ಶುಕ್ರವಾರ, ಮೇ 27, 2022
28 °C

ಈಶ್ವರಪ್ಪ, ಅನಂತ್ ವಿರುದ್ಧ ಸಿ.ಎಂ ತಂತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಶಾಸಕರನ್ನು ತಮ್ಮ ಮೇಲೆ ಎತ್ತಿಕಟ್ಟಿ ಪಕ್ಷದೊಳಗೆ ಭಿನ್ನಮತ ಚಟುವಟಿಕೆಗೆ ಕಾರಣವಾಗಿರುವ ರಾಜ್ಯ ಬಿಜೆಪಿ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಅನಂತ ಕುಮಾರ್ ಸೇರಿದಂತೆ ಹಲವರ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರಿಷ್ಠರಿಗೆ ದೂರು ಕೊಡಲಿದ್ದಾರೆ.ಮೂರು ದಿನಗಳ ಭೇಟಿಗಾಗಿ ಭಾನುವಾರ ಸಂಜೆ ದೆಹಲಿಗೆ ಆಗಮಿಸಿದ ಅವರು ಕೆಲವು ಅಧಿಕೃತ ಕಾರ್ಯಕ್ರಮಗಳ ನಡುವೆ ಪಕ್ಷದ ಮುಖಂಡರನ್ನು ಕಂಡು ಭಿನ್ನಮತೀಯ ಚಟುವಟಿಕೆ ಮೂಲಕ ರಾಜ್ಯ ಸರ್ಕಾರ ಅಭದ್ರಗೊಳಿಸಲು ಪ್ರಯತ್ನಿಸುತ್ತಿರುವ ನಾಯಕರ ಮೇಲೆ ಕ್ರಮಕ್ಕೆ ಆಗ್ರಹಿಸಲಿದ್ದಾರೆ ಎಂದು ವಿಶ್ವಸನೀಯ ಮೂಲಗಳು ‘ಪ್ರಜಾವಾಣಿ’ ತಿಳಿಸಿವೆ.ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಒಳಗೊಂಡಂತೆ ಎಲ್ಲ ನಾಯಕರನ್ನು ಮುಖ್ಯಮಂತ್ರಿ ಭೇಟಿ ಆಗಲಿದ್ದಾರೆ. ಮೂರ್ನಾಲ್ಕು ದಿನಗಳಿಂದ ರಾಜ್ಯ ಬಿಜೆಪಿಯೊಳಗೆ ನಡೆದಿರುವ ವಿದ್ಯಮಾನಗಳನ್ನು ವಿವರಿಸಲಿದ್ದಾರೆ. ಭಿನ್ನಮತೀಯ ಮುಖಂಡರ ಚಟುವಟಿಕೆಗಳನ್ನು ಬಂದ್ ಮಾಡಿಸುವಂತೆ ತಾಕೀತು ಮಾಡಲಿದ್ದಾರೆ. ಸೋಮವಾರ ಮತ್ತು ಮಂಗಳವಾರ ಮುಖ್ಯಮಂತ್ರಿ ವರಿಷ್ಠರನ್ನು ಕಾಣಲು ಸಮಯಾವಕಾಶ ಕೇಳಿದ್ದಾರೆ.ಕಳೆದ ವರ್ಷ ಜಗದೀಶ್ ಶೆಟ್ಟರ್ ಅವರನ್ನು ಮುಂದಿಟ್ಟುಕೊಂಡು ಭಿನ್ನಮತೀಯ ಚಟುವಟಿಕೆ ಪ್ರೋತ್ಸಾಹಿಸಿದ್ದ ಅನಂತಕುಮಾರ್, ಈಗ ರಾಜ್ಯ ಬಿಜೆಪಿ ಅಧ್ಯಕ್ಷರನ್ನು ಮುಂದಿಟ್ಟುಕೊಂಡು ಇದೇ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ದೂರು ಸಲ್ಲಿಸಲಿದ್ದಾರೆ. ಕೆಲವು ದಿನಗಳ ಹಿಂದೆಯೂ ಅನಂತ ಕುಮಾರ್ ವಿರುದ್ಧ ಮುಖ್ಯಮಂತ್ರಿ ದೂರು ನೀಡಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.ಆದರೆ, ಮುಖ್ಯಮಂತ್ರಿ ‘ರಾಜ್ಯ ಬಿಜೆಪಿಯಲ್ಲಿ ಬಿಕ್ಕಟ್ಟಿಲ್ಲ. ಕೆಲ ಶಾಸಕರು ತಮ್ಮ ದೂರು- ದುಮ್ಮಾನ ಹೇಳಿಕೊಳ್ಳಲು ಈಶ್ವರಪ್ಪ ಅವರನ್ನು ಭೇಟಿ ಮಾಡಿದ್ದರು. ಅನಂತರ ನಾನೇ ಅಲ್ಲಿಗೆ ಹೋಗಿದ್ದೆ. ಬಳಿಕ ಕೆಲವು ಸಚಿವರು ಮತ್ತು ಶಾಸಕರು ನನ್ನ ಬಳಿಗೂ ಬಂದಿದ್ದರು. ಇದನ್ನು ಒಡಕು ಅಥವಾ ಶಕ್ತಿ ಪ್ರದರ್ಶನ ಎಂದು ವ್ಯಾಖ್ಯಾನಿಸುವುದು ಸರಿಯಲ್ಲ’ ಎಂದರು.‘ನಾನು ಶಾಸಕರ ವಿಶ್ವಾಸ ಕಳೆದುಕೊಂಡಿಲ್ಲ. ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ದೆಹಲಿಯಲ್ಲಿ ಎಲ್ಲ ಬಿಜೆಪಿ ವರಿಷ್ಠರನ್ನು ಭೇಟಿಯಾಗುವೆ. ಇದು ಕೇವಲ ಔಪಚಾರಿಕ ಭೇಟಿ. ಅಭಿವೃದ್ಧಿ ವಿಷಯಗಳನ್ನು ಕುರಿತು ಚರ್ಚೆ ನಡೆಸುವ ಉದ್ದೇಶವಿದೆ’ ಎಂದು ಯಡಿಯೂರಪ್ಪ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.‘ವಿಧಾನಸಭೆ ಮೂರು ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ ಬಳಿಕ ಶಾಸಕಾಂಗ ಪಕ್ಷದ ಸಭೆ ಕರೆಯಲಿದ್ದೇನೆ. ಶಾಸಕರ ಕುಂದು- ಕೊರತೆ, ಕ್ಷೇತ್ರಗಳ ಅಭಿವೃದ್ಧಿ, ಅನುದಾನ ಒಳಗೊಂಡಂತೆ ಎಲ್ಲ ವಿಷಯಗಳನ್ನು ಕುರಿತು ಸಮಾಲೋಚನೆ ನಡೆಸುವೆ. ಇದಕ್ಕೆ ಮುನ್ನ ಈ ತಿಂಗಳ 24ರಂದು ಎಲ್ಲ ಸಚಿವರ ಸಭೆ ನಡೆಸಲಿದ್ದೇನೆ. ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುವಂತೆ ಸೂಚನೆ ನೀಡಲಿದ್ದೇನೆ’ ಎಂದು ಯಡಿಯೂರಪ್ಪ ಖಚಿತಪಡಿಸಿದರು.ಎಚ್.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಮುಖ್ಯಮಂತ್ರಿ, ‘ಕಿರುಕುಳ ನನ್ನ ಜಾತಕದಲ್ಲೇ ಬಂದಂತಿದೆ. ಇದಕ್ಕೆಲ್ಲ ಹೆದರುವುದಿಲ್ಲ. ಇದನ್ನು ನಾನು ಅಗ್ನಿ ಪರೀಕ್ಷೆ ಎಂದೂ ಭಾವಿಸುವುದಿಲ್ಲ ಎಂದರು.‘ಬಜೆಟ್ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದಲ್ಲಿ ಪರಿಶೀಲನಾ ಸಭೆ ನಡೆಸಲಿದ್ದೇನೆ. ನನ್ನ ನೇತೃತ್ವದಲ್ಲಿ ಒಂದು ತಂಡ, ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಮತ್ತೊಂದು ತಂಡ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಈ ತಿಂಗಳ 26ರಂದು ಕೊಡಗಿನಿಂದ ಸಭೆ ಆರಂಭ ಆಗಲಿದೆ’ ಎಂದು ವಿವರಿಸಿದರು.‘ದೆಹಲಿಯಲ್ಲಿ ಪ್ರಧಾನಿ, ವಿವಿಧ ಇಲಾಖೆಗಳ ಸಚಿವರನ್ನು ಭೇಟಿ ಮಾಡಿ ಅಡಿಕೆ, ರೇಷ್ಮೆ ಬಬೆಲೆ ಕುಸಿತ ಸೇರಿದಂತೆ ಹಲವು ವಿಷಗಳ ಬಗ್ಗೆ ಸಮಾಲೋಚಿಸುವೆ. ಮಂಗಳವಾರ ಮಧ್ಯಾಹ್ನ ಯೋಜನಾ ಆಯೋಗದ ಉಪಾಧ್ಯಕ್ಷರ ಜತೆ ರಾಜ್ಯದ ಯೋಜನಾ ಗಾತ್ರ ಕುರಿತು ಚರ್ಚಿಸುತ್ತೇನೆ’ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.