ಮಂಗಳವಾರ, ಮೇ 17, 2022
26 °C

ಈ ರಸ್ತೆಯಲ್ಲಿ ನಿತ್ಯ ಸರ್ಕಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಘಟಗಿ: ತಾಲ್ಲೂಕಿನ ಕೊನೆಯ ಹಳ್ಳಿಯಾದ ಬೆಂಡಲಗಟ್ಟಿಯಿಂದ ಕೇವಲ 6 ಕಿ.ಮೀ. ದೂರದಲ್ಲಿರುವ ತಡಸ ಪಟ್ಟಣಕ್ಕೆ ಹೋಗಲು ಉತ್ತಮವಾದ ರಸ್ತೆ ಇಲ್ಲದೇ ಪರದಾಡುತ್ತಿದ್ದು, ರಸ್ತೆ ಅಭಿವೃದ್ಧಿಗಾಗಿ ಗ್ರಾಮಸ್ಥರು ಜನಪ್ರತಿನಿಧಿಗಳ ಬಳಿಗೆ ಅಲೆದಾಡುವಂತಾಗಿದೆ.ತಾಲ್ಲೂಕು ಕೇಂದ್ರದಿಂದ 22 ಕಿ.ಮೀ. ದೂರದಲ್ಲಿರುವ ಬೆಂಡಲಗಟ್ಟಿಯ ಗ್ರಾಮಸ್ಥರಿಗೆ ತಮ್ಮ ನಿತ್ಯದ ಅಗತ್ಯ ವಸ್ತುಗಳ ಖರೀದಿಗೆ, ವಿದ್ಯಾಭ್ಯಾಸಕ್ಕೆ ಅಲ್ಲದೇ ಹುಬ್ಬಳ್ಳಿ ನಗರಕ್ಕೆ ವ್ಯಾಪಾರೋದ್ದೇಶಗಳಿಗೆ ಹೋಗಲು, ವೈದ್ಯಕೀಯ ಅವಶ್ಯಕತೆಗಳಿಗೆ ತಡಸ ಪಟ್ಟಣವನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ.ತಬಕದಹೊನ್ನಳ್ಳಿ ಹೋಬಳಿ ಸೇರಿದಂತೆ ಸುತ್ತಲಿನ ಗ್ರಾಮಗಳಾದ ಬೆಂಡಲಗಟ್ಟಿ, ಬೀರವಳ್ಳಿ ಗ್ರಾಮಗಳ ವಿದ್ಯಾರ್ಥಿಗಳಿಗೆ ತಮ್ಮ ಕಾಲೇಜು ಶಿಕ್ಷಣಕ್ಕೆ ತಡಸ ಪಟ್ಟಣವನ್ನೇ ಅವಲಂಬಿಸಿಬೇಕಿದೆ. ಕೆಟ್ಟ ರಸ್ತೆಯಿಂದಾಗಿ, ಸಾರಿಗೆ ಬಸ್‌ಗಳು ದಿನವೂ, ಮಾರ್ಗದಲ್ಲಿ ಕೆಟ್ಟು ನಿಲ್ಲುವುದು, ವೇಳೆಗೆ ಸರಿಯಾಗಿ ಚಲಿಸದಿರುವುದರಿಂದ ಸಾಮಾನ್ಯರಿಗೆ ತೀವ್ರ ತೊಂದರೆಯಾಗಿದ್ದು ಆದರೆ ಕೇವಲ ಏಳು ಕಿ.ಮೀ. ದೂರದ ಪಟ್ಟಣದ ಪ್ರಯಾಣವು ನಾಗರಿಕರಿಗೆ ನಿತ್ಯ ನರಕ ಸದೃಶವಾಗಿದೆ.ಇದಕ್ಕೆ ಬೇಸತ್ತ ಗ್ರಾಮಸ್ಥರು ರಸ್ತೆ ಅಭಿವೃದ್ಧಿಗಾಗಿ ಹೋರಾಟ ಸಮಿತಿಯೊಂದನ್ನು ರಚಿಸಿಕೊಂಡಿದ್ದು, ತಮ್ಮ ರಸ್ತೆಯ ಬೇಡಿಕೆಯನ್ನು ಶಾಸಕರು, ಸಚಿವರು, ಅಲ್ಲದೇ ಜಿಲ್ಲಾಡಳಿತಗಳಿಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಆದರೆ, ಕಲಘಟಗಿ ತಾಲ್ಲೂಕಿನ ಬೀರವಳ್ಳಿ ಗ್ರಾಮದಿಂದ ಇನ್ನೊಂದು ರಸ್ತೆ ತಡಸ ಪಟ್ಟಣವನ್ನು ಸೇರುತ್ತಿದ್ದು, ಈ ರಸೆಯಲ್ಲಿ ಯಾವ ಬಸ್‌ಗಳೂ ಚಲಿಸುತ್ತಿಲ್ಲದಿದ್ದರೂ, ರಸ್ತೆ ಡಾಂಬರೀಕರಣಗೊಂಡಿದೆ. ದಿನವೂ ಹತ್ತಾರು ಬಸ್‌ಗಳು ಚಲಿಸುವ ಬೆಂಡಲಗಟ್ಟಿ-ತಡಸ ರಸ್ತೆಗೆ ದಿಕ್ಕು ದೆಸೆ ಇಲ್ಲ. ಈ ಕಾರಣದಿಂದ ಖಾಸಗಿ ವಾಹನಗಳು ಮತ್ತು ದ್ವಿಚಕ್ರವಾಹನ ಸವಾರರು ನಾಲ್ಕಾರು ಕಿ.ಮೀ. ಸುತ್ತು ಬಳಸಿ ಬೀರವಳ್ಳಿಗೆ ಬಂದು ತಡಸ ಪಟ್ಟಣಕ್ಕೆ ತೆರಳುತ್ತಿರುವುದು ನಿತ್ಯ ಕಾಣಬಹುದಾಗಿದೆ, ನಾಗರಿಕರಿಗೆ ಮೂಲ ಸೌಲಭ್ಯ ಒದಗಿಸಬೇಕಾದ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ ಇತ್ತ ಗಮನಹರಿಸದಿರುವುದು ಚಕಿತಗೊಳಿಸಿದೆ.ಈ ಕುರಿತು `ಪ್ರಜಾವಾಣಿ~ ಜಿ.ಪಂ. ಸದಸ್ಯ ಬಸವರಾಜ ಕರಡಿಕೊಪ್ಪ ಅವರನ್ನು ಪ್ರಶ್ನಿಸಿದಾಗ, ಈ ರಸ್ತೆಯ ಅಭಿವೃದ್ಧಿಗಾಗಿ ರೂ. 15ಲಕ್ಷಗಳಿಗೂ ಅಧಿಕ ಮೊತ್ತದ ಅನುದಾನದ ಅಗತ್ಯವಿದ್ದು, ಅಷ್ಟು ಮೊತ್ತದ ಅನುದಾನವನ್ನು ಜಿ.ಪಂ.ನಿಂದ ನೀಡಲು ಅಸಾಧ್ಯವಾಗಿರುವುದರಿಂದ ಕೇವಲ ಮೂರು ಲಕ್ಷ ಅನುದಾನ ನೀಡಿದ್ದು, ಒಂದೂವರೆ ಕಿ.ಮೀ. ಮೆಟಲಿಂಗ್ ನಡೆದಿದೆ. ಇನ್ನೂ ನಾಲ್ಕು ಕಿ.ಮೀ.ನಷ್ಟು ದುರಸ್ತಿಗೆ ಬಾಕಿ ಇದೆ ಎಂದು ತಿಳಿಸಿದರು.ಶಾಸಕರು ತಮ್ಮ ಅನುದಾನದಲ್ಲಿ ಉಳಿದ ಮೊತ್ತವನ್ನು ಒದಗಿಸುವ ಭರವಸೆ ನೀಡಿದ್ದರಾದರೂ ಇನ್ನೂ ನೀಡದೇ ಇರುವುದರಿಂದ ನಿತ್ಯ ಗೋಳು ಅನುಭವಿಸಬೇಕಾಗಿ ಬಂದಿದೆ ಎಂದು ಜುನರು ದೂರುತ್ತಾರೆ.

ಈ ಕುರಿತು ಶಾಸಕರ ಬಳಿಯಲ್ಲಿ ಹಲವಾರು ಬಾರಿ ವಿನಂತಿಸಿದರೂ, ಏನೂ ಪ್ರಯೋಜನವಾಗಲಿಲ್ಲ. ಅಲ್ಲದೇ, ಗ್ರಾಮಸ್ಥರು ಲೋಕೋಪಯೋಗಿ ಸಚಿವರ ಬಳಿಗೆ ತೆರಳಿ, ಗ್ರಾಮಸ್ಥರ ಅಳಲನ್ನು ತೋಡಿಕೊಂಡಿದ್ದಾರೆ. ರಸ್ತೆ ದುರಸ್ತಿಗೆ ಸ್ಥಳೀಯ ಆಡಳಿತ ಮುಂದಾಗದಿದ್ದರೆ, ಗ್ರಾಮಸ್ಥರು ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.