ಗುರುವಾರ , ಏಪ್ರಿಲ್ 22, 2021
22 °C

ಇಂದು ಬೆಳಗಾವಿ, ನಿಪ್ಪಾಣಿ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಶನಿವಾರ ನಿಧನರಾದ ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಗೌರವಾರ್ಥ ಇದೇ 18ರಂದು (ಭಾನುವಾರ) ಬೆಳಗಾವಿ ಹಾಗೂ ನಿಪ್ಪಾಣಿ ಬಂದ್‌ಗೆ ಶಿವಸೇನೆ ಕರೆ ನೀಡಿದೆ.ಬೆಳಗಾವಿ ಬಂದ್‌ಗೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಸೇರಿದಂತೆ ಮರಾಠಿ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಬಿಜೆಪಿ ಹಾಗೂ ಶಿವಸೇನೆ ಸಂಯುಕ್ತವಾಗಿ ನಿಪ್ಪಾಣಿ ಬಂದ್‌ಗೆ ಕರೆ ನೀಡಿದ್ದು, ಮರಾಠಿ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.`ಒತ್ತಾಯದಿಂದ ಬಂದ್ ಮಾಡುವುದಿಲ್ಲ. ನಿಧನರಾದ ಠಾಕ್ರೆ ಅವರ ಗೌರವಾರ್ಥ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕು. ಶಾಂತಿಗೆ ಭಂಗ ತರುವ ಕೆಲಸ ಮಾಡಬಾರದು~ ಎಂದು ಎಂಇಎಸ್ ಮುಖಂಡ ಹಾಗೂ ಮಾಜಿ ಶಾಸಕ ಮನೋಹರ ಕಿಣೇಕರ ಹೇಳಿದ್ದಾರೆ.ಠಾಕ್ರೆ ನಿಧನದ ಸುದ್ದಿ ಹರಡುತ್ತಿದ್ದಂತೆಯೇ ನಿಪ್ಪಾಣಿ ಬಸ್ ನಿಲ್ದಾಣದ ಸಮೀಪ ಹಾಗೂ ಬೆಳಗಾವಿ ನಾಕಾ ಹತ್ತಿರ ಕೆಲವು ಅಂಗಡಿಗಳನ್ನು ಮುಚ್ಚಿಸಲಾಯಿತಾದರೂ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.10 ಮಂದಿ ಬಂಧನ:
`ಠಾಕ್ರೆ ಅವರಿಗೆ ಗೌರವ ಸಲ್ಲಿಸಲು ಬೆಳಗಾವಿಯಲ್ಲಿ ಒತ್ತಾಯದಿಂದ ಅಂಗಡಿಗಳನ್ನು ಬಂದ್ ಮಾಡಿಸಲು ಯತ್ನಿಸಿದ 10 ಮಂದಿಯನ್ನು ಬಂಧಿಸಲಾಗಿದೆ. ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ಗಡಿ ಭಾಗದಲ್ಲಿ ನಾಕಾಬಂದಿ ಮಾಡಲಾಗಿದೆ. ರಾಜ್ಯ ಮೀಸಲು ಪೊಲೀಸ್ ಪಡೆಯ ನಾಲ್ಕು, ಜಿಲ್ಲಾ ಸಶಸ್ತ್ರ ಪಡೆಯ 10 ತುಕಡಿಗಳನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ~ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ ಪಾಟೀಲ `ಪ್ರಜಾವಾಣಿ~ಗೆ ತಿಳಿಸಿದರು.ಬಸ್ ಸಂಚಾರಕ್ಕೆ ತೊಂದರೆಯಿಲ್ಲ : ಮಹಾರಾಷ್ಟ್ರದ ಬಹುತೇಕ ನಗರಗಳಲ್ಲಿ ಬಂದ್ ವಾತಾವರಣವಿದ್ದರೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಸಂಚಾರಕ್ಕೆ ಯಾವುದೇ ತೊಂದರೆಯಾಗಿಲ್ಲ. ಗಲಾಟೆ ಸಂಭವಿಸಿದರೆ ಬಸ್ ಸಂಚಾರವನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ~ ಎಂದು ವಾಯವ್ಯ ರಸ್ತೆ ಸಾರಿಗೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎಸ್.ಆರ್.ನಮಾಜಿ ಹಾಗೂ ಚಿಕ್ಕೋಡಿ ವಿಭಾಗೀಯ ನಿಯಂತ್ರಣಾಧಿಕಾರಿ ಶಾಂತಪ್ಪ `ಪ್ರಜಾವಾಣಿ~ಗೆ ತಿಳಿಸಿದರು.ವಿಜಾಪುರ ವರದಿ:
`ಬಾಳಾ ಠಾಕ್ರೆ ನಿಧನ ಜಿಲ್ಲೆಯ ಜನಜೀವನದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕರ್ನಾಟಕ- ಮಹಾರಾಷ್ಟ್ರದ ಮಧ್ಯೆ ವಾಹನ ಸಂಚಾರ ಸಹಜವಾಗಿದೆ. ಆದರೂ, ನಗರದಲ್ಲಿ ಮರಾಠ ಸಮಾಜ ಹೆಚ್ಚಿರುವ ಪ್ರದೇಶಗಳಲ್ಲಿ ನಿಗಾ ವಹಿಸಿದ್ದೇವೆ~ ಎಂದು ಹೆಚ್ಚುವರಿ ಎಸ್ಪಿ ಎಫ್.ಎ. ಟ್ರಾಸ್ಗರ್ ಹೇಳಿದರು.

`ವಿಜಾಪುರ ಜಿಲ್ಲೆ ಮಹಾರಾಷ್ಟ್ರದ ಗಡಿಯಲ್ಲಿದ್ದರೂ ಬಾಳಾ ಠಾಕ್ರೆ ಅವರ ಪರಿಣಾಮ ನಮ್ಮ ಜಿಲ್ಲೆಯ ಮೇಲೆ ಎಂದೂ ಆಗಿಲ್ಲ. ಠಾಕ್ರೆ ಅವರು ವಿಜಾಪುರ ಜಿಲ್ಲೆಗೂ ಭೇಟಿ ನೀಡಿಲ್ಲ~ ಎಂದು ಇಲ್ಲಿಯ ಹಿರಿಯ ಪತ್ರಕರ್ತ ಶ್ರೀರಾಮ ಪಿಂಗಳೆ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.