ಮಂಗಳವಾರ, ಏಪ್ರಿಲ್ 13, 2021
29 °C

ಈ ಸಾಧನೆ ಯುವಕರಿಗೆ ಸ್ಫೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): `ಒಲಿಂಪಿಕ್ಸ್‌ನಲ್ಲಿ ನಾನು ಗೆದ್ದ ಪದಕ ಬ್ಯಾಡ್ಮಿಂಟನ್ ಕ್ರೀಡೆಯತ್ತ ಚಿತ್ತ ಹರಿಸಲು ಭಾರತದ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ಆಗಲಿದೆ~ ಎಂದು ಸೈನಾ ನೆಹ್ವಾಲ್ ನುಡಿದಿದ್ದಾರೆ.`ಈ ಪದಕದಿಂದ ಖಂಡಿತ ದೇಶದಲ್ಲಿ ಕೆಲ ಬದಲಾವಣೆ ಆಗಲಿದೆ. ಪ್ರಮುಖವಾಗಿ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಬದಲಾವಣೆ ಆಗಲಿದೆ. ಹೆಚ್ಚಿನ ಹುಡುಗಿಯರು ಈ ಆಟದತ್ತ ಒಲವು ತೋರಲಿದ್ದಾರೆ. ಚೀನಾ, ಕೊರಿಯಾದಂತೆ ಭಾರತವೂ ಮುಂದೆ ಬರಲಿದೆ~ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.`ಒಲಿಂಪಿಕ್ಸ್ ಪದಕಕ್ಕಾಗಿ ನಾನು ಆರೇಳು ವರ್ಷಗಳಿಂದ ಕಠಿಣ ಪ್ರಯತ್ನ ಹಾಕಿ ಅಭ್ಯಾಸ ನಡೆಸಿದ್ದೆ. ಪದಕ ಗೆದ್ದಿದೇನೆ ಎಂಬ ವಿಷಯವನ್ನು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ~ ಎಂದರು.ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದ ಬಗ್ಗೆ ಪ್ರತಿಕ್ರಿಯಿಸಿದ ಸೈನಾ, `ಚೀನಾದ ಕ್ಸಿನ್ ಗಾಯಗೊಂಡ ವಿಷಯ ನನಗೆ ತಕ್ಷಣ ಗೊತ್ತಾಗಲಿಲ್ಲ. ಅವರು ಬೇಕಂತಲೇ ಸಮಯ ಕಳೆಯುತ್ತಿರಬೇಕು ಎಂದು ನಾನು ಯೋಚಿಸಿದೆ.ಆದರೆ ಆಮೇಲೆ ನಿಜ ಸಂಗತಿ ಗೊತ್ತಾಯಿತು. ಆದರೆ  ಈ ಹಿಂದೆ ಯಾವತ್ತೂ ನಾನು ಈ ರೀತಿಯಲ್ಲಿ ಪಂದ್ಯ ಗೆದ್ದಿರಲಿಲ್ಲ~ ಎಂದು ನುಡಿದರು. `ನಾನು ಕೆಲ ದಿನ ವಿಶ್ರಾಂತಿ ಪಡೆಯುತ್ತೇನೆ. ದಪ್ಪವಾದರೂ ಪರವಾಗಿಲ್ಲ ಚಾಕಲೇಟ್ ತಿನ್ನುತ್ತೇನೆ. ಸಿನಿಮಾ ವೀಕ್ಷಿಸುತ್ತೇನೆ. ಚಾಕಲೇಟ್ ತಿನ್ನಲು ತಂದೆ ಬಿಡುತ್ತಿರಲಿಲ್ಲ. ಆದರೆ ನಾನು ಪದಕ ಗೆದ್ದಿರುವ ಕಾರಣ ಅವರ ಅನುಮತಿ ನೀಡಬಹುದು~ ಎಂದೂ ನೆಹ್ವಾಲ್ ತಿಳಿಸಿದರು.ಈ ಪದಕಕ್ಕೆ ಸೈನಾ ಅರ್ಹಳು: ಹರ್ವೀರ್

ಹೈದರಾಬಾದ್ (ಪಿಟಿಐ/ಐಎಎನ್‌ಎಸ್): ನಾಲ್ಕು ವರ್ಷಗಳ ಹಿಂದೆ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಪದಕದ ಕನಸು ಭಗ್ನಗೊಂಡಾಗ ಸೈನಾ ನೆಹ್ವಾಲ್ ಕೋರ್ಟ್‌ನಲ್ಲೇ ಕಣ್ಣೀರಿಟ್ಟಿದ್ದರು. ಏಕೆಂದರೆ ಕ್ವಾರ್ಟರ್ ಫೈನಲ್‌ನ ಆ ಪಂದ್ಯದಲ್ಲಿ 11-3ರಲ್ಲಿ ಇಂಡೊನೇಷ್ಯಾದ ಮರಿಯಾ ಕ್ರಿಸ್ಟಿನ್ ಯೂಲಿಯಾನಿ ಎದುರು ಮುಂದಿದ್ದರೂ ಸೈನಾ ಆಘಾತ ಅನುಭವಿಸಿದ್ದರು.ಆ ನೋವಿಗೆ ಪರಿಹಾರ ಸಿಕ್ಕಿದ್ದು ಲಂಡನ್‌ನ ವೆಂಬ್ಲೆ ಅರೆನಾ ಕೋರ್ಟ್‌ನಲ್ಲಿ. ಒಲಿಂಪಿಕ್ಸ್ ಕಂಚಿನ ಪದಕದ ಸಾಧನೆ ಸೈನಾ ಸೇರಿದಂತೆ ಇಡೀ ಭಾರತದ ಕ್ರೀಡಾ ಪ್ರೇಮಿಗಳ ಖುಷಿಗೆ ಕಾರಣವಾಗಿದೆ. ಅದರಲ್ಲೂ ನೆಹ್ವಾಲ್ ಅವರ ಪೋಷಕರ ಸಂತೋಷ ಪದಗಳಿಗೆ ನಿಲುಕುವಂತಹದ್ದಲ್ಲ.`ಸೈನಾಳ ಇಷ್ಟು ವರ್ಷಗಳ ಕಠಿಣ ಪ್ರಯತ್ನಕ್ಕೆ ದೇವರು ನೀಡಿದ ವರ ಈ ಪದಕ. ಅದೃಷ್ಟದ ಮೂಲಕ ಈ ಪದಕ ಅವಳಿಗೆ ಬಂದಿರಬಹುದು. ಆದರೆ ಈ ಪದಕಕ್ಕೆ ಅವಳು ಅರ್ಹಳು~ಎಂದು ಭಾವುಕರಾಗಿದ್ದ ತಂದೆ ಡಾ.ಹರ್ವೀರ್ ಸಿಂಗ್ ನುಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.