ಸೋಮವಾರ, ಏಪ್ರಿಲ್ 12, 2021
24 °C

ಈಡೇರಿದ ಕಲಾಸಕ್ತರ ಬಹುದಿನದ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಶಾಲನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ನಗರದಲ್ಲಿ ರೂ.3 ಕೋಟಿ ವೆಚ್ಚದಲ್ಲಿ ಕಲಾಭವನ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.ಜಿಲ್ಲೆಗೆ ಈಚೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಕಾವೇರಿ ಬಡಾವಣೆಯಲ್ಲಿ 1.10 ಎಕರೆ ಪ್ರದೇಶದಲ್ಲಿ ನಿರ್ಮಿಸಲಿರುವ ಕಲಾಭವನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ.ಹೋಬಳಿ ಮಟ್ಟದಲ್ಲಿ ಇಂತಹ ಬೃಹತ್ ಕಲಾಭವನ ನಿರ್ಮಾಣವಾಗುತ್ತಿರುವುದು ಕುಶಾಲನಗರ ಭಾಗದ ಕಲಾಸಕ್ತರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ.ಸಾಂಸ್ಕೃತಿಕ ರಾಜಧಾನಿ ಎನಿಸಿದ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸಾಹಿತಿಗಳು, ಬರಹಗಾರರು, ಹೆಚ್ಚಿನ ಕಲಾಸಕ್ತರು, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಇದ್ದಾರೆ. ವಿವಿಧ ಕನ್ನಡಪರ ಸಂಘಟನೆ ಮತ್ತು ಸಾಂಸ್ಕೃತಿಕ ಕಲಾ ಕೇಂದ್ರಗಳು ಇವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ದೊಡ್ಡ ಪಟ್ಟಣವೆನಿಸಿದ ಕುಶಾಲನಗರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟಿಸಲು ಸ್ಥಳಾವಕಾಶದ ಕೊರತೆ ಮನಗಂಡ ಕನ್ನಡ ಸಾಹಿತ್ಯ ಪರಿಷತ್ತಿನ ಕುಶಾಲನಗರ ಹೋಬಳಿ ಘಟಕದ ವತಿಯಿಂದ ಇಲ್ಲಿ ಸುಸಜ್ಜಿತ ಕಲಾ ಭವನ ನಿರ್ಮಾಣ ಮಾಡಬೇಕು ಎಂಬ ಮನವಿಯನ್ನು 2010ರ ಡಿಸೆಂಬರ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.ಕುಶಾಲನಗರ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಕೋರಿಕೆಗೆ ಸಕಾಲದಲ್ಲಿ ಸ್ಪಂದಿಸಿದ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ, ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಕಲಾಭವನ ನಿರ್ಮಾಣಕ್ಕೆ ಕಾರಣೀಭೂತರಾಗಿದ್ದಾರೆ.`ಭವನ ನಿರ್ಮಾಣಕ್ಕೆ ಬೇಕಾದ ಯೋಜನೆ, ಅಂದಾಜು ಪಟ್ಟಿ ತಯಾರಿಕೆ, ನೀಲನಕ್ಷೆ ಸಿದ್ಧತೆ, ಜಾಗದ ದಾಖಲಾತಿ ಸೇರಿದಂತೆ ಇನ್ನಿತರ ಪೂರಕ ದಾಖಲಾತಿಗಳನ್ನು ಪಟ್ಟಣ ಪಂಚಾಯಿತಿ, ಕಂದಾಯ ಮತ್ತು ಲೋಕೋಪಯೋಗಿ ಇಲಾಖೆ ಮೂಲಕ ಸಂಗ್ರಹಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಸಲ್ಲಿಸಲು ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ಅಧ್ಯಕ್ಷ ಎಂ.ಇ.ಮೊಹಿದ್ದೀನ್ ವಿಶೇಷ ಕಾಳಜಿ ವಹಿಸಿದ್ದಾರೆ~ ಎಂದರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಭಾರದ್ವಾಜ ಕೆ.ಆನಂದತೀರ್ಥ ತಿಳಿಸಿದರು.ಇದರೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಿಂದಿನ ಆಯುಕ್ತರಾಗಿದ್ದ ಬಿ.ಆರ್.ಜಯರಾಮರಾಜೇ ಅರಸ್ ಅವರು ಇಲಾಖೆ ವತಿಯಿಂದ ಪೂರಕವಾಗಿ ಸ್ಪಂದಿಸಿದ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣದಲ್ಲಿ ಈ ಕಲಾಭವನ ನಿರ್ಮಾಣ ಮಾಡಲು ಸಾಧ್ಯವಾಗುತ್ತಿದೆ ಎಂದು ವಿವರಿಸಿದರು.`ಕಲಾಭವನ ನಿರ್ಮಾಣದಿಂದ ಮುಂದಿನ ದಿನಗಳಲ್ಲಿ ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲು ಹೆಚ್ಚಿನ ಅನುಕೂಲವಾಗಲಿದೆ~ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಇಂದಿರಮ್ಮ ತಿಳಿಸಿದರು.`ಕಲಾಭವನದಲ್ಲಿ ಅತ್ಯಾಧುನಿಕ ವೇದಿಕೆ, 500 ಮಂದಿ ಕುಳಿತುಕೊಳ್ಳುವ ಗ್ಯಾಲರಿ ಮಾದರಿಯ ಸಭಾಂಗಣ, ಸುಸಜ್ಜಿತ ವಿದ್ಯುತ್ ಸೌಲಭ್ಯ, ವಿವಿಧ ಕೊಠಡಿಗಳು, ವಾಹನ ನಿಲುಗಡೆಗೆ ಜಾಗ, ಶೌಚಾಲಯ ಹಾಗೂ 2 ಕಚೇರಿ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ~ ಎಂದು ಸಹಾಯಕ ಎಂಜಿನಿಯರ್ ವಿ.ಬೋರೇಗೌಡ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.