದು ಹೇಳಿದರು.

ಬುಧವಾರ ರಾತ್ರಿ ನಡೆದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.