ಶುಕ್ರವಾರ, ಮೇ 14, 2021
25 °C

ಇಸ್ರೊಗೆ ಬಂದ ಬೆದರಿಕೆ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಂಕಿತ ಉಗ್ರರು ನ್ಯಾನೊ ಕಾರಿನಲ್ಲಿ ನಗರಕ್ಕೆ ನುಸುಳಿದ್ದಾರೆ ಎಂಬುದು ವದಂತಿ ಎಂದು ಖಚಿತವಾದ ಬೆನ್ನಲ್ಲೇ, ಪೀಣ್ಯದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೊ) ಮಂಗಳವಾರ ಬೆದರಿಕೆಯ ಪತ್ರ ಬಂದಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.ಬೆದರಿಕೆ ಪತ್ರ ಬಂದಿರುವುದನ್ನು ಖಚಿತಪಡಿಸಿದ ಹೆಚ್ಚುವರಿ ಪೊಲೀಸ್ ಕಮಿಷನರ್ ಕಮಲ್‌ಪಂತ್, `ಇಸ್ರೊ ಮಾತ್ರವಲ್ಲದೆ, ನಗರದ ಮೂರ‌್ನಾಲ್ಕು ಸಂಸ್ಥೆಗಳಿಗೆ ಇದೇ ರೀತಿಯ ಬೆದರಿಕೆಯ ಪತ್ರ ಹೋಗಿವೆ. ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗಿದೆ. ನಾಗರಿಕರು ಆತಂಕಪಡಬೇಕಿಲ್ಲ' ಎಂದು ತಿಳಿಸಿದರು.`ಪೀಣ್ಯದಲ್ಲಿರುವ ಇಸ್ರೊದ ವಾಹನ ನಿಲುಗಡೆ ಸ್ಥಳದಲ್ಲಿ ಮಂಗಳವಾರ ಕೊರಿಯರ್ ಕವರ್ ಪತ್ತೆಯಾಗಿದೆ. ಅಲ್ಲಿನ ಸೆಕ್ಯುರಿಟಿ ಗಾರ್ಡ್, ಆ ಕವರ್ ತೆರದು ನೋಡಿದಾಗ ಐದು ಪುಟಗಳ ಬೆದರಿಕೆ ಸಂದೇಶ ಅದರಲ್ಲಿತ್ತು. ಮೊದಲ ಪುಟದಲ್ಲಿ ಇಂಗ್ಲೀಷ್‌ನಲ್ಲಿ ಬರೆಯಲಾಗಿದ್ದು, ನಂತರ ನಾಲ್ಕು ಪುಟಗಳಲ್ಲಿ ಉರ್ದುವಿ ನಲ್ಲಿ ನಿಯೋಜಿತ ಸಂಚುಗಳ ಬಗ್ಗೆ ವಿವರಿಸಿದ್ದಾರೆ' ಎಂದು ಮೂಲಗಳು ತಿಳಿಸಿವೆ.ಉಮರ್ ಭಕ್ಷ್ ಎಂಬಾತನ ಹೆಸರಿನಲ್ಲಿ ಇಸ್ರೋ ಆವರಣಕ್ಕೆ ಪತ್ರ ಬಂದಿದೆ. `ನಾವು ಈಗಾಗಲೇ ಇಸ್ರೊ ಸಂಸ್ಥೆಯನ್ನು ಸೇರಿಕೊಂಡಿದ್ದು, ಇಲ್ಲಿನವರ ಚಲನವಲನಗಳನ್ನು ಗಮನಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇಸ್ರೋ ಸೇರಿದಂತೆ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್), ನ್ಯಾಷನಲ್ ಏರೋಸ್ಪೇಸ್ ಲ್ಯಾಬೊರೇಟರಿ (ಎನ್‌ಎಎಲ್), ಪ್ರತಿಷ್ಠಿತ ಪಂಚತಾರ ಹೋಟೆಲ್ ಹಾಗೂ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಶಿವನ ದೇವಾಲಯದಲ್ಲಿ ವಿಧ್ವಂಸಕ ಕೃತ್ಯ ಎಸಗುತ್ತೇವೆ. ರಕ್ತಪಾತಕ್ಕೆ ಸಿದ್ಧರಾಗಿ' ಎಂದು ಪತ್ರದಲ್ಲಿ ಹೇಳಿದ್ದಾನೆ.

ಶಂಕಿತ ಉಗ್ರರು ನ್ಯಾನೊ ಕಾರಿನಲ್ಲಿ ನಗರಕ್ಕೆ ನುಸುಳಿದ್ದಾರೆ ಎಂದು ಜೂನ್.15ರಂದು ಮಾಧ್ಯಮಗಳಲ್ಲಿ ಪ್ರಸಾರವಾದ ಸುದ್ದಿ ನಾಗರಿಕರ ಆತಂಕವನ್ನು ಹೆಚ್ಚಿಸಿತ್ತು. ಮಂಗಳವಾರ ಆ ಕಾರನ್ನು ಪತ್ತೆ ಮಾಡಿದ್ದ ನಗರ ಪೊಲೀಸರು, `ಅವರು ಶಂಕಿತ ಉಗ್ರರಲ್ಲ. ಬದಲಾಗಿ ಗುಜರಾತ್ ಮೂಲದ ವ್ಯಾಪಾರಿಗಳು' ಎಂದು ಖಚಿತಪಡಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.