ಸೋಮವಾರ, ಮಾರ್ಚ್ 8, 2021
29 °C

ಈ ವರ್ಷದ ನಿರೀಕ್ಷೆಗಳು...

ಜಯಸಿಂಹ ಆರ್. Updated:

ಅಕ್ಷರ ಗಾತ್ರ : | |

ಈ ವರ್ಷದ ನಿರೀಕ್ಷೆಗಳು...

ದೇಶದ ಅತ್ಯಂತ ದೊಡ್ಡ ವಾಹನ ಪ್ರದರ್ಶನ ಮೇಳ ‘ದೆಹಲಿ ಆಟೊ ಎಕ್ಸ್‌ಪೊ’ ಫೆಬ್ರುವರಿ ಮೊದಲನೇ ವಾರದಲ್ಲಿ ಆರಂಭವಾಗಿದೆ. ಈ ವರ್ಷ ಮಾರುಕಟ್ಟೆಗೆ ಬರಲಿರುವ ವಾಹನಗಳ ಪ್ರದರ್ಶನ ಇಲ್ಲಿ ನಡೆಯಲಿದೆ. ಇದರ ಜತೆಗೆ ಕೆಲವಾರು ಕಾರುಗಳ ಬಿಡುಗಡೆಯೂ ಆಗಲಿದೆ. ಅಂತೂ ದೆಹಲಿ ಆಟೊ ಎಕ್ಸ್‌ಪೊ ಕುತೂಹಲ ಮೂಡಿಸಿದೆ.ಇದರ ಹೊರತಾಗಿಯೂ ವಾಹನ ಪ್ರಿಯ ಭಾರತೀಯರು ಕಾತರದಿಂದ ಕಾಯುತ್ತಿರುವ ಹಲವು ಎಂಯುವಿ, ಎಸ್‌ಯುವಿ ಮತ್ತು ಬೈಕ್‌ಗಳು ಈಗಾಗಲೇ ಸಾಕಷ್ಟು ಕುತೂಹಲ ಮೂಡಿಸಿವೆ. ಇವುಗಳಲ್ಲಿ ಕೆಲವು ಆಟೊಎಕ್ಸ್‌ಪೊದಲ್ಲಿ ಬಿಡುಗಡೆಯಾಗುತ್ತವೆ ಎಂದು ನಿರೀಕ್ಷಿಸಲಾಗಿದೆ. ಆದರೆ ಕೆಲವು ತಯಾರಕರು ಪ್ರದರ್ಶನದಿಂದ ದೂರ ಉಳಿದಿದ್ದಾರೆ ಎಂಬ ಸುದ್ದಿಯೂ ಇದೆ. ಒಟ್ಟಿನಲ್ಲಿ ಈ ವರ್ಷ ಸಾಕಷ್ಟು ವಾಹನಗಳು ನಮ್ಮ ರಸ್ತೆಗಿಳಿಯಲಿವೆ. ಅವುಗಳಲ್ಲಿ ಕೆಲವು ಇಂತಿವೆ.ಟೊಯೊಟಾ ಇನೋವಾ

ಸುಮಾರು ಒಂದು ದಶಕದಿಂದಲೂ ನಮ್ಮ ರಸ್ತೆಯಲ್ಲಿರುವ ಇನೋವಾ ಎಂಯುವಿಗೆ ಟೊಯೊಟಾ ಈಗಾಗಲೇ ಸಾಕಷ್ಟು ಫೇಸ್‌ಲಿಫ್ಟ್‌ಗಳನ್ನು ನೀಡಿದೆ. ಟೊಯೊಟಾ ಕಾರುಗಳು ಗ್ಯಾಜೆಟ್‌ ತುಂಬಿದ ಉತ್ಪನ್ನಗಳಲ್ಲ ಎಂಬುದು ಅವುಗಳ ಹೆಗ್ಗಳಿಕೆಯೂ ಆಗಿತ್ತು, ಹಿನ್ನಡೆಯೂ ಆಗಿತ್ತು. ಆದರೆ ಅವುಗಳು ದೀರ್ಘಕಾಲ ಬಾಳಿಕೆ ಬರುತ್ತವೆ ಎಂಬುದು ಸಾಬೀತಾಗಿದೆ.ಇನೋವಾ ಕುರಿತೂ ಈ ಮಾತನ್ನು ಹೇಳಬಹುದು. ಆದರೆ ಇನೋವಾದ ದೊಡ್ಡ ಕೊರತೆ ಎಂದರೆ ಕಡಿಮೆ ಶಕ್ತಿ. ಅಷ್ಟು ದೊಡ್ಡ ಎಂಯುವಿಗೆ, ದೊಡ್ಡ ಎಂಜಿನ್ ಇದ್ದರೂ ಅದನ್ನು ಡೀ ಟ್ಯೂನ್ ಮಾಡಲಾಗಿತ್ತು. ಉತ್ತಮ ರಸ್ತೆ ಹಿಡಿತ ಇದ್ದರೂ, ಆರಾಮದಾಯಕ ಸವಾರಿ ಒದಗಿಸಿದರೂ, ಗಂಟೆಗಟ್ಟಲೆ ಅದನ್ನು ವೇಗದಲ್ಲಿ ಚಾಲನೆ ಮಾಡುವಂತೆ ಅದರ ಎಂಜಿನ್ ಚಾಲಕನಿಗೆ ಪ್ರೇರೇಪಿಸುತ್ತಿರಲಿಲ್ಲ. ಆದರೂ ಇದು ಈಗಲೂ ಭಾರತದಲ್ಲಿ ಬಿಸಿದೋಸೆಯಂತೆ ಮಾರಾಟವಾಗುತ್ತಿರುವ ಪ್ರೀಮಿಯಂ ಎಂಯುವಿ.ಇಂತಿಪ್ಪ ಇನೋವಾಗೆ ಟೊಯೊಟಾ ಅತ್ಯುತ್ತಮ ಫೇಸ್‌ಲಿಫ್ಟ್ ನೀಡಿದೆ. ಹೊಸ ಅವತರಣಿಕೆಯ ಇನೋವಾ ಇಂಡೋನೇಷ್ಯಾದಲ್ಲಿ ಈಗಾಗಲೇ ಮಾರಾಟವಾಗುತ್ತಿದೆ. ಇದು ಕೇವಲ ಕಾಸ್ಮೆಟಿಕ್ ಫೇಸ್‌ಲಿಫ್ಟ್‌ ಅಲ್ಲ ಎಂಬುದು ಗಮನಾರ್ಹ. ಇದರಲ್ಲಿ ಈ ತಲೆಮಾರಿನ ಗ್ಯಾಜೆಟ್‌ಗಳೆಲ್ಲಾ ಇದ್ದರೂ ಇದರ ಹೆಗ್ಗಳಿಕೆ ಇರುವುದು ಎಂಜಿನ್‌ನಲ್ಲಿ.ಹೊಸ ಇನೋವಾ ಪೆಟ್ರೋಲ್ ಮತ್ತು ಡೀಸೆಲ್ ಅವತರಣಿಕೆಯಲ್ಲಿ ಲಭ್ಯವಿರಲಿದೆ. 2.0 ಲೀಟರ್‌ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಗರಿಷ್ಠ 137 ಬಿಎಚ್‌ಪಿ ಮತ್ತು ಗರಿಷ್ಠ 183 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. 2.4 ಲೀಟರ್‌ ಸಾಮರ್ಥ್ಯದ ಡೀಸೆಲ್ ಎಂಜಿನ್ ಗರಿಷ್ಠ 147 ಬಿಎಚ್‌ಪಿ ಮತ್ತು ಗರಿಷ್ಠ 342 ಎನ್‌ಎಂ ಟಾರ್ಕ್ ಉತ್ಪಾದಿಸಲಿದೆ. ಇದರ ಚಾಲನೆಗೆ 5 ಸ್ಪೀಡ್‌ ಗಿಯರ್‌ಗಳ ಮ್ಯಾನ್ಯುಯಲ್ ಟ್ರಾನ್ಸ್‌ಮಿಷನ್ ಮತ್ತು 6 ಗಿಯರ್‌ಗಳ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್ ಇರಲಿದೆ.ಇನೋವಾದಂಥ ಕಡಿಮೆ ತೂಕದ ಎಂಯುವಿಗೆ ಇಷ್ಟು ಶಕ್ತಿ ಹೆಚ್ಚೇ ಆಯಿತು. ಶಕ್ತಿ ಹೆಚ್ಚಿದಂತೆಲ್ಲಾ ಸುರಕ್ಷಾ ಸಾಧನಗಳ ಸಂಖ್ಯೆ ಹೆಚ್ಚಲೇಬೇಕು. ಇದರಲ್ಲಿ ಹೊಸತಲೆಮಾರಿನ ಎಬಿಎಸ್ ಮತ್ತು ಎಬಿಡಿ ಇದೆ. ಮುಂಬದಿಯ ಏರ್‌ಬ್ಯಾಗ್, ಕರ್ಟನ್ ಏರ್‌ಬ್ಯಾಗ್ ಮತ್ತು ನೀ ಏರ್‌ಬ್ಯಾಗ್‌ಗಳಿರಲಿವೆ. ವಿವಿಧ ಅವತರಣಿಕೆಗಳ ಎಕ್ಸ್‌ ಷೋರೂಂ ಬೆಲೆ ಸುಮಾರು ₹ 13 ಲಕ್ಷದಿಂದ ಆರಂಭವಾಗಿ ₹ 21 ಲಕ್ಷಗಳವರೆಗೂ ಇರಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಇವುಗಳಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾನದಂಡ ಯೂರೊ6 ಅನ್ನು ಅನುಸರಿಸಲಾಗಿದೆ. ನಮ್ಮಲ್ಲಿ ಯೂರೊ6ಗೆ ಸಮನಾದ ಬಿಎಸ್‌6 ಜಾರಿಗೆ ಬರಲು ಇನ್ನೂ ಸಾಕಷ್ಟು ವರ್ಷಗಳ ಅಂತರವಿದೆ.ನ್ಯೂ ಏಜ್ ಫಾರ್ಚೂನರ್

ಎಲ್ಲಾ ರೀತಿಯಲ್ಲಿ ಉತ್ತಮವಾಗಿದ್ದರೂ ಫಾರ್ಚೂನರ್‌ ಬಗ್ಗೆ ಇದ್ದ ದೊಡ್ಡ ಅಪಸ್ವರಗಳೆಂದರೆ ಹೆಚ್ಚು ಸದ್ದು ಮಾಡುವ ಎಂಜಿನ್, ಆರಾಮದಾಯಕವಲ್ಲದ ಎರಡನೇ ಸಾಲಿನ ಸೀಟ್‌ಗಳು, ಕಡಿಮೆ ಹೆಡ್‌ರೂಂ ಹಾಗೂ ಕುಲುಕಾಟದ ಚಾಲನೆ. ಇವೆಲ್ಲವನ್ನೂ ಇಲ್ಲವಾಗಿಸಲು ಹೊರಟ ಟೊಯೊಟಾ ಹೊಚ್ಚ ಹೊಸತಾದ ಫಾರ್ಚೂನರ್‌ ಅನ್ನು ನಿರ್ಮಿಸಿದೆ.ಥಾಯ್ಲೆಂಡ್‌ನಲ್ಲಿ ಈಗಾಗಲೇ ಹೊಸ ಫಾರ್ಚೂನರ್‌ ರಸ್ತೆಗೆ ಇಳಿದಿದೆ. ಹಿಂದಿನ ಫಾರ್ಚೂನರ್‌ಗಿಂತ ಹೊಸದರ ಎಕ್ಸ್‌ಟೀರಿಯರ್‌ ಮತ್ತು ಇಂಟೀರಿಯರ್ ಸಂಪೂರ್ಣ ಬೇರೆಯೇ ಆಗಿದೆ. ಹೊಸ ಸಸ್ಪೆನ್ಷನ್, ಹೆಚ್ಚು ವಿಶಾಲವಾಗಿರುವ ಇಂಟೀರಿಯರ್‌ ಇದರಲ್ಲಿದೆ.ಇದಕ್ಕಿಂತಲೂ ಮುಖ್ಯವಾಗಿ ಇದರಲ್ಲಿ ಹೊಸ ಎಂಜಿನ್ ಇರಲಿದೆ. ಗರಿಷ್ಠ 145 ಬಿಎಚ್‌ಪಿ ಮತ್ತು 400 ಎನ್‌ಎಂ ಟಾರ್ಕ್ ಉತ್ಪಾದಿಸುವ 2.4 ಲೀಟರ್‌ ಡೀಸೆಲ್ ಹಾಗೂ ಗರಿಷ್ಠ 175 ಬಿಎಚ್‌ಪಿ ಮತ್ತು 450 ಎನ್‌ಎಂ ಟಾರ್ಕ್ ಉತ್ಪಾದಿಸುವ 2.8 ಲೀಟರ್‌ ಡೀಸೆಲ್  ಎಂಜಿನ್ ಅವತರಣಿಕೆಗಳಲ್ಲಿ ಲಭ್ಯವಿರಲಿದೆ.2.4 ಲೀಟರ್‌ ಎಂಜಿನ್ ಜತೆ 6 ಸ್ಪೀಡ್‌ ಗಿಯರ್‌ಗಳ ಮ್ಯಾನ್ಯುಯಲ್ ಮತ್ತು ಆಟೊ ಟ್ರಾನ್ಸ್‌ಮಿಷನ್ ಬರಲಿದೆ. ಆದರೆ ಫೋರ್‌ವ್ಹೀಲ್‌ ಡ್ರೈವ್ ಸೌಕರ್ಯ ಇರುವುದು 2.8 ಲೀಟರ್‌ ಎಂಜಿನ್ ಅವತರಣಿಕೆಯಲ್ಲಿ ಮಾತ್ರ. ಈ ಎರಡೂ ಎಂಜಿನ್‌ಗಳು ಯೂರೊ6 ಮಾನದಂಡಗಳಿಗೆ ಅನುಗುಣವಾಗಿರಲಿವೆ. ಇದೇ ವರ್ಷ ಹೊಸ ಫಾರ್ಚೂನರ್ ನಮ್ಮ ರಸ್ತೆಗೆ ಇಳಿಯುವುದು ಅನುಮಾನವಾದರೂ, ದೆಹಲಿ ಆಟೊ ಎಕ್ಸ್‌ಪೊದಲ್ಲಿ ಟೊಯೊಟಾ ಇದನ್ನು ಪ್ರದರ್ಶನಕ್ಕೆ ಇಟ್ಟೇ ಇಡುತ್ತದೆ ಎಂದು ನಿರೀಕ್ಷಿಸಲಾಗಿದೆ.ಅಪಾಚೆ 200

ಟಿವಿಎಸ್‌ನ ಹಾಟ್‌ ಸೆಲ್ಲಿಂಗ್ ಉತ್ಪನ್ನಗಳಲ್ಲಿ ಅಪಾಚೆ ಆರ್‌ಟಿಆರ್‌ ಸರಣಿಯ ಬೈಕ್‌ಗಳಿಗೆ ಮೊದಲ ಸ್ಥಾನವಿದೆ. ಚಿಕ್ಕ ಎಂಜಿನ್, ಉತ್ತಮ ಶಕ್ತಿ, ಹೆಚ್ಚು ಮೈಲೇಜ್‌ ಜತೆಗೆ ಕಡಿಮೆ ನಿರ್ವಹಣಾ ವೆಚ್ಚ ಅಪಾಚೆ ಆರ್‌ಟಿಆರ್‌ ಬೈಕ್‌ಗಳ ಹೆಗ್ಗಳಿಕೆ. ಸದ್ಯ 160 ಮತ್ತು 180 ಸಿ.ಸಿ ಸಾಮರ್ಥ್ಯದ ಅಪಾಚೆಗಳು ಮಾತ್ರ ಇವೆ. ಈ ಸಾಲಿಗೆ ಅಪಾಚೆ ಆರ್‌ಟಿಆರ್‌ 200 ಸೇರಲಿದೆ.ದೊಡ್ಡ ಎಂಜಿನ್ ಮತ್ತು ರೇಸಿಂಗ್ ಸ್ಪೆಸಿಫಿಕೇಷನ್ ಇದ್ದರೂ ಉತ್ತಮ ಆದರೆ ಅತೀ ಹೆಚ್ಚಲ್ಲದ ಶಕ್ತಿಯನ್ನು ಈ ಎಂಜಿನ್ ಉತ್ಪಾದಿಸಲಿದೆ. ಇದೇ ಅಪಾಚೆಯ ದೀರ್ಘ ಬಾಳಿಕೆ ಮತ್ತು ಕಡಿಮೆ ನಿರ್ವಹಣಾ ವೆಚ್ಚದ ಗುಟ್ಟು. ಆದರೆ ಇದರಲ್ಲಿ ಐದು ವೆಟ್‌ಪ್ಲೇಟ್‌ಗಳಿರುವ ಕ್ಲಚ್‌ ವ್ಯವಸ್ಥೆ ಇರಲಿದೆ. ಇದು ಬೈಕ್‌ನ ವೇಗವರ್ಧನೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಿದೆ. ಈ ಬೈಕ್‌ ಸಹ ದೆಹಲಿ ಆಟೊ ಎಕ್ಸ್‌ಪೊದಲ್ಲಿ ಪ್ರದರ್ಶನಕ್ಕೆ ಇರುವ ಸಾಧ್ಯತೆ ಇದೆ.ಆರ್‌ಇ ಹಿಮಾಲಯನ್

ಭಾರತದ ಬೈಕರ್‌ಗಳು ಕಳೆದ ಒಂದು ವರ್ಷದಿಂದ ಕಾತರದಿಂದ ಕಾಯುತ್ತಿರುವ ಬೈಕ್‌ ಇದು. ರಾಯಲ್‌ ಎನ್‌ಫೀಲ್ಡ್ ಉತ್ಪನ್ನಗಳು ಗಡುಸಾಗಿದ್ದರೂ, ಕ್ವಾಲಿಟಿ ಕಂಟ್ರೋಲ್ ಮತ್ತು ಸರ್ವಿಸ್ ವ್ಯವಸ್ಥೆ ಹೇಳಿಕೊಳ್ಳುವಂತೇನಿಲ್ಲ. ಕ್ಲಾಸಿಕ್ ಸರಣಿಯ ಬೈಕ್‌ಗಳ ಬಿಡಿಭಾಗಗಳು ಇದ್ದಕ್ಕಿದ್ದಂತೆ ಕಳಚಿ ಬೀಳುವ, ಹೊಸ ಬೈಕ್‌ಗಳಲ್ಲೇ ಎಂಜಿನ್ ಆಯಿಲ್ ಜಿನುಗುವ ಬಗ್ಗೆ ಸಾಕಷ್ಟು ದೂರುಗಳು ಇವೆ. ಇದರ ಹೊರತಾಗಿಯೂ ಆರ್‌ಇ ಮಾರುಕಟ್ಟೆ ಬೆಳೆಯುತ್ತಲೇ ಇದೆ.ಸದ್ಯ ಲಭ್ಯವಿರುವ ಕ್ಲಾಸಿಕ್, ಮೆಷಿಮೊ, ಥಂಡರ್‌ಬರ್ಡ್, ಬುಲೆಟ್, ಎಲೆಕ್ಟ್ರಾಗಳನ್ನು ಮಾಡಿಫೈ ಮಾಡದೆ ಎಲ್ಲೆಡೆಯೂ ಸರಾಗವಾಗಿ ಕೊಂಡೊಯ್ಯಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಲಡಾಕ್‌ ಬೈಕಿಂಗ್‌ಗೆ ಹೋಗುವವರೆಲ್ಲಾ ಬುಲೆಟ್‌ಗಳನ್ನು ಏರುತ್ತಾರೆ. ಅಲ್ಲಿನ ರಸ್ತೆಗಳಿಗೆ ಒಗ್ಗುವಂತೆ ಅವನ್ನು ಸಾಕಷ್ಟು ಮಾಡಿಫೈ ಮಾಡಿರುತ್ತಾರೆ.ಇಂತಹ ಬೈಕರ್‌ಗಳನ್ನು ಗಮನದಲ್ಲಿರಿಸಿಕೊಂಡೇ ಆರ್‌ಇ ಹಿಮಾಲಯನ್‌ ಅನ್ನು ರೂಪಿಸಿದೆ. ಓವರ್‌ಹೆಡ್‌ ಕ್ಯಾಮ್ ಇರುವ 400 ಸಿಸಿ ಸಾಮರ್ಥ್ಯದ ನಯವಾದ ಎಂಜಿನ್. ಅತ್ಯುತ್ತಮ ಗ್ರೌಂಡ್ ಕ್ಲಿಯರೆನ್ಸ್, ಮುಂಬದಿಯಲ್ಲಿ 21 ಇಂಚಿನ ಟೈರ್‌, ಹಿಂಬದಿಯಲ್ಲಿ 18 ಇಂಚಿನ ಅಗಲವಾದ ಆಲ್‌ ಟೆರೇನ್ ಟೈರ್‌, ಹಿಂಬದಿಯಲ್ಲಿ ಮೊನೊಕಾಕ್ ಸಸ್ಪೆನ್ಷನ್, 15 ಲೀಟರ್‌ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಇದರ ತಾಂತ್ರಿಕ ವಿವರಗಳು. ಎಲ್ಲಕ್ಕಿಂತ ಮುಖ್ಯವಾಗಿ ಇದರ ತೂಕವನ್ನು ಗರಿಷ್ಠ ಪ್ರಮಾಣದಲ್ಲಿ ಇಳಿಸಲಾಗಿದೆ.ಇದನ್ನು ಕೋಲಾರದ ತಮ್ಮ ಮೊಟೊಕ್ರಾಸ್‌ ತರಬೇತಿ ಟ್ರಾಕ್‌ನಲ್ಲಿ ಪರೀಕ್ಷಿಸಿರುವ ಮೊಟೊಕ್ರಾಸ್ ಪಟು ಸಿ.ಎಸ್.ಸಂತೋಷ್, ‘ಹಿಮಾಲಯನ್‌ ಅನ್ನು ಒಬ್ಬರೇ ತಳ್ಳಿಕೊಂಡು ಹೋಗಬಹುದು. ಬ್ಯಾಟೆರಿ ಡೆಡ್ ಆದರೆ ಒಬ್ಬರೇ ತಳ್ಳಿ ಎಂಜಿನ್ ಸ್ಟಾರ್ಟ್ ಮಾಡಬಹುದಾದಷ್ಟು ಕಡಿಮೆ ತೂಕ ಇದೆ’ ಎಂದು ಹೇಳಿದ್ದಾರೆ. ಈ ವರ್ಷದ ಅಂತ್ಯಕ್ಕೆ ಹಿಮಾಲಯನ್‌ ನಮ್ಮ ರಸ್ತೆಗೆ ಇಳಿಯುವ ಸಾಧ್ಯತೆ ಇದೆ. ಆದರೆ ರಾಯಲ್‌ ಎನ್‌ಫೀಲ್ಡ್ ಈ ಬಾರಿ ದೆಹಲಿ ಆಟೊಎಕ್ಸ್‌ಪೊದಿಂದ ದೂರ ಉಳಿದಿದೆ ಎಂಬ ಸುದ್ದಿಯಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.