ಸೋಮವಾರ, ಏಪ್ರಿಲ್ 19, 2021
23 °C

ಈಗ ವಿಕಿರಣದ ಆಪತ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಡಿಪಿಎ/ ಪಿಟಿಐ): ತೀವ್ರ ಭೂಕಂಪ ಹಾಗೂ ಸುನಾಮಿಗೆ ನಲುಗಿದ ಫುಕುಶಿಮಾ ಪರಮಾಣು ಸ್ಥಾವರದಲ್ಲಿ ಮಂಗಳವಾರ ಮತ್ತೆರಡು ರಿಯಾಕ್ಟರ್‌ಗಳು ಸ್ಫೋಟಿಸುವ ಮೂಲಕ ಜಪಾನ್ ವಿಕಿರಣ ವಿಪತ್ತಿಗೆ ಸಿಲುಕಿದೆ.  ಈ ಸ್ಫೋಟಗಳ ನಂತರ ಸ್ಥಾವರದಿಂದ 240 ಕಿ.ಮೀ. ದೂರದಲ್ಲಿರುವ ರಾಜಧಾನಿ ಟೋಕಿಯೊ ಸೇರಿದಂತೆ ಹಲವೆಡೆ ವಾತಾವರಣದಲ್ಲಿ ವಿಕಿರಣ ಪ್ರಮಾಣ ವಿಷಮ ಸ್ಥಿತಿ ತಲುಪಿದೆ.ಈ ಸಂಕಷ್ಟದ ಸ್ಥಿತಿಯನ್ನು ಶಾಂತಿಯಿಂದ ಎದುರಿಸಲು ರಾಷ್ಟ್ರದ ಜನತೆಗೆ ಅಧಿಕೃತ ಮನವಿ ಮಾಡಿರುವ ಪ್ರಧಾನಿ ನವಾಟೊ ಕಾನ್, ‘ಧಕ್ಕೆಗೊಳಗಾಗಿರುವ ರಿಯಾಕ್ಟರ್‌ಗಳಿಂದ ಈಗಾಗಲೇ ವಿಕಿರಣ ಹಲವೆಡೆಗೆ ಕಬಂಧ ಬಾಹು ಚಾಚಿದ್ದು, ಇನ್ನಷ್ಟು ಗಂಡಾಂತರಕಾರಿ ವಿಕಿರಣ ಹೊರಹೊಮ್ಮಬಹುದು’ ಎಂದು ಎಚ್ಚರಿಸಿದ್ದಾರೆ. ಶುಕ್ರವಾರದ ಭೂಕಂಪದ ನಂತರ ಈ ಸ್ಥಾವರದಲ್ಲಿ ನಾಲ್ಕು ರಿಯಾಕ್ಟರುಗಳು ಸ್ಫೋಟಗೊಂಡಂತಾಗಿದೆ. 25 ವರ್ಷಗಳ ಹಿಂದೆ ರಷ್ಯಾದಲ್ಲಿ ಸಂಭವಿಸಿದ ಚೆರ್ನೋಬಿಲ್ ಅಣು ವಿಪತ್ತಿಗಿಂತ ಕರಾಳವಾದ ದುರಂತ ಸಂಭವಿಸುವ ಭೀತಿ ಮೂಡಿದೆ.ಮಂಗಳವಾರದ ಮೊದಲ ಸ್ಫೋಟ ಸ್ಥಳೀಯ ಕಾಲಮಾನ ಬೆಳಿಗ್ಗೆ 6.10ಕ್ಕೆ ಹಾಗೂ ನಂತರದ ಸ್ಫೋಟ ಬೆಳಿಗ್ಗೆ 9.40ಕ್ಕೆ ಸಂಭವಿಸಿತು. 9.40ಕ್ಕೆ ಉಂಟಾದ ಸ್ಫೋಟದಿಂದ ರಿಯಾಕ್ಟರಿನ ಲೋಹದ ಹೊದಿಕೆ ನಾಶವಾಗಿರುವ ಸಾಧ್ಯತೆ ಇದ್ದು, ಪರಮಾಣು ಇಂಧನದ ಸರಳು ಕರಗುವ ಭೀತಿ ಉಂಟಾಗಿದೆ. ಇದರಿಂದಾಗಿ ತೀವ್ರ ವಿಕಿರಣ ಮಾಲಿನ್ಯ ಹಾಗೂ ಸಂಕಷ್ಟ ಎದುರಾಗಬಹುದೆಂದು ಸ್ಥಾವರದ ನಿರ್ವಹಣೆ ಹೊಣೆ ಹೊತ್ತ ಟೋಕಿಯೊ ವಿದ್ಯುತ್ ಕಂಪೆನಿ (ಟೆಪ್ಕೊ) ಆತಂಕ ವ್ಯಕ್ತಪಡಿಸಿದೆ.ಈ ಮುನ್ನ ಬೆಳಿಗ್ಗೆ 6.40ಕ್ಕೆ ರಿಯಾಕ್ಟರ್ ಸ್ಫೋಟಗೊಳ್ಳುತ್ತಿದ್ದಂತೆ ಅದಕ್ಕೆ ಬೆಂಕಿ ಹೊತ್ತಿಕೊಂಡಿತು. ನಂತರ ಅದನ್ನು ನಂದಿಸಲಾಯಿತು. ಆದರೆ ಧಕ್ಕೆಗೀಡಾದ ಪರಮಾಣು ರಿಯಾಕ್ಟರಿನ ಸುತ್ತಮುತ್ತ ವಿಕಿರಣ ಸೂಸುವಿಕೆ ಅಪಾಯ ಮಟ್ಟ ತಲುಪಿದೆ ಎಂದು ಸರ್ಕಾರದ ಉನ್ನತ ವಕ್ತಾರ ಯುಕಿಯೊ ಎಡನೊ ಸ್ಪಷ್ಟಪಡಿಸಿದ್ದಾರೆ. ಇದು ಜಲಜನಕ ಸ್ಫೋಟವಿರಬಹುದೆಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.ಪರಮಾಣು ಘಟಕದ ಇಂಧನದ ಸರಳುಗಳು ಸದಾ ತಂಪಾಗಿರುವುದು ಅತ್ಯಗತ್ಯ. ಆದರೆ ಭೂಕಂಪ, ಸುನಾಮಿಯಿಂದಾಗಿ ಸಮುದ್ರದ ನೀರಿನ ಪೂರೈಕೆ (ಕೂಲೆಂಟ್) ಸ್ಥಗಿತಗೊಂಡು ಇಂಧನದ ಸರಳುಗಳು ನೇರವಾಗಿ ವಾತಾವರಣದ ಸಂಪರ್ಕಕ್ಕೆ ಬಂದುದೇ ತಾಪಮಾನ ಏರಿಕೆ ಹಾಗೂ ತರುವಾಯದ ಸ್ಫೋಟಕ್ಕೆ ಕಾರಣ ಎಂದು ತಜ್ಞರು ವಿವರಿಸಿದ್ದಾರೆ.

ಈ ಮುನ್ನ ರಿಯಾಕ್ಟರುಗಳಲ್ಲಿ ಶನಿವಾರ ಹಾಗೂ ಸೋಮವಾರ ಎರಡು ರಿಯಾಕ್ಟರುಗಳಲ್ಲಿ ಜಲಜನಕ ಸ್ಫೋಟಗಳು ಸಂಭವಿಸಿದ್ದವು.

ಎರಡನೇ ರಿಯಾಕ್ಟರ್ ಸ್ಫೋಟಗೊಂಡ ಎರಡು ಗಂಟೆಗಳ ನಂತರ ಆ ಸ್ಥಳದ ಆಸುಪಾಸಿನಲ್ಲಿ ವಿಕಿರಣ ಪ್ರಮಾಣ ಒಂದು ಗಂಟೆಗೆ 8,217 ಮೈಕ್ರೋಸೀವರ್ಟ್‌ನಷ್ಟು ಇತ್ತು. ಇದು ಇಡೀ ವರ್ಷದಲ್ಲಿ ವ್ಯಕ್ತಿಯೊಬ್ಬ ತಾಳಿಕೊಳ್ಳಬಹುದಾದ ವಿಕಿರಣದ ಮಟ್ಟಕ್ಕಿಂತ 8 ಪಟ್ಟು ಅಧಿಕ ಎಂದು ಟೆಪ್ಕೊ ವಿವರಿಸಿದೆ. ವ್ಯಕ್ತಿಯೊಬ್ಬ ಒಂದು ವರ್ಷ ಅವಧಿಯಲ್ಲಿ ಎಷ್ಟು ವಿಕಿರಣ ಸಹಿಸಬಹುದೋ ಅದಕ್ಕಿಂತ 400 ಪಟ್ಟು ಹೆಚ್ಚು ವಿಕಿರಣ ಸ್ಥಾವರದ ಬಳಿ ಕಂಡುಬಂದಿದೆ ಎಂದು ಇನ್ನು ಕೆಲವು ಪರಮಾಣು ತಜ್ಞರು ಹೇಳಿದ್ದಾರೆ.

ಪರಮಾಣು ಸ್ಥಾವರಕ್ಕೆ ಸಮೀಪದ ಇನ್ನು ಕೆಲವು ಪ್ರದೇಶಗಳಲ್ಲಿ ಪ್ರತಿ ಗಂಟೆಗೆ 400 ಮಿಲಿಸೀವರ್ಟ್‌ನಷ್ಟು ವಿಕಿರಣ ಕಂಡುಬಂದಿದೆ. ಪರಮಾಣು ಘಟಕದ ಸಿಬ್ಬಂದಿ ಹಾಗೂ ಯುರೇನಿಯಂ ಗಣಿ ಕಾರ್ಮಿಕರು ಇಡೀ ವರ್ಷದಲ್ಲಿ ತಾಳಿಕೊಳ್ಳಬಹುದಾದ ವಿಕಿರಣ ಮಟ್ಟಕ್ಕಿಂತ ಇದು 20 ಪಟ್ಟು ಅತ್ಯಧಿಕವಾಗಿದೆ.

ಅಪಾಯಕಾರಿ ವಿಕಿರಣ ಇನ್ನು ಕೆಲವೇ ಗಂಟೆಗಳಲ್ಲಿ ರಾಜಧಾನಿ ಟೋಕಿಯೊವನ್ನು ತಲುಪುವ ಸಾಧ್ಯತೆ ಇದೆ ಎಂದು ಫ್ರಾನ್ಸ್ ರಾಯಭಾರ ಕಚೇರಿ ಎಚ್ಚರಿಸಿದೆ. ಇದಕ್ಕೆ ಪೂರಕವಾಗಿ ಟೋಕಿಯೊದಲ್ಲಿ ಸೀಸಿಯಂ, ಅಯೋಡಿನ್‌ನಂತಹ ವಿಕಿರಣಶೀಲ ವಸ್ತುಗಳು ಅಲ್ಪಪ್ರಮಾಣದಲ್ಲಿ ಈಗಾಗಲೇ ಕಂಡುಬಂದಿವೆ. ವಾತಾವರಣದಲ್ಲಿ ವಿಕಿರಣ ಪ್ರಮಾಣ ಏರಿಕೆಯಾಗಿರುವುದನ್ನು ಟೋಕಿಯೊ ಮೆಟ್ರೋಪಾಲಿಟನ್ ಇಲಾಖೆಗಳು ಕೂಡ ಖಚಿತಪಡಿಸಿವೆ.

ಟೋಕಿಯೊ ಮೆಟ್ರೋಪಾಲಿಟನ್ ಪ್ರದೇಶದಲ್ಲಿನ 3.5 ಕೋಟಿ ಜನರ ಪೈಕಿ ಬಹುತೇಕರು ಪರಮಾಣು ದುರಂತದ ಭೀತಿಯಿಂದಾಗಿ ದಕ್ಷಿಣ ಜಪಾನ್‌ಗೆ ಈಗಾಗಲೇ ಸ್ಥಳಾಂತರಗೊಂಡಿದ್ದಾರೆ. ಈ ಮಧ್ಯೆ ಗೊಂದಲಕ್ಕೊಳಗಾಗಿರುವ ಜನ, ಎಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಸರಿಯಾದ ಮಾಹಿತಿಯೇ ಲಭ್ಯವಾಗುತ್ತಿಲ್ಲ ಎಂದು ಆಕ್ಷೇಪಿಸಿದ್ದಾರೆ.

ಸ್ಥಾವರದ 30 ಕಿ.ಮೀ. ವ್ಯಾಪ್ತಿಯಲ್ಲಿ ವಾಯು ಸಂಚಾರ ನಿಷೇಧಿಸಲಾಗಿದೆ. ಈ ವ್ಯಾಪ್ತಿಯಲ್ಲಿರುವ  1.4 ಲಕ್ಷ ನಾಗರಿಕರಿಗೆ ಕಟ್ಟಡಗಳನ್ನು ಬಿಟ್ಟು ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ. ಮನೆಗಳ, ಕಟ್ಟಡಗಳ ಬಾಗಿಲು- ಕಿಟಕಿಗಳನ್ನು ತೆರೆಯದಂತೆ ಹಾಗೂ ಹೊರಗೆ ಹಾಕಿದ್ದ ಬಟ್ಟೆಗಳನ್ನು ಧರಿಸದಂತೆ ಸೂಚಿಸಲಾಗಿದೆ.

ಫುಕುಶಿಮಾ ದಕ್ಷಿಣಕ್ಕಿರುವ ಇಬರಾಕಿ ಪ್ರಾಂತ್ಯದಲ್ಲಿ ವಿಕಿರಣ ಮಟ್ಟ 100 ಪಟ್ಟು ಅಧಿಕವಿದ್ದರೆ, ಟೋಕಿಯೋದ ನೈರುತ್ಯಕ್ಕಿರುವ ಕನಗಾವ ಪ್ರಾಂತ್ಯದಲ್ಲಿ ಸಾಮಾನ್ಯಕ್ಕಿಂತ 9 ಪಟ್ಟು ಹೆಚ್ಚು ವಿಕಿರಣ ಕಂಡುಬಂದಿದೆ.

ಈ ಮಧ್ಯೆ, 1945ರ ಹಿರೋಷಿಮಾ-ನಾಗಸಾಕಿ ಅಣು ಬಾಂಬ್ ದುರಂತದಿಂದ ಪಾರಾದವರು ಸರ್ಕಾರಿ ಇಲಾಖೆಗಳನ್ನು ಭೇಟಿಯಾಗಿ, ವಿಕಿರಣ ಸೋರಿಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲು ಒತ್ತಾಯಿಸಿದ್ದಾರೆ.

ಫುಕುಶಿಮೊ ಸ್ಥಾವರದ 800 ಸಿಬ್ಬಂದಿ ಪೈಕಿ ಬಹುತೇಕರನ್ನು  ಸುರಕ್ಷಿತ ಸ್ಥಳಗಳಿಗೆ ಕಳುಹಿಸಿದ್ದರೂ 50 ಪರಿಣತರು ಸಮುದ್ರದ ನೀರನ್ನು ಹರಿಸುವ ಮೂಲಕ ಇಂಧನದ ಸರಳುಗಳನ್ನು ತಂಪಾಗಿರಿಸುವ ಯತ್ನ ಮುಂದುವರಿಸಿದ್ದಾರೆ. ಇದೇ ವೇಳೆ, ಈಗ ನಾಶಗೊಂಡಿರುವ ರಿಯಾಕ್ಟರುಗಳನ್ನು ಮುಂದೆಂದೂ ಬಳಸಲಾಗದು ಎಂದೂ ತಜ್ಞರು ಹೇಳಿದ್ದಾರೆ.

 

 ಎಲ್ಲೆಲ್ಲೂ ‘ಕ್ಯೂ’: ಪರಮಾಣು ವಿಕಿರಣದ ಭೀತಿಗೆ ಸಿಲುಕಿರುವ ಜಪಾನಿನ ಜನತೆಗೆ ಶಾಂತಿಯಿಂದ ಇರುವಂತೆ ಪ್ರಧಾನಿ ನವಾಟೊ ಕಾನ್ ಮನವಿ ಮಾಡಿದ್ದರೂ, ನಗರಗಳ ಅಂಗಡಿ ಮುಂಗಟ್ಟುಗಳಿಗೆ ಜನ ಮುಗಿಬಿದ್ದಿದ್ದು ‘ದಿಗಿಲು ಖರೀದಿ’ ಕಂಡುಬಂದಿದೆ.ಅಂಗಡಿಗಳ ಮುಂದೆ ಉದ್ದನೆಯ ಸರದಿ ಕಂಡುಬಂದಿದೆ. ಸಂಸ್ಕರಿತ ಆಹಾರ, ಬ್ಯಾಟರಿ, ಬ್ರೆಡ್, ಬಾಟಲಿ ನೀರು ಮತ್ತು ಹಣ್ಣುಗಳಿಗೆ ಕೊರತೆ ಕಂಡುಬಂದಿದೆ. ತೈಲ ಬಿಕ್ಕಟ್ಟಿನ 1970ರ ನಂತರ ಇಂತಹ ಖರೀದಿ ಹಾಹಾಕಾರವನ್ನು ತಾವು ಕಂಡಿರಲೇ ಇಲ್ಲ ಎಂದು ಅನೇಕರು ಹೇಳಿದ್ದಾರೆ.

ಗ್ಯಾಸ್ ಬಂಕ್‌ಗಳ ಮುಂದೆ ಕಾರುಗಳು ಮೈಲುಗಳ ಉದ್ದಕ್ಕೂ ನಿಂತಿವೆ. ಹೈಸ್ಪೀಡ್ ಬುಲೆಟ್ ರೈಲುಗಳು ಮತ್ತು ಮೆಟ್ರೊ ರೈಲುಗಳ ಸಂಚಾರವೂ ವ್ಯತ್ಯಯಗೊಂಡಿದೆ. ಪರಮಾಣು ಸ್ಥಾವರ ಸ್ಫೋಟದಿಂದಾಗಿ ನೆರೆಹೊರೆಯ ರಾಷ್ಟ್ರಗಳೂ ದಿಗಿಲುಗೊಂಡಿವೆ. ಚೈನೀಸ್ ಏರ್‌ಲೈನ್ಸ್ ಟೋಕಿಯೋಗೆ ತೆರಳಬೇಕಿದ್ದ ವಿಮಾನಗಳನ್ನು ರದ್ದುಗೊಳಿಸಿದೆ.

2,400 ಮಂದಿ ಸಾವು (ಐಎಎನ್‌ಎಸ್ ವರದಿ ): ಶುಕ್ರವಾರ ಭೂಕಂಪ ಮತ್ತು ಸುನಾಮಿ ದುರಂತದಲ್ಲಿ 2,414 ಮಂದಿ ಅಸು ನೀಗಿದ್ದಾರೆ ಎಂದು ಜಪಾನ್‌ನ ಪೊಲೀಸರು ಅಧಿಕೃತ ಹೇಳಿಕೆ ನೀಡಿದ್ದಾರೆ.ವೃದ್ಧೆಯ ರಕ್ಷಣೆ: ಜಪಾನ್‌ನ ಭೂಕಂಪ, ಸುನಾಮಿ ಅಬ್ಬರದಲ್ಲಿ ಸಮುದ್ರದ ದೈತ ಅಲೆಗಳೊಂದಿಗೆ ಮನೆ ಕೊಚ್ಚಿ ಹೋದರೂ ಅದರಲ್ಲಿದ್ದ 70 ವರ್ಷದ ವೃದ್ಧೆ ಪವಾಡಸದೃಶ ರೀತಿಯಲ್ಲಿ ಬದುಕುಳಿದಿದ್ದಾರೆ. ಅನಾಹುತ ಸಂಭವಿಸಿದ ನಾಲ್ಕು ದಿನಗಳ ಬಳಿಕ ಈಕೆಯನ್ನು ರಕ್ಷಿಸಲಾಗಿದೆ. ಜಪಾನ್ ವಾಯುವ್ಯ ಭಾಗದಲ್ಲಿ ಮನೆಯೊಂದು ಮೂಲ ಸ್ಥಾನದಿಂದ ಮೈಲಿಗಟ್ಟಲೆ ದೂರ ಕೊಚ್ಚಿ ಹೋಗಿದ್ದರೂ ಅದರೊಳಗೆ ವೃದ್ಧೆ ಸಿಲುಕಿಕೊಂಡಿದ್ದರು. ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದ ಒಸಾಕ ಅಗ್ನಿ ಶಾಮಕ ಸಿಬ್ಬಂದಿ ಈಕೆಯನ್ನು ಪತ್ತೆಹಚ್ಚಿ ರಕ್ಷಿಸಿದ್ದಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.