ಶನಿವಾರ, ಜೂಲೈ 11, 2020
26 °C

ಇನ್ನೂ 4 ಪಂದ್ಯ ಗೆಲ್ಲಬೇಕು: ಸ್ವಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇನ್ನೂ 4 ಪಂದ್ಯ ಗೆಲ್ಲಬೇಕು: ಸ್ವಾನ್

ಚೆನ್ನೈ (ಐಎಎನ್‌ಎಸ್): 2011ರ ವಿಶ್ವಕಪ್ ಕ್ರಿಕೆಟ್ ಟ್ರೋಫಿಯನ್ನು ನಾವು ಸ್ವದೇಶಕ್ಕೆ ತೆಗೆದುಕೊಂಡು ಹೋಗಬೇಕೆಂದರೆ ಮುಂದಿನ ನಾಲ್ಕೂ ಪಂದ್ಯಗಳಲ್ಲಿ ಗೆಲ್ಲಬೇಕು ಎಂದು ಇಂಗ್ಲೆಂಡ್ ತಂಡದ ಆಫ್ ಸ್ಪಿನ್ನರ್ ಗ್ರೇಮ್ ಸ್ವಾನ್ ತಿಳಿಸಿದ್ದಾರೆ.ಈ ಬಾರಿಯ ವಿಶ್ವಕಪ್‌ನಲ್ಲಿ ತಮ್ಮ ಕ್ವಾರ್ಟರ್ ಫೈನಲ್ ಹಾದಿ ಸುಗಮವಾಗಲು ಇಂಗ್ಲೆಂಡ್ ತಂಡದವರು ವೆಸ್ಟ್‌ಇಂಡೀಸ್ ವಿರುದ್ಧ ಗುರುವಾರ ಇಲ್ಲಿ ನಡೆಯಲಿರುವ ‘ಬಿ’ ಗುಂಪಿನ ಪಂದ್ಯದಲ್ಲಿ ಗೆಲ್ಲಲೇಬೇಕು.‘ನಾವು ಮುಂದಿನ ನಾಲ್ಕೂ ಪಂದ್ಯಗಳಲ್ಲಿ ಗೆಲ್ಲಬೇಕು. ಕೊನೆಯ ಲೀಗ್ ಪಂದ್ಯ, ಕ್ವಾರ್ಟರ್ ಫೈನಲ್, ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳಲ್ಲಿ ಗೆದ್ದರೆ ವಿಶ್ವಕಪ್ ಟ್ರೋಫಿ ನಮ್ಮದಾಗಲಿದೆ’ ಎಂದು ಸ್ವಾನ್ ಸೋಮವಾರ ನುಡಿದಿದ್ದಾರೆ.‘ಈ ಎಲ್ಲಾ ಪಂದ್ಯಗಳಲ್ಲಿ ಗೆಲ್ಲುವ ಸಾಮರ್ಥ್ಯ ನಮ್ಮಲ್ಲಿದೆ. ವಿಶ್ವಕಪ್ ಗೆಲ್ಲಲು ನಮಗೆ ಅವಕಾಶವಿದೆ’ ಎಂದಿದ್ದಾರೆ.‘ನಾವು ಟ್ವೆಂಟಿ-20 ವಿಶ್ವಕಪ್ ಚಾಂಪಿಯನ್ನರು. ಅದು ನಮಗೆ ಸ್ಫೂರ್ತಿಯಾಗಲಿದೆ. ಹಾಲು ಹುಳಿಯಾಗಿದೆ ಎಂದು ಕೊರಗುವುದರಿಂದ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಐರ್ಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧದ ಸೋಲಿಗೆ ಕೊರಗುವ ಅವಶ್ಯಕತೆ ಇಲ್ಲ. ಈಗ ನಮ್ಮ ಗಮನವೇನಿದ್ದರೂ ಮುಂದಿನ ನಾಲ್ಕೂ ಪಂದ್ಯಗಳಲ್ಲಿ ಗೆಲ್ಲುವುದು’ ಎಂದು ಸ್ವಾನ್ ವಿವರಿಸಿದ್ದಾರೆ.‘ಎಂ.ಎ.ಚಿದಂಬರಂ ಪಿಚ್ ನಾವು ದಕ್ಷಿಣ ಆಫ್ರಿಕಾ ಎದುರು ಆಡಿದ ಪಂದ್ಯದ ರೀತಿಯಲ್ಲಿಯೇ ಇರಲಿದೆ ಎಂಬುದು ನಮ್ಮ ವಿಶ್ವಾಸ. ಈ ಟ್ರ್ಯಾಕ್‌ನಲ್ಲಿ ಬೌಲ್ ಮಾಡಲು ನನಗೆ ಖುಷಿ’ ಎಂದಿದ್ದಾರೆ. ಇಂಗ್ಲೆಂಡ್ ಆಡಿದ ಐದು ಪಂದ್ಯಗಳಿಂದ ಐದು ಪಾಯಿಂಟ್ ಹೊಂದಿದೆ. ಇದರಲ್ಲಿ ಭಾರತ ಎದುರು ಟೈ ಮಾಡಿಕೊಂಡಿದ್ದರೆ ಐರ್ಲೆಂಡ್ ಹಾಗೂ ಬಾಂಗ್ಲಾದೇಶ ಎದುರು ಸೋಲು ಕಂಡಿದೆ.ದಕ್ಷಿಣ ಆಫ್ರಿಕಾ ಹಾಗೂ ಹಾಲೆಂಡ್ ವಿರುದ್ಧ ಗೆದ್ದಿದೆ. ಐರ್ಲೆಂಡ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ 300 ಕ್ಕೂ ಅಧಿಕ ರನ್ ಪೇರಿಸಿದ್ದರೂ ಇಂಗ್ಲೆಂಡ್ ಸೋಲು ಅನುಭವಿಸಿತ್ತು. ಆದರೆ ಸ್ವಾನ್ ವಿಶ್ವಕಪ್ ವೇಳಾಪಟ್ಟಿಯನ್ನು ಟೀಕಿಸಿದ್ದಾರೆ. ‘ಹೆಚ್ಚಿನ ತಂಡಗಳಿಗೆ ಸರಿಯಾದ ವೇಳಾಪಟ್ಟಿ ಲಭಿಸಿಲ್ಲ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.