ಗುರುವಾರ , ಜೂನ್ 4, 2020
27 °C

ಇದು ಉಚಿತ ಪಾಠಶಾಲೆ!

ಎಲ್. ಮಂಜುನಾಥ Updated:

ಅಕ್ಷರ ಗಾತ್ರ : | |

ಇದು ಉಚಿತ ಪಾಠಶಾಲೆ!

ಹಣ ಇರುವವರು ಮನೆ ಪಾಠಕ್ಕೆ ಹೋಗುತ್ತಾರೆ. ಆದರೆ, ಬಡವಿದ್ಯಾರ್ಥಿಗಳಿಗೆ ಈ ಅನುಕೂಲ ಇರುವುದಿಲ್ಲ. ಒಮ್ಮೆ ಅನುತ್ತೀರ್ಣರಾದರೆ ಅವರಿಗೆ ಓದು ಮುಂದುವರಿಸುವ ಅವಕಾಶವೇ ಕಡಿಮೆಯಾಗುತ್ತದೆ. ಅದರಲ್ಲೂ ಕೊಳಚೆ ಪ್ರದೇಶಗಳ ವಿದ್ಯಾರ್ಥಿಗಳ ಪಾಲಿನ ಸಾಮಾನ್ಯ ಸಮಸ್ಯೆಯಿದು.ಇಂತಹ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು, ಅವರನ್ನು ಒಂದೆಡೆ ಸೇರಿಸಿ ಅವರಿಗೆ ಉಚಿತ ಸಮವಸ್ತ್ರ ಹಾಗೂ ಬರೆಯವ ಪುಸ್ತಕಗಳನ್ನು ನೀಡುವುದರ ಜೊತೆಗೆ ಉಚಿತವಾಗಿಯೇ ಪಾಠವನ್ನೂ ಹೇಳಿಕೊಡುವುದೆಂದರೆ!ಹೌದು, ಶ್ರೀರಾಮಪುರದ `ಡಾ. ಬಿ.ಆರ್. ಅಂಬೇಡ್ಕರ್ ಉಚಿತ ಪಾಠಶಾಲಾ ಟ್ರಸ್ಟ್' ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಇಂತಹುದೊಂದು ಸೇವೆಯನ್ನು ಕಳೆದ 23 ವರ್ಷಗಳಿಂದ ನಿರಂತರವಾಗಿ ನಡೆಸುತ್ತಿದೆ! ಕೊಳಚೆ ಪ್ರದೇಶದ ಬಡ ಕುಟುಂಬದ, ಅದರಲ್ಲೂ ಪ್ರೌಢಶಾಲೆ ಬಿಟ್ಟ, ಅನುತ್ತೀರ್ಣರಾದ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಿ ಅವರಿಗೆ ಉಚಿತವಾಗಿ ಪಾಠ ಹೇಳಿಕೊಡುವ ಮೂಲಕ ಅವರು ಹೆಚ್ಚು ಅಂಕ ಗಳಿಸಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡುವುದೇ ಈ ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.1989ರಲ್ಲಿ ಶ್ರೀರಾಮಪುರದ ಬಿಬಿಎಂಪಿ ಸರ್ಕಾರಿ ಶಾಲಾ ಆವರಣದಲ್ಲಿ ಕೇವಲ 15 ವಿದ್ಯಾರ್ಥಿಗಳಿಂದ ಆರಂಭವಾದ ಉಚಿತ ಪಾಠ ಹೇಳಿಕೊಡುವ ಯೋಜನೆ ಇಂದು ಬೆಂಗಳೂರಿನ ವಿವಿಧ ಪ್ರದೇಶಗಳ 20 ಕೇಂದ್ರಗಳಲ್ಲಿ ವಿಸ್ತಾರಗೊಂಡಿದೆ. ಇದಕ್ಕೆ ಸ್ಪಂದಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪಾಠಕ್ಕಾಗಿ ಪಾಲಿಕೆ ಶಾಲೆಗಳನ್ನು ಒದಗಿಸಿದೆ. ಪ್ರಸ್ತುತ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುತ್ತಿದ್ದು 22 ಮಂದಿ ಶಿಕ್ಷಕರು  ವೃತ್ತಿ ನಡುವೆ ಕೈಜೋಡಿಸಿದ್ದಾರೆ.ಇಲ್ಲಿಯೇ ಪಾಠ ಹೇಳಿಸಿಕೊಂಡು, ಸ್ನಾತಕೋತ್ತರ ಪದವಿ ಮುಗಿಸಿ ಈಗಾಗಲೇ ನಗರದ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲ ಉಪನ್ಯಾಸಕರೂ ಇಲ್ಲಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಾಠ ಹೇಳಿಕೊಡುವ ಮೂಲಕ ಪರಂಪರೆಯನ್ನು ಮುಂದುವರಿಸಿಕೊಂಡು ಬರುತ್ತಿರುವುದು ಮತ್ತೊಂದು ಹೆಮ್ಮೆ.ಶ್ರೀರಾಮಪುರ ಸೇರಿದಂತೆ ಕಾಟನ್ ಪೇಟೆ, ಜೈಭುವನೇಶ್ವರಿ ನಗರ, ಮಲ್ಲೇಶ್ವರ, ಪ್ರಕಾಶನಗರ, ಓಕಳೀಪುರ, ಮಂಜುನಾಥ ನಗರ, ರಾಮಕೃಷ್ಣ ಸೇವಾನಗರ, ಗಾಂಧಿನಗರ, ಶೇಷಾದ್ರಿಪುರ (ಹನುಮಂತಪ್ಪ ಕಾಲೊನಿ) ಆನಂದಪುರ, ದಯಾನಂದ ನಗರ... ಹೀಗೆ ನಗರದ ಪಾಲಿಕೆ ಶಾಲೆ, ಅನುದಾನಿತ ಶಾಲೆ ಮತ್ತು ಖಾಸಗಿ ಶಾಲೆಗಳು ಸೇರಿದಂತೆ ಸುಮಾರು 20 ಪ್ರೌಢಶಾಲೆಗಳಲ್ಲಿ ಇಂತಹ `ಶಾಲೆ' ನಡೆಯುತ್ತಿದೆ.ಸ್ಥಳೀಯ ಜನಪ್ರತಿನಿಧಿಗಳು, ಉದ್ಯಮಿಗಳ ಸಹಕಾರ ಮತ್ತು ದೇಣಿಗೆ ಪಡೆದು ಅವಶ್ಯವಿರುವ ಬಡ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಶಾಲಾ ಸಮವಸ್ತ್ರ ಮತ್ತು ನೋಟ್ ಪುಸ್ತಕಗಳನ್ನೂ ಉಚಿತವಾಗಿ ಕೊಡಲಾಗುತ್ತಿದೆ. ಈ ಕಾರ್ಯಕ್ಕೆ ಆಯಾ ಪ್ರದೇಶದ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಉದ್ದಿಮೆದಾರರು ನೆರವಾಗುತ್ತಿದ್ದಾರೆ.`ಹಿಂದುಳಿದ ಬಡ ವಿದ್ಯಾರ್ಥಿಗಳು ಪ್ರೌಢಶಾಲೆಯಲ್ಲಿ ಅನುತ್ತೀರ್ಣರಾಗುವುದು ಹೆಚ್ಚು. ಅಂಥವರನ್ನು ಗುರುತಿಸಿ, ಅವರಿಗೆ ವಿಶೇಷ ತರಗತಿಗಳನ್ನು ನಡೆಸಿ ಮಾದರಿ ಪರೀಕ್ಷೆಗಳನ್ನೂ ಏರ್ಪಡಿಸುವ ಮೂಲಕ ಅವರು ಅಂತಿಮ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆಯಲು ನೆರವಾಗುತ್ತೇವೆ. ಅಕ್ಟೋಬರ್‌ನಿಂದ ಏಪ್ರಿಲ್‌ವರೆಗೆ ತರಗತಿ ನಡೆಯುತ್ತದೆ' ಎಂದು ವಿವರಿಸುತ್ತಾರೆ ಶ್ರೀರಾಮಪುರದ ದಯಾನಂದನಗರ ಪಾಲಿಕೆ ಶಾಲೆಯಲ್ಲಿ ಗಣಿತ/ವಿಜ್ಞಾನ ಪಾಠ ಮಾಡುವ ಶಿಕ್ಷಕರಾದ ರಘು ಮತ್ತು ಯೋಗೇಶ್.`ನಮಗೆ ಅರ್ಥವಾಗುವಂತೆ ಎಲ್ಲ ಶಿಕ್ಷಕರು ತುಂಬ ಸರಳವಾಗಿ ಪಾಠ ಮಾಡುತ್ತಾರೆ. ಯಾವುದೇ ಶುಲ್ಕವಿಲ್ಲ. ಆರು ವಿಷಯಗಳಿಗೂ ಉಚಿತ ಪಾಠ. ಕೆಲ ಶಿಕ್ಷಕರು ತಮ್ಮ ಲ್ಯಾಪ್‌ಟಾಪ್ ತಂದು ಆ ಮೂಲಕ ಸಾಮಾನ್ಯ ವಿಜ್ಞಾನದ ತಿಳಿವಳಿಕೆ ಹಾಗೂ ಕಂಪ್ಯೂಟರ್ ಬಗ್ಗೆ ಮಾಹಿತಿ ನೀಡುತ್ತಾರೆ. ಇದರಿಂದ ನಮಗೆ ತುಂಬಾ ಅನುಕೂಲವಾಗುತ್ತಿದೆ' ಎಂದು ಸಂತಸಪಡುತ್ತಾರೆ ದಯಾನಂದನಗರ ಪಾಲಿಕೆ ಶಾಲಾ `ವಿದ್ಯಾರ್ಥಿಗಳು'.ಅನುಭವವೇ ದಾರಿದೀಪವಾಯ್ತು

`ನನ್ನ ತಂದೆ ತಾಯಿ ಕೂಲಿ ಮಾಡಿ ನನ್ನನ್ನು ಓದಿಸಿದರು. ಓದುವಾಗ ನಾನು ಅನುಭವಿಸಿದ ಕಷ್ಟವನ್ನು ಯಾವ ವಿದ್ಯಾರ್ಥಿಯೂ ಅನುಭವಿಸಬಾರದು ಎಂಬ ಉದ್ದೇಶದಿಂದ ನಾನು 1989ರಲ್ಲಿ ಉಚಿತ ಪಾಠ ಹೇಳಿಕೊಡಲು ಮುಂದಾದೆ. ಪ್ರಸ್ತುತ ಬೆಂಗಳೂರಿನ ವಿವಿಧ ಪ್ರದೇಶಗಳ 20 ಕೇಂದ್ರಗಳಲ್ಲಿ `ಶಾಲೆ' ನಡೆಯುತ್ತಿದೆ. ಪರಿಣತ ಶಿಕ್ಷಕರ ತಂಡವೇ ನಮ್ಮಲ್ಲಿದೆ. ನಗರದ ವಿದ್ಯಾರ್ಥಿಗಳೊಂದಿಗೆ ಬೆಂಗಳೂರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಸಹ ನಮ್ಮಲ್ಲಿ ಪಾಠಕ್ಕೆ ಬರುತ್ತಿದ್ದಾರೆ. ಇನ್ನೂ ಹೆಚ್ಚಿನ ಶಾಖೆಗಳನ್ನು ತೆರೆದು ಬಡ ವಿದ್ಯಾರ್ಥಿಗಳಿಗೆ ಇದರ ಸೌಲಭ್ಯವನ್ನು ವಿಸ್ತರಿಸುವ ಯೋಜನೆ ಇದೆ. ಉಚಿತ ಪಾಠ, ಶಾಲಾ ಸಮಾವಸ್ತ್ರ ಮತ್ತು ನೋಟ್‌ಬುಕ್‌ಗಳಿಗೆ ಹಣಕಾಸಿನ ಕೊರತೆ ಎದುರಾಗಿದೆ. ಆದರೂ ಈ ಯೋಜನೆಯನ್ನು ಕೈಬಿಡುವುದಿಲ್ಲ' ಎನ್ನುತ್ತಾರೆ ಟ್ರಸ್ಟ್‌ನ ಅಧ್ಯಕ್ಷರಾದ ಎಂ. ಕಾಶಿ ಅವರು.ಆಸಕ್ತರು ಸಂಪರ್ಕಿಸಿ: 94488 00012.ಅಪರಾಧ ಪ್ರಕರಣ ತಗ್ಗಿಸಿದ ಶಾಲೆ

ಉಚಿತ ಪಾಠದ ಯೋಜನೆಯಿಂದಾಗಿ ಶ್ರೀರಾಮಪುರ ಪ್ರದೇಶದ ವ್ಯಾಪ್ತಿಯಲ್ಲಿ ಶಾಲೆ ಬಿಟ್ಟ, ಅನುತ್ತೀರ್ಣರಾಗಿದ್ದ ವಿದ್ಯಾರ್ಥಿಗಳಿಂದ ನಡೆಯುತ್ತಿದ ಕೆಲ ಸಣ್ಣಪುಟ್ಟ ಅಪರಾಧಗಳ ಸಂಖ್ಯೆ ಕಡಿಮೆಯಾಗಿದೆ. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಟ್ರಸ್ಟ್‌ನ ವಿದ್ಯಾರ್ಥಿಗಳನ್ನು ನಾನೇ ಗೌರವಿಸಿ, ಸನ್ಮಾನಿಸಿದ್ದೇನೆ. ಇಲ್ಲಿನ ಶಿಕ್ಷಕರ ಸಂಖ್ಯೆ ಇನ್ನೂ ಹೆಚ್ಚಾಗಲಿ. 

-ರವಿ ಉಕ್ಕುಂದ, ಸಬ್ ಇನ್ಸ್‌ಪೆಕ್ಟರ್,

ಶ್ರೀರಾಮಪುರ ಪೊಲೀಸ್ ಠಾಣೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.