ಗುರುವಾರ , ಜನವರಿ 23, 2020
28 °C

ಇಸ್ರೊ ಪ್ರತಿಷ್ಠೆಗೆ ಧಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಯಿಂದ ಜಗತ್ತಿನ ಗಮನ ಸೆಳೆದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆಯೂ (ಇಸ್ರೊ) ಹಗರಣಗಳಿಂದ ಹೊರತಾಗಿಲ್ಲ. ಎಸ್-ಬ್ಯಾಂಡ್ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ಇಸ್ರೊದ ವಾಣಿಜ್ಯ ಘಟಕ ಅಂತರಿಕ್ಷ ಕಾರ್ಪೋರೇಷನ್ ಮತ್ತು ದೇವಾಸ್ ಮಲ್ಟಿ ಮೀಡಿಯಾ ಸಂಸ್ಥೆಗಳ ನಡುವೆ ಆದ ಒಪ್ಪಂದ ನಾಲ್ವರು ವಿಜ್ಞಾನಿಗಳ ವಿಶ್ವಾಸಾರ್ಹತೆಯನ್ನು ಪ್ರಶ್ನಿಸುವಂತೆ ಮಾಡಿದೆ. ಈ ಹಗರಣ ಕುರಿತು ತನಿಖೆ ನಡೆಸಿದ ಕೇಂದ್ರೀಯ ಜಾಗೃತ ಆಯೋಗದ ಮಾಜಿ ಅಧ್ಯಕ್ಷರ ನೇತೃತ್ವದ ಸಮಿತಿ, ಇಸ್ರೊದ ಮಾಜಿ ಅಧ್ಯಕ್ಷ ಮಾಧವನ್ ನಾಯರ್ ಹಾಗೂ ಇತರ ಮೂವರು ವಿಜ್ಞಾನಿಗಳು ಒಪ್ಪಂದ ಸಂದರ್ಭದಲ್ಲಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುವ ವಿಷಯದಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಯಾವುದೇ ಸರ್ಕಾರಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸದಂತೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಇಡೀ ದೇಶವೇ ಹೆಮ್ಮೆ ಪಡುವಂತಹ ಸಾಧನೆಗಳ ನೇತೃತ್ವ ವಹಿಸಿದ್ದ ಮಾಧವನ್ ನಾಯರ್ ಅವರಂತಹ ಹಿರಿಯ ವಿಜ್ಞಾನಿ ಈ ಹಗರಣದಲ್ಲಿ ಭಾಗಿಯಾಗಿಯಾಗಿದ್ದು ಆಘಾತಕಾರಿ ಸಂಗತಿ. ಈ ಹಗರಣದಲ್ಲಿ ಹಣಕಾಸಿನ ಅವ್ಯವಹಾರ ನಡೆದಿದೆಯೇ ಎಂಬ ವಿವರಗಳು ಬೆಳಕಿಗೆ ಬಂದಿಲ್ಲ. ಆದರೆ ನಾಲ್ವರು ವಿಜ್ಞಾನಿಗಳಿಗೆ ನಿರ್ಬಂಧ ವಿಧಿಸಿರುವುದನ್ನು ಗಮನಿಸಿದರೆ ಅವರ ವಿರುದ್ಧ ಗಂಭೀರ ಆರೋಪಗಳಿರುವ ಸಾಧ್ಯತೆಗಳನ್ನು ತಳ್ಳಿಹಾಕಲಾಗದು. ಈ ಬೆಳವಣಿಗೆ ಖಾಸಗಿ ಸಂಸ್ಥೆಗಳೊಂದಿಗೆ ಸರ್ಕಾರಿ ಸಂಸ್ಥೆಗಳು ಮಾಡಿಕೊಳ್ಳುವ ಯಾವ ಒಪ್ಪಂದವೂ ಹಗರಣದಿಂದ ಮುಕ್ತವಾಗಿರಲು ಸಾಧ್ಯವಿಲ್ಲ ಎನ್ನುವುದನ್ನು ಸಾಬೀತುಪಡಿಸಿದೆ. ಇದರಿಂದ ಇಸ್ರೊದ ಪ್ರತಿಷ್ಠೆಗೂ ಧಕ್ಕೆಯಾಗಿದೆ.  `ತರಂಗಾಂತರ ಹಂಚಿಕೆ ಒಪ್ಪಂದ ಕುರಿತಂತೆ ಇಸ್ರೊ ಅಧ್ಯಕ್ಷ ರಾಧಾಕೃಷ್ಣನ್ ಕೇಂದ್ರ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಅವರಿಗೆ ಟ್ರಾನ್ಸ್‌ಪಾಂಡರ್ ಮತ್ತು ಉಪಗ್ರಹಗಳ ಬಗ್ಗೆ ಪ್ರಾಥಮಿಕ ತಿಳುವಳಿಕೆ ಇಲ್ಲ~ ಎಂಬುದು ಮಾಧವನ್ ನಾಯರ್ ಆರೋಪ. ಇದು ಇಸ್ರೊ ವಿಜ್ಞಾನಿಗಳ ನಡುವೆ ವೃತ್ತಿ ಮಾತ್ಸರ್ಯವಿದೆ ಎಂಬ ಅಭಿಪ್ರಾಯಕ್ಕೆ ಎಡೆ ಕೊಡುತ್ತದೆ. ತರಂಗಾಂತರ ಹಂಚಿಕೆ ಹಗರಣ ಹೊರಬರಲು ಅದೂ ಒಂದು ಕಾರಣವಾಗಿರಬಹುದು. ಇದೇನೇ ಇರಲಿ, ಇಸ್ರೊ ದೇಶದ ಪ್ರತಿಷ್ಠಿತ ಸಂಸ್ಥೆ. ಅದು ಜಗತ್ತಿನ ಗಮನ ಸೆಳೆದಿರುವ ಸಂಶೋಧನಾ ಸಂಸ್ಥೆ. ವಿದೇಶಿ ಉಪಗ್ರಹಗಳನ್ನು ತನ್ನ ಉಡಾವಣಾ ವಾಹಕದ ಮೂಲಕ ಅಂತರಿಕ್ಷಕ್ಕೆ ಕಳುಹಿಸುವ ಸಾಮರ್ಥ್ಯ ಪಡೆದಿದೆ. ಬಾಹ್ಯಾಕಾಶ ವಿಜ್ಞಾನದಲ್ಲಿ ಮುಂದುವರಿದ ದೇಶಗಳಿಗೆ ಪೈಪೋಟಿ ನೀಡುತ್ತಿದೆ. ಹಸಿವು, ಬಡತನ, ನಿರುದ್ಯೋಗದಂತಹ ಹತ್ತಾರು ಸಮಸ್ಯೆಗಳಿದ್ದರೂ ಭಾರತ ಸರ್ಕಾರ ಬಾಹ್ಯಾಕಾಶ ಸಂಶೋಧನೆಗೆ ಭಾರೀ ಮೊತ್ತದ ಹಣ ವೆಚ್ಚ ಮಾಡುತ್ತಿದೆ.  ಅದು ಭ್ರಷ್ಟಾಚಾರಮುಕ್ತವಾಗಿರಬೇಕು ಎಂದು ಜನರು ಬಯಸುತ್ತಾರೆ. ವಿಜ್ಞಾನಿಗಳು ಭಿನ್ನಾಭಿಪ್ರಾಯಗಳು ಹಾಗೂ ವೃತ್ತಿ ಮತ್ಸರವನ್ನು ಮರೆತು ದೇಶದ ಅಭಿವೃದ್ಧಿಗೆ ಶ್ರಮಿಸಬೇಕು.

ಪ್ರತಿಕ್ರಿಯಿಸಿ (+)