ಮಂಗಳವಾರ, ಮೇ 24, 2022
30 °C

ಇನಾಮತಿ ವಕೀಲರ ಸೇವೆ ಅವಿಸ್ಮರಣೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವಲಗುಂದ: `ಹುಟ್ಟು ಹೋರಾಟಗಾರರಾಗಿದ್ದ  ದಿವಂಗತ ವಿ.ಬಿ. ಇನಾಮತಿ ವಕೀಲರು ಸಹಕಾರಿ ರಂಗಕ್ಕೆ ಸಲ್ಲಿಸಿದ ಸೇವೆ ಅವಿಸ್ಮರಣೀಯ. ಅಂಥವರ ಆದರ್ಶಗಳನ್ನು ಇಂದಿನ ಯುವಕರು ರೂಢಿಸಿಕೊಳ್ಳಬೇಕು~ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.ಇಲ್ಲಿಯ ಶ್ರೀ ಕೃಷ್ಣ ಕಲ್ಯಾಣ ಕೇಂದ್ರದ ಪ್ರಾಂಗಣದಲ್ಲಿ ಭಾನುವಾರ ವಿ.ಬಿ. ಇನಾಮತಿ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು. ದಕ್ಷ, ಪ್ರಾಮಾಣಿಕ ಆಡಳಿತಗಾರರಾಗಿದ್ದ ಇನಾಮತಿ ನುಡಿದಂತೆ ನಡೆಯುವ ಸ್ವಭಾವ ಉಳ್ಳವರಾಗಿದ್ದರು.ನೇರ ನುಡಿಯ ಅವರು ಬೇರೆ ರಾಜಕಾರಣಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದರು ಅಲ್ಲದೇ ರೈತರು, ಅಲ್ಪಸಂಖ್ಯಾತರು, ದೀನದಲಿತರ ಬಗ್ಗೆ ಕಾಳಜಿ ಹೊಂದಿದ್ದರು. ಸಮಾಜಕ್ಕಾಗಿ ಏನಾದರೂ ಕೊಡಬೇಕೆಂಬ ಕುತೂಹಲ ಅವರಲ್ಲಿದ್ದುದರಿಂದ ನ್ಯಾಯಯುತವಾಗಿ ನಡೆದು ಕೊಳ್ಳುತ್ತಿದ್ದರು. ಎಷ್ಟು ಕಠೋರ ಮನಸ್ಸುಳ್ಳವರಾಗಿದ್ದರೋ ಅಷ್ಟೇ ಅವರಲ್ಲಿ ಹೃದಯ ಶ್ರೀಮಂತಿಕೆ ಇತ್ತು.

 

ಅವರ ದೂರದೃಷ್ಟಿ ಮತ್ತು ಶ್ರಮದ ಫಲವಾಗಿ ಈ ವ್ಯಾಪ್ತಿಯ ಸಹಕಾರಿ ಸಂಘಗಳು ಇಂದಿಗೂ ಅಭಿವೃದ್ಧಿ ಯತ್ತ ಸಾಗುತ್ತಿವೆ. ಅವರು ಸಹಕಾರಿ ರಂಗಕ್ಕೆ ನೀಡಿದ ಕೊಡುಗೆ ಅಪಾರ ಹಾಗೂ ಅವಿಸ್ಮರಣೀಯ ಯವಾದುದು ಎಂದರು.ಇನಾಮತಿ ವಕೀಲರು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು, ಎಲ್ಲರೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿ, ರಚನಾತ್ಮಕ ಕ್ರಿಯೆಯಲ್ಲಿ ತೊಡಗಿಕೊಂಡಿದ್ದರು. ಎಂತಹ ದೊಡ್ಡ ರಾಜಕಾರಣಿ ಇರಲಿ, ಅವರನ್ನು ಕೈಹಿಡಿದು ಕೆಲಸ ಮಾಡಿಸಿಕೊಳ್ಳುವ ಚಾತುರ್ಯವುಳ್ಳವರಾಗಿದ್ದರಿಂದ ಯಾವ ರಾಜಕಾರಣಿಯೂ ಇವರ ಮಾತನ್ನು ತೆಗೆದುಹಾಕುತ್ತಿರಲಿಲ್ಲ. ಅವರ ಭಾವನಾತ್ಮಕ ಸಂಬಂಧವನ್ನು ನಾವು ಇಂದಿಗೂ ಮರೆತಿಲ್ಲ ಎಂದು ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಚ್.ಕೆ.ಪಾಟೀಲ ಹೇಳಿದರು.ವಿಧಾನಸಭೆಯ ಮಾಜಿ ಸಭಾಪತಿ ಬಿ.ಜಿ. ಬಣಕಾರ ಕಾರ್ಯಕ್ರಮ ಉದ್ಘಾಟಿಸಿದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು `ಎಂಟೆದೆಯ ಬಂಟ~ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.ಮಾಜಿ ಸಚಿವರಾದ ಎ.ಎಂ.ಹಿಂಡಸಗೇರಿ, ಕೆ.ಬಿ.ಕೋಳಿವಾಡ, ಬಿ.ಆರ್.ಯಾವಗಲ್, ಕೆ.ಎನ್.ಗಡ್ಡಿ, ಮಾಜಿ ಸಂಸದರುಗಳಾದ ಮಂಜುನಾಥ ಕುನ್ನೂರ, ಎಸ್.ಆರ್.ಪಾಟೀಲ, ಮಾಜಿ ಶಾಸಕರಾದ ವೀರಣ್ಣ ಮತ್ತಿಕಟ್ಟಿ, ಸಿ.ಎಸ್.ಶಿವಳ್ಳಿ, ಜಿ.ಟಿ.ಪಾಟೀಲ, ವಿನಯ ಕುಲಕರ್ಣಿ, ಶಾಸಕ ಸಂತೋಷ ಲಾಡ್, ಮುಖಂಡರಾದ  ಎಚ್.ವಿ.ಮಾಡಳ್ಳಿ, ಎನ್.ಎಚ್.ಕೋನರಡ್ಡಿ, ವಿ.ಡಿ.ಅಂದಾನಿಗೌಡರ, ಜೀವನ ಪವಾರ, ಬಿ.ಬಿ.ಗಂಗಾಧರಮಠ ಮಾತನಾಡಿದರು. ಡಿ.ಆರ್.ಪಾಟೀಲ ಸ್ವಾಗತಿಸಿದರು. ಶರಣ ಪವಾಡಿ ನಿರೂಪಿಸಿ, ಆರ್.ಎಚ್.ಕೋನರಡ್ಡಿ ವಂದಿಸಿದರು.ಭೂಮಿ ಪೂಜೆ:

ಇದಕ್ಕೂ ಮೊದಲು ಗಾಂಧಿ ಮಾರುಕಟ್ಟೆಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯ ಅಡಿಗಲ್ಲು ಸಮಾರಂಭದಲ್ಲಿ ಭೂಮಿಪೂಜೆಯನ್ನು ಸಿದ್ದರಾಮಯ್ಯ ನೆರವೇರಿಸಿದರು. ಸಂಗೊಳ್ಳಿ ರಾಯಣ್ಣನ ತ್ಯಾಗ, ಬಲಿದಾನ ನೆನಪಿನಲ್ಲಿಟ್ಟುಕೊಂಡು ಜೀವನ ನಡೆಸಬೇಕೆಂದು ಹೇಳಿದರು. ಮಾಜಿ ಸಚಿವ ಕೆ.ಎನ್. ಗಡ್ಡಿ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.