ಗುರುವಾರ , ಮೇ 19, 2022
21 °C

ಇವರು ಸುಮನ್ ಗುರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇವರು ಸುಮನ್ ಗುರು!

ಹಣೆಗೆ ದೊಡ್ಡ ಕುಂಕುಮ. ದೇಸಿ ಸೀರೆ. ಕೆನ್ನೆ ಮೇಲೆ ಅದೇ ಗುಳಿ. ಕಮಲದಂಥ ಅವೇ ಕಣ್ಣುಗಳು! ಮೇಕಪ್ ಹಾಕಿದ್ದ ಮುಖದ ಮೇಲೆ ನಗು ತುಂಬಿಕೊಂಡಿದ್ದ ಸುಮನ್ ನಗರ್‌ಕರ್ ಸಿನಿಮಾ ಸೆಟ್‌ನಲ್ಲಿ ವರ್ಷಗಳಿಂದ ಕಂಡವರೇ ಅಲ್ಲ. ಮೊನ್ನೆ ಹೆಸರುಘಟ್ಟದ ‘ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನಲ್ಲಿ’ ಅವರು ಬಣ್ಣಹಚ್ಚಿ ಕ್ಯಾಮೆರಾ ಮುಂದೆ ನಿಂತರು. ಇದು ಕನ್ನಡದ ಚಿತ್ರವಲ್ಲ; ಹಿಂದಿಯದ್ದು. ಹೆಸರು ‘ಕಗಾರ್’.‘ಪ್ಯಾಸಾ’ ಹಿಂದಿ ಚಿತ್ರದಲ್ಲಿ ವಹೀದಾ ರೆಹಮಾನ್ ಗೆಟಪ್ ಹೇಗಿತ್ತೋ ಅದಕ್ಕೆ ಹೋಲುವಂತೆಯೇ ಸಜ್ಜಾಗಿದ್ದ ಸುಮನ್ ನಗರ್‌ಕರ್, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವಿ.ಕೆ.ಮೂರ್ತಿ ಕ್ಯಾಮೆರಾಮನ್ ಆಗಿದ್ದಾರೆಂಬ ಕಾರಣಕ್ಕೆ ಈ ಚಿತ್ರದಲ್ಲಿ ನಟಿಸಲು ಒಪ್ಪಿದ್ದು.

ಹತ್ತು ವರ್ಷದ ಹಿಂದೆ ಮದುವೆಯಾದಾಗಿನಿಂದ ಸುಮನ್ ನಗರ್‌ಕರ್ ವಾಸ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ. ಅವರ ಪತಿ ಗುರು ಸಾಫ್ಟ್‌ವೇರ್ ಎಂಜಿನಿಯರ್.ಮನೆಯಲ್ಲಿದ್ದರೂ ಸುಮ್ಮನೆ ಗೃಹಿಣಿಯಾಗಿಯಷ್ಟೇ ಅವರು ಕಾಲ ಕಳೆಯುತ್ತಿಲ್ಲ. ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಮೂರು ಬ್ಯಾಚ್‌ನಲ್ಲಿ ಹಿಂದುಸ್ತಾನಿ ಸಂಗೀತದ ಪಾಠ ಹೇಳುತ್ತಾರೆ. ಆಮೇಲೆ ಕಂಪ್ಯೂಟರ್ ಎದುರು ಕೂತು ಅನಿಮೇಷನ್ ಹಾಗೂ ಗ್ರಾಫಿಕ್ಸ್ ವರಸೆಗಳನ್ನು ಅಭ್ಯಾಸ ಮಾಡುತ್ತಾರೆ. ಸಾಕ್ರಮೆಂಟೋದಲ್ಲಿ ಸಿನಿಮಾ ಹಾಗೂ ಟಿವಿಗೆ ಸಂಬಂಧಿಸಿದ ಅಲ್ಪಾವಧಿಯ ಕೋರ್ಸ್ ಕೂಡ ಮಾಡಿರುವ ಸುಮನ್‌ಗೆ ಮುಂದೆ ನಿರ್ದೇಶಕಿಯಾಗಬೇಕೆಂಬ ಬಯಕೆಯೂ ಇದೆ.‘ಪ್ರೀತ್ಸು ತಪ್ಪೇನಿಲ್ಲ’ ಸುಮನ್ ಅಭಿನಯದ ಕೊನೆಯ ಕನ್ನಡ ಚಿತ್ರ. ಅದು ಇನ್ನೂ ತೆರೆಕಾಣಬೇಕಿದೆ. ಯಶಸ್ವಿ ದಾಂಪತ್ಯ ಜೀವನ ನಡೆಸುತ್ತಿರುವ ಸುಮನ್ ನಗರ್‌ಕರ್ ತಮ್ಮ ಪತಿಯೊಟ್ಟಿಗೆ ‘ರಾಜ ರಾಣಿ ರಮೇಶ್’ ರಿಯಾಲಿಟಿ ಶೋನಲ್ಲೂ ಭಾಗವಹಿಸಿದರು. ಇಲ್ಲಿನ ಎಲ್ಲವನ್ನೂ, ಎಲ್ಲರನ್ನೂ ನೋಡಿದಾಗ ಅವರಿಗೆ ಹಳೆಯ ನೆನಪುಗಳು ಮರುಕಳಿಸುತ್ತವೆಯಂತೆ. ‘ಕಾಗರ್’ ನಂತರ ಮುಂದೆ ಎಂಬ ಪ್ರಶ್ನೆಗೆ ಅವರು ಕೊಡುವ ಉತ್ತರ-‘ನೋಡೋಣ’.ತೆರೆಯ ಮೇಲೂ ಅವರನ್ನು ಮತ್ತೆ ನೋಡೋಣ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.