ಬುಧವಾರ, ಮಾರ್ಚ್ 3, 2021
19 °C

ಈ ಬಾರಿ 11 ದಿನ ಮೈಸೂರು ದಸರಾ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಬಾರಿ 11 ದಿನ ಮೈಸೂರು ದಸರಾ ಉತ್ಸವ

ಬೆಂಗಳೂರು: ವಿಶ್ವ ಪ್ರಸಿದ್ಧ ಮೈಸೂರು  ದಸರಾ ಮಹೋತ್ಸವ ಈ ವರ್ಷ 11 ದಿನ ನಡೆಯಲಿದೆ. ಅಕ್ಟೋಬರ್‌ 1ರಂದು ಉದ್ಘಾಟನೆ ಆಗಲಿರುವ ದಸರಾ ಉತ್ಸವ 11ರಂದು ಜಂಬೂ ಸವಾರಿಯೊಂದಿಗೆ ಮುಕ್ತಾಯವಾಗಲಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಗುರುವಾರ ನಡೆದ ಮೈಸೂರು ದಸರಾ ಮಹೋತ್ಸವದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.ಸಭೆ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಸಿದ್ದರಾಮಯ್ಯ, ಅಕ್ಟೋಬರ್‌ 1ರಂದು ಬೆಳಿಗ್ಗೆ 11.40ಕ್ಕೆ ಚಾಮುಂಡಿ ಬೆಟ್ಟದಲ್ಲಿ ದಸರಾ ಮಹೋತ್ಸವ ಉದ್ಘಾಟನೆ ಆಗಲಿದೆ. ನವಮಿ ದಿನ ಆಯುಧಪೂಜೆ, ದಶಮಿ ದಿನ ಜಂಬೂಸವಾರಿ ನಡೆಯುವುದು ಸಂಪ್ರದಾಯ. ಆದರೆ, ಪಂಚಾಂಗದ ಪ್ರಕಾರ ಈ ವರ್ಷ ಅಕ್ಟೋಬರ್ 11ರಂದು ದಶಮಿ ಬರಲಿದ್ದು, ಅದೇ ದಿನ ವಿಜಯದಶಮಿ, ಜಂಬೂಸವಾರಿ ನಡೆಯಲಿದೆ ಎಂದರು.ಕಳೆದ ವರ್ಷ ನವಮಿ ಮತ್ತು ದಶಮಿ ಒಂದೇ ದಿನ ಬಂದಿದ್ದರಿಂದಾಗಿ ಆಯುಧ ಪೂಜೆ, ವಿಜಯದಶಮಿಗಳನ್ನು ಒಂದೇ ದಿನ ಆಚರಿಸಲಾಗಿತ್ತು. ಹಿಂದೆಯೂ ಹೀಗೆ 11 ದಿನ ದಸರಾ ಆಚರಿಸಿದ ನಿದರ್ಶನಗಳಿವೆ ಎಂದರು.ಭೀಕರ ಬರಗಾಲದ ಕಾರಣದಿಂದ ಕಳೆದ ವರ್ಷ ದಸರಾ ಮಹೋತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿದ್ದರಿಂದ ಜಲಾಶಯಗಳು ಭರ್ತಿಯಾಗಿಲ್ಲ. ಉಳಿದ ಜಿಲ್ಲೆಗಳಲ್ಲಿ ಮಳೆಯಾಗಿದೆ. ಹೀಗಾಗಿ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಅಲ್ಲದಿದ್ದರೂ ಸಾಂಪ್ರದಾಯಿಕ ಹಾಗೂ ಜನಾಕರ್ಷಕವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.ಜನರ ಉತ್ಸವವಾಗಿ ದಸರಾ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲು ಕಾರ್ಯಕಾರಿ ಸಮಿತಿಗೆ ಸೂಚನೆ ನೀಡಲಾಗಿದೆ. ಯುವ ದಸರಾ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.‘ದಸರಾ ಉದ್ಘಾಟನೆಯ ದಿನದಂದೇ ವಸ್ತು ಪ್ರದರ್ಶನ ಉದ್ಘಾಟಿಸಲಾಗುತ್ತಿದೆ. ಆದರೆ, ಪ್ರತಿವರ್ಷ ಖಾಲಿ ಮಳಿಗೆಗಳನ್ನು ಉದ್ಘಾಟಿಸುವ ಪದ್ಧತಿ ನಡೆದು ಬಂದಿದೆ. ಸರ್ಕಾರದ ವಿವಿಧ ಇಲಾಖೆಗಳು, ಜಿಲ್ಲಾ ಪಂಚಾಯಿತಿಗಳ ಮಳಿಗೆಗಳನ್ನು ಉದ್ಘಾಟನೆಗೆ ಮೊದಲೇ ಆರಂಭಿಸಲು ಕಟ್ಟುನಿಟ್ಟಿನ ಸೂಚನೆ ನೀಡಿ ಎಂದು ಮುಖ್ಯಕಾರ್ಯದರ್ಶಿಗೆ ಆದೇಶಿಸಿದ್ದೇನೆ’ ಎಂದು ಸಿದ್ದರಾಮಯ್ಯ ಹೇಳಿದರು.‘ದೇಶ–ವಿದೇಶಗಳ ಅತಿಥಿಗಳು, ಪ್ರವಾಸಿಗರು ದಸರಾ ಮಹೋತ್ಸವದಲ್ಲಿ ಭಾಗವಹಿಸುವುದರಿಂದ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡುವಂತೆ ಸೂಚಿಸಿದ್ದೇನೆ’ ಎಂದು ಅವರು ಹೇಳಿದರು. ಕಳೆದ ವರ್ಷ ಸರಳವಾಗಿ ಆಚರಿಸಿದ್ದರಿಂದಾಗಿ ₹4 ಕೋಟಿ ಖರ್ಚು ಮಾಡಲಾಗಿತ್ತು. ಈ ವರ್ಷ ಹೆಚ್ಚಿನ ಖರ್ಚು ಬರಬಹುದು. ಕಾರ್ಯಕಾರಿ ಸಮಿತಿಯಲ್ಲಿ ಚರ್ಚಿಸಿ, ಅನುದಾನದ ಬೇಡಿಕೆ ಸಲ್ಲಿಸುವಂತೆ  ಸೂಚಿಸಿರುವುದಾಗಿ ಹೇಳಿದರು.

*

ಯಾರಿಂದ ಉದ್ಘಾಟನೆ?

ದಸರಾ ಮಹೋತ್ಸವದ ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದ್ದು, ಆಯ್ಕೆಯ ಹೊಣೆಯನ್ನು ಮಹೋತ್ಸವದ ಕಾರ್ಯಕಾರಿ ಸಮಿತಿಗೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಆಗಸ್ಟ್‌ 9 ರಂದು ನಡೆಯಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಉದ್ಘಾಟನೆಗೆ ಯಾರನ್ನು ಆಮಂತ್ರಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದರು.ಕವಿಗಳಾದ ಚನ್ನವೀರ ಕಣವಿ, ನಿಸಾರ್‌ ಅಹಮದ್‌, ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಹೆಸರು ಪ್ರಸ್ತಾಪವಾಗಿದೆ. ಸಾಹಿತಿ ಎಸ್‌.ಎಲ್‌. ಬೈರಪ್ಪ ಅವರನ್ನು ಆಹ್ವಾನಿಸುವಂತೆ ಮೈಸೂರಿನ ಸಂಸದ ಪತ್ರ ಬರೆದಿದ್ದಾರೆ. ಕ್ರಿಕೆಟರ್‌ ಸಚಿನ್‌ ತೆಂಡಲ್ಕೂರ್‌, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಹೆಸರೂ ಸಭೆಯಲ್ಲಿ ಪ್ರಸ್ತಾಪವಾಗಿದೆ ಎಂದುಅವರು  ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.