ಬುಧವಾರ, ಜುಲೈ 15, 2020
27 °C

ಇತರೆ ಕ್ರೀಡೆಗಳಿಗೂ ಆದ್ಯತೆ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇತರೆ ಕ್ರೀಡೆಗಳಿಗೂ ಆದ್ಯತೆ ಅಗತ್ಯ

ಮೈಸೂರು: ‘ಕ್ರಿಕೆಟ್ ಆಟಕ್ಕೆ ನೀಡುವಷ್ಟು ಆದ್ಯತೆಯನ್ನು ಇತರ ಕ್ರೀಡೆಗಳಿಗೂ ನೀಡಬೇಕಿದೆ’ ಎಂದು ಸಂತ ಫಿಲೋಮಿನಾ ಪಿಯು ಕಾಲೇಜು ಪ್ರಾಂಶುಪಾಲ ಫಾದರ್ ಎಂ.ವಿನ್ಸೆಂಟ್ ಅಭಿಪ್ರಾಯಪಟ್ಟರು. ನಗರದ ಸ್ಪೋರ್ಟ್ಸ್ ಪೆವಿಲಿಯನ್‌ನಲ್ಲಿ ಸೋಮವಾರ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದಿಂದ ಏರ್ಪಡಿಸಿದ್ದ ಅಖಿಲ ಭಾರತ ಅಂತರ ವಿಶ್ವವಿದ್ಯಾನಿಲಯ ಪಂದ್ಯಾವಳಿಗಳ ಬಹುಮಾನ ಪಡೆದ ಕ್ರೀಡಾಪಟುಗಳಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ ‘ಕ್ರಿಕೆಟ್ ಆಟಗಾರರಿಗೆ ದೊರೆತಷ್ಟು ಹಣ ಇತರ ಕ್ರೀಡೆಗಳ ಆಟಗಾರರಿಗೆ ದೊರೆಯುವುದಿಲ್ಲ. ನಾವು ಕ್ರೀಡೆಗಳಲ್ಲಿ ಹಿಂದುಳಿದಿದ್ದೇವೆ. ಅದಕ್ಕೆ ಕಾರಣ ಅರ್ಹ ಕ್ರೀಡಾಪಟುಗಳಿದ್ದರೂ ಸೂಕ್ತ ಪ್ರೋತ್ಸಾಹದ ಕೊರತೆ’ ಎಂದರು.‘ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಇಂದು ಆರ್ಥಿಕ ಸಹಾಯ ದೊರೆಯುತ್ತಿಲ್ಲ. ತರಬೇತುದಾರರಿಗೆ ಬರಬೇಕಾದ ಸಂಬಳ  ಸರಿಯಾಗಿ ಬರುತ್ತಿಲ್ಲ. ಇದರಿಂದ ಪ್ರತಿಭಟನೆ ಮಾಡುವ ಅನಿವಾರ್ಯತೆ ಬಂದಿದೆ. ಕ್ರೀಡಾಪಟುಗಳಿಗೆ ಆರ್ಥಿಕ ಸಹಾಯವೂ ಮುಖ್ಯ. ಆ ನಿಟ್ಟಿ ನಲ್ಲಿ ಮೈಸೂರು ವಿವಿ ಕ್ರೀಡೆಯಲ್ಲಿ ಬಹುಮಾನ ಪಡೆದ ವಿಜೇತರಿಗೆ ಸನ್ಮಾನಿಸುತ್ತಿರುವುದು ಶ್ಲಾಘನೀಯ. ಕೇವಲ ಹಣಕ್ಕಾಗಿ ಆಟ ಆಡದೆ  ದೇಶಕ್ಕಾಗಿ, ಓದಿದ ವಿವಿ ಹಿರಿಮೆಗಾಗಿ ಸಾಧನೆ ಮಾಡಿ’ ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.ವ್ಯವಸ್ಥಾಪಕ ಡಾ.ಪಿ.ಕೃಷ್ಣಯ್ಯ ಹಾಗೂ ತರಬೇತುದಾರ ವೈಕುಂಠಮೂರ್ತಿ ಅವರಿಗೆ ತಲಾ ರೂ.10 ಸಾವಿರ ನೀಡಿ ಸನ್ಮಾನಿಸಲಾಯಿತು. ಕುಸ್ತಿಯಲ್ಲಿ ಕಂಚಿನ ಪದಕ ಪಡೆದ ಎಂ.ಆರ್.ರಮ್ಯ, ವ್ಯವಸ್ಥಾಪಕ ಎನ್.ಮಲ್ಲುಸ್ವಾಮಿ, ತರಬೇತುದಾರ ಎಲ್.ಮಂಜಪ್ಪ ಅವರಿಗೆ  ತಲಾ  ರೂ.8 ಸಾವಿರ ನೀಡಿ ಗೌರವಿಸಲಾಯಿತು. ವಾಲಿಬಾಲ್‌ನಲ್ಲಿ ಕಂಚಿನ ಪದಕ ಪಡೆದ ಬಿ.ಸಿ.ಅಕ್ಷತ ಮತ್ತು ತಂಡದ 13 ಆಟಗಾರ್ತಿಯರಿಗೆ  ಮತ್ತು ವ್ಯವಸ್ಥಾಪಕ ಸಿ.ಪಳನಿಸ್ವಾಮಿ, ತರಬೇತುದಾರ ಎನ್.ಬಿ.ಸುರೇಶ್ ಗೆ  ತಲಾ 8 ಸಾವಿರ ನೀಡಿ ಅಭಿನಂದಿಸಲಾಯಿತು.ಪ್ರಶಸ್ತಿ ವಿಜೇತ ರಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತದೆ ಎಂದು ಸಭೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ.ಕೃಷ್ಣ ಘೋಷಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ.ವಿ.ಜಿ.ತಳವಾರ್, ಬಿ.ಡಿ.ಕಾಂತರಾಜು, ಎಚ್.ಎಸ್.ರಾಮೇಗೌಡ, ಪ್ರೊ.ಕೆ.ಶೇಷಣ್ಣ, ಕಾರ್ಯಪ್ಪ, ನಾಭಿರಾಜ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.