ಶನಿವಾರ, ಏಪ್ರಿಲ್ 17, 2021
31 °C

ಇಎಸ್‌ಐ ಆಸ್ಪತ್ರೆಗೆ ಜಿಗಣಿ ಬಳಿ ಐದು ಎಕರೆ ಜಾಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಜಿಗಣಿ ಬಳಿ ಕಾರ್ಮಿಕರ ರಾಜ್ಯ ವಿಮಾ (ಇಎಸ್‌ಐ) ಆಸ್ಪತ್ರೆ ಕಟ್ಟಡಕ್ಕೆ ಅಗತ್ಯವಿರುವ ಐದು ಎಕರೆ ಜಾಗವನ್ನು ಪಡೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಬರುವ ತಿಂಗಳು ಇಎಸ್‌ಐ ಸಂಸ್ಥೆಗೆ ಸರ್ಕಾರ ಈ ಜಾಗವನ್ನು ನೀಡಲಿದೆ ಎಂದು ರಾಜ್ಯ ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ತಿಳಿಸಿದರು.ಕರ್ನಾಟಕ ವಾಣಿಜ್ಯೋದ್ಯಮ ಮತ್ತು ಕೈಗಾರಿಕಾ ಸಂಸ್ಥೆಯು (ಎಫ್‌ಕೆಸಿಸಿಐ) ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಂಸ್ಥೆಯ ಸದಸ್ಯರೊಂದಿಗಿನ ಸಂವಾದದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ಜಿಗಣಿಯ 25 ಎಕರೆ ಪ್ರದೇಶವನ್ನು ಬೇರೆ ಉದ್ದೇಶಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಿತ್ತು.ಆದರೆ ಆಸ್ಪತ್ರೆ ಕಟ್ಟಡಕ್ಕಾಗಿ ಕೇಳಿದ ಹಿನ್ನೆಲೆಯಲ್ಲಿ ಬಿಬಿಎಂಪಿಯು ಐದು ಎಕರೆ ನೀಡಲು ಒಪ್ಪಿಕೊಂಡಿದೆ. ಜಾಗ ಪಡೆಯುವ ಪ್ರಕ್ರಿಯೆ ಮುಗಿದ ನಂತರ ಕಟ್ಟಡ ನಿರ್ಮಾಣ ಆರಂಭಿಸಲಾಗುವುದು~ ಎಂದರು.`ನೂರು ಕೋಟಿ ರೂಪಾಯಿ ವೆಚ್ಚದಲ್ಲಿ ನಗರದ ಪೀಣ್ಯ ಕೈಗಾರಿಕಾ ಪ್ರದೇಶದ ಬಳಿ ನಿರ್ಮಿಸಲಾಗುತ್ತಿರುವ ಇಎಸ್‌ಐ ಆಸ್ಪತ್ರೆ ಕಟ್ಟಡದ ನಿರ್ಮಾಣ ಕಾರ್ಯ ಅಂತಿಮ ಹಂತದಲ್ಲಿದೆ. ಬರುವ ಡಿಸೆಂಬರ್‌ನಲ್ಲಿ ಉದ್ಘಾಟನೆಗೊಳ್ಳಲಿದೆ~ ಎಂದು ಹೇಳಿದರು.`ಈವರೆಗೆ ರಾಜ್ಯದಲ್ಲಿ 15 ಲಕ್ಷ ಇಎಸ್‌ಐ ಕಾರ್ಡುಗಳನ್ನು ವಿತರಿಸಲಾಗಿದ್ದು, ಇದರಿಂದ 90 ಲಕ್ಷ ಮಂದಿಗೆ ಅನುಕೂಲವಾಗಿದೆ. ಅಸಂಘಟಿತ ವಲಯದ ಕಾರ್ಮಿಕರ ಸಂಖ್ಯೆ 2.93 ಕೋಟಿ ಇದ್ದು, ಅವರಿಗೆ ಇಎಸ್‌ಐ ಸೌಲಭ್ಯ ಸಿಗುವುದಿಲ್ಲ. ಆದ್ದರಿಂದ ರಾಷ್ಟ್ರೀಯ ಆರೋಗ್ಯ ಬಿಮಾ ಯೋಜನೆ ಅಡಿ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ~ ಎಂದು ನುಡಿದರು.ಯುವಕರಿಗೆ ಮಾದರಿ ವೃತ್ತಿಪರ ತರಬೇತಿ ನೀಡುವ ಸಂಬಂಧ ಎಫ್‌ಕೆಸಿಸಿಐ ಮತ್ತು ಜರ್ಮನಿಯ ಫೋರಂ ಬೇರುಫ್ಸ್ ಬಿಲ್ಡಂಗ್ ಸಂಸ್ಥೆಯೊಂದಿಗೆ ಇದೇ ಸಂದರ್ಭದಲ್ಲಿ ಒಪ್ಪಂದ ಮಾಡಿಕೊಳ್ಳಲಾಯಿತು. ಎಫ್‌ಕೆಸಿಸಿಐ ಅಧ್ಯಕ್ಷ ಜೆ.ಆರ್. ಬಂಗೇರಾ, ಉಪಾಧ್ಯಕ್ಷ ಕೆ.ಶಿವಷಣ್ಮುಗಂ, ಫೋರಂ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಹೆಲ್ಮಟ್ ರೇತ್‌ಮುಲ್ಲರ್ ಉಪಸ್ಥಿತರಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.