ಗುರುವಾರ , ಮೇ 6, 2021
33 °C

ಈಶ್ವರಪ್ಪ ಹೋರಾಟದಿಂದ ಯೋಜನೆ ಅನುಷ್ಠಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಶಿವಮೊಗ್ಗ ನಗರಕ್ಕೆ ಬೇಕಾದ ಎಲ್ಲ ಯೋಜನೆಗಳನ್ನು ಕೆ.ಎಸ್. ಈಶ್ವರಪ್ಪ ನೇತೃತ್ವದಲ್ಲಿ ಹೋರಾಟ ಮಾಡಿಯೇ ಪಡೆದುಕೊಳ್ಳಲಾಗಿದೆ ಎಂದು ನಗರಸಭಾ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಶಿವಮೊಗ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗಾಜನೂರಿನಿಂದ ನಗರಕ್ಕೆ ಕುಡಿಯುವ ನೀರು ಯೋಜನೆ, ಮಹಿಳಾ ಪಾಲಿಟೆಕ್ನಿಕ್ ಸ್ಥಾಪನೆ, ಎರಡನೇ ಹಂತದ ಕುಡಿಯುವ ನೀರಿನ ಯೋಜನೆ ಹಾಗೂ ಇತ್ತೀಚೆಗೆ ಕೊಳೆಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡಿರುವುದು, ಇವೆಲ್ಲವೂ ಹೋರಾಟಗಳಿಂದ ಅನುಷ್ಠಾನ ಆಗಿರುವಂತಹದ್ದು. ಇದರ ಹಿಂದಿನ ಶಕ್ತಿ ಈಶ್ವರಪ್ಪ. ಅವರು ಬಡವರ ಪರ ಹೋರಾಟ ಮಾಡಿದ್ದರಿಂದ ಈ ಯೋಜನೆಗಳೆಲ್ಲವೂ ಜಾರಿಗೆ ಬಂದವು ಎಂದು ಪ್ರಶಂಸಿಸಿದರು.ಈಗ ಸದಾನಂದಗೌಡ ಅವರ ಮೂಲಕ ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವಂತಹ ಮಹತ್ವದ ಆದೇಶ ಹೊರಬರುವುದಕ್ಕೂ ಈಶ್ವರಪ್ಪ ಕಾರಣ. ಹಿಂದಿನ ಹೋರಾಟಗಳೆಲ್ಲವನ್ನೂ ಅವರು ಈಗ ಅನುಷ್ಠಾನಕ್ಕೆ ತರುತ್ತಿದ್ದಾರೆ. ಎಲ್ಲ ವರ್ಗದ ಜನರ ಕಣ್ಣೀರು ಒರೆಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದರು.ಶಿವಮೊಗ್ಗ ನಗರದಲ್ಲಿ ಈಚೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಲ್ಲಿಸಿದ `ನಮ್ಮಭಿಮಾನ~ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಚನ್ನಬಸಪ್ಪ ಮಾತನಾಡಿದರೂ, ಎಲ್ಲಿಯೂ ಈ ಬಗ್ಗೆ ಅವರು ತಮ್ಮ ಮಾತಿನಲ್ಲಿ ಪ್ರಸ್ತಾಪಿಸಲಿಲ್ಲ.ತದನಂತರ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಕೆ.ಎಸ್. ಈಶ್ವರಪ್ಪ, ಈ ಹಿಂದೆ ಯಡಿಯೂರಪ್ಪ ಎಲ್ಲ ವರ್ಗಗಳಿಗೆ ಹೆಚ್ಚಿನ ಅನುದಾನ ನೀಡಿದ್ದರು. ಈಗ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಾವು ಮಂಡಿಸಿದ ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳಿಗೆ, ಪರಿಶಿಷ್ಟ ಜಾತಿ-ಪಂಗಡದವರಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ ಎಂದರು.ಪುರುಷರಿಗೆ ಸರಿಸಮಾನವಾಗಿ ಮಹಿಳೆಯರು ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಮಹಿಳೆಯರು ಜಾಗೃತರಾದರೆ ಸಮಾಜವನ್ನು ಸರಿದಾರಿಗೆ ತರಬಹುದು. ಸ್ತ್ರೀಶಕ್ತಿ ಸಂಘಟನೆಗಳು ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಣೆ ಮಾಡಿ, ಅಶಕ್ತ ಮಹಿಳೆಯರ ಸಬಲೀಕರಣಕ್ಕೆ ಯತ್ನಿಸಲಿ ಎಂದರು.ಮಹಿಳೆಯುರು ಈ ಹಣವನ್ನು ದುಂದುವೆಚ್ಚ ಮಾಡಿ, ಹಾಳು ಮಾಡಿಕೊಳ್ಳಬಾರದು. ನಿಗದಿತ ಉದ್ದೇಶಕ್ಕೆ ಬಳಸಿಕೊಂಡು, ಸದ್ಭಳಕೆ ಮಾಡಿಕೊಳ್ಳಬೇಕು. ತಮ್ಮ ಕುಟುಂಬವನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯಬೇಕು ಎಂದು ಸಲಹೆ ಮಾಡಿದರು.ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಇಡೀ ರಾಜ್ಯದಲ್ಲಿ ಶಿವಮೊಗ್ಗ ಜಿಲ್ಲೆಗೆ ಮಾತ್ರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗಾಗಿ ಸರ್ಕಾರ ರೂ1.5 ಕೋಟಿ ಅನುದಾನವನ್ನು ವಿಶೇಷವಾಗಿ ನೀಡಿದೆ. ಇದಕ್ಕೆ ಕಾರಣ ಈಶ್ವರಪ್ಪ ಎಂದರು.ಸಮಾರಂಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ದತ್ತಾತ್ರಿ, ಮಾಜಿ ಅಧ್ಯಕ್ಷ ಎಸ್. ಜ್ಞಾನೇಶ್ವರ, ಪೌರಕಾರ್ಮಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸತ್ಯನಾರಾಯಣ, ನಗರಸಭೆ ಉಪಾಧ್ಯಕ್ಷ ಎಸ್. ರಾಮು, ಸದಸ್ಯರಾದ ಶಂಕರ ಗನ್ನಿ, ಭೂಪಾಲ್, ರೇಣುಕಾ ನಾಗರಾಜ್, ಎಂ. ಶಂಕರ್, ರೂಪಾ ಲಕ್ಷ್ಮಣ್, ಬಿಜೆಪಿ ನಗರ ಘಟಕದ ಅಧ್ಯಕ್ಷ ನಟರಾಜ್ ಮತ್ತಿತರರು ಉಪಸ್ಥಿತರಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.