ಸೋಮವಾರ, ಜೂನ್ 14, 2021
27 °C

ಇವರು ಕಿರಿಯರಲ್ಲ...

ಅಮಿತ್ ಎಂ.ಎಸ್ Updated:

ಅಕ್ಷರ ಗಾತ್ರ : | |

ಇವರು ಕಿರಿಯರಲ್ಲ...

ಸಿನಿಮಾದಲ್ಲಿ ನಿಜವಾಗಿಯೂ ಸಹಜವಾಗಿ ನಟಿಸುವವರು ಯಾರು? ಈ ಪ್ರಶ್ನೆ ಮೂಡಿದರೆ ನಾಯಕ, ನಾಯಕಿ, ಖಳನಾಯಕ, ಪೋಷಕ ನಟ-ನಟಿ, ಹಾಸ್ಯ ನಟ ಹೀಗೆ ನಮ್ಮ ಕಣ್ಣಮುಂದೆ ಪಾತ್ರಧಾರಿಗಳು ಸಾಲುಗಟ್ಟಿ ನಿಲ್ಲುತ್ತಾರೆ. ಆದರೆ ಚಲನಚಿತ್ರಗಳಲ್ಲಿ ಪ್ರಮುಖ ಸನ್ನಿವೇಶಗಳಲ್ಲಿ ಎಲ್ಲರಿಗಿಂತ ಸಹಜ ಅಭಿನಯ ನೀಡುವ ಕಲಾವಿದರ ದೊಡ್ಡ ಗುಂಪೇ ಇದೆ.ಚಿತ್ರಕ್ಕೆ ಅವರು ಬೇಕೇ ಬೇಕು. ಎಲ್ಲಾ ಚಿತ್ರಗಳಲ್ಲೂ ಅವರು ಇದ್ದೇ ಇರುತ್ತಾರೆ. ಮುಖ್ಯ ಪಾತ್ರಗಳ ವೈಭವೀಕರಣದಲ್ಲಿ ಇವರನ್ನು ನಾವು ಗುರುತಿಸುವುದೂ ಇಲ್ಲ. ಸಂತೆ, ದೇವಸ್ಥಾನ, ಹಳ್ಳಿ, ರಸ್ತೆ ಮುಂತಾದ ಸನ್ನಿವೇಶಗಳ ಒಳಹೊಕ್ಕು ನೋಡಿದರೆ ಆ ವಾತಾವರಣವನ್ನು ಸೃಷ್ಟಿಸುವ ಜನರಿದ್ದಾರಲ್ಲ ಅವರೇ ಈ ಕಲಾವಿದರು. ಹೊಟೇಲಿನಲ್ಲಿ ಕುಳಿತಿರುವವರು, ಜಾತ್ರೆಯ ಜನಜಂಗುಳಿ, ಮದುವೆ ಮನೆಯ ಅತಿಥಿಗಳು ಹೀಗೆ ಇವರ ಪಾತ್ರಗಳ ಪಟ್ಟಿ ಬೆಳೆಯುತ್ತದೆ.ಕಂಡೂ ಕಾಣದಂತೆ ತೆರೆಮೇಲೆ ಬಂದು ಹೋಗುವ ಕ್ಷಣವನ್ನು ಅವರು ಬಯಸಿದವರಲ್ಲ. ಅವರ ಆಸಕ್ತಿ ಗುರಿಗಳೇ ಬೇರೆ. ನೆಚ್ಚಿನ ನಟನನ್ನು ಆವಾಹನೆ ಮಾಡಿಕೊಂಡಿರುವವನಿಗೆ ಅವರಂತೆ `ಸ್ಟಾರ್~ ಹೀರೋ ಆಗಬೇಕೆಂಬ ಬಯಕೆ, ನೂರು ದಿನ ಓಡುವ ಸೂಪರ್ ಹಿಟ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದಾತ ತಾನಾಗಬೇಕೆಂಬ ಬಾಲ್ಯದ ಕನಸಿಗೆ ಮತ್ತಷ್ಟು ಬಣ್ಣ, ಒಂದೇ ಒಂದು ಪದದ ಸಂಭಾಷಣೆ ಹೇಳಲು ಅವಕಾಶ ಸಿಕ್ಕವನ ಕಣ್ಣಲ್ಲಿ ತನ್ನ ಜೇಬಿನಲ್ಲಿ ಮಸುಕಾಗಿರುವ ಕಾಗದದ ಹಾಳೆಯಲ್ಲಿರುವ ಕಥೆಗೆ ಮುಕ್ತಿ ಸಿಕ್ಕೀತೆಂಬ ಆಶಯದ ಹೊಳಪು.ಇಲ್ಲಿರುವ ಪ್ರತಿಯೊಬ್ಬನ ಮನದಲ್ಲೂ ಹೇಳಿಕೊಳ್ಳಲಾಗದ ಆಸೆಗಳಿವೆ. ಕನಸುಗಳ ಗೋಪುರದ ತುತ್ತತುದಿಯನ್ನು ಕತ್ತೆತ್ತಿ ನೋಡುತ್ತಾ ವರ್ಷಗಳ ಹಾದಿ ಸವೆಸಿದ್ದಾರೆ. ಒಂದಷ್ಟು ಸಿಹಿ, ಒಂದಷ್ಟು ಕಹಿ ಅವರ ಜೊತೆಗಿದೆ. ಹೇಳಿದ್ದು ಕೇಳಿದ್ದು ಅನುಭವಿಸಿದ್ದು ಬಣ್ಣದ ಲೋಕದ ಹಂಗು ಬೇಡವೆಂಬ ಎಚ್ಚರಿಕೆ ನೀಡಿದರೂ ಅದನ್ನು ಕಡೆಗಣಿಸಿ ಮತ್ತೆ ಅಲ್ಲಲ್ಲೇ ಬೆಳಕು ಹುಡುಕುತ್ತಿದ್ದಾರೆ. 

ಅವರ ಮುಂದಿರುವುದು ಗೆದ್ದವರ ಹೆಜ್ಜೆ ಗುರುತು ಮತ್ತು ಬೆನ್ನಹಿಂದೆ ಮೂಟೆಗಟ್ಟಲೆ ಭರವಸೆ! ದೇವಸ್ಥಾನದ ದೃಶ್ಯ. ನಾಯಕ ನಾಯಕಿಯನ್ನು ನೋಡಲು ಕಾಯುತ್ತಿರುತ್ತಾನೆ. ಆದರೆ ಅಲ್ಲಿ ಜನಜಂಗುಳಿ. ಜೊತೆಗೆ ನಾಯಕಿಯ ಅಪ್ಪ ಅಮ್ಮ. ನಾಯಕಿಗಾಗಿ ಕಣ್ಣು ಹಾಯಿಸಿದಾಗ ಕಾಣುವವರು ಪೂಜೆ ಮಾಡಿಸುತ್ತಿರುವವರು.

 

ದೇವರಿಗೆ ಕೈ ಮುಗಿದು ನಮಸ್ಕರಿಸುತ್ತಿರುವವರು. ಈ ಸನ್ನಿವೇಶ ನೋಡುವಾಗ ನಮ್ಮ ಕಣ್ಣು ನೆಟ್ಟಿರುವುದು ನಾಯಕ ಮತ್ತು ನಾಯಕಿ ಮೇಲೆ. ಆದರೆ ಇಲ್ಲಿ ನಾವು ಗುರುತಿಸದೆ ಹೋಗುವುದು ಆಗಾಗ ನಮ್ಮೆದುರು ಕಾಣುವ ಆ ಕಲಾವಿದರನ್ನು.ಚಿತ್ರರಂಗದಲ್ಲಿ ಇವರಿಗೂ ಒಂದು ಹೆಸರಿದೆ. `ಕಿರಿಯ ಕಲಾವಿದರು~ ಎಂದು. `ಕಿರಿಯ ಕಲಾವಿದರು~ ಎಂಬುದು ಅಸ್ಮಿತೆಯಾದರೂ ಇಲ್ಲಿ ಚಿತ್ರರಂಗದ ಒಳಹೊರಗಿನ ಅಲ್ಪ ತಿಳಿವಳಿಕೆಯೂ ಇಲ್ಲದ ಎಳೆ ಹುಡುಗರಿಂದ ಹಿಡಿದು ಕೂದಲು ನೆರೆತ ವಯಸ್ಕರವರೆಗೂ ಇದ್ದಾರೆ.ಆದರಿಲ್ಲಿ ಕಣ್ಣತುಂಬಾ ಕಾಣುವುದು ಯುವಸಮೂಹ. ಮಂಡ್ಯ, ಮೈಸೂರು, ಚಾಮರಾಜನಗರ, ದೂರದ ಉತ್ತರಕರ್ನಾಟಕ ಹೀಗೆ ರಾಜ್ಯದ ಮೂಲೆಮೂಲೆಯ ಹಳ್ಳಿ ಪಟ್ಟಣಗಳಿಂದ ಬಸ್ಸು ರೈಲು ಹತ್ತಿ ಬಂದವರೇ ಹೆಚ್ಚು. ಹೆಚ್ಚಿನವರಿಗೆ ಗೊತ್ತಿರುವುದು ಗಾಂಧಿನಗರವೆಂಬ ಹೆಸರು.ಅಲ್ಲಿಗೆ ಹೋದರೆ ಸಾಕು ಸಿನಿಮಾ ಪ್ರವೇಶಿಸುವ ತಮ್ಮ ಕನಸು ನನಸಾದಂತೆ ಎಂಬುದು ಅವರ ಅನಿಸಿಕೆ. `ಕಿರಿಯ ಕಲಾವಿದ~ರಾಗಬೇಕೆಂಬ ಬಯಕೆ ಅವರದಲ್ಲ. ಆದರೆ ಸಿನಿಮಾ ರಂಗದೊಳಗೆ ತೂರಿಕೊಳ್ಳಲು ಜಾಗ ಸಿಕ್ಕರೆ ಸಾಕು ಎನ್ನುವವರಿಗೆ ಆರಂಭದಲ್ಲಿ ಕಾಣುವ ಆಶಾಸೌಧವದು.ಇಲ್ಲಿ ದೊಡ್ಡ ನಟರಾಗಬೇಕೆನ್ನುವವರಿದ್ದಾರೆ, ನಿರ್ದೇಶಕನನ್ನಾಗಬೇಕೆಬ ಕನಸು ಹೆಣೆದವರಿದ್ದಾರೆ, ಕ್ಯಾಮೆರಾಮೆನ್ ಆಗಬೇಕೆಂದುಕೊಂಡವರಿದ್ದಾರೆ, ತಾಂತ್ರಿಕ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂದುಕೊಂಡವರಿದ್ದಾರೆ. ಅವರಿಗೆ ಸಿಗುವುದು ದಿನಕ್ಕೆ 150 ರಿಂದ 200 ರೂಪಾಯಿ ಪಗಾರ. ಅಲ್ಲಲ್ಲಿ ಕಾಣಿಸಿಕೊಂಡು, ಬಳಿಕ ಚಿಕ್ಕಪುಟ್ಟ ಪಾತ್ರಗಳನ್ನು ನಿರ್ವಹಿಸುವ ಇವರೆಲ್ಲಾ ಬೆಳಕಿನ ಕಿರಣಗಳನ್ನು ಅರಸುವವರು.ಹೀಗೆ ಕನಸುಗಳ ಮೂಟೆ ಹೊತ್ತು ಬಂದವರೆಲ್ಲಾ ಕಿರಿಯ ಕಲಾವಿದರಾಗಿದ್ದಾರೆ ಎಂದಲ್ಲ. ಕೆಲವರು ಲೈಟ್‌ಬಾಯ್ಸ ಆಗಿದ್ದಾರೆ, ಕೆಲವರು ಮೇಕಪ್‌ಮ್ಯಾನ್ ಅಸಿಸ್ಟೆಂಟ್, ಸ್ಟಂಟ್ ಮಾಸ್ಟರ್ ಅಸಿಸ್ಟೆಂಟ್, ಸೆಟ್‌ನಲ್ಲಿ ಊಟ ಬಡಿಸುವವನು, ನಾಯಕ-ನಾಯಕಿಗೆ ಮೇಕಪ್ ಹಾಳಾಗದಂತೆ ಬಿನೆರಳು ಒದಗಿಸುವವನು.... ಹೀಗೆ ಅವಕಾಶ ಸಿಕ್ಕಲ್ಲಿ ನೆಲೆಕಂಡುಕೊಂಡಿದ್ದಾರೆ.ಕೆಲವರು ಇಷ್ಟಪಟ್ಟು ಪಡೆದಿದ್ದು, ಇನ್ನು ಕೆಲವರು ಅನಿವಾರ್ಯವಾಗಿ ಒಪ್ಪಿಕೊಂಡಿದ್ದು. ತೆರೆಯ ಮೇಲೆ ಮೂರು ಗಂಟೆ ರಂಜಿಸುವ ಚಿತ್ರದ ಅಂದ ಚೆಂದ, ಲೋಪದೋಷಗಳ ಪಟ್ಟಿಯನ್ನು ಬಿಚ್ಚಿಟ್ಟು ವಿಶ್ಲೇಷಿಸುವ ಭರದಲ್ಲಿ ನಮ್ಮ ಕಣ್ಣಿಗೆ ಕಾಣುವುದು ನಾಯಕ, ನಾಯಕಿ, ನಿರ್ದೇಶಕ, ಚಿತ್ರಸಾಹಿತಿ ಮುಂತಾದ ಕೆಲವೇ ಮುಖಗಳಷ್ಟೆ. ಚಿತ್ರ ಗೆಲ್ಲಲಿ ಸೋಲಲಿ ಈ ಕೆಲವೇ ಮುಖಗಳಷ್ಟೇ ಶ್ರಮ ತೆರೆಹಿಂದಿನ ಈ ಶ್ರಮಜೀವಿಗಳದ್ದು ಇದ್ದೇ ಇರುತ್ತದೆ.`ಕೆಲಸವಿಲ್ಲದೆ ಸಿನಿಮಾ ನೋಡಿ ನೋಡಿ ಹಾಳಾದ ಹುಡುಗರು ಚಿತ್ರರಂಗದ ಮೆಟ್ಟಿಲು ಹತ್ತುತ್ತಾರೆ~ ಎಂಬ ವ್ಯಂಗ್ಯ ಇದೆ. ಆದರೆ ವಾಸ್ತವವಾಗಿ ಇಲ್ಲಿರುವವರು ಓದಿಗೆ ತಿಲಾಂಜಲಿ ಇಟ್ಟು ಸಿನಿಮಾ ಬದುಕನ್ನು ಕಟ್ಟಿಕೊಳ್ಳಲು ಬಂದವರು ಮಾತ್ರವಲ್ಲ. ಉನ್ನತಮಟ್ಟದಲ್ಲಿ ಪದವಿ ಗಳಿಸಿದವರಿದ್ದಾರೆ.

 

ಹತ್ತಾರು ವೃತ್ತಿಗಳ ಜೊತೆ ಹವ್ಯಾಸವಾಗಿ ಸಿನಿಮಾ ರಂಗದಲ್ಲೂ ತೊಡಗಿಕೊಂಡವರಿದ್ದಾರೆ. ತಿಂಗಳಿಗೆ ಐದಂಕಿಯ ಸಂಬಳವನ್ನೆಣಿಸುವ ಸಾಫ್ಟ್‌ವೇರ್ ಎಂಜಿನಿಯರ್‌ಗಳಿದ್ದಾರೆ. ಡಾಕ್ಟರ್‌ಗಳಿದ್ದಾರೆ. ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉನ್ನತ ಹುದ್ದೆಯಲ್ಲಿದ್ದವರೂ ಇದ್ದಾರೆ. ಏನನ್ನಾದರೂ ಸಾಧಿಸಬೇಕು ಎಂಬ ಛಲದಿಂದ ಬಂದವರಿದ್ದಾರೆ. ಅವರಿಗೆಲ್ಲಾ ಮೊದಲ ಮೆಟ್ಟಿಲು ಈ ಪಾತ್ರವಲ್ಲದ ಪಾತ್ರಗಳು.ಸಿನಿಮಾದಲ್ಲಿ ಕಾಣಿಸಿಕೊಂಡರೆ ಬೇಗ ಪ್ರಸಿದ್ಧರಾಗುತ್ತೇವೆ ಎಂಬ ನಂಬಿಕೆಯೂ ಈ ಸೆಳೆತಕ್ಕೆ ಕಾರಣ. ಸರ್ಟಿಫಿಕೇಟ್ ಇದ್ದರೆ ಅವಕಾಶ ಸಿಗುತ್ತದೆ ಎಂದು ತರಬೇತಿ ಸಂಸ್ಥೆಗಳಿಗೆ ಹೋಗಿ ಕೋರ್ಸ್ ಮುಗಿಸಿ ಬಂದವರ ಪಾಡು ಭಿನ್ನವಲ್ಲ. ಗ್ಲಾಮರ್ ಲೋಕ ಯಾರನ್ನೂ ಅಷ್ಟು ಸುಲಭಕ್ಕೆ ಒಳಗೆ ಬಿಟ್ಟುಕೊಡುವುದಿಲ್ಲ.ಹೊರ ಹೋಗುವುದು ಇನ್ನೂ ಕಷ್ಟ. ಒಂದು ಚಾನ್ಸ್‌ಗಾಗಿ ಕಂಡಕಂಡವರಿಗೆ ದುಂಬಾಲು ಬೀಳುವವರಿಗೆ ಕಿಸೆ ಖಾಲಿಯಾದಾಗಲೇ ಎಚ್ಚರವಾಗುವುದು. ಅಂಥಹವರಿಗೆ ಅವಕಾಶಗಳನ್ನು ಹುಡುಕುವ ಜಾಣ್ಮೆ ಮತ್ತು ತಾಳ್ಮೆ ಎರಡೂ ಇರುವುದಿಲ್ಲ. ಹೀಗಾಗಿ ನೇರವಾಗಿ ವಂಚಕರ ಬಲೆಗೆ ಬೀಳುತ್ತಾರೆ.ದೇವಸ್ಥಾನ, ರಸ್ತೆ, ಸಂತೆಗಳಲ್ಲಿ ಕಾಣುವ `ಅಂಕಲ್-ಆಂಟಿಯರು~, ಕಾಲೇಜು, ಕ್ಲಬ್-ಪಬ್‌ನಂತಹ ದೃಶ್ಯಗಳಿಗೆ ಕಾಲೇಜು ವಿದ್ಯಾರ್ಥಿಗಳು, ಬೇರೆ ಕೆಲಸಗಳಿಲ್ಲದೆ ಸಿನಿಮಾಕ್ಕೆ ಬರುವ `ಎಂಜಿ ರೋಡ್~ನ ಕಲಾವಿದರು. ಹೀಗೆ ಕಿರಿಯ ಕಲಾವಿದರನ್ನು ಸಿನಿಮಾ ಮಂದಿ ವಿಶ್ಲೇಷಿಸುವುದು ಮೂರು ರೀತಿ. ಲೈಟ್‌ಬಾಯ್ ಅಥವಾ ಇನ್ನಿತರ ಕೆಲಸಗಳಿಗೆ ಹೋದರೆ ತಮ್ಮನ್ನು ಗುರುತಿಸಿಕೊಳ್ಳುವ ಅವಕಾಶ ತಪ್ಪಿಹೋಗುತ್ತದೆ ಎಂಬ ಭಯದಿಂದ ಕಿರಿಯ ಕಲಾವಿದರಾಗಿಯೇ ಉಳಿಯುವವರ ಸಂಖ್ಯೆ ದೊಡ್ಡದು.ಕಿರಿಯ ಕಲಾವಿದರಿಗೆ ಆದರ್ಶಪ್ರಾಯರಾದ ಜನಪ್ರಿಯ ನಟ/ನಟಿಯರ ಪಟ್ಟಿಯೂ ದೀರ್ಘವಿದೆ. ರಜನೀಕಾಂತ್‌ರಂತಹ ವಿಶ್ವಮಟ್ಟದಲ್ಲಿ ಹೆಸರು ಮಾಡಿದ ನಟ ಮೊದಲು ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಕೇವಲ ಒಂದು ಛಾಯಾಚಿತ್ರದ ಮೂಲಕ.ದುನಿಯಾ ವಿಜಯ್, ಗಣೇಶ್, ತೆಲುಗಿನ ರವಿತೇಜರಂತಹ ಸ್ಟಾರ್‌ಗಳು ಚಿತ್ರರಂಗ ಪ್ರವೇಶಿಸಿದ್ದೇ ಸಣ್ಣಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚುವ ಮೂಲಕ. ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಂಡು, ಒಂದೆರಡು ಸಂಭಾಷಣೆ ಹೇಳು ಅವಕಾಶ ಸಿಕ್ಕರೆ ಸಾಕೆಂದು ಕಾಯುವವರಿಗೆ ಇಂಥಹ ನಟರೇ ಸ್ಫೂರ್ತಿ. ಬಣ್ಣ ಹಚ್ಚುವ ಉಮೇದಿನಿಂದ ಬಂದವರು ಚಿತ್ರ ನಿರ್ಮಿಸುವ ಮಟ್ಟಕ್ಕೆ ಬೆಳೆದಿರುವ ನಿದರ್ಶನಗಳೂ ನಮ್ಮ ಮುಂದಿವೆ.ಪ್ರತಿ ಚಿತ್ರಕ್ಕೂ ಪ್ರಮುಖ ಕಲಾವಿದರಷ್ಟೇ ಕಿರಿಯ ಕಲಾವಿದರೂ ಅಗತ್ಯವಿರುತ್ತಾರೆ.

ಲಗಾನ್~ನಂತಹ ಚಿತ್ರದಲ್ಲಿ ಕಿರಿಯ ಕಲಾವಿದರ ಅವಶ್ಯಕತೆ ಹೆಚ್ಚು. ರಜನೀಕಾಂತ್‌ರ ಅನೇಕ ಚಿತ್ರಗಳ ಚಿತ್ರೀಕರಣ ನಡೆದಿರುವುದು ಮೈಸೂರಿನಲ್ಲಿ. ಏಕೆಂದರೆ ಅವರ ಚಿತ್ರಗಳಲ್ಲಿ ಪದೇ ಪದೇ ಕಾಣಿಸುವ ಎತ್ತಿನಗಾಡಿ, ಹೊಲಗದ್ದೆ, ದುಡಿಯುವ ಜನರು ಮುಂತಾದ ಪರಿಸರ ಮತ್ತು ಕಲಾವಿದರು ಹೆಚ್ಚು ಲಭ್ಯವಿರುವುದು ಮೈಸೂರು ಭಾಗದಲ್ಲಿ.ಚಿತ್ರರಂಗದಲ್ಲಿ ಯುವಮುಖಗಳೇ ಸಾಕಷ್ಟು ತುಂಬಿರಲು ಕಾರಣಗಳಿವೆ. ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಆಸೆಗಳು ಚಿಗುರುವುದೇ ಈ ವಯಸ್ಸಿನಲ್ಲಿ. ಹೆಣ್ಣಿನತ್ತ ಆಗುವಂತಹದೇ ಸಹಜ ಆಕರ್ಷಣೆ ಯುವಕರಲ್ಲಿ ಚಿತ್ರರಂಗದತ್ತ ಆಗುವ ಸೆಳೆತವಿದು. ಕಳೆದೊಂದು ದಶಕದಿಂದೀಚೆಗೆ ಸಿನಿಮಾರಂಗಕ್ಕೆ ಕಾಲಿಡುವ ಯುವಸಮೂಹದ ಸಂಖ್ಯೆ ಹೆಚ್ಚಾಗಿದೆ.ಚಿತ್ರರಂಗಕ್ಕೆ ಕಾಲಿಡುವವರಿಗೆ ನೆಲೆ ಕಳೆದುಕೊಳ್ಳುವ ಭಯದ ವಾತಾವರಣವೂ ಸ್ವಲ್ಪಮಟ್ಟಿಗೆ ದೂರವಾಗಿದೆ. ಇಲ್ಲಿ ಕೆಲಸ ಮಾಡುವವರೆಲ್ಲಾ ಸಂಘಟಿತರಾಗಿದ್ದಾರೆ. ಕಿರಿಯ ಕಲಾವಿದರು, ಮೇಕಪ್ ಮೆನ್, ಡ್ಯಾನ್ಸರ್ಸ್‌, ಲೈಟ್‌ಬಾಯ್ಸ... ಹೀಗೆ ಚಿತ್ರರಂಗದ ಪ್ರತಿ ವಿಭಾಗಗಳಲ್ಲೂ ಸಂಘಗಳಿವೆ. ಹೀಗಾಗಿ ಸಿನಿಮಾ ಬದುಕಿನ ಭದ್ರತೆಯನ್ನೂ ನೀಡುತ್ತದೆ ಎಂಬ ಭರವಸೆಯೂ ಬೆಳೆದಿದೆ.ವರ್ಷಕ್ಕೆ ನೂರರಿಂದ ನೂರಿಪ್ಪತ್ತು ಸಿನಿಮಾ ತಯಾರಿಸುವ ಕನ್ನಡ ಚಿತ್ರೋದ್ಯಮದಲ್ಲಿ ಗೆಲುವಿನ ಸವಿ ಸವಿಯುವುದು ಬೆರಳಣಿಕೆಯಷ್ಟು ಚಿತ್ರಗಳು ಮಾತ್ರ. ಆದರೂ ಚಿತ್ರರಂಗಕ್ಕೆ ಬಿಡುವಿಲ್ಲದ ಕೆಲಸ. ಈ ಕಾರ್ಖಾನೆಯೊಳಗೆ ಬದುಕಿನ ಬೆಳಕು ಹುಡುಕುತ್ತಿರುವವರು ಸಾವಿರಾರು ಮಂದಿ. ತೆರೆಯ ಮೇಲೆ ಸೆಕೆಂಡುಗಳ ಕಾಲ ಮುಖ ಕಾಣಿಸುವಷ್ಟು ಅವಕಾಶ ಸಿಕ್ಕರೆ ಸಾಕು. ಅವರ ಪಾಲಿಗೆ ಅದು ಕಾರ್ಮೋಡದಂಚಿನ ಬೆಳ್ಳಿರೇಖೆ! 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.